ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತದ ಆತ್ಮದ ಮೇಲೆ ನಡೆದ ದಾಳಿ: ರಾಹುಲ್‌

Last Updated 15 ಫೆಬ್ರುವರಿ 2019, 17:49 IST
ಅಕ್ಷರ ಗಾತ್ರ

ನವದೆಹಲಿ: ಪುಲ್ವಾಮಾದಲ್ಲಿ ಗುರುವಾರ ಸಿಆರ್‌ಪಿಎಫ್‌ ಯೋಧರ ಮೇಲೆ ನಡೆದ ಆತ್ಮಾಹುತಿ ದಾಳಿಯನ್ನು ‘ಭಾರತದ ಆತ್ಮದ ಮೇಲೆ ನಡೆದ ಅಕ್ರಮಣ’ ಎಂದು ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಹೇಳಿದ್ದಾರೆ.

‘ಈ ದೇಶವನ್ನು ವಿಭಜಿಸುವುದೇ ಭಯೋತ್ಪಾದಕರ ಉದ್ದೇಶವಾಗಿದೆ. ಆದರೆ, ಒಂದು ಕ್ಷಣ ಕೂಡ ಅವರು ನಮ್ಮನ್ನು ಬೇರೆ ಮಾಡಲು ಸಾಧ್ಯವಿಲ್ಲ. ಎಲ್ಲರೂ ಒಗ್ಗಾಟ್ಟಾಗಿದ್ದೇವೆ. ಎಲ್ಲ ವಿರೋಧ ಪಕ್ಷಗಳು ಸರ್ಕಾರದ ಬೆಂಬಲಕ್ಕಿವೆ ಎಂದು ಅವರು ಸುದ್ದಿಗೋಷ್ಠಿಯಲ್ಲಿ ಭರವಸೆ ನೀಡಿದರು.

ಎಐಸಿಸಿ ಪ್ರಧಾನ ಕಚೇರಿಯಲ್ಲಿ ಶುಕ್ರವಾರ ನಡೆದ ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್‌ ನಾಯಕರಾದ ಮಾಜಿ ಪ್ರಧಾನಿ ಮನಮೋಹನ್‌ ಸಿಂಗ್‌, ಎ.ಕೆ. ಆಂಟನಿ, ಗುಲಾಂ ನಬಿ ಆಜಾದ್ ಭಾಗವಹಿಸಿದ್ದರು.

‘ನಮ್ಮಲ್ಲಿ ಒಡಕು ಮೂಡಿಸಲು ಯಾರೂ ಎಷ್ಟೇ ‍ಪ್ರಯತ್ನಿಸಲಿ ಅವರು ಯಶಸ್ವಿಯಾಗುವುದಿಲ್ಲ. ದೇಶದ ಭದ್ರತೆಯ ವಿಷಯ ಬಂದಾಗ ನಾವೆಲ್ಲ ಒಂದೇ. ಇಡೀ ದೇಶ ಮತ್ತು ವಿರೋಧ ಪಕ್ಷಗಳು ಸರ್ಕಾರ ಮತ್ತು ನಮ್ಮ ಸೇನೆ ಹಾಗೂ ಯೋಧರ ಬೆನ್ನಿಗೆ ನಿಲ್ಲುತ್ತೇವೆ’ ಎಂದು ರಾಹುಲ್‌ ಹೇಳಿದರು.

ಭಯೋತ್ಪಾದಕ ಶಕ್ತಿಗಳ ಜತೆ ದೇಶ ಎಂದಿಗೂ ರಾಜಿ ಮಾಡಿಕೊಳ್ಳುವುದಿಲ್ಲ ಎಂದು ಮಾಜಿ ಪ್ರಧಾನಿ ಮನಮೋಹನ್‌ ಸಿಂಗ್‌ ಹೇಳಿದರು.

ಆರೋಪ, ಪ್ರತ್ಯಾರೋಪದ ರಾಜಕೀಯ ಮಾಡುವ ಸಮಯ ಇದಲ್ಲ. ದೇಶಕ್ಕಾಗಿ ಪ್ರಾಣ ಬಲಿದಾನ ಮಾಡಿದ ಹುತಾತ್ಮ ಯೋಧರು ಮತ್ತು ಅವರ ಕುಟುಂಬದ ಕಷ್ಟದಲ್ಲಿ ನಿಲ್ಲುವ ಸಮಯ. ಕಾಂಗ್ರೆಸ್‌ ಸದಾ ಯೋಧರ ಜತೆಗಿದೆ ಎಂದು ಸ್ಪಷ್ಟಪಡಿಸಿದರು.

ದಾಳಿ: ಕಾಶ್ಮೀರದ ಪ್ರತ್ಯೇಕತಾವಾದಿಗಳ ವಿಷಾದ

ಶ್ರೀನಗರ: ಪುಲ್ವಾಮಾದಲ್ಲಿ ಸಿಆರ್‌ಪಿಎಫ್‌ ಯೋಧರ ಹತ್ಯೆಗೆ ಕಾಶ್ಮೀರದ ಪ್ರತ್ಯೇಕತಾವಾದಿ ನಾಯಕರು ವಿಷಾದ ವ್ಯಕ್ತಪಡಿಸಿದ್ದಾರೆ.

ಪ್ರತ್ಯೇಕತಾವಾದಿ ನಾಯಕರಾದ ಸೈಯದ್‌ ಅಲಿ ಗಿಲಾನಿ, ಮೀರ್‌ವೈಜ್‌ ಉಮರ್‌ ಫಾರೂಕ್‌ ಮತ್ತು ಯಾಸೀನ್‌ ಮಲಿಕ್‌ ಜಂಟಿ ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿದ್ದಾರೆ. ದಾಳಿಯ ಕುರಿತು ತಮ್ಮ ನಿಲುವು ಬಹಿರಂಗಪಡಿಸಿರುವ ಅವರು, ಕಣಿವೆ ರಾಜ್ಯದಲ್ಲಿಯ ಸ್ಥಿತಿಯನ್ನು ತಿಳಿಸುವ ಪ್ರಯತ್ನ ಮಾಡಿದ್ದಾರೆ.

‘ಈ ನೆಲದಲ್ಲಿ ನಡೆಯುವ ಪ್ರತಿಯೊಂದು ಹತ್ಯೆ ಬಗ್ಗೆಯೂ ವಿಷಾದವಿದೆ. ಕುಟುಂಬ ಸದಸ್ಯರು, ಯುವಕರ ಶವಗಳಿಗೆ ನಿತ್ಯವೂ ಹೆಗಲು ಕೊಡುತ್ತಿರುವ ನಮಗೆ ಪ್ರೀತಿಪಾತ್ರರನ್ನು ಕಳೆದುಕೊಂಡಾಗ ಆಗುವ ನೋವು ಎಂಥದ್ದು ಎಂದು ಗೊತ್ತು’ ಎಂದು ಹೇಳಿದ್ದಾರೆ.

ಕಾಶ್ಮೀರ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಆಗುತ್ತಿರುವ ವಿಳಂಬಕ್ಕೆ ಇನ್ನೆಷ್ಟು ಜೀವಗಳು ಬಲಿಯಾಗಬೇಕು ಎಂದು ಅವರು ಪ್ರಶ್ನಿಸಿದ್ದಾರೆ.

ಜಮ್ಮು ಮತ್ತು ಕಾಶ್ಮೀರ ಜನರ ನೋವು, ಭಾವನೆಗಳನ್ನು ಅರ್ಥ ಮಾಡಿಕೊಳ್ಳುವ ಬದಲು ಸೇನಾ ಬಲವನ್ನು ಪ್ರಯೋಗಿಸಿ ಇಲ್ಲಿಯ ರಾಜಕೀಯ ಮತ್ತು ನಾಗರಿಕರ ಸಮಸ್ಯೆಗಳಿಗೆ ಪರಿಹಾರ ಹುಡುಕುವ ಪ್ರಯತ್ನ ನಡೆಯುತ್ತಿದೆ ಎಂದು ಅವರು ಆರೋಪಿಸಿದ್ದಾರೆ.

***

ಉಗ್ರರ ಇಂತಹ ಪೈಶಾಚಿಕ ಕೃತ್ಯಗಳಿಂದ ಆದ ಗಾಯಗಳನ್ನು ದೇಶ ಎಂದಿಗೂ ಮರೆಯುವುದಿಲ್ಲ

–ರಾಹುಲ್‌ ಗಾಂಧಿ,ಕಾಂಗ್ರೆಸ್ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT