ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರತ್ಯಕ್ಷಳ ಸ್ವಚ್ಛಭಾರತ ಪ್ರೀತಿ

Last Updated 15 ಮೇ 2018, 19:30 IST
ಅಕ್ಷರ ಗಾತ್ರ

ನಟನೆಯ ನಂಟು ಬೆಳೆದದ್ದು ಹೇಗೆ?

ನನ್ನ ತಂದೆ ಬಿ.ಜಿ.ರಾಮಕೃಷ್ಣ ಅವರು ಅನೇಕ ವರ್ಷಗಳಿಂದ ರಂಗಭೂಮಿಯಲ್ಲಿ ಸಕ್ರಿಯವಾಗಿದ್ದಾರೆ. ಅವರ ನಾಟಕ ಅಭ್ಯಾಸ ಹಾಗೂ ನಾಟಕ ನೋಡಲು ಅವರೊಟ್ಟಿಗೆ ಹೋಗುತ್ತಿದ್ದೆ. ಅವರ ಅಭಿನಯ ನೋಡಿ ನನಗೂ ನಟಿಸಬೇಕು ಎನಿಸುತ್ತಿತ್ತು. ‘ಗಾಂಧಿ ಬಂದ’ ನಾಟಕದ ಕಲಾವಿದರೊಬ್ಬರು ಕಾರಣಾಂತರದಿಂದ ಅಭಿನಯಕ್ಕೆ ಬರಲಿಲ್ಲ. ಆಗ ಅನಿರೀಕ್ಷಿತವಾಗಿ ಆ ನಾಟಕದಲ್ಲಿ ಅಭಿನಯಿಸುವ ಅವಕಾಶ ಸಿಕ್ಕಿತು. ಆಗ ನನಗೆ ಆರು ವರ್ಷ. ಅಭಿನಯ ಎಂಬ ನನ್ನ ಪ್ರತಿರೂಪ ಜನ್ಮ ತಾಳಿದ್ದು ಆಗಲೇ. ನಟನೆಗೆ ಅಪ್ಪ, ಅಮ್ಮ ನಾಗರತ್ನ ಹಾಗೂ ಅಣ್ಣಂದಿರು ಸಲಹೆ ನೀಡುತ್ತಿರುತ್ತಾರೆ.

ಯಾವೆಲ್ಲ ಸಿನಿಮಾ ಹಾಗೂ ನಾಟಕಗಳಲ್ಲಿ ನಟಿಸಿದ್ದೀರಿ?

‘ಗಾಂಧಿ ಬಂದ’ ನಂತರ ವೈದೇಹಿ ಅವರ ಕಥೆ ಆಧಾರಿತ ‘ಅಕ್ಕು’, ಕೆ.ವೈ.ನಾರಾಯಣ ಸ್ವಾಮಿ ಅವರ ‘ಮಲ್ಲಿಗೆ’ ಮತ್ತು ‘ಅನಭಿಜ್ಞ ಶಾಕುಂತಲ’ ನಾಟಕಗಳಲ್ಲಿ ಅಭಿನಯಿಸಿದ್ದೇನೆ. ಎ.ಜೆ.ಅಜಯಕುಮಾರ್ ನಿರ್ದೇಶನದ ‘ಸಂಡಾಸ್’ ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿರುವೆ. ಅದರ ಚಿತ್ರೀಕರಣ ಪೂರ್ಣಗೊಂಡಿದ್ದು, ಬಿಡುಗಡೆಯಾಗಬೇಕಿದೆ. ಚಂಪಾ ಪಿ.ಶೆಟ್ಟಿ ನಿರ್ದೇಶನದ ‘ಅಮ್ಮಚ್ಚಿಯೆಂಬ ನೆನಪು’ ಸಿನಿಮಾದಲ್ಲಿ ನಟಿಸಿದ್ದೇನೆ. ಅದೂ ಮುಕ್ತಾಯದ ಹಂತದಲ್ಲಿದ್ದು, ಬಿಡುಗಡೆಗೆ ಸಜ್ಜುಗೊಂಡಿದೆ.

‘ಸಂಡಾಸ್‌’ ಸಿನಿಮಾದಲ್ಲಿ ನಿಮ್ಮ ಪಾತ್ರ ?

ಉಪವಾಸ ಕುಳಿತು ವೈಯಕ್ತಿಕ ಶೌಚಾಲಯ ಕಟ್ಟಿಸಿಕೊಂಡ ಕೊಪ್ಪಳದ ಗಂಗಾವತಿ ತಾಲ್ಲೂಕಿನ ಢಣಾಪುರ ಗ್ರಾಮದ 10ನೇ ತರಗತಿ ವಿದ್ಯಾರ್ಥಿನಿ ಮಲ್ಲಮ್ಮಳ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ‘ಮನ್‌ ಕಿ ಬಾತ್‌’ ಭಾಷಣದಲ್ಲಿ ಶ್ಲಾಘಿಸಿದ್ದರು. ಆ ಅಂಶ ಇಟ್ಟುಕೊಂಡು ‘ಸಂಡಾಸ್’ ಕಥೆ ಹೆಣೆಯಲಾಗಿದೆ. ಅದರಲ್ಲಿ ನನ್ನದು ಮಲ್ಲಮ್ಮನ ಪಾತ್ರ.

ಅಭಿನಯದಲ್ಲಿ ಎದುರಾದ ಸವಾಲುಗಳೇನು?

ಮೊದಲ ಬಾರಿಗೆ ನಾಟಕದ ವೇದಿಕೆಗೆ ಹೆಜ್ಜೆಯಿಡುವಾಗ ತುಂಬಾನೇ ಭಯವಾಗಿತ್ತು. ಎಲ್ಲರಂತೆ ಸಹಜವಾಗಿ ನಟಿಸಬಲ್ಲೆನಾ ಎಂಬ ಅನುಮಾನ ಕಾಡಿತ್ತು. ಧೈರ್ಯ ಮಾಡಿ ವೇದಿಕೆ ತುಳಿದು ಎಲ್ಲರೂ ಮೆಚ್ಚುವಂತೆ ಅಭಿನಯಿಸಿದೆ. ಈಗಲೂ, ವೇದಿಕೆಗೆ ಹೋಗುವಾಗ ಭಯವಾಗುತ್ತದೆ. ಜನರಿಂದ ಸಿಗುವ ಉತ್ತಮ ಪ್ರತಿಕ್ರಿಯೆಯು ನನ್ನಲ್ಲಿ ಆತ್ಮವಿಶ್ವಾಸ ಹೆಚ್ಚಿಸಿದೆ.

‘ಸ್ವಚ್ಛ ಭಾರತ್’ ಅಭಿನಯದ ನಂಟು ಬೆಳೆದದ್ದು ಹೇಗೆ?

ಕೊಪ್ಪಳದಲ್ಲಿ 40 ದಿನಗಳ ವರೆಗೆ ‘ಸಂಡಾಸ್’ ಸಿನಿಮಾ ಚಿತ್ರೀಕರಣ ನಡೆದಿದೆ. ಅಲ್ಲಿ ನಾನು ಕಂಡಂತೆ, ಶೇ 80 ರಷ್ಟು ಮಂದಿ ಶೌಚಾಲಯ ಬಳಸಲ್ಲ. ಶೌಚಾಲಯ ವ್ಯವಸ್ಥೆಯೂ ಇಲ್ಲ. ಮಹಿಳೆಯರು ಹಾಗೂ ಹೆಣ್ಣುಮಕ್ಕಳು ತುಂಬಾ ಸಮಸ್ಯೆ ಎದುರಿಸುತ್ತಿದ್ದಾರೆ. ಸೂರ್ಯ ಉದಯಿಸುವ ಮುನ್ನ ಹಾಗೂ ಸೂರ್ಯಾಸ್ತದ ಬಳಿಕವಷ್ಟೇ ಅವರು ಬಹಿರ್ದೆಸೆಗೆ ಹೋಗುವ ಅನಿವಾರ್ಯವಿದೆ.

ಆ ಸ್ಥಿತಿಗತಿಯು ನನ್ನ ಮೇಲೆ ಗಾಢ ಪ್ರಭಾವ ಬೀರಿತು. ಶೌಚಾಲಯದ ಪ್ರಾಮುಖ್ಯತೆ ಬಗ್ಗೆ ಅರಿವು ಮೂಡಿಸಬೇಕೆಂದು, ಸಿನಿಮಾದಲ್ಲಿ ನಟಿಸಿದ್ದಕ್ಕಾಗಿ ಸಿಕ್ಕ ₹1 ಲಕ್ಷ ಸಂಭಾವನೆಯನ್ನು ಶೌಚಾಲಯಗಳ ನಿರ್ಮಾಣಕ್ಕೆ ಕೊಟ್ಟುಬಿಟ್ಟೆ. ಶೌಚಾಲಯ ಬಳಕೆ ಬಗ್ಗೆ ರಾಜ್ಯದ ಸಾಕಷ್ಟು ಕಡೆಗಳಲ್ಲಿ ಬೀದಿ ನಾಟಕ ಪ್ರದರ್ಶನ ನೀಡುತ್ತಿದ್ದೇನೆ. ಇದೇ 15ರಂದು ಕೊಪ್ಪಳದಲ್ಲಿ ಬೀದಿ ನಾಟಕ ಮಾಡುತ್ತಿದ್ದೇವೆ.

ಜಾಗೃತಿ ವೇಳೆ ಜನರ ಪ್ರತಿಕ್ರಿಯೆ ಹೇಗಿತ್ತು ?

ಸಿನಿಮಾ ಚಿತ್ರೀಕರಣದ ನಡುವೆಯೇ ಅನೇಕ ಗ್ರಾಮಗಳಿಗೆ ಹೋಗಿದ್ದೆ. ಬೀದಿ ನಾಟಕ ಹಾಗೂ ಜಾಥಾದ ಮೂಲಕ ಜಾಗೃತಿ ಮೂಡಿಸಿದೆವು. ಅದಕ್ಕೆ ಮಿಶ್ರ ಪ್ರತಿಕ್ರಿಯೆ ಬಂತು. ನನ್ನ ವಯಸ್ಸಿನ ಬಾಲಕಿಯೊಬ್ಬಳು, ‘ನಾನು ಇರುವುದೇ ಬಯಲಿನಲ್ಲಿ. ನಾನೇಗೆ ಶೌಚಾಲಯ ಕಟ್ಟಿಸಿಕೊಳ್ಳಲಿ’ ಎಂದು ಖಾರವಾಗಿ ಪ್ರಶ್ನೆ ಮಾಡಿದ್ದಳು. ಆಕೆಯ ಸಿಟ್ಟಿನ ಹಿಂದಿನ ಸ್ಥಿತಿಗತಿ ಕಂಡು ನನಗೆ ಉತ್ತರಿಸಲು ಸಾಧ್ಯವಾಗಿಲ್ಲ. ಏನು ಹೇಳಬೇಕು ಎಂದು ಗೊತ್ತಾಗದೆ ಸುಮ್ಮನಾದೆ.

ಶಿಕ್ಷಣ ಹಾಗೂ ಅಭಿನಯವನ್ನು ಹೇಗೆ ನಿಭಾಯಿಸುತ್ತೀರಿ?

ಬೇಸಿಗೆ ರಜೆಯನ್ನು ಬೀದಿ ನಾಟಕಗಳ ಮೂಲಕವೇ ಜಾಗೃತಿ ಮೂಡಿಸಲು ಬಳಸಿಕೊಳ್ಳುತ್ತಿದ್ದೇನೆ. ಶಿಕ್ಷಣ ಹಾಗೂ ಅಭಿನಯ ನನ್ನ ನೆಚ್ಚಿನ ಕ್ಷೇತ್ರಗಳು. ಎರಡನ್ನೂ ಒಟ್ಟೊಟ್ಟಿಗೆ ಕೊಂಡೊಯ್ಯುವ ಇರಾದೆಯಿದೆ. ಗಿರಿನಗರದ ಮಾರ್ಟಿನ್ ಲೂಥರ್ ಶಾಲೆಯಲ್ಲಿ ಓದುತ್ತಿದ್ದು, ಶಿಕ್ಷಕರು ಹಾಗೂ ಸಹಪಾಠಿಗಳು ತುಂಬಾನೇ ಪ್ರೋತ್ಸಾಹ ನೀಡುತ್ತಾರೆ. ಪಾಠ ಹಾಗೂ ನೋಟ್ಸ್‌ಗೂ ಸಹಾಯ ಮಾಡುತ್ತಾರೆ. ಸಂಗೀತ, ನೃತ್ಯ, ಸಾಹಿತ್ಯ, ಕ್ರೀಡಾ ಕ್ಷೇತ್ರಗಳು ಇಷ್ಟ. ಶಾಲೆ ಹಾಗೂ ಸ್ಥಳೀಯ ಮಟ್ಟದಲ್ಲಿ ಈ ಕ್ಷೇತ್ರಗಳಲ್ಲಿ ತೊಡಗಿಕೊಂಡಿದ್ದೇನೆ. ಕೆಲ ಸಿನಿಮಾಗಳಲ್ಲಿ ಅವಕಾಶಗಳು ಸಿಕ್ಕಿದ್ದವು. ಈ ಬಾರಿ 10ನೇ ತರಗತಿಯಾಗಿರುವುದರಿಂದ ಓದಿಗೆ ಹೆಚ್ಚು ಒತ್ತು ನೀಡಬೇಕಿದ್ದರಿಂದ ಅವುಗಳನ್ನು ನಿರಾಕರಿಸಿದ್ದೇನೆ. ಮುಂದಿನ ದಿನಗಳಲ್ಲಿ ಶಿಕ್ಷಣ ಹಾಗೂ ನಟನೆಯನ್ನು ಮುಂದುವರೆಸಿಕೊಂಡು ಹೋಗುವೆ.

ಯಾವ ನಟ ಇಷ್ಟ ಹಾಗೂ ನಿಮಗೆ ಸ್ಪೂರ್ತಿ ಯಾರು?

ಸಾಮಾಜಿಕ ಕಳಕಳಿಯುಳ್ಳ ಪಾತ್ರಗಳಲ್ಲಿ ನಟಿಸುವ ಆಸೆ ಇದೆ. ಇದಕ್ಕೆ ರಾಜ್‌ಕುಮಾರ್ ಹಾಗೂ ಅಮೀರ್‌ಖಾನ್‌ ಅವರೇ ಸ್ಪೂರ್ತಿ. ಅವರ ಸಿನಿಮಾಗಳಲ್ಲಿನ ಸಂದೇಶಗಳು ನನಗೆ ತುಂಬಾ ಇಷ್ಟವಾಗುತ್ತವೆ. ಮಹಾತ್ಮ ಗಾಂಧೀಜಿ ಗ್ರಾಮಗಳ ಸ್ವಚ್ಛತೆಗೆ ಆದ್ಯತೆ ನೀಡಿದ್ದರು. ಈಗಿನ ಸ್ವಚ್ಛ ಭಾರತ ಪರಿಕಲ್ಪನೆ ಹಾಗೂ ಗ್ರಾಮಾಭಿವೃದ್ಧಿ ಬಗ್ಗೆಯೂ ಪ್ರಸ್ತಾಪಿಸಿದ್ದರು. ಹೀಗಾಗಿ, ಅವರು ಗಾಂಧೀಜಿಯೂ ನನಗೆ ಸ್ಫೂರ್ತಿ.

ಶೌಚಾಲಯದ ಪ್ರಾಮುಖ್ಯತೆ ಬಗ್ಗೆ ಜಾಗೃತಿ ಮೂಡಿಸುತ್ತಿರುವ ಪ್ರತ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT