ರ‍್ಯಾಕ್‌ ಅಡಿ ಸಿಲುಕಿ ಮೂವರ ದುರ್ಮರಣ

7
'ಹೋಲಿಸೋಲ್’ ಲಾಜಿಸ್ಟಿಕ್‌ ಗೋದಾಮಿನಲ್ಲಿ ಅವಘಡ * ಇಬ್ಬರ ಬಂಧನ

ರ‍್ಯಾಕ್‌ ಅಡಿ ಸಿಲುಕಿ ಮೂವರ ದುರ್ಮರಣ

Published:
Updated:

ಬೆಂಗಳೂರು: ಕಾಡುಗೋಡಿ ಸಮೀಪದ ಸೀಗೆಹಳ್ಳಿಯ ಆಶ್ರಮ ರಸ್ತೆಯಲ್ಲಿರುವ ‘ಹೋಲಿಸೋಲ್’ ಕಂಪನಿ ಗೋದಾಮಿನಲ್ಲಿದ್ದ ರ‍್ಯಾಕ್‌ಗಳು ಕಳಚಿ ಬಿದ್ದಿದ್ದರಿಂದ ಅಡಿಗೆ ಸಿಲುಕಿ ಮೂವರು ಕಾರ್ಮಿಕರು ಮೃತಪಟ್ಟಿದ್ದಾರೆ.

ಒಡಿಶಾದ ಸುಭಾಷ್ (35), ಜ್ಞಾನದರ್ಶನ (30) ಹಾಗೂ ರಾಜ್ಯದ ಕೊರಳೂರಿನ ಫಾರೂಕ್ (30) ಮೃತರು. ಅವಘಡದಲ್ಲಿ ಒಡಿಶಾದ ಕುಲದೀಪ್, ಜಾನಕಿ ರಾವತ್, ಚನ್ನಸಂದ್ರದ ನಾರಾಯಣಸ್ವಾಮಿ ಹಾಗೂ ನೇಪಾಳದ ಬಾಹುಬಲಿ ಗಾಯಗೊಂಡಿದ್ದಾರೆ. ಅವರನ್ನು ಆ್ಯಕ್ಸಿಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ಕಾರ್ಖಾನೆಗಳಲ್ಲಿ ಸಿದ್ಧವಾಗುವ ಜನಬಳಕೆ ವಸ್ತುಗಳನ್ನು ಮಾಲ್‌ಗಳು ಹಾಗೂ ಡಿಸ್ಟ್ರಿಬ್ಯೂಟರ್‌ಗಳಿಗೆ ತಲುಪಿಸುವ ಕೆಲಸವನ್ನು ‘ಹೋಲಿಸೋಲ್’ ಲಾಜಿಸ್ಟಿಕ್ ಮಾಡುತ್ತಿದೆ. ಕಾರ್ಖಾನೆಯಿಂದ ತಂದ ವಸ್ತುಗಳನ್ನು ಮೊದಲಿಗೆ ಗೋದಾಮಿನಲ್ಲಿಟ್ಟುಕೊಂಡು, ನಂತರ ಪ್ರತ್ಯೇಕ ವಾಹನಗಳಲ್ಲಿ ವಿಲೇವಾರಿ ಮಾಡಲಾಗುತ್ತಿತ್ತು. ವಸ್ತುಗಳ ಸಂಗ್ರಹಕ್ಕಾಗಿ ಬೃಹತ್ ಗಾತ್ರದ ಲೋಹದ ರ‍್ಯಾಕ್‌ಗಳನ್ನು ಗೋದಾಮಿನಲ್ಲಿ ಅಳವಡಿಸಲಾಗಿತ್ತು. ಅಂಥ 30ಕ್ಕೂ ಹೆಚ್ಚು ರ‍್ಯಾಕ್‌ಗಳು ಕಳಚಿ ಬಿದ್ದಿದ್ದರಿಂದಾಗಿ ಈ ಅವಘಡ ಸಂಭವಿಸಿದೆ.

‘ಗೋದಾಮಿನಲ್ಲಿ 70ಕ್ಕೂ ಹೆಚ್ಚು ಕಾರ್ಮಿಕರು ಎರಡು ಪಾಳಿಯಲ್ಲಿ ಕೆಲಸ ಮಾಡುತ್ತಾರೆ. ಆದರೆ, ಗೋದಾಮಿನಲ್ಲಿ ಯಾವುದೇ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿರಲಿಲ್ಲ. ನಿರ್ಲಕ್ಷ್ಯ ಆರೋಪದಡಿ ಪ್ರಕರಣ ದಾಖಲಿಸಿಕೊಂಡು, ಲಾಜಿಸ್ಟಿಕ್‌ ಮುಖ್ಯಸ್ಥ ಅಜಯ್ ಹಾಗೂ ಜಾಗದ ಮಾಲೀಕ ಅಮಾನುಲ್ಲಾ ಎಂಬುವರನ್ನು ಬಂಧಿಸಲಾಗಿದೆ’ ಎಂದು ವೈಟ್‌ಫೀಲ್ಡ್ ಡಿಸಿಪಿ ಅಬ್ದುಲ್ ಅಹದ್‌ ತಿಳಿಸಿದರು.  

ಭಾರದ ಬಾಕ್ಸ್‌ ಸಮೇತ ಬಿದ್ದ ರ‍್ಯಾಕ್‌ಗಳು: ಗೋದಾಮಿನಲ್ಲಿ ಸಾಲಾಗಿ ರ‍್ಯಾಕ್‌ಗಳನ್ನು ಜೋಡಿಸಿಡಲಾಗಿತ್ತು. ಅವುಗಳಲ್ಲಿ ವಸ್ತುಗಳ ಭಾರದ ಬಾಕ್ಸ್‌ಗಳನ್ನು ಇರಿಸಲಾಗಿತ್ತು. ಮಧ್ಯಾಹ್ನ 12.30 ಗಂಟೆ ಸುಮಾರಿಗೆ ಬಾಕ್ಸ್‌ ಸಮೇತವೇ ರ‍್ಯಾಕ್‌ಗಳು ಕಳಚಿ ಬಿದ್ದಿದ್ದವು. ಅದರಡಿಯೇ ಎಂಟೂ ಕಾರ್ಮಿಕರು ಸಿಲುಕಿಕೊಂಡಿದ್ದರು.

ಅವಶೇಷಗಳಡಿ ಸಿಲುಕಿದ್ದ ಕಾರ್ಮಿಕರ ಪೈಕಿ ಕೆಲವರು, ಸಹಾಯಕ್ಕಾಗಿ ಕೂಗಿದರು. ಸ್ಥಳಕ್ಕೆ ಬಂದ ಪೊಲೀಸರು, ಅಗ್ನಿಶಾಮಕ ದಳ, ಎಸ್‌ಡಿಆರ್‌ಎಫ್‌ ಹಾಗೂ ಎನ್‌ಡಿಆರ್‌ಎಫ್‌ ಸಿಬ್ಬಂದಿ, ಸಂಜೆ 7 ಗಂಟೆಯವರೆಗೂ ಕಾರ್ಯಾಚರಣೆ ನಡೆಸಿದರು.

ಕಾರ್ಮಿಕ ರಮಾಕಾಂತ್‌ ಎಂಬುವರನ್ನು ಮೊದಲಿಗೆ ರಕ್ಷಿಸಿದ ಸಿಬ್ಬಂದಿ, ಆಸ್ಪತ್ರೆಗೆ ಕಳುಹಿಸಿಕೊಟ್ಟರು. ಆದರೆ, ಅವರಿಗೆ ಯಾವುದೇ ಗಾಯವಾಗಿರಲಿಲ್ಲ. ಉಸಿರಾಟ ಸಮಸ್ಯೆ ಮಾತ್ರ ಇತ್ತು. ಚಿಕಿತ್ಸೆ ಪಡೆದು ಮನೆಗೆ ಹೋದರು.

ಕಾರ್ಯಾಚರಣೆ ಮುಂದುವರಿಸಿದ ಸಿಬ್ಬಂದಿ, ಕುಲದೀಪ್, ಜಾನಕಿ ರಾವತ್, ನಾರಾಯಣಸ್ವಾಮಿ ಹಾಗೂ ಬಾಹುಬಲಿ ಅವರನ್ನು ರಕ್ಷಿಸಿದರು. ತೀವ್ರವಾಗಿ ಗಾಯಗೊಂಡಿದ್ದ ಅವರನ್ನು ಆಂಬುಲೆನ್ಸ್‌ನಲ್ಲಿ ಆಸ್ಪತ್ರೆಗೆ ಕಳುಹಿಸಿಕೊಟ್ಟರು.

ಅದಾದ ನಂತರವೇ ಫಾರೂಕ್, ಸುಭಾಷ್‌ ಹಾಗೂ ಜ್ಞಾನದರ್ಶನ್ ಅವರ ಮೃತದೇಹಗಳನ್ನು ಸಿಬ್ಬಂದಿ ಹೊರಗೆ ತೆಗೆದರು. ಆಗ, ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿತ್ತು.

ಉದ್ಯೋಗ ಅರಿಸಿ ಬಂದಿದ್ದ ಕುಟುಂಬ: ‘ಒಡಿಶಾ ಹಾಗೂ ಕೋಲ್ಕತ್ತದ ಕಾರ್ಮಿಕರು, ಉದ್ಯೋಗ ಹುಡುಕಿಕೊಂಡು ಕುಟುಂಬ ಸಮೇತ ನಗರಕ್ಕೆ ಬಂದಿದ್ದರು. ಅವರೆಲ್ಲರೂ ಕಾಡುಗೋಡಿಯ ಬಡಾವಣೆಯೊಂದರಲ್ಲಿ ಒಟ್ಟಿಗೆ ವಾಸವಿದ್ದರು. ನಿತ್ಯವೂ ಜೊತೆಯಾಗಿಯೇ ಕೆಲಸಕ್ಕೂ ಹೋಗಿ ಬರುತ್ತಿದ್ದರು’ ಎಂದು ಪೊಲೀಸರು ಮಾಹಿತಿ ನೀಡಿದರು. 

ರ‍್ಯಾಕ್‌ ಕಳಚಿಬಿದ್ದ ಸುದ್ದಿ ತಿಳಿಯುತ್ತಿದ್ದಂತೆ ಕಾರ್ಮಿಕರ ಸಂಬಂಧಿಕರೆಲ್ಲ ಗೋದಾಮು ಬಳಿ ಬಂದು ಅಳಲಾರಂಭಿಸಿದ್ದರು. ‘ನಮ್ಮವರೂ ಒಳಗೆ ಸಿಲುಕಿಕೊಂಡಿರಬಹುದು ನೋಡಿ’ ಎಂದು ಗೋಗರೆಯುತ್ತಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 3

  Sad
 • 0

  Frustrated
 • 1

  Angry

Comments:

0 comments

Write the first review for this !