ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಫೇಲ್‌: ಕೇಂದ್ರ–ಕಾಂಗ್ರೆಸ್‌ ಮತ್ತೆ ಜಟಾಪಟಿ

ಎಚ್‌ಎಎಲ್‌ ಹೊರಗಿಟ್ಟದ್ದು ಯುಪಿಎ: ನಿರ್ಮಲಾ l ಖರೀದಿ ದರ ಬಹಿರಂಗಪಡಿಸಿ: ಆಂಟನಿ ಒತ್ತಾಯ
Last Updated 18 ಸೆಪ್ಟೆಂಬರ್ 2018, 17:09 IST
ಅಕ್ಷರ ಗಾತ್ರ

ನವದೆಹಲಿ: ರಫೇಲ್‌ ಯುದ್ಧ ವಿಮಾನ ಖರೀದಿ ಒಪ್ಪಂದಕ್ಕೆ ಸಂಬಂಧಿಸಿ ಕೇಂದ್ರ ಸರ್ಕಾರ ಮತ್ತು ವಿರೋಧ ಪಕ್ಷ ಕಾಂಗ್ರೆಸ್‌ ನಡುವೆ ಮತ್ತೆ ವಾಕ್ಸಮರ ನಡೆದಿದೆ.

ಸರ್ಕಾರಿ ಸ್ವಾಮ್ಯದಹಿಂದುಸ್ತಾನ್‌ ಏರೋನಾಟಿಕ್ಸ್‌ ಲಿಮಿಟೆಡ್‌ (ಎಚ್‌ಎಎಲ್‌) ಸಂಸ್ಥೆಯನ್ನು ಹೊರಗಿಟ್ಟು ಖಾಸಗಿ ಸಂಸ್ಥೆಗಳಿಗೆ ಅವಕಾಶ ನೀಡಿದ್ದು ಯಾಕೆ ಎಂಬ ಕಾಂಗ್ರೆಸ್‌ ಪ್ರಶ್ನೆಗೆ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ತಿರುಗೇಟು ರೂಪದಲ್ಲಿ ಉತ್ತರ ನೀಡಿದ್ದಾರೆ.

ಖರೀದಿ ಒಪ್ಪಂದ ಪ್ರಕ್ರಿಯೆಯಿಂದ ಎಚ್‌ಎಎಲ್‌ ಸಂಸ್ಥೆಯನ್ನು ಹೊರಗಿಟ್ಟದ್ದು ಯುಪಿಎ ಸರ್ಕಾರವೇ ಹೊರತು ಎನ್‌ಡಿಎ ಸರ್ಕಾರವಲ್ಲ ಎಂದು ನಿರ್ಮಲಾ ಮಂಗಳವಾರ ಹೇಳಿದ್ದಾರೆ.

ಯುದ್ಧ ವಿಮಾನ ತಯಾರಿಗೆ ಸಂಬಂಧಿಸಿದಂತೆ ಫ್ರಾನ್ಸ್‌ನ ಡಸಾಲ್ಟ್‌ ಕಂಪನಿ ಜತೆ ಎಚ್‌ಎಎಲ್‌ಗೆ ಒಮ್ಮತ ಮೂಡದ ಕಾರಣ ಅದನ್ನು ಒಪ್ಪಂದದಿಂದ ಹೊರಗಿಡಲಾಗಿದೆ. ಈ ಬೆಳವಣಿಗೆ ನಡೆದದ್ದು ಯಾರ ಕಾಲದಲ್ಲಿ ಎಂದು ಅವರು ಪ್ರಶ್ನಿಸಿದ್ದಾರೆ.

ಯುಪಿಎ ಸರ್ಕಾರ ಮಾಡಿಕೊಂಡಿದ್ದ ಒಪ್ಪಂದಕ್ಕಿಂತ ಶೇ 9ರಷ್ಟು ಅಗ್ಗದ ಬೆಲೆಗೆ ಎನ್‌ಡಿಎ ಸರ್ಕಾರ ರಫೇಲ್‌ ಯುದ್ಧ ವಿಮಾನಗಳನ್ನು ಖರೀದಿಸಿದೆ ಎಂದು ಅವರು ಸಮರ್ಥಿಸಿಕೊಂಡಿದ್ದಾರೆ.

ತನಿಖೆಗೆ ಜಂಟಿ ಸದನ ಸಮಿತಿ ಏಕಿಲ್ಲ?:ಅಗ್ಗದ ಬೆಲೆಗೆ ಯುದ್ಧ ವಿಮಾನ ಖರೀದಿಸಿರುವುದು ನಿಜವಾದರೆ ರಫೇಲ್‌ ಹಗರಣದ ತನಿಖೆಗೆ ಜಂಟಿ ಸದನ ಸಮಿತಿ ರಚಿಸಲಿ ಎಂದು ಕಾಂಗ್ರೆಸ್‌ ಮುಖಂಡ ಮತ್ತು ಮಾಜಿ ರಕ್ಷಣಾ ಸಚಿವ ಎ.ಕೆ. ಆಂಟನಿ ಅವರು ಸರ್ಕಾರಕ್ಕೆ ಸವಾಲು ಹಾಕಿದ್ದಾರೆ.

ರಫೇಲ್‌ ಒಪ್ಪಂದದಲ್ಲಿ ದೇಶದ ಹಿತಾಸಕ್ತಿಗಳನ್ನು ಬಲಿಕೊಟ್ಟಿರುವ ಕೇಂದ್ರ ಎನ್‌ಡಿಎ ಸರ್ಕಾರವು ಜನರಿಂದ ಸತ್ಯಾಂಶಗಳನ್ನು ಮುಚ್ಚಿಡುತ್ತಿದೆ ಎಂದು ಅವರು ಸುದ್ದಿಗೋಷ್ಠಿಯಲ್ಲಿ ಆರೋಪಿಸಿದ್ದಾರೆ.

ಸತ್ಯ ಹೊರಬರುತ್ತದೆ ಎಂಬ ಕಾರಣಕ್ಕೆ ಜಂಟಿ ಸದನ ಸಮಿತಿ ರಚಿಸಲು ಸರ್ಕಾರ ಹೆದರುತ್ತಿದೆ ಎಂದು ಅವರು ಲೇವಡಿ ಮಾಡಿದ್ದಾರೆ.

ಸರ್ಕಾರಕ್ಕೆ ನಿಜವಾಗಿಯೂ ಧೈರ್ಯವಿದ್ದರೆ, 126 ವಿಮಾನಗಳಿಗೆ ಯುಪಿಎ ಸರ್ಕಾರ ನಿಗದಿ ಪಡಿಸಿದ್ದ ದರ ಮತ್ತು 36 ವಿಮಾನಗಳಿಗೆ ಎನ್‌ಡಿಎ ಸರ್ಕಾರ ನೀಡಿದ ಹಣದ ವಿವರ ಬಹಿರಂಗಪಡಿಸಲಿ. ಆಗ ದೇಶದ ಜನರು ಯಾರು ಸರಿ, ಯಾರು ತಪ್ಪು ಎಂದು ತೀರ್ಮಾನಿಸುತ್ತಾರೆ ಎಂದು ಆಂಟನಿ ಸವಾಲು ಹಾಕಿದ್ದಾರೆ.

ಅಗ್ಗದ ಬೆಲೆಗೆ ಕೇವಲ 36 ವಿಮಾನವೇ?:ಶೇ 9ರಷ್ಟು ಅಗ್ಗದ ಬೆಲೆಗೆ ಸಿಗುವುದಾದರೆ ಎನ್‌ಡಿಎ ಸರ್ಕಾರ ಏಕೆ 126 ಯುದ್ಧ ವಿಮಾನಗಳನ್ನು ಖರೀದಿಸಲಿಲ್ಲ. ವಾಯುಸೇನೆ 126 ಯುದ್ಧ ವಿಮಾನಗಳಿಗೆ ಬೇಡಿಕೆ ಸಲ್ಲಿಸಿದರೂ ಕೇವಲ 36 ವಿಮಾನಗಳನ್ನಷ್ಟೇ ಏಕೆ ಖರೀದಿಸಿತು ಎಂದು ಆಂಟನಿ ಪ್ರಶ್ನಿಸಿದ್ದಾರೆ.

ಶೇ 9ರಷ್ಟು ಅಗ್ಗದ ಬೆಲೆಗೆ ವಿಮಾನ ಖರೀದಿಸಿದ್ದೇವೆ ಎಂದು ಕಾನೂನು ಸಚಿವ ರವಿಶಂಕರ್‌ ಪ್ರಸಾದ್‌, ಶೇ 20ರಷ್ಟು ಅಗ್ಗ ಎಂದು ಹಣಕಾಸು ಸಚಿವ ಅರುಣ್‌ ಜೇಟ್ಲಿ, ಶೇ 40ರಷ್ಟು ಅಗ್ಗ ಎಂದು ವಾಯುಸೇನೆ ಅಧಿಕಾರಿಗಳು ಹೇಳುತ್ತಾರೆ. ಹಾಗಾದರೆ ಇದರಲ್ಲಿ ಸತ್ಯ ಹೇಳುತ್ತಿರುವವರು ಯಾರು ಮತ್ತು ಯಾರು ಸುಳ್ಳು ಹೇಳುತ್ತಿದ್ದಾರೆ ಎಂದು ಅವರು ಕೇಳಿದ್ದಾರೆ.

ಎಚ್‌ಎಎಲ್‌ಗೆ ವಿಮಾನ ತಯಾರಿಸುವ ಸಾಮರ್ಥ್ಯ ಇಲ್ಲ ಎಂದಿರುವ ನಿರ್ಮಲಾ ಸೀತಾರಾಮನ್‌ ಅವರು ಜಾಗತಿಕ ಮಟ್ಟದಲ್ಲಿ ದೇಶದ ಪ್ರತಿಷ್ಠಿತ ಸಂಸ್ಥೆ ಎಚ್‌ಎಎಲ್‌ ಹೆಸರಿಗೆ ಮಸಿ ಬಳಿದಿದ್ದಾರೆ ಎಂದು ಆಂಟನಿ ತರಾಟೆಗೆ ತೆಗೆದುಕೊಂಡಿದ್ದಾರೆ.

ಯುಪಿಎ ಒಪ್ಪಂದ ರದ್ದು ಮಾಡದಿದ್ದರೆ ಎಚ್ಎಎಲ್‌ಗೆ ಯುದ್ಧ ವಿಮಾನ ತಯಾರಿಸುವ ಅವಕಾಶ ಮತ್ತು ಅನುಭವ ಸಿಗುತ್ತಿತ್ತು. ದೇಶಕ್ಕೆ ಸಿಕ್ಕ ಸುವರ್ಣ ಅವಕಾಶವನ್ನು ಸರ್ಕಾರ ಹಾಳು ಮಾಡಿತು. ಭಾರತೀಯ ತಂತ್ರಜ್ಞರಿಗೆ ಸಿಗಬೇಕಾಗಿದ್ದ ಉದ್ಯೋಗ ಅವಕಾಶ ಕೈತಪ್ಪುವಂತಾಯಿತು ಎಂದರು.

‘ಸಿಧು ಪಾಕ್‌ ಏಜೆಂಟ್‌’

ಪಾಕಿಸ್ತಾನ ಪ್ರಧಾನಿ ಇಮ್ರಾನ್‌ ಖಾನ್‌ ಪ್ರಮಾಣ ವಚನ ಸಮಾರಂಭದಲ್ಲಿ ಅಲ್ಲಿಯ ಸೇನಾಪಡೆಯ ಮುಖ್ಯಸ್ಥ ಖಮರ್‌ ಜಾವೇದ್‌ ಬಾಜ್ವಾ ಅವರನ್ನು ತಬ್ಬಿಕೊಳ್ಳುವ ಮೂಲಕ ಕಾಂಗ್ರೆಸ್‌ ಸಚಿವ ನವಜೋತ್‌ ಸಿಂಗ್‌ ಸಿಧು ಅವರು ಭಾರತೀಯ ಸೈನಿಕರ ನೈತಿಕ ಸ್ಥೈರ್ಯ ಕುಸಿಯುವಂತೆ ಮಾಡಿದ್ದಾರೆ ಎಂದು ನಿರ್ಮಲಾ ಸೀತಾರಾಮನ್‌ ಟೀಕಿಸಿದ್ದಾರೆ.

ಸಿಧು ಅವರು ಪಾಕಿಸ್ತಾನದ ಏಜೆಂಟ್‌ ರೀತಿ ವರ್ತಿಸುತ್ತಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.

ವಿಚಾರಣೆ ಮುಂದೂಡಿದ ಸುಪ್ರೀಂ ಕೋರ್ಟ್‌

ರಾಜಕೀಯ ಕೋಲಾಹಲಕ್ಕೆ ಕಾರಣವಾಗಿರುವ ರಫೇಲ್‌ ಯುದ್ಧ ವಿಮಾನ ಖರೀದಿ ಒಪ್ಪಂದಕ್ಕೆ ತಡೆ ನೀಡುವಂತೆ ಕೋರಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆಯನ್ನು ಸುಪ್ರೀಂ ಕೋರ್ಟ್‌ ಅಕ್ಟೋಬರ್‌ 10ಕ್ಕೆ ಮುಂದೂಡಿದೆ.

36 ರಫೇಲ್‌ ಯುದ್ಧ ವಿಮಾನ ಖರೀದಿಸಲು ಕೇಂದ್ರ ಸರ್ಕಾರವು ಫ್ರಾನ್ಸ್‌ನ ಡಸಾಲ್ಟ್‌ ಕಂಪನಿ ಜತೆ ಒಪ್ಪಂದ ಮಾಡಿಕೊಂಡಿತ್ತು.ಒಪ್ಪಂದದಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆದಿರುವ ಕಾರಣ ತಡೆಯಾಜ್ಞೆ ನೀಡುವಂತೆ ಕೋರಿ ವಕೀಲ ಎಂ.ಎಲ್‌. ಶರ್ಮಾ ಎಂಬುವರು ಅರ್ಜಿ ಸಲ್ಲಿಸಿದ್ದರು.

ಹಗರಣಕ್ಕೆ ಸಂಬಂಧಿಸಿದಂತೆ ಮತ್ತಷ್ಟು ಪೂರಕ ದಾಖಲೆ ಒದಗಿಸಲು ಸಮಯಾವಕಾಶ ಅಗತ್ಯವಿರುವ ಕಾರಣ ವಿಚಾರಣೆ ಮುಂದೂಡುವಂತೆ ಅವರು ಮನವಿ ಮಾಡಿದರು.ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಒಪ್ಪಂದ ಪ್ರಕ್ರಿಯೆಯಲ್ಲಿ ಭಾಗಿಯಾಗಿರುವವರ ವಿರುದ್ಧ ಎಫ್ಐಆರ್‌ ದಾಖಲಿಸಿ, ವಿಚಾರಣೆ ಆರಂಭಿಸುವಂತೆ ಅವರು ಮನವಿ ಮಾಡಿದ್ದಾರೆ.

ಹಿಂದಿನ ರಕ್ಷಣಾ ಸಚಿವ ಮತ್ತು ಗೋವಾ ಮುಖ್ಯಮಂತ್ರಿ ಮನೋಹರ್‌ ಪರ್ರೀಕರ್‌, ಉದ್ಯಮಿ ಅನಿಲ್‌ ಅಂಬಾನಿ ಮತ್ತು ಫ್ರಾನ್ಸ್‌ನ ಡಸಾಲ್ಟ್‌ ಕಂಪನಿಯನ್ನೂ ಅವರು ಹೆಸರಿಸಿದ್ದಾರೆ.ರಫೇಲ್‌ ಒಪ್ಪಂದ ಮೊತ್ತವನ್ನು ಸಂಸತ್‌ನಲ್ಲಿ ಬಹಿರಂಗಪಡಿಸುವಂತೆ ಕೋರಿ ಕಾಂಗ್ರೆಸ್‌ ನಾಯಕ ತೆಹಸೀನ್‌ ಪೂನಾವಾಲಾ ಇದೇ ಮಾರ್ಚ್‌ನಲ್ಲಿ ಅರ್ಜಿ ಸಲ್ಲಿಸಿದ್ದರು.ಸರ್ಕಾರ ಏಕೆ ಈ ಒಪ್ಪಂದಕ್ಕೆ ಸಂಪುಟದ ಒಪ್ಪಿಗೆ ಪಡೆದಿಲ್ಲ ಎಂದು ಅವರು ಕೇಳಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT