ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಫೇಲ್‌: ಸರ್ಕಾರದ ಪರ ಸಿಎಜಿ ವರದಿಗೆ ಕಾಂಗ್ರೆಸ್‌ ಆಕ್ಷೇಪ

Last Updated 10 ಫೆಬ್ರುವರಿ 2019, 18:37 IST
ಅಕ್ಷರ ಗಾತ್ರ

ನವದೆಹಲಿ: ರಫೇಲ್‌ ಒಪ್ಪಂದದ ಬಗ್ಗೆ ಮಹಾಲೇಖಪಾಲರ (ಸಿಎಜಿ) ವರದಿ ಸಂಸತ್ತಿನ ಬಜೆಟ್‌ ಅಧಿವೇಶನದಲ್ಲಿ ಮಂಡನೆಯಾಗುವ ಸಾಧ್ಯತೆ ಇದೆ. ಆದರೆ, ಮಹಾಲೇಖಪಾಲ ರಾಜೀವ್‌ ಮಹರ್ಷಿ ಬಗ್ಗೆ ಕಾಂಗ್ರೆಸ್‌ ಪಕ್ಷ ಆಕ್ಷೇಪಗಳನ್ನು ಮುಂದಿಟ್ಟಿದೆ.

ಮಹರ್ಷಿ ಅವರು ಹಣಕಾಸು ಕಾರ್ಯದರ್ಶಿಯಾಗಿದ್ದಾಗ ನರೇಂದ್ರ ಮೋದಿ ಸರ್ಕಾರದ ‘ಅಕ್ರಮಗಳು, ಅವ್ಯವಹಾರಗಳು ಮತ್ತು ಭ್ರಷ್ಟಾಚಾರ’ದಲ್ಲಿ ಷಾಮೀಲಾಗಿದ್ದಾರೆ. ಲೋಕಸಭೆ ಚುನಾವಣೆ ಹತ್ತಿರವಾಗುತ್ತಿರುವ ಈ ಸಂದರ್ಭದಲ್ಲಿ ವಿವಾದಾತ್ಮಕ ಒಪ್ಪಂದದಲ್ಲಿ ಕೇಂದ್ರ ಸರ್ಕಾರವು ನಿರ್ದೋಷಿ ಎಂಬ ವರದಿ ಕೊಡಲು ಅವರು ಪ್ರಯತ್ನಿಸುತ್ತಿದ್ದಾರೆ ಎಂದು ಕಾಂಗ್ರೆಸ್‌ ಆರೋಪಿಸಿದೆ.

ಸಿಎಜಿಗೆ ಕಾಂಗ್ರೆಸ್‌ ಪಕ್ಷವು ಪತ್ರ ಬರೆದಿದೆ. ವರದಿ ತಯಾರಿಕೆ ಪ್ರಕ್ರಿಯೆಯಿಂದ ಹೊರಗೆ ಉಳಿಯದಿರುವ ಮಹರ್ಷಿ ಅವರ ನಡೆಯು ಆಘಾತ ಹುಟ್ಟಿಸಿದೆ ಎಂದು ಪತ್ರದಲ್ಲಿ ಹೇಳಲಾಗಿದೆ. ತಮ್ಮ ಬಗ್ಗೆ ತಾವೇ ನ್ಯಾಯಾಧೀಶರಾಗಿ ವರದಿ ತಯಾರಿಸುವ ಮೂಲಕ ಸಂಪೂರ್ಣವಾಗಿ ಅನೌಚಿತ್ಯದಿಂದ ನಡೆದುಕೊಂಡಿರುವುದನ್ನು ಬಹಿರಂಗವಾಗಿಯೇ ಒಪ್ಪಿಕೊಂಡಿದ್ದಾರೆ ಎಂದು ಕಾಂಗ್ರೆಸ್ ಹೇಳಿದೆ.

ಪ್ರಧಾನಿ ನರೇಂದ್ರ ಮೋದಿ ಅವರು 2015ರ ಏಪ್ರಿಲ್‌ನಲ್ಲಿ 36 ರಫೇಲ್‌ ಯುದ್ಧ ವಿಮಾನಗಳನ್ನು ಖರೀದಿಸುವ ಒಪ್ಪಂದವನ್ನು ಘೋಷಿಸಿದಾಗ ಮತ್ತು ಹಿಂದಿನ ಯುಪಿಎ ಸರ್ಕಾರ 126 ರಫೇಲ್‌ ವಿಮಾನಗಳನ್ನು ಖರೀದಿಸಲು ಮಾಡಿದ್ದ ಒಪ್ಪಂದವನ್ನು ರದ್ದು ಮಾಡುವಾಗ ಮಹರ್ಷಿ ಅವರು ಹಣಕಾಸು ಕಾರ್ಯದರ್ಶಿಯಾಗಿದ್ದರು. ರಫೇಲ್‌ ಮಾತುಕತೆಯಲ್ಲಿ ಮಹರ್ಷಿ ಅವರೂ ಭಾಗಿಯಾಗಿದ್ದಾರೆ. ರಕ್ಷಣಾ ಒಪ್ಪಂದಗಳಿಗೆ ಹಣಕಾಸಿನ ಮಂಜೂರಾತಿ ಮತ್ತು ಅನುಮೋದನೆಯಲ್ಲಿ ಹಣಕಾಸು ಸಚಿವಾಲಯ ಹಾಗೂ ರಕ್ಷಣೆಯ ಸಂಪುಟ ಸಮಿತಿಯು ನಿರ್ಧಾರ ಕೈಗೊಳ್ಳಬೇಕು ಎಂಬುದು ನಿಯಮವಾಗಿದೆ ಎಂದು ಪತ್ರದಲ್ಲಿ ಕಾಂಗ್ರೆಸ್‌ ಪಕ್ಷ ವಿವರಿಸಿದೆ.

ಯಾವುದೇ ವ್ಯಕ್ತಿಯು ತನಗೆ ತಾನೇ ನ್ಯಾಯಾಧೀಶನಾಗಲು ಸಾಧ್ಯವಿಲ್ಲ ಎಂಬುದು ಸಹಜ ನ್ಯಾಯವಾಗಿದೆ. ಆದರೆ, ಸಿಎಜಿ ಮಹರ್ಷಿ ಅವರು ತಮ್ಮ ಕೆಲಸಗಳ ಬಗ್ಗೆ ತಾವೇ ವರದಿ ತಯಾರಿಸಿದ್ದಾರೆ ಎಂದು ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಗುಲಾಂ ನಬಿ ಆಜಾದ್‌ ಮತ್ತು ಕಾಂಗ್ರೆಸ್‌ ಮುಖಂಡ ಕಪಿಲ್‌ ಸಿಬಲ್‌ ಅವರು ಬರೆದ ಪತ್ರದಲ್ಲಿ ಹೇಳಲಾಗಿದೆ.

ರಫೇಲ್‌ ಲೆಕ್ಕ ಪರಿಶೋಧನೆ ವರದಿಗೆ ಸಂಬಂಧಿಸಿ ಕಾಂಗ್ರೆಸ್ ಪಕ್ಷದ ನಿಯೋಗವು ಎರಡು ಬಾರಿ ಮಹರ್ಷಿ ಅವರನ್ನು ಭೇಟಿಯಾಗಿದೆ. ಆದರೆ, ಆಗ ಅವರು ಹಿತಾಸಕ್ತಿ ಸಂಘರ್ಷದ ವಿಚಾರವನ್ನು ಪ್ರಸ್ತಾಪಿಸಿಯೇ ಇಲ್ಲ ಎಂದು ಪತ್ರದಲ್ಲಿ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT