ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಫೇಲ್‌: ಬಿಜೆಪಿ ಸವಾಲು ಸ್ವೀಕರಿಸಿದ ಕಾಂಗ್ರೆಸ್‌

Last Updated 31 ಡಿಸೆಂಬರ್ 2018, 19:25 IST
ಅಕ್ಷರ ಗಾತ್ರ

ನವದೆಹಲಿ: ರಫೇಲ್‌ ಯುದ್ಧ ವಿಮಾನ ಖರೀದಿ ಒಪ್ಪಂದ ಕುರಿತು ಲೋಕಸಭೆಯಲ್ಲಿ ಚರ್ಚೆಗೆ ಸಿದ್ಧವಿರುವುದಾಗಿಕಾಂಗ್ರೆಸ್‌ ಸೋಮವಾರ ಹೇಳಿದೆ.

‘ರಫೇಲ್‌ ವಿವಾದ ಚರ್ಚೆಗೆ ಹಣಕಾಸು ಸಚಿವ ಅರುಣ್‌ ಜೇಟ್ಲಿ ಹಾಕಿದ ಸವಾಲನ್ನು ಸ್ವೀಕರಿಸಿದ್ದು, ಜನವರಿ 2 ರಂದು ಚರ್ಚೆಗೆ ಸಿದ್ಧರಿದ್ದೇವೆ. ಸಮಯ ನಿಗದಿಪಡಿಸಿ’ ಎಂದು ಲೋಕಸಭೆಯ ಕಾಂಗ್ರೆಸ್‌ ನಾಯಕ ಮಲ್ಲಿಕಾರ್ಜುನ ಖರ್ಗೆ ಹೇಳಿದರು. ಪ್ರಸಕ್ತ ಹಣಕಾಸು ವರ್ಷದ ಮಾರ್ಚ್‌ ಅಂತ್ಯದವರೆಗೆ ಹೆಚ್ಚುವರಿ ವೆಚ್ಚಕ್ಕಾಗಿ ₹85,948.86 ಕೋಟಿ ಪೂರಕ ಅನುದಾನಕ್ಕೆ ಲೋಕಸಭೆ ಅನುಮೋದನೆ ನೀಡಿದ ನಂತರ ಅವರು ಈ ಹೇಳಿಕೆ ನೀಡಿದರು.

ಪೂರಕ ಅನುದಾನ ಕುರಿತು ಮಧ್ಯಾಹ್ನ 2 ಗಂಟೆಗೆ ಚರ್ಚೆ ಆರಂಭವಾಗುತ್ತಿದ್ದಂತೆ, ರಫೇಲ್‌ ಒಪ್ಪಂದ ಕುರಿತು ಜಂಟಿ ಸಂಸದೀಯ ಸಮಿತಿಯಿಂದ (ಜೆಪಿಸಿ) ತನಿಖೆ ನಡೆಸಬೇಕು ಎಂದು ಖರ್ಗೆ ಮೇಲಿಂದ ಮೇಲೆ ಆಗ್ರಹಿಸಿದರು.

ಚರ್ಚೆಯಿಂದ ಓಡಿ ಹೋಗಬೇಡಿ: ‘ರಫೆಲ್‌ ಒಪ್ಪಂದ ಕುರಿತು ಪ್ರತಿಕ್ರಿಯೆ ನೀಡಲು ಸರ್ಕಾರ ಸಿದ್ಧವಿದೆ. ಆದ ರೆ, ಚರ್ಚೆಯಿಂದ ಓಡಿ ಹೋಗಬಾರದು’ ಎಂದು ಸಚಿವ ಜೇಟ್ಲಿ ಖರ್ಗೆ ಅವರನ್ನು ಕಿಚಾಯಿಸಿದರು.

‘ರಫೇಲ್‌ ಒಪ್ಪಂದ ಕುರಿತು ಕಾಂಗ್ರೆಸ್‌ ಸುಳ್ಳು ಸುದ್ದಿ ಹಬ್ಬಿಸುತ್ತಿದೆ ಎಂಬುದನ್ನು ಚರ್ಚೆ ಸಂದರ್ಭದಲ್ಲಿಯೇ ಸಾಬೀತು ಪಡಿಸುತ್ತೇವೆ’ ಎಂದು ಜೇಟ್ಲಿ ಸವಾಲು ಹಾಕಿದರು.

ಸದನವನ್ನು ಮುಂದೂಡುವ ಸಂದರ್ಭದಲ್ಲಿ, ಲೋಕಸಭೆ ಸ್ಪೀಕರ್‌ ಸುಮಿತ್ರಾ ಮಹಾಜನ್‌ ಅವರಿಗೆ ರಫೇಲ್‌ ಒಪ್ಪಂದದ ವಿಷಯ ನೆನಪಿಸಿದ ಖರ್ಗೆ, ಚರ್ಚೆಗೆ ಸಮಯ ನಿಗದಿಪಡಿಸಲು ಕೋರಿದರು. ‘ಸಮಯದ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಗುವುದು.ನಿಮ್ಮ ಸವಾಲುಗಳನ್ನು ನೀವು ನಿಭಾಯಿಸಿ, ನನಗೆ ಸವಾಲು ಹಾಕಬೇಡಿ’ ಎಂದು ಎಂದು ಮಹಾಜನ್, ಖರ್ಗೆಯವರಿಗೆ ತಿರುಗೇಟು ನೀಡಿದರು.

ಲೋಕಸಭೆಯಲ್ಲಿ ಮತ್ತೆ ಗದ್ದಲ

ಚಳಿಗಾಲದ ಅಧಿವೇಶನದ ಆರಂಭದ ದಿನದಿಂದಲೇ ಕಾಂಗ್ರೆಸ್‌ ಸದಸ್ಯರು ರಫೇಲ್‌ ಒಪ್ಪಂದದ ಬಗ್ಗೆ ಜೆಪಿಸಿ ತನಿಖೆಗೆ ಒಳಪಡಿಸಬೇಕು ಎಂದು ಒತ್ತಾಯಿಸುತ್ತಿದ್ದಾರೆ. ಸೋಮವಾರ ಸಹ ಕಾಂಗ್ರೆಸ್‌ ಸದಸ್ಯರು ಶೂನ್ಯ ವೇಳೆಯಲ್ಲಿ ಸ್ಪೀಕರ್‌ ಪೀಠದ ಎದುರು ತೆರಳಿ ಫಲಕ ಪ್ರದರ್ಶಿಸಿ, ಘೋಷಣೆ ಕೂಗಿದರು.

‘ರಫೇಲ್‌ ಒಪ್ಪಂದದಲ್ಲಿ ಅವ್ಯವಹಾರ ನಡೆದಿದೆ. ಅದಕ್ಕಾಗಿಯೇ ಯುದ್ಧ ವಿಮಾನಗಳ ಖರೀದಿಯ ಬೆಲೆಯನ್ನು ಸರ್ಕಾರ ಬಹಿರಂಗಪಡಿಸುತ್ತಿಲ್ಲ. ಹೀಗಾಗಿ ಜೆಪಿಸಿ ತನಿಖೆ ನಡೆಸಬೇಕು’ ಎಂದು ಖರ್ಗೆ ಹೇಳುತ್ತಿದ್ದಂತೆ, ಬಿಜೆಪಿ ಸದಸ್ಯರು ಪ್ರತಿಭಟಿಸಿದರು.

‘ಪದೇ ಪದೇ ಸುಳ್ಳು ಹೇಳುವುದರಿಂದ ಅದು ನಿಜವಾಗುವುದಿಲ್ಲ. ಚರ್ಚೆಗೆ ಸರ್ಕಾರ ಸಿದ್ಧವಿದೆ’ ಎಂದು ಗೃಹ ಸಚಿವ ರಾಜನಾಥ್‌ ಸಿಂಗ್‌ ಹೇಳಿದರು. ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ಸದನದಲ್ಲಿದ್ದರು.

‘ಆರ್‌ಬಿಐ ಮೀಸಲು ನಿಧಿ ಬಳಸಲ್ಲ’

ನವದೆಹಲಿ (ಪಿಟಿಐ): ವಿತ್ತೀಯ ಕೊರತೆ ನೀಗಿಸಲು ಭಾರತೀಯ ರಿಸರ್ವ್‌ ಬ್ಯಾಂಕಿನ (ಆರ್‌ಬಿಐ) ಮೀಸಲು ನಿಧಿ ಬಳಸಿಕೊಳ್ಳುವ ಉದ್ದೇಶ ಸರ್ಕಾರಕ್ಕಿಲ್ಲ ಎಂದು ಹಣಕಾಸು ಸಚಿವ ಅರುಣ್‌ ಜೇಟ್ಲಿ ಲೋಕಸಭೆಯಲ್ಲಿ ಸೋಮವಾರ ಸ್ಪಷ್ಟಪಡಿಸಿದರು.

ಪೂರಕ ಅನುದಾನದ ಅನುಮೋದನೆ ಕುರಿತು ನಡೆದ ಚರ್ಚೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಬಡತನ ನಿವಾರಣಾ ಕಾರ್ಯಕ್ರಮಗಳನ್ನು ತ್ವರಿತಗೊಳಿಸಲು ಹಾಗೂ ಸರ್ಕಾರಿ ಸ್ವಾಮ್ಯದ ಬ್ಯಾಂಕುಗಳ ಪುನಃಶ್ಚೇತನಕ್ಕಾಗಿ ಈ ನಿಧಿ ಬಳಸಿಕೊಳ್ಳಲು ಉದ್ದೇಶಿಸಲಾಗಿದೆ ಎಂದು ಸ್ಪಷ್ಟಪಡಿಸಿದರು.

ಹಣಕಾಸಿನ ಕೊರತೆಯನ್ನು ಸರಿದೂಗಿಸುವಲ್ಲಿ ಪ್ರಧಾನಿ ಮೋದಿ ನೇತೃತ್ವದ ಸರ್ಕಾರ ಅತ್ಯುತ್ತಮ ದಾಖಲೆ ಹೊಂದಿದೆ ಎಂದು ಅವರು ತಿಳಿಸಿದರು.

ಜಾಗತಿಕ ಮಟ್ಟದಲ್ಲಿ ಕೇಂದ್ರೀಯ ಬ್ಯಾಂಕ್‌ಗಳು ಯಾವ ಪ್ರಮಾಣದಲ್ಲಿ ಮೀಸಲು ನಿಧಿ ಹೊಂದಬಹುದು ಎನ್ನುವುದಕ್ಕೆ ಮಾರ್ಗಸೂಚಿಗಳಿವೆ. ಅಂತೆಯೇ ಆರ್‌ಬಿಐನ ಮೀಸಲು ನಿಧಿಯ ಸೂಕ್ತ ಪ್ರಮಾಣ ನಿರ್ಧಾರವಾಗಬೇಕು. ಆರ್‌ಬಿಐನಲ್ಲಿ ಮೀಸಲು ನಿಧಿ ಎಷ್ಟಿರಬೇಕು ಎಂದು ಪರಿಣಿತರ ಸಮಿತಿ ನಿರ್ಧರಿಸಲಿದೆ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT