ರಫೇಲ್ ಖರೀದಿ ಮಾತುಕತೆ ಒಂದು ವರ್ಷ ನಡೆದಿತ್ತು:ಸುಪ್ರೀಂಗೆ ಕೇಂದ್ರ ಸರ್ಕಾರ ಮಾಹಿತಿ

7

ರಫೇಲ್ ಖರೀದಿ ಮಾತುಕತೆ ಒಂದು ವರ್ಷ ನಡೆದಿತ್ತು:ಸುಪ್ರೀಂಗೆ ಕೇಂದ್ರ ಸರ್ಕಾರ ಮಾಹಿತಿ

Published:
Updated:

ನವದೆಹಲಿ: ರಫೇಲ್‌ ಯುದ್ಧ ವಿಮಾನ ಖರೀದಿ ಒಪ್ಪಂದ ರೂಪುಗೊಂಡ ಬಗೆ ಮತ್ತು ದರ ಮಾಹಿತಿಯ ವಿವರವನ್ನು ಮುಚ್ಚಿದ ಲಕೋಟೆಯಲ್ಲಿ ಕೇಂದ್ರ ಸರ್ಕಾರ ಸೋಮವಾರ ಸುಪ್ರೀಂಕೋರ್ಟ್‌ ಮತ್ತು ಅರ್ಜಿದಾರರಿಗೆ ಸಲ್ಲಿಸಿದೆ.

‘36 ರಫೇಲ್‌ ಫೈಟರ್ ಜೆಟ್‌ಗಳ ಖರೀದಿ ಮಾತುಕತೆಗಾಗಿ ಭಾರತೀಯ ಸಂಧಾನಕಾರರ ಒಂದು ತಂಡವನ್ನು ರೂಪಿಸಲಾಗಿತ್ತು. ವಾಯುಪಡೆಯ ನಿವೃತ್ತ ಉಪ ಮುಖ್ಯಸ್ಥರೊಬ್ಬರು (ಡೆಪ್ಯುಟಿ ಚೀಫ್ ಆಫ್ ಏರ್ ಸ್ಟಾಫ್) ತಂಡದ ನೇತೃತ್ವ ವಹಿಸಿದ್ದರು. ಈ ತಂಡ ಸತತ ಒಂದು ವರ್ಷ ಮಾತುಕತೆ ನಡೆಸಿ ದರ ಮತ್ತು ನಿರ್ವಹಣೆಯನ್ನು ಒಳಗೊಂಡಂತೆ ಅತ್ಯುತ್ತಮ ಒಪ್ಪಂದ ರೂಪಿಸಿತು’ ಎಂದು ಸರ್ಕಾರ ಹೇಳಿದೆ.

‘ರಫೇಲ್‌ ಖರೀದಿ ಒಪ್ಪಂದದ ಮಾಹಿತಿ ಬಹಿರಂಗಪಡಿಸಬೇಕು’ ಎಂದು ಒತ್ತಾಯಿಸುತ್ತಿರುವ ಅರ್ಜಿದಾರರು ‘ನ್ಯಾಯಾಲಯದ ಕಣ್ಗಾವಲಿನಲ್ಲಿ ಸಿಬಿಐ ತನಿಖೆ ನಡೆಯಬೇಕು’ ಎಂದು ಆಗ್ರಹಿಸಿದ್ದರು. ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ‘ರಫೇಲ್ ಒಪ್ಪಂದ ಅಂತಿಮಗೊಳ್ಳಲು ಕಾರಣವಾದ ಅಂಶಗಳ ಮಾಹಿತಿಯನ್ನು ನೀಡಬೇಕು’ ಎಂದು ಸರ್ಕಾರಕ್ಕೆ ಸೂಚಿಸಿತ್ತು.

‘ರಫೇಲ್ ಒಪ್ಪಂದಕ್ಕಾಗಿ ರೂಪಿಸಿದ್ದ ಸಮಿತಿಯು ತನ್ನ ವರದಿಯನ್ನು ಜುಲೈ 2016ರಂದು ಸಲ್ಲಿಸಿತು. ನಂತರ ಖರೀದಿ ಒಪ್ಪಂದಕ್ಕೆ ರಕ್ಷಣಾ ಮತ್ತು ಭದ್ರತಾ ಉಪಕರಣಗಳ ಖರೀದಿಗಾಗಿನ ಸಂಸದೀಯ ಸಮಿತಿಯ ಅನುಮೋದನೆ ದೊರೆಯಿತು’ ಎಂದು ಸರ್ಕಾರವು ಕೋರ್ಟ್‌ಗೆ ಸಲ್ಲಿಸಿರುವ 16 ಪುಟಗಳ ದಾಖಲೆಯಲ್ಲಿ ಉಲ್ಲೇಖಿಸಿದೆ.

‘ದೇಶದ ಭದ್ರತೆಗೆ ಧಕ್ಕೆ ಉಂಟು ಮಾಡುವ ಮಾಹಿತಿಯನ್ನು ಹೊರತುಪಡಿಸಿ, ಉಳಿದ ಮಾಹಿತಿ ನೀಡಿ’ ಎನ್ನುವ ಸುಪ್ರೀಂಕೋರ್ಟ್‌ನ ಸೂಚನೆಯಂತೆ ಸರ್ಕಾರವು ಎಲ್ಲ ಅರ್ಜಿದಾರರಿಗೆ ಈ ಮಾಹಿತಿ ನೀಡಿದೆ. ಈ ವಾರದ ಕೊನೆಯಲ್ಲಿ ರಫೇಲ್ ವಹಿವಾಟಿನ ವಿಚಾರಣೆಯನ್ನು ನ್ಯಾಯಾಲಯ ಮುಂದುವರಿಸಲಿದೆ. ದರ ನಿರ್ಧಾರದ ಮಾಹಿತಿಯನ್ನೂ ನೀಡುವಂತೆ ನ್ಯಾಯಾಲಯ ಸರ್ಕಾರಕ್ಕೆ ಸೂಚಿಸಿದೆ.

ಬರಹ ಇಷ್ಟವಾಯಿತೆ?

 • 6

  Happy
 • 0

  Amused
 • 1

  Sad
 • 2

  Frustrated
 • 4

  Angry

Comments:

0 comments

Write the first review for this !