ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ರಫೇಲ್: ಪಾಲುದಾರಿಕೆ ಅನಿವಾರ್ಯವಾಗಿತ್ತು’

ಡಾಸೋ ಕಾರ್ಮಿಕ ಸಂಘಟನೆಗಳ ಪ್ರಕಟಣೆ
Last Updated 16 ಅಕ್ಟೋಬರ್ 2018, 20:15 IST
ಅಕ್ಷರ ಗಾತ್ರ

ಬೆಂಗಳೂರು: ರಫೇಲ್ ಒಪ್ಪಂದದಲ್ಲಿ ರಿಲಯನ್ಸ್ ಡಿಫೆನ್ಸ್ ಜತೆಗೆ ನಾವು ಪಾಲುದಾರಿಕೆ ಮಾಡಿಕೊಳ್ಳದೆ ಬೇರೆ ಆಯ್ಕೆಯೇ ಇರಲಿಲ್ಲ ಎಂದು ಡಾಸೋ ಏವಿಯೇಷನ್ ತನ್ನ ಕಾರ್ಮಿಕರಿಗೆ ಹೇಳಿತ್ತು ಎಂದು ‘ಎನ್‌ಡಿಟಿವಿ’ ವರದಿ ಮಾಡಿದೆ.

ಡಾಸೋ ಏವಿಯೇಷನ್‌ನ ಎರಡು ಕಾರ್ಮಿಕ ಸಂಘಟನೆಗಳಾದ ಸಿಜಿಟಿ ಮತ್ತು ಸಿಎಫ್‌ಡಿಟಿಗಳು ಸದಸ್ಯರಿಗಾಗಿ ಬಿಡುಗಡೆ ಮಾಡಿರುವ ಪ್ರಕಟಣೆಗಳಲ್ಲಿ ಈ ಮಾಹಿತಿ ಇದೆ. ಅವನ್ನು ಫ್ರಾನ್ಸ್‌ನ ‘ಪೋರ್ಟಲ್ ಏವಿಯೇಷನ್’ ಎಂಬ ಬ್ಲಾಗ್ ಪ್ರಕಟಿಸಿದೆ. ‘ನಾವು ಈ ಪ್ರಕಟಣೆಗಳನ್ನು ಅರ್ಥೈಸಲು ಹೋಗುವುದಿಲ್ಲ. ಬದಲಿಗೆ ನೀವೇ ಅದನ್ನು ಓದಿ ಅರ್ಥಮಾಡಿಕೊಳ್ಳಿ’ ಎಂದು ಪೋರ್ಟಲ್ ಏವಿಯೇಷನ್ ತನ್ನ ವರದಿಯಲ್ಲಿ ಸೂಚಿಸಿದೆ.

ರಫೇಲ್ ಒಪ್ಪಂದದಲ್ಲಿ ಡಾಸೋ ಕಂಪನಿಯು ರಿಲಯನ್ಸ್ ಡಿಫೆನ್ಸ್ ಜತೆಗೆ ಪಾಲುದಾರಿಕೆ ಮಾಡಿಕೊಂಡ ಬಗ್ಗೆ ಕಂಪನಿಯ ಕಾರ್ಮಿಕರು ಆಕ್ಷೇಪ ವ್ಯಕ್ತಪಡಿಸಿದ್ದರು. ವಿದೇಶಿ ಪಾಲುದಾರಿಕೆಯ ಅನಿವಾರ್ಯತೆಯನ್ನು ಮನವರಿಕೆ ಮಾಡಿಕೊಡಲು ಕಂಪನಿಯ ಉನ್ನತಾಧಿಕಾರಿ ಲೋಯಿಕ್ ಸೆಗಲೆನ್ ಅವರು 2017ರ ಮೇ 11ರಂದು ಕಾರ್ಮಿಕರಿಗೆ ನೀಡಿದ ಸಮಜಾಯಿಷಿಯ ವಿವರ ಈ ಪ್ರಕಟಣೆಗಳಲ್ಲಿ ಇದೆ ಎಂದು ಎನ್‌ಡಿಟಿವಿ ಹೇಳಿದೆ.

ಸಿಜಿಟಿ ಪ್ರಕಟಣೆ:‘ಭಾರತದಲ್ಲೇ ತಯಾರಿಸಿ ಅಭಿಯಾನದ ಅಡಿ ‘ಡಾಸೋ ರಿಲಯನ್ಸ್ ಏರೊಸ್ಪೇಸ್’ ಎಂಬ ಕಂಪನಿಯನ್ನು ಸ್ಥಾ‍ಪಿಸುವ ಪ್ರಸ್ತಾವವನ್ನು ನಾಗಪುರದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ನಮ್ಮ ಮುಂದೆ ಇಡಲಾಗಿತ್ತು. ಭಾರತಕ್ಕೆ ರಫೇಲ್ ಯುದ್ಧವಿಮಾನಗಳನ್ನು ರಫ್ತು ಮಾಡುವ ಒಪ್ಪಂದಕ್ಕೆ ಪ್ರತಿಫಲವಾಗಿ ನಾವು ಈ ಪ್ರಸ್ತಾಪವನ್ನು ಒಪ್ಪಿಕೊಳ್ಳುವ ಅನಿವಾರ್ಯತೆಯಿತ್ತು’ ಎಂದು ಸಿಜಿಟಿಯ ಪ್ರಕಟಣೆಯಲ್ಲಿ ವಿವರಿಸಲಾಗಿದೆ.

ಸಿಎಫ್‌ಡಿಟಿ ಪ್ರಕಟಣೆ:‘ಭಾರತದಲ್ಲೇ ತಯಾರಿಸಿ’ ಎಂಬುದು ಭಾರತವೇ ಸೃಷ್ಟಿಸಿದ ಅನಿವಾರ್ಯತೆಯಾಗಿತ್ತು. ರಫೇಲ್ ಒಪ್ಪಂದವನ್ನು ಪಡೆದುಕೊಳ್ಳುವ ಸಲುವಾಗಿ ನಾವು ರಿಲಯನ್ಸ್ ಡಿಫೆನ್ಸ್ ಜತೆಗೆ ಪಾಲುದಾರಿಕೆ ಮಾಡಿಕೊಳ್ಳಬೇಕಾಯಿತು ಎಂದು ಕಂಪನಿ ಹೇಳಿದೆ’ ಎಂದು ಸಿಎಫ್‌ಡಿಟಿ ಪ್ರಕಟಣೆಯಲ್ಲಿ ವಿವರಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT