ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕದ್ದ ದಾಖಲೆ ಆಧರಿಸಿದ ವರದಿ ನಿಜವಲ್ಲವೇ?– ರಾಹುಲ್‌ ವಾಗ್ದಾಳಿ

ರಫೇಲ್‌ ಯುದ್ಧ ವಿಮಾನ ಖರೀದಿ ಒಪ್ಪಂದ: ಪ್ರಧಾನಿ ಮೋದಿ ವಿರುದ್ಧ ರಾಹುಲ್‌ ವಾಗ್ದಾಳಿ ಇನ್ನಷ್ಟು ಹರಿತ
Last Updated 7 ಮಾರ್ಚ್ 2019, 20:01 IST
ಅಕ್ಷರ ಗಾತ್ರ

ನವದೆಹಲಿ: ರಫೇಲ್‌ ಯುದ್ಧ ವಿಮಾನ ಖರೀದಿಯಲ್ಲಿ ಅವ್ಯವಹಾರ ಆಗಿದೆ ಎಂಬ ವಿಚಾರವನ್ನು ಇಟ್ಟುಕೊಂಡು ಕೇಂದ್ರ ಸರ್ಕಾರದ ವಿರುದ್ಧದ ಆರೋಪವನ್ನು ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಅವರು ಇನ್ನಷ್ಟು ಹರಿತಗೊಳಿಸಿದ್ದಾರೆ.

‘ಕಾನೂನು ಪ್ರಕಾರ ನೀವು ಏನು ಮಾಡಬೇಕೋ ಅವೆಲ್ಲವನ್ನೂ ಮಾಡಿ. ಆದರೆ, ನ್ಯಾಯ ಎಲ್ಲರಿಗೂ ಒಂದೇ. ದಾಖಲೆಗಳು ಕಳವಾಗಿವೆ ಎಂದು ನೀವು ಹೇಳುತ್ತೀರಿ ಎಂದಾದರೆ, ಅದರ ಆಧಾರದಲ್ಲಿ ಪ್ರಕಟವಾಗಿರುವ ವರದಿಗಳು ನಿಜ. ನಿಮ್ಮ ವಿರುದ್ಧ ಅಪರಾಧ ತನಿಖೆ ಯಾಕೆ ಆಗಿಲ್ಲ? ಪ್ರಧಾನಿಯನ್ನು ವಿರೋಧಿಸುವ ಯಾರೊಬ್ಬರ ಮೇಲೆ ಬೇಕಾದರೂ ತನಿಖೆಗೆ ಆದೇಶಿಸಬಹುದಾದರೆ, ನರೇಂದ್ರ ಮೋದಿ ಅವರ ವಿರುದ್ಧ ತನಿಖೆ ಯಾಕಾಗಬಾರದು’ ಎಂದು ಅವರು ಪ್ರಶ್ನಿಸಿದ್ದಾರೆ.

ಈ ಒಪ್ಪಂದದಲ್ಲಿ ಮೋದಿ ಅವರು ‘ಬೈಪಾಸ್‌ ಸರ್ಜರಿ’ ನಡೆಸಿದ್ದಾರೆ. ಅವರನ್ನು ರಕ್ಷಿಸುವುದಕ್ಕಾಗಿ ಸರ್ಕಾರದ ಎಲ್ಲ ಸಂಸ್ಥೆಗಳನ್ನೂ ದುರುಪಯೋಗ ಮಾಡಿಕೊಳ್ಳಲಾಗುತ್ತಿದೆ ಎಂದು ಅವರು ಆ‍ಪಾದಿಸಿದ್ದಾರೆ.

‘ನ್ಯಾಯ ಎಲ್ಲರಿಗೂ ಒಂದೇ. ಎಲ್ಲರನ್ನೂ ತನಿಖೆಗೆ ಒಳಪಡಿಸಿ, ಮೋದಿ ಅವರನ್ನೂ ತನಿಖೆ ಮಾಡಿ’ ಎಂದು ಅವರು ಹೇಳಿದ್ದಾರೆ. ಪ್ರಧಾನಿ ಕಾರ್ಯಾಲಯವು ಸಮಾನಾಂತರ ಮಾತುಕತೆ ನಡೆಸಿದೆ ಎಂಬುದು ಅಧಿಕೃತ ದಾಖಲೆಗಳಿಂದಲೇ ಬಹಿರಂಗವಾಗಿದೆ. ಪರ್ಯಾಯ ಮಾತುಕತೆಯಿಂದಾಗಿ ರಫೇಲ್‌ ವಿಮಾನ ಪೂರೈಕೆ ವಿಳಂಬವಾಗಿದೆ. ಅನಿಲ್‌ ಅಂಬಾನಿ ಅವರಿಗೆ ₹30 ಸಾವಿರ ಕೋಟಿ ಕೊಡಬೇಕಿದ್ದುದರಿಂದಲೇ ರಫೇಲ್‌ ವಿಮಾನಗಳ ಪೂರೈಕೆ ತಡವಾಗಿದೆ ಎಂದು ಅವರು ಆರೋಪಿಸಿದ್ದಾರೆ.

‘ಎಲ್ಲ ಮಾಯ...’

‘ಎಲ್ಲ ಮಾಯ’ ಎಂಬುದು ಮೋದಿ ನೇತೃತ್ವದ ಸರ್ಕಾರದ ಹೊಸ ಕಿರು ಶೀರ್ಷಿಕೆಯಾಗಿದೆ (ಟ್ಯಾಗ್‌ಲೈನ್‌). ಯುವಜನರ ಉದ್ಯೋಗಗಳು, ರೈತರ ಉತ್ಪನ್ನಗಳ ಬೆಲೆ ಮಾಯವಾದಂತೆ ರಫೇಲ್‌ ದಾಖಲೆಗಳೂ ಮಾಯವಾಗಿವೆ. ಪ್ರತಿಯೊಬ್ಬರ ಖಾತೆಗೆ ₹15 ಲಕ್ಷ ಜಮೆ, ರೈತರಿಗೆ ವಿಮೆ, ನೋಟುರದ್ದತಿ ಬಳಿಕ ಕಪ್ಪುಹಣ ನಿರ್ಮೂಲನೆ ಯಾವುದೂ ಜಾರಿಗೆ ಬಂದಿಲ್ಲ ಎಂದು ರಾಹುಲ್ ಹಂಗಿಸಿದ್ದಾರೆ.‌

ಪೋಸ್ಟರ್‌ ಬಾಯ್‌ ಯಾರು?: ಬಾಲಾಕೋಟ್‌ನಲ್ಲಿರುವ ಜೈಷ್‌ ಎ ಮೊಹಮ್ಮದ್‌ ಉಗ್ರರ ತರಬೇತಿ ಶಿಬಿರದ ಮೇಲೆ ನಡೆಸಿದ ವಾಯುದಾಳಿಯ ಬಗ್ಗೆ ಪ್ರಶ್ನೆಗಳನ್ನು ಕೇಳುತ್ತಿರುವ ಕಾಂಗ್ರೆಸ್‌ ಪಕ್ಷವು ಪಾಕಿಸ್ತಾನದ ‘ಪೋಸ್ಟರ್‌ ಬಾಯ್‌’ ಎಂದು ಮೋದಿ ಅವರು ಹೇಳಿರುವುದಕ್ಕೆ ರಾಹುಲ್‌ ತಿರುಗೇಟು ನೀಡಿದ್ದಾರೆ. ‘ಪಾಕಿಸ್ತಾನದ ಪೋಸ್ಟರ್‌ ಬಾಯ್‌ ನೀವೇ ಹೊರತು ನಾವಲ್ಲ’ ಎಂದು ಹೇಳಿದ್ದಾರೆ.

ಪಠಾಣ್‌ಕೋಟ್‌ ಸೇನಾ ನೆಲೆಯ ಮೇಲೆ ದಾಳಿ ನಡೆದ ಬಳಿಕ ಅದರ ತನಿಖೆಗೆ ಪಾಕಿಸ್ತಾನದ ಗೂಢಾಚರ ಸಂಸ್ಥೆ ಐಎಸ್‌ಐಗೆ ಅವಕಾಶ ನೀಡಿದ್ದು ಮತ್ತು ಮೋದಿ ಅವರು ತಮ್ಮ ಪ್ರಮಾಣವಚನಕ್ಕೆ ಆಗ ಪಾಕಿಸ್ತಾನದ ಪ್ರಧಾನಿಯಾಗಿದ್ದ ನವಾಜ್‌ ಷರೀಫ್‌ ಅವರನ್ನು ಆಹ್ವಾನಿಸಿದ್ದನ್ನು ರಾಹುಲ್‌ ನೆನಪಿಸಿದ್ದಾರೆ.

ಮೋದಿ ಉಮೇದು, ವಿರೋಧಿಗಳಲ್ಲಿ ದಿಗಿಲು

ಲಖನೌ: ಪ್ರಧಾನಿ ನರೇಂದ್ರ ಮೋದಿ ಅವರು ರಾಜಕೀಯವಾಗಿ ಮಹತ್ವವಿರುವ ಉತ್ತರ ಪ್ರದೇಶದ ಪ್ರಮುಖ ಕಡೆಗಳಲ್ಲಿ ಸರಣಿ ಕಾರ್ಯಕ್ರಮಗಳಲ್ಲಿ ಭಾಗಿಯಾಗುತ್ತಿದ್ದಾರೆ. ಅತ್ತ ವಿರೋಧ ಪಕ್ಷಗಳು ಚುನಾವಣಾ ದಿನಾಂಕ ಘೋಷಣೆಯನ್ನೇ ಕಾಯುತ್ತಿವೆ.

ಮೋದಿ ಅವರು ಕಳೆದ 15 ದಿನಗಳ ಅವಧಿಯಲ್ಲಿ ಅಮೇಠಿ, ಝಾನ್ಸಿ, ಪ್ರಯಾಗರಾಜ್, ಗೋರಖಪುರ ಮತ್ತು ವಾರಾಣಸಿಗಳಲ್ಲಿ ವಿವಿಧ ಕಾರ್ಯಕ್ರಮಗಳ ಉದ್ಘಾಟನೆ, ಶಂಕುಸ್ಥಾಪನೆಯಂತಹ ಸಮಾರಂಭಗಳಲ್ಲಿ ಬಿಡುವಿಲ್ಲದಂತೆ ತೊಡಗಿಸಿಕೊಂಡಿದ್ದಾರೆ.

ಇದೇ ಶುಕ್ರವಾರ ಮತ್ತೆ ಉತ್ತರ ಪ್ರದೇಶಕ್ಕೆ ಭೇಟಿ ನೀಡಲಿರುವ ಅವರು ಗಾಜಿಯಾಬಾದ್, ಕಾನ್ಪುರ, ವಾರಾಣಸಿಯಲ್ಲಿ ನಡೆಯಲಿರುವ ಸರಣಿ ಕಾರ್ಯಕ್ರಮಗಳಲ್ಲಿ ಭಾಗಿಯಾಗಲಿದ್ದಾರೆ.

ಚುನಾವಣಾ ನೀತಿ ಸಂಹಿತೆ ಜಾರಿಯಾಗುವ ಮುನ್ನ ಎಷ್ಟು ಸಾಧ್ಯವೋ ಅಷ್ಟು ಕ್ಷೇತ್ರಗಳಲ್ಲಿ ಮೋದಿ ಅವರ ಸಮಾವೇಶಗಳನ್ನು ನಡೆಸಲು ಬಿಜೆಪಿ ಯತ್ನಿಸುತ್ತಿದೆ. ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರೂ ಪಕ್ಷದ ಕಾರ್ಯಕ್ರಮಗಳು, ಮತಗಟ್ಟೆ ಮಟ್ಟದ ಕಾರ್ಯಕರ್ತರ ಸಭೆ ಸೇರಿದಂತೆ ಪಕ್ಷದ ಚಟುವಟಿಕೆಗಳಲ್ಲಿ ನಿರಂತರವಾಗಿ ತೊಡಗಿಸಿಕೊಂಡಿದ್ದಾರೆ.‌

ಪುಲ್ವಾಮಾ ಘಟನೆಯ ಬೆನ್ನಲ್ಲೇ ಸಮಾವೇಶಗಳು ಹಾಗೂ ಉದ್ಘಾಟನಾ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಂಡಿದ್ದ ಮೋದಿ ಅವರನ್ನು ವಿರೋಧ ಪಕ್ಷಗಳು ತರಾಟೆಗೆ ತೆಗೆದುಕೊಂಡಿದ್ದವು. ಆದರೆ ಇದರಲ್ಲಿ ತಪ್ಪೇನೂ ಇಲ್ಲ ಎಂದು ಬಿಜೆಪಿ ಸಮರ್ಥಿಸಿಕೊಂಡಿತ್ತು.

‘ಬಿಎಸ್‌ಪಿ–ಎಸ್‌ಪಿ ಮೈತ್ರಿಯಿಂದ ಬಿಜೆಪಿಗೆ ಸಂಖ್ಯಾಬಲ ಇಳಿಮುಖವಾಗುವ ನಡುಕ ಶುರುವಾಗಿದೆ. ಹೀಗಾಗಿ ಕಾರ್ಯಕರ್ತರಲ್ಲಿ ಉತ್ಸಾಹ ಮೂಡಿಸಲು ಮೋದಿ ಅವರನ್ನು ಎಲ್ಲಕಡೆ ಕರೆದೊಯ್ಯುತ್ತಿದೆ. ಆದರೆ ಬಿಜೆಪಿ ಯಶಸ್ಸು ಗಳಿಸಲಾರದು’ ಎಂದು ಎಸ್‌ಪಿ ಮುಖಂಡರೊಬ್ಬರು ಅಭಿಪ್ರಾಯಪಡುತ್ತಾರೆ.

ಮೋದಿ ಅವರ ಪ್ರವಾಸದಿಂದ ಪಕ್ಷಕ್ಕೆ ಭಾರಿ ಲಾಭವಾಗಲಿದೆ ಎಂದಿರುವ ಬಿಜೆಪಿ ಹಿರಿಯ ನಾಯಕ ವಿಜಯ್ ಬಹಾದ್ದೂರ್ ಅವರು, 2014ರಲ್ಲಿ ಉತ್ತರ ಪ್ರದೇಶದಲ್ಲಿ ಪಕ್ಷ 71 ಸ್ಥಾನ ಗಳಿಸಲು ಸಾಧ್ಯವಾಯಿತು ಎಂದು ಹೇಳಿದ್ದಾರೆ.

ರಾಹುಲ್‌ಗೆ ಪಾಕ್ ಪ್ರಮಾಣಪತ್ರ ಬೇಕೇ?

ನವದೆಹಲಿ (ಪಿಟಿಐ): ರಫೇಲ್ ಬಗ್ಗೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ಹಸಿಸುಳ್ಳು ಹೇಳುತ್ತಿದ್ದಾರೆ ಎಂದು ಬಿಜೆಪಿ ಗುರುವಾರ ಆರೋಪಿಸಿದೆ.

‘ರಾಹುಲ್ ಅವರು ಭಾರತೀಯ ವಾಯುಪಡೆಯನ್ನು ನಂಬುತ್ತಿಲ್ಲ, ಸುಪ್ರೀಂ ಕೋರ್ಟ್ ತೀರ್ಪನ್ನೂ ನಂಬುತ್ತಿಲ್ಲ. ಹಾಗಾದರೆ ಅವರಿಗೆ ಪಾಕಿಸ್ತಾನದಿಂದ ಪ್ರಮಾಣಪತ್ರ ಬೇಕೇ’ ಎಂದು ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ ಖಾರವಾಗಿ ಪ್ರಶ್ನಿಸಿದ್ದಾರೆ.

ರಫೇಲ್ ಪ್ರಕರಣದಲ್ಲಿ ಪ್ರಧಾನಿ ವಿರುದ್ಧ ತನಿಖೆಯಾಗಬೇಕು ಎಂದು ಆಗ್ರಹಿಸಿರುವ ರಾಹುಲ್ ಅವರನ್ನು ಸಚಿವರು ತರಾಟೆಗೆ ತೆಗೆದುಕೊಂಡಿದ್ದಾರೆ. ‘ಭಾರತೀಯ ಸೇನೆ ಹಾಗೂ ಭಾರತದ ನಾಯಕರಿಗಿಂತ ಹೆಚ್ಚಾಗಿ ರಾಹುಲ್‌ಗೆ ಪಾಕಿಸ್ತಾನದ ಮೇಲೆ ನಂಬಿಕೆ ಇದೆ’ ಎಂದು ಆರೋಪಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT