ಫ್ರಾನ್ಸ್‌ ರಕ್ಷಣಾ ಕಚೇರಿಗೆ ಅಂಬಾನಿ ಭೇಟಿ

7
ಏರ್‌ಬಸ್‌ನ ಆಂತರಿಕ ಇಮೇಲ್‌ನಲ್ಲಿ ಉಲ್ಲೇಖ

ಫ್ರಾನ್ಸ್‌ ರಕ್ಷಣಾ ಕಚೇರಿಗೆ ಅಂಬಾನಿ ಭೇಟಿ

Published:
Updated:

ಬೆಂಗಳೂರು: ರಿಲಯನ್ಸ್ ಡಿಫೆನ್ಸ್ ಮುಖ್ಯಸ್ಥ ಅನಿಲ್ ಅಂಬಾನಿ ಅವರು ಫ್ರಾನ್ಸ್‌ನ ರಕ್ಷಣಾ ಸಚಿವರ ಕಚೇರಿಗೆ ಭೇಟಿ ನೀಡಿದ್ದರು ಎಂದು ಆರೋಪಿಸಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಬಿಡುಗಡೆ ಮಾಡಿದ ಇಮೇಲ್‌ನಲ್ಲಿದ್ದ ವಿವರಗಳು ಹೀಗಿವೆ.

ಯಾರಿಂದ: ನಿಕೋಲಸ್ ಚಾಮ್ಸೆ (ಏರ್‌ಬಸ್ ಸಿಇಒ)

ಮಾರ್ಚ್ 28, 2015.

ಸಂಜೆ 4.41

ಯಾರಿಗೆ: ಎಂಡರ್ಸ್, ಟಾಮ್, ಫಾರಿ, ಗಿಲೌಮ್  (ಏರ್‌ಬಸ್ ಹೆಲಿಕಾಪ್ಟರ್ ಸಿಇಒ)

ವಿಷಯ: ಎ.ಅಂಬಾನಿ

ನಿಮ್ಮ ಮಾಹಿತಿಗಾಗಿ. ಈಗಷ್ಟೇ ಸಿ.ಸಾಲೋಮನ್ (ರಕ್ಷಣಾ ಸಚಿವ ಜೆ.ವೈ. ಲೆ ಡ್ರೈನ್ ಅವರ ಸಲಹೆಗಾರ) ಜತೆ ಫೋನಿನಲ್ಲಿ ಮಾತನಾಡಿದೆ. ಎ.ಅಂಬಾನಿ ಅವರು ಈ ವಾರ ಸಚಿವರ ಕಚೇರಿಗೆ ಭೇಟಿ ನೀಡಿದ್ದರು (ರಹಸ್ಯ ಮತ್ತು ಯೋಜಿತ ಭೇಟಿ ಎಂಬುದು ಶೀಘ್ರವೇ ನಿಮಗೆ ಗೊತ್ತಾಗಲಿದೆ). ವಾಣಿಜ್ಯ ಬಳಕೆ ಹೆಲಿಕಾಪ್ಟರ್‌ಗಳ ವಿಚಾರದಲ್ಲಿ ಮತ್ತು ರಕ್ಷಣಾ ವಲಯಕ್ಕೆ ಸಂಬಂಧಿಸಿದಂತೆ ಎಎಚ್‌ (ಎರ್‌ಬಸ್ ಹೆಲಿಕಾಪ್ಟರ್) ಜತೆ ಕೆಲಸ ಮಾಡಲು ಅವರು ಉತ್ಸುಕರಾಗಿದ್ದಾರೆ ಎಂದು ತಿಳಿಸಿದ್ದಾರೆ. ಒಪ್ಪಂದವೊಂದನ್ನು ರೂಪಿಸಲಾಗುತ್ತಿದೆ ಮತ್ತು ಪ್ರಧಾನಿ ಭೇಟಿಯ ವೇಳೆ ಆ ಒಪ್ಪಂದಕ್ಕೆ ಸಹಿ ಮಾಡಲು ಬಯಸುತ್ತೇವೆ ಎಂಬುದನ್ನು ಅವರು ಚರ್ಚೆ ವೇಳೆ ಪ್ರಸ್ತಾಪಿಸಿದ್ದರು.

ಈ ವಿಚಾರದಲ್ಲಿ ನಮಗೆ ಬೇರೆ ಸಂಭಾವ್ಯ ಪಾಲುದಾರರೂ ಇದ್ದಾರೆ ಮತ್ತು ನಾವು ಏನು ಮಾಡಬಹುದು ಎಂಬುದನ್ನು ಪರಿಶೀಲಿಸುತ್ತೇವೆ ಎಂದು ಅವರಿಗೆ ಸ್ಪಷ್ಟವಾಗಿ ತಿಳಿಸಿದ್ದೇವೆ.

-ನಿಕೋಲಸ್

***

‘ಸತ್ಯ ತಿರುಚಲಾಗುತ್ತಿದೆ’

ರಾಹುಲ್ ಗಾಂಧಿಯ ಆರೋಪವನ್ನು ಅನಿಲ್‌ ಅಂಬಾನಿ ಮಾಲೀಕತ್ವದ ರಿಲಯನ್ಸ್ ಡಿಫೆನ್ಸ್ ಅಲ್ಲಗಳೆದಿದೆ.

‘ಏರ್‌ಬಸ್ ಹೆಲಿಕಾಪ್ಟರ್ ಮತ್ತು ರಿಲಯನ್ಸ್ ನಡುವಣ ಒಪ್ಪಂದದ ಬಗ್ಗೆ ಆ ಮಾತುಕತೆಯಲ್ಲಿ ಪ್ರಸ್ತಾಪಿಸಲಾಗಿತ್ತು. ಅದು ರಫೇಲ್‌ಗೆ ಸಂಬಂಧಿಸಿದ ಒಪ್ಪಂದವಲ್ಲ. ರಫೇಲ್ ಒಪ್ಪಂದಕ್ಕೆ ಎರಡೂ ದೇಶಗಳು ಸಹಿ ಮಾಡಿದ್ದು 2016ರ ಜನವರಿ 25ರಂದು, 2015ರ ಏಪ್ರಿಲ್‌ನಲ್ಲಿ ಅಲ್ಲ. ಈ ವಿಚಾರದಲ್ಲಿ ಸತ್ಯವನ್ನು ತಿರುಚಲಾಗುತ್ತಿದೆ ಎಂಬುದನ್ನು ಇದು ಸಾಬೀತುಮಾಡಿದೆ’ ಎಂದು ರಿಲಯನ್ಸ್ ಡಿಫೆನ್ಸ್ ಹೇಳಿದೆ.

ಏರ್‌ಬಸ್‌ಗೇನು ಸಂಬಂಧ?

ಫ್ರಾನ್ಸ್‌ನ ಡಾಸೋ (ರಫೇಲ್‌ ವಿಮಾನ ತಯಾರಕ ಕಂಪನಿ) ಕಂಪನಿಗೂ, ಏರ್‌ಬಸ್‌ಗೂ ಏನು ಸಂಬಂಧ ಎಂಬ ಪ್ರಶ್ನೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಕ್ತವಾಗಿದೆ. 

ಮಂಗಳವಾರ ತಾವು ನಡೆಸಿದ ಪತ್ರಿಕಾಗೋಷ್ಠಿಯ ವಿಡಿಯೊವನ್ನು ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ. ಆ ಟ್ವೀಟ್‌ಗೆ ವ್ಯಕ್ತವಾಗಿರುವ ಪ್ರತಿಕ್ರಿಯೆಗಳಲ್ಲಿ ಈ ಪ್ರಶ್ನೆಯನ್ನು ಎತ್ತಲಾಗಿದೆ.

ಡಾಸೊ ಕಂಪನಿಯಲ್ಲಿ ಏರ್‌ಬಸ್ ಪಾಲುದಾರಿಕೆ ಹೊಂದಿದೆ ಎಂದು ಸುದ್ದಿಸಂಸ್ಥೆ ರಾಯಿಟರ್ಸ್ ಪ್ರಕಟಿಸಿರುವ ವರದಿಯನ್ನು ಲಗತ್ತಿಸಿ ಇನ್ನೂ ಕೆಲವರು ಟ್ವೀಟ್ ಮಾಡಿದ್ದಾರೆ.

‘2014ರಲ್ಲಿ ಡಾಸೊ ಕಂಪನಿಯ ಶೇ 46ರಷ್ಟು ಷೇರುಗಳನ್ನು ಏರ್‌ಬಸ್ ಹೊಂದಿತ್ತು. 2015ರ ಮಾರ್ಚ್‌ನಲ್ಲಿ ಈ ಷೇರುಗಳ ಪ್ರಮಾಣ ಶೇ 23ರಷ್ಟಾಗಿತ್ತು. ಏರ್‌ಬಸ್ ಪಾಲುದಾರಿಕೆ ಮಾತ್ರ ಹೊಂದಿರಲಿಲ್ಲ. ಡಾಸೊ ಕಂಪನಿಯ ನಿರ್ಧಾರ ಕೈಗೊಳ್ಳುವಿಕೆಯಲ್ಲಿಯೂ ಏರ್‌ಬಸ್‌ ಅಧಿಕಾರ ಹೊಂದಿತ್ತು’ ಎಂದು ರಾಯಿಟರ್ಸ್‌ ತನ್ನ ವರದಿಯಲ್ಲಿ ಹೇಳಿದೆ. 

ತನ್ನ ಬಳಿ ಇರುವ ಡಾಸೊ ಕಂಪನಿಯ ಷೇರುಗಳನ್ನು ಏರ್‌ಬಸ್ ಮಾರಾಟ ಮಾಡುವ ಸಂಬಂಧ ಬರೆಯಲಾಗಿದ್ದ ಈ ವರದಿಯು 2015ರ ಮಾರ್ಚ್ 25ರಂದು ಪ್ರಕಟವಾಗಿದೆ.

ಅಲ್ಲಿ ಬೆಂಬಲ, ಇಲ್ಲಿ ವಿರೋಧ: ಕಪಿಲ್‌ ಪೇಚು

ನವದೆಹಲಿ (ಪಿಟಿಐ): ಕಾಂಗ್ರೆಸ್ ಮುಖಂಡ ಕಪಿಲ್ ಸಿಬಲ್ ಅವರು ಉದ್ಯಮಿ ಅನಿಲ್ ಅಂಬಾನಿ ಅವರ ಪರವಾಗಿಯೂ, ವಿರುದ್ಧವಾಗಿಯೂ ಏಕಕಾಲಕ್ಕೆ ಮಾತನಾಡಿ ಪೇಚಿಗೆ ಸಿಲುಕಿದ್ದಾರೆ. 

ಹಿರಿಯ ವಕೀಲರಾಗಿ ನ್ಯಾಯಾಲಯದಲ್ಲಿ ಅನಿಲ್ ಅಂಬಾನಿ ಪರವಾಗಿ ವಾದ ಮಂಡಿಸಿದ ಅವರು, ಅದೇ ದಿನ ಕಾಂಗ್ರೆಸ್ ಮುಖಂಡರಾಗಿ ರಫೇಲ್ ಹಗರಣ ಸಂಬಂಧ ವಾಗ್ದಾಳಿಯನ್ನೂ ನಡೆಸಿದರು. 

ರಿಲಯನ್ಸ್ ಕಮ್ಯುನಿಕೇಷನ್ಸ್‌ ವಿರುದ್ಧ ಎರಿಕ್‌ಸನ್ ಹೂಡಿರುವ ಪ್ರಕರಣದಲ್ಲಿ ಉದ್ಯಮಿ ಪರ ಸುಪ್ರೀಂಕೋರ್ಟ್‌ನಲ್ಲಿ ಸಿಬಲ್ ವಾದಿಸಿದರು. ಅನಿಲ್‌ ನ್ಯಾಯಾಂಗ ನಿಂದನೆ ಮಾಡಿಲ್ಲ ಎಂದು ಬಲವಾಗಿ ಸಮರ್ಥಿಸಿಕೊಂಡರು. ಬಳಿಕ ಟ್ವೀಟ್ ಮಾಡಿದ ಅವರು, ಅಂಬಾನಿಯನ್ನು ಟೀಕಿಸಿದರು. 

ಈ ಮೊದಲು ಕೂಡ ಒಮ್ಮೆ ಹೀಗೆಯೇ ಆಗಿತ್ತು. 2017ರಲ್ಲಿ ಭ್ರಷ್ಟಾಚಾರ ವಿಚಾರವಾಗಿ ಮಮತಾ ಬ್ಯಾನರ್ಜಿ ವಿರುದ್ಧ ರಾಹುಲ್ ಗಾಂಧಿ ಆರೋಪ ಮಾಡಿದ್ದರು. ಆದರೆ ಶಾರದಾ ಹಗರಣದಲ್ಲಿ ಸಿಬಲ್ ಅವರು ತೃಣಮೂಲ ಕಾಂಗ್ರೆಸ್ ಪರ ಕೋರ್ಟ್‌ನಲ್ಲಿ ವಾದ ಮಾಡಿದ್ದರು.

***

ಪ್ರಮುಖ ಬೆಳವಣಿಗೆಗಳು

* 2015ರ ಮಾರ್ಚ್– ಅನಿಲ್ ಅಂಬಾನಿಯಿಂದ ಫ್ರಾನ್ಸ್‌ನ ರಕ್ಷಣಾ ಸಚಿವಾಲಯದ ಕಚೇರಿಗೆ ಭೇಟಿ, ಚರ್ಚೆ (ರಾಹುಲ್‌ ಆರೋಪ)

* 2015ರ ಮಾರ್ಚ್ 28– ₹ 5 ಲಕ್ಷ ಬಂಡವಾಳದಲ್ಲಿ ‘ರಿಲಯನ್ಸ್ ಡಿಫೆನ್ಸ್’ ಸ್ಥಾಪನೆ

* 2015ರ ಏಪ್ರಿಲ್ 10– ಪ್ಯಾರಿಸ್‌ನಲ್ಲಿ ರಫೇಲ್‌ ಒಪ್ಪಂದವನ್ನು ಘೋಷಿಸಿದ ಪ್ರಧಾನಿ ನರೇಂದ್ರ ಮೋದಿ

* 2016ರ ಜನವರಿ 25– ರಫೇಲ್ ಒಪ್ಪಂದಕ್ಕೆ ಸಹಿ ಮಾಡಿದ ಭಾರತ ಮತ್ತು ಫ್ರಾನ್ಸ್

ಬರಹ ಇಷ್ಟವಾಯಿತೆ?

 • 8

  Happy
 • 2

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !