ರಫೇಲ್‌ ಖರೀದಿ ಸರ್ಕಾರದ ದಿಟ್ಟ ನಿರ್ಧಾರ: ವಾಯುಪಡೆ ಮುಖ್ಯಸ್ಥ ಧನೋವಾ ಸಮರ್ಥನೆ

7
‘ತುರ್ತು ಖರೀದಿ ಅನಿವಾರ್ಯವಾಗಿತ್ತು’

ರಫೇಲ್‌ ಖರೀದಿ ಸರ್ಕಾರದ ದಿಟ್ಟ ನಿರ್ಧಾರ: ವಾಯುಪಡೆ ಮುಖ್ಯಸ್ಥ ಧನೋವಾ ಸಮರ್ಥನೆ

Published:
Updated:

ನವದೆಹಲಿ: ರಫೇಲ್‌ ಯುದ್ಧ ವಿಮಾನ ಖರೀದಿ ವಿಚಾರದಲ್ಲಿ ಕೇಂದ್ರ ಸರ್ಕಾರವು ದಿಟ್ಟ ನಿರ್ಧಾರ ಕೈಗೊಂಡಿದೆ. ರಫೇಲ್‌ ಯುದ್ಧ ವಿಮಾನ ಸೇರ್ಪಡೆಯಿಂದ ದೇಶದ ವಾಯು ಪಡೆಯ ಬಲ ತೀವ್ರವಾಗಿ ಏರಿಕೆಯಾಗಲಿದೆ ಎಂದು ವಾಯುಪಡೆ ಮುಖ್ಯಸ್ಥ ಬಿ.ಎಸ್‌. ಧನೋವಾ ಹೇಳಿದ್ದಾರೆ. ಫ್ರಾನ್ಸ್‌ನಿಂದ 36 ರಫೇಲ್‌ ವಿಮಾನ ಖರೀದಿ ವಿಚಾರದಲ್ಲಿ ಉಂಟಾಗಿರುವ ವಿವಾದದಿಂದಾಗಿ ಈ ಹೇಳಿಕೆ ಮಹತ್ವ ಪಡೆದುಕೊಂಡಿದೆ. 

ರಫೇಲ್‌ ವಿಮಾನ ತಯಾರಿಸುವ ಫ್ರಾನ್ಸ್‌ನ ಡಾಸೋ ಏವಿಯೇಷನ್‌ನ ಭಾರತೀಯ ಪಾಲುದಾರ ಸಂಸ್ಥೆಯಾಗಿ ರಿಲಯನ್ಸ್‌ ಡಿಫೆನ್ಸ್‌ ಆಯ್ಕೆಯಲ್ಲಿ ಭಾರತ ಸರ್ಕಾರ ಅಥವಾ ವಾಯಪಡೆಗೆ ಯಾವುದೇ ಪಾತ್ರ ಇಲ್ಲ ಎಂದು ಅವರು ಪ್ರತಿಪಾದಿಸಿದ್ದಾರೆ. ಅನಿಲ್‌ ಅಂಬಾನಿ ಅವರ ರಿಲಯನ್ಸ್‌ ಡಿಫೆನ್ಸ್‌ ಕಂಪನಿಯನ್ನು ಡಾಸೋ ಕಂಪನಿಯೇ ಆಯ್ಕೆ ಮಾಡಿಕೊಂಡಿದೆ ಎಂದು ಏರ್‌ ಚೀಫ್ ಮಾರ್ಷಲ್‌ ಧನೋಆ ಹೇಳಿದ್ದಾರೆ. 

ರಫೇಲ್‌ ಯುದ್ಧ ವಿಮಾನಗಳು ವಾಯುಪಡೆಗೆ ಸೇರ್ಪಡೆಯಾದ ಬಳಿಕ ಪ್ರತಿಸ್ಪರ್ಧಿಗಳಿಗಿಂತ ಭಾರತದ ಸಾಮರ್ಥ್ಯ ಹೆಚ್ಚಳವಾಗಲಿದೆ. ರಫೇಲ್‌ ಒಳ್ಳೆಯ ಯುದ್ಧ ವಿಮಾನವಾಗಿದ್ದು ಭಾರತಕ್ಕೆ ಒಳ್ಳೆಯ ಪ್ಯಾಕೇಜ್‌ ಕೂಡ ಸಿಕ್ಕಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. 

ಎರಡು ಸರ್ಕಾರಗಳ ನಡುವಣ ಒಪ್ಪಂದದ ಮೂಲಕ 36 ರಫೇಲ್‌ ವಿಮಾನ ಖರೀದಿಸಲಾಗುತ್ತಿದೆ. ವಾಯುಪಡೆಯು ಸಾಮರ್ಥ್ಯ ಕುಸಿತದ ಕಾರಣದಿಂದ ಇದೊಂದು ತುರ್ತು ಖರೀದಿ ಎಂದು ಅವರು ತಿಳಿಸಿದ್ದಾರೆ.

‘ನಾವು ಬಿಕ್ಕಟ್ಟಿನ ಸ್ಥಿತಿ ತಲುಪಿದ್ದೆವು (126 ರಫೇಲ್‌ ವಿಮಾನ ಖರೀದಿ ವಿಚಾರದಲ್ಲಿ). ನಮ್ಮ ಮುಂದೆ ಮೂರು ಆಯ್ಕೆಗಳಿದ್ದವು– ಮೊದಲನೆಯದು ಏನಾದರೂ ಆಗಲಿ ಎಂದು ಕಾಯುವುದು, ಎರಡನೆಯದು ಪ್ರಸ್ತಾವನೆ ಸಲ್ಲಿಕೆಗೆ ನೀಡಿದ್ದ ಆಹ್ವಾನವನ್ನು ರದ್ದು ಮಾಡುವುದು ಮತ್ತು ಮೂರನೆಯದಾಗಿ ತುರ್ತು ಖರೀದಿ ನಡೆಸುವುದು. ನಾವು ತುರ್ತು ಖರೀದಿಯನ್ನು ಆಯ್ಕೆ ಮಾಡಿಕೊಂಡೆವು’ ಎಂದು ಧನೋಆ ಹೇಳಿದ್ದಾರೆ. 

₹59 ಸಾವಿರ ಕೋಟಿಯ ಈ ಖರೀದಿ ಒಪ್ಪಂದದಲ್ಲಿ ದೇಶೀ ಪಾಲುದಾರ ಕಂಪನಿಯಾಗಿ ಸರ್ಕಾರಿ ಸ್ವಾಮ್ಯದ ಎಚ್‌ಎಎಲ್‌ ಬದಲಿಗೆ ಅನಿಲ್‌ ಅಂಬಾನಿ ಮಾಲೀಕತ್ವದ ರಿಲಯನ್ಸ್‌ ಡಿಫೆನ್ಸ್ ಅನ್ನು ಆಯ್ಕೆ ಮಾಡಿರುವುದರಲ್ಲಿ ಅಕ್ರಮ ನಡೆದಿದೆ ಎಂದು ವಿರೋಧ ಪಕ್ಷ ಕಾಂಗ್ರೆಸ್‌ ಆರೋಪಿಸುತ್ತಿದೆ. 

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !