ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿ–ವೋಟರ್‌: ರಾಜಸ್ಥಾನ, ಮಧ್ಯಪ್ರದೇಶ ಕಾಂಗ್ರೆಸ್‌ಗೆ, ಛತ್ತೀಸಗಡದಲ್ಲಿ ಬಿಜೆಪಿ

Last Updated 9 ನವೆಂಬರ್ 2018, 19:05 IST
ಅಕ್ಷರ ಗಾತ್ರ

ಕೆಲವೇ ದಿನಗಳಲ್ಲಿ ವಿಧಾನಸಭೆ ಚುನಾವಣೆ ನಡೆಯಲಿರುವ ಎಲ್ಲ ಐದು ರಾಜ್ಯಗಳಲ್ಲಿ ಸಿ–ವೋಟರ್‌ ಸಂಸ್ಥೆಯು ಸಮೀಕ್ಷೆ ನಡೆಸಿದೆ. ಮಿಜೋರಾಂನಲ್ಲಿ ಅತಂತ್ರ ವಿಧಾನಸಭೆ ನಿರ್ಮಾಣವಾಗಬಹುದು ಎಂದು ಸಮೀಕ್ಷೆ ಹೇಳಿದೆ.

ಪ್ರಚಾರದಲ್ಲಿ ಆರೋಪ, ಆಮಿಷ
ಛತ್ತೀಸಗಡದ ಬಸ್ತಾರ್‌ ಪ್ರದೇಶದ 18 ಕ್ಷೇತ್ರಗಳಲ್ಲಿ ಇದೇ 12ರಂದು ಮತದಾನ ನಡೆಯಲಿದೆ. ಹಾಗಾಗಿ ಪ್ರಚಾರ ಬಿರುಸು ಪಡೆದಿದೆ. ಮುಖ್ಯಮಂತ್ರಿ ಸ್ಪರ್ಧಿಸುತ್ತಿರುವ ರಾಜನಂದಗಾಂವ್‌ ಕ್ಷೇತ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಕಾಂಗ್ರೆಸ್ ಅಧ್ಯಕ್ಷ ರಾಹುಲ್‌ ಗಾಂಧಿ ಅವರು ಶುಕ್ರವಾರ ಪ್ರಚಾರ ನಡೆಸಿದ್ದಾರೆ.

ಸಮಾವೇಶಗಳನ್ನು ಉದ್ದೇಶಿಸಿ ಮಾತನಾಡಿದ ಇವರು ಪರಸ್ಪರ ಹರಿಹಾಯ್ದಿದ್ದಾರೆ, ಆರೋಪ–ಪ್ರತ್ಯಾರೋಪ ಮಾಡಿದ್ದಾರೆ, ಮತದಾರರಿಗೆ ಆಮಿಷವನ್ನೂ ಒಡ್ಡಿದ್ದಾರೆ.

ನಗರ ನಕ್ಸಲರಿಗೆ ಕಾಂಗ್ರೆಸ್‌ ಬೆಂಬಲ: ಮೋದಿ ಆರೋಪ
* ನಗರ ನಕ್ಸಲರಿಗೆ ಕಾಂಗ್ರೆಸ್‌ ಬೆಂಬಲ ನೀಡುತ್ತಿದೆ. ಈ ನಕ್ಸಲರು ಬಡ, ಆದಿವಾಸಿ ಯುವ ಜನರ ಬದುಕನ್ನು ಧ್ವಂಸ ಮಾಡಿದ್ದಾರೆ. ಬಸ್ತಾರ್‌ ಪ್ರದೇಶದಲ್ಲಿ ನಕ್ಸಲ್‌ ಹಾವಳಿ ಇದೆ ಎಂಬ ನೆಪ ಹೇಳಿದ್ದ ಕಾಂಗ್ರೆಸ್‌ ಈ ಪ್ರದೇಶದ ಅಭಿವೃದ್ಧಿಗೆ ಗಮನವನ್ನೇ ಹರಿಸಿಲ್ಲ.

* ನಗರ ನಕ್ಸಲರು ನಗರದ ಹವಾನಿಯಂತ್ರಿತ ಮನೆಗಳಲ್ಲಿ ವಾಸಿಸುತ್ತಾರೆ. ಅವರ ಮಕ್ಕಳು ವಿದೇಶದಲ್ಲಿ ಕಲಿಯುತ್ತಾರೆ. ಆದರೆ, ನಕ್ಸಲ್‌ಪೀಡಿತ ಪ್ರದೇಶಗಳಲ್ಲಿರುವ ಆದಿವಾಸಿ ಮಕ್ಕಳನ್ನು ರಿಮೋಟ್‌ ಮೂಲಕ ಇವರು ಕುಣಿಸುತ್ತಾರೆ

* ನಗರ ನಕ್ಸಲರ ವಿರುದ್ಧ ಸರ್ಕಾರ ಕ್ರಮ ಕೈಗೊಂಡಾಗ ಅವರ ಪರವಾಗಿ ಕಾಂಗ್ರೆಸ್‌ ನಿಲುವು ತಳೆದದ್ದು ಯಾಕೆ ಎಂದು ಆ ಪಕ್ಷವನ್ನು ಕೇಳಲು ನಾನು ಬಯಸುತ್ತೇನೆ. ಬಸ್ತಾರ್‌ಗೆ ಬಂದು ಕಾಂಗ್ರೆಸ್‌ನವರು ನಕ್ಸಲರ ವಿರುದ್ಧ ಮಾತನಾಡಲಿ.

* ಇಂಥಹ ಜನರನ್ನು ನೀವು ಕ್ಷಮಿಸುವಿರಾ? ಈ ಜನರು ಛತ್ತೀಸಗಡದಲ್ಲಿ ಗೆಲ್ಲುವುದಿಲ್ಲ. ಬಸ್ತಾರ್‌ ಪ್ರದೇಶದಲ್ಲಿ ಬಿಜೆಪಿ ಗೆಲ್ಲುವಂತೆ ನೋಡಿಕೊಳ್ಳಿ. ಬೇರೆಯವರು ಗೆದ್ದರೆ ಅದು ಬಸ್ತಾರ್‌ ಕನಸಿಗೆ ದೊಡ್ಡ ಹೊಡೆತ.

* ಛತ್ತೀಸಗಡವನ್ನು ಸಮೃದ್ಧಿಯತ್ತ ಕೊಂಡೊಯ್ಯುವುದು ಅಟಲ್ ಬಿಹಾರಿ ವಾಜಪೇಯಿ ಅವರು ಕನಸಾಗಿತ್ತು. ಅದು ನನಸಾಗುವ ವರೆಗೆ ವಿರಮಿಸುವುದಿಲ್ಲ.

***
ಉದ್ಯಮಿಗಳ ಅನುಮತಿ ಇಲ್ಲದೆ ಮೋದಿ ಏನೂ ಮಾಡುವುದಿಲ್ಲ: ರಾಹುಲ್‌
* ಛತ್ತೀಸಗಡದಲ್ಲಿ ಕಾಂಗ್ರೆಸ್‌ ಗೆದ್ದರೆ ರೈತರ ಸಾಲವನ್ನು ಹತ್ತೇ ದಿನಗಳೊಳಗೆ ಮನ್ನಾ ಮಾಡಲಾಗುವುದು. ಆಡಳಿತಾರೂಢ ಬಿಜೆಪಿಯವರ ಹಾಗೆ ಸುಳ್ಳು ಭರವಸೆಗಳನ್ನು ನೀಡುವುದಿಲ್ಲ.

* ಕರ್ನಾಟಕ ಮತ್ತು ಪಂಜಾಬ್‌ನಲ್ಲಿ ರೈತರ ಸಾಲ ಮನ್ನಾ ಭರವಸೆ ನೀಡಲಾಗಿತ್ತು. ಅದನ್ನು ಅಧಿಕಾರಕ್ಕೆ ಬಂದ ತಕ್ಷಣವೇ ಈಡೇರಿಸಲಾಗಿದೆ.

* ಪ್ರಧಾನಿ ನರೇಂದ್ರ ಮೋದಿ ಮತ್ತು ಛತ್ತೀಸಗಡ ಮುಖ್ಯಮಂತ್ರಿ ರಮಣ್‌ ಸಿಂಗ್‌ ಅವರು ತಮ್ಮ ಕೈಗಾರಿಕೋದ್ಯಮಿ ಗೆಳೆಯರ ಅನುಮತಿ ಪಡೆಯದೆ ಏನನ್ನೂ ಮಾಡುವುದಿಲ್ಲ.

* ಬಸ್ತಾರ್‌ ಪ್ರದೇಶವು ನೈಸರ್ಗಿಕ ಸಂಪನ್ಮೂಲಗಳಿಂದ ಸಮೃದ್ಧವಾಗಿದೆ. ಆದರೆ, ಅದರ ಪ್ರಯೋಜನ ಸ್ಥಳೀಯರಿಗೆ ದೊರೆಯುತ್ತಿಲ್ಲ. ಅವೆಲ್ಲವೂ ಮೋದಿ ಮತ್ತು ರಮಣ್‌ ಸಿಂಗ್‌ ಅವರ ಉದ್ಯಮಿ ಗೆಳೆಯರ ಪಾಲಾಗುತ್ತಿದೆ.

* ಕಳೆದ ನಾಲ್ಕೂವರೆ ವರ್ಷಗಳಲ್ಲಿ 10–15 ಉದ್ಯಮಿಗಳ ₹3.5 ಲಕ್ಷ ಕೋಟಿ ಸಾಲ ಮನ್ನಾ ಮಾಡಲಾಗಿದೆ. ಈ ಹಣದಲ್ಲಿ ನರೇಗಾದಂತಹ 10 ಯೋಜನೆಗಳನ್ನು ಜಾರಿ ಮಾಡಬಹುದಿತ್ತು.

* ಮೋದಿ ಅವರು ಭ್ರಷ್ಟಾಚಾರದ ಬಗ್ಗೆ ಮಾತನಾಡುತ್ತಿದ್ದರು. ಈಗ ಅವರು ಆ ಬಗ್ಗೆ ಮಾತೇ ಆಡುವುದಿಲ್ಲ. ಯಾಕೆಂದರೆ ರಫೇಲ್‌ ಒಪ್ಪಂದದಲ್ಲಿ ಅವರು ₹30,000 ಕೋಟಿ ಲೂಟಿ ಮಾಡಲು ಅವಕಾಶ ಕೊಟ್ಟಿದ್ದಾರೆ.

ತೆಲಂಗಾಣ: ಮೈತ್ರಿಯಲ್ಲಿ ಸಿಪಿಐ ಅಪಸ್ವರ
ತೆಲಂಗಾಣ ವಿಧಾನಸಭೆ ಚುನಾವಣೆಗೆ ಕಾಂಗ್ರೆಸ್‌ ನೇತೃತ್ವದ ಮೈತ್ರಿಕೂಟದ ಸೀಟು ಹಂಚಿಕೆ ಬಗ್ಗೆ ಅಪಸ್ವರ ಕೇಳಿ ಬಂದಿದೆ. 119 ಸ್ಥಾನಗಳ ಪೈಕಿ 93 ಕ್ಷೇತ್ರಗಳನ್ನು ಉಳಿಸಿಕೊಂಡು ಉಳಿದ ಕ್ಷೇತ್ರಗಳನ್ನು ಮಿತ್ರಪಕ್ಷಗಳಾದ ಟಿಡಿಪಿ, ಟಿಜೆಎಸ್‌ ಮತ್ತು ಸಿಪಿಐಗೆ ಕಾಂಗ್ರೆಸ್‌ ಬಿಟ್ಟು ಕೊಟ್ಟಿದೆ.

ಸಿಪಿಐಗೆ ಮೂರು ಕ್ಷೇತ್ರಗಳನ್ನು ನೀಡಲಾಗಿದೆ. ಈ ಪಕ್ಷವು ಒಂಬತ್ತು ಕ್ಷೇತ್ರಗಳಿಗೆ ಬೇಡಿಕೆ ಇರಿಸಿತ್ತು. ಐದು ಕ್ಷೇತ್ರಗಳು ಸಿಕ್ಕರೆ ಸಾಕು ಎಂಬ ನಿಲುವು ಹೊಂದಿತ್ತು. ಅಂತಿಮವಾಗಿ ಮೂರು ಕ್ಷೇತ್ರಗಳಷ್ಟೇ ಸಿಕ್ಕಿದ್ದು ಅಸಮಾಧಾನಕ್ಕೆ ಕಾರಣವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT