ಭಾರತ ಒಂದೇ ಎಂಬ ಸಂದೇಶವೇ ಗುರಿ

ಸೋಮವಾರ, ಏಪ್ರಿಲ್ 22, 2019
33 °C

ಭಾರತ ಒಂದೇ ಎಂಬ ಸಂದೇಶವೇ ಗುರಿ

Published:
Updated:
Prajavani

ವಯನಾಡ್: ‘ಭಾರತ ಒಂದು ಎಂಬ ಏಕತೆಯ ಸಂದೇಶವನ್ನು ದೇಶಕ್ಕೆ ರವಾನಿಸುವ ಉದ್ದೇಶದಿಂದ ನಾನು ದಕ್ಷಿಣ ಭಾರತದಿಂದಲೂ ಸ್ಪರ್ಧಿಸುತ್ತಿದ್ದೇನೆ. ಇದಕ್ಕಾಗಿಯೇ ವಯನಾಡ್‌ ಆಯ್ಕೆಮಾಡಿಕೊಂಡಿದ್ದೇನೆ’ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಹೇಳಿದರು. ವಯನಾಡ್‌ ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್‌ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ ನಂತರ ಅವರು ಈ ಮಾತು ಹಂಚಿಕೊಂಡರು.

‘ಉತ್ತರವಿರಲಿ ದಕ್ಷಿಣವಿರಲಿ, ಈಶಾನ್ಯವಿರಲಿ ವಾಯವ್ಯವಿರಲಿ ಬಿಜೆಪಿ ಮತ್ತು ಆರ್‌ಎಸ್‌ಎಸ್‌ ಎಲ್ಲೆಡೆ ಅಲ್ಲಿನ ಸ್ಥಳೀಯ ಸಂಸ್ಕೃತಿ ಮತ್ತು ಇತಿಹಾಸವನ್ನು ಧ್ವಂಸ ಮಾಡುತ್ತಿದೆ. ಬಿಜೆಪಿಯ ಈ ನೀತಿಗೆ ತಿರುಗೇಟು ನೀಡುವುದೇ ನನ್ನ ಉದ್ದೇಶ. ಹೀಗಾಗಿಯೇ ಇಲ್ಲಿಂದ (ದಕ್ಷಿಣದಿಂದ) ಸ್ಪರ್ಧಿಸುತ್ತಿದ್ದೇನೆ’ ಎಂದು ರಾಹುಲ್ ಹೇಳಿದರು.

ಸಿಪಿಎಂ ವಿರುದ್ಧ ಒಂದು ಮಾತೂ ಆಡುವುದಿಲ್ಲ: ತಾವು ವಯನಾಡ್‌ನಿಂದ ಸ್ಪರ್ಧಿಸುತ್ತಿರುವುದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸುತ್ತಿರುವ ಎಡಪಕ್ಷಗಳ ವಿರುದ್ಧ ಒಂದು ಮಾತೂ ಆಡುವುದಿಲ್ಲ ಎಂದು ರಾಹುಲ್ ಗಾಂಧಿ ಘೋಷಿಸಿದರು.

‘ಕಾಂಗ್ರೆಸ್‌ ಮತ್ತು ಸಿಪಿಎಂ ಮಧ್ಯೆ ಸ್ಪರ್ಧೆ ಇದ್ದೇ ಇದೆ. ಮುಂದಿನ ದಿನಗಳಲ್ಲೂ ಅದು ಮುಂದುವರಿಯಬಹುದು. ಸಿಪಿಎಂ ನನ್ನ ವಿರುದ್ಧ ಮಾಡುತ್ತಿರುವ ಟೀಕೆಗಳೆಲ್ಲವನ್ನೂ ಕೇಳಿಸಿಕೊಳ್ಳುತ್ತಿದ್ದೇನೆ. ಆದರೆ ಸಿಪಿಎಂ ಮೇಲೆ ನಾನು ವಾಗ್ದಾಳಿ ನಡೆಸುವುದಿಲ್ಲ’ ಎಂದು ಅವರು ಘೋಷಿಸಿದರು.

ಸಿಪಿಎಂ ಟೀಕೆ: ‘ವಯನಾಡ್‌ನಲ್ಲಿ ಸ್ಪರ್ಧೆಗೆ ಇಳಿಯುವ ಮೂಲಕ ರಾಹುಲ್ ಗಾಂಧಿ ತಪ್ಪು ನಿರ್ಧಾರ ತೆಗದುಕೊಂಡಿದ್ದಾರೆ. ಬಿಜೆಪಿ ವಿರುದ್ಧ ಹೋರಾಡುವುದೇ ಆಗಿದ್ದರೆ, ಅವರು ಕರ್ನಾಟಕದಿಂದ ಏಕೆ ಸ್ಪರ್ಧಿಸಲಿಲ್ಲ? ದಕ್ಷಿಣ ಭಾರತದಲ್ಲಿ ಬಿಜೆಪಿಗೆ ಅಸ್ತಿತ್ವವಿರುವುದು ಕರ್ನಾಟಕದಲ್ಲಿ ಮಾತ್ರ. ಅಲ್ಲಿನ 28 ಕ್ಷೇತ್ರಗಳಲ್ಲಿ ರಾಹುಲ್ ಅವರನ್ನು ಕಣಕ್ಕೆ ಇಳಿಸಲು ಕಾಂಗ್ರೆಸ್‌ಗೆ ಒಂದು ಕ್ಷೇತ್ರವೂ ಸಿಗಲಿಲ್ಲವೇ? ಕಾಂಗ್ರೆಸ್‌ನ ನಿಲುವು ಮತ್ತು ಉದ್ದೇಶಗಳೇ ಅರ್ಥವಾಗುತ್ತಿಲ್ಲ’ ಎಂದು ಸಿಪಿಎಂ ತನ್ನ ಮುಖವಾಣಿ ‘ಪೀಪಲ್ಸ್‌ ಡೆಮಾಕ್ರಸಿ’ಯ ಸಂಪಾದಕೀಯದಲ್ಲಿ ಟೀಕಿಸಿದೆ.

***

‘ನನ್ನ ಸೋದರ, ನನಗೆ ಈವರೆಗೆ ಗೊತ್ತಿರುವ ವ್ಯಕ್ತಿಗಳಲ್ಲೇ ಅತ್ಯಂತ ಧೈರ್ಯಶಾಲಿ. ವಯನಾಡ್‌ ಜನರೇ ನೀವು ಅವನ ಕಾಳಜಿ ವಹಿಸಿ, ಅವನು ನಿಮ್ಮನ್ನು ಎಂದೂ ಬಿಟ್ಟುಕೊಡುವುದಿಲ್ಲ’ ಎಂದು ಪ್ರಿಯಾಂಕಾ ಗಾಂಧಿ ಟ್ವೀಟ್ ಮಾಡಿದ್ದಾರೆ.

‘ಅವಮಾನ’

‘ಅಮೇಠಿಯಲ್ಲಿ 15 ವರ್ಷ ಅಧಿಕಾರ ಅನುಭವಿಸಿದ ವ್ಯಕ್ತಿ, ಈಗ ತನ್ನ ಬೆಂಬಲಿಗರನ್ನು ತೊರೆದು ಬೇರೊಂದು ಕ್ಷೇತ್ರದಿಂದ ನಾಮಪತ್ರ ಸಲ್ಲಿಸುತ್ತಿದ್ದಾರೆ. ಇದು ಅಮೇಠಿ ಜನರಿಗೆ ಮಾಡಿದ ಅವಮಾನ’ ಎಂದು ಕೇಂದ್ರ ಸಚಿವೆ ಸ್ಮೃತಿ ಇರಾನಿ ಟೀಕಿಸಿದ್ದಾರೆ.

ವಂಚಿಸಲಿದ್ದಾರೆ’

‘ವಯನಾಡ್‌ ನಿವಾಸಿಗಳನ್ನು ನಾನು ಎಚ್ಚರಿಸಲು ಬಯಸುತ್ತೇನೆ. ರಾಹುಲ್ ಗಾಂಧಿಯ ಸಾಮರ್ಥ್ಯದ ಬಗ್ಗೆ ನೀವು ತಿಳಿದುಕೊಳ್ಳಬೇಕೆಂದರೆ, ಅಮೇಠಿಗೆ ಬಂದು ಪರಿಶೀಲಿಸಿ. ಅಮೇಠಿಗೆ ದ್ರೋಹ ಬಗೆದ ವ್ಯಕ್ತಿ, ಈಗ ನಿಮ್ಮನ್ನು ವಂಚಿಸಲು ಬಂದಿದ್ದಾರೆ’ ಎಂದು ಸ್ಮೃತಿ ಇರಾನಿ ಟೀಕಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 6

  Happy
 • 2

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !