ಮೋದಿಗೆ ಪತ್ರ ಬರೆದು ಮಹಿಳಾ ಮೀಸಲು ಮಸೂದೆ ನೆನಪಿಸಿದ ರಾಹುಲ್

7

ಮೋದಿಗೆ ಪತ್ರ ಬರೆದು ಮಹಿಳಾ ಮೀಸಲು ಮಸೂದೆ ನೆನಪಿಸಿದ ರಾಹುಲ್

Published:
Updated:

ಬೆಂಗಳೂರು: ‘ಮಹಿಳಾ ಮೀಸಲು ಮಸೂದೆಗೆ ಸಂಸತ್ತಿನ ಅಂಗೀಕಾರ ಪಡೆದುಕೊಳ್ಳಬೇಕು’ ಎಂದು ಒತ್ತಾಯಿಸಿ ಎಐಸಿಸಿ ಅದ್ಯಕ್ಷ ರಾಹುಲ್‌ ಗಾಂಧಿ ಸೋಮವಾರ ಮಧ್ಯಾಹ್ನ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದಾರೆ.

ಪತ್ರದ ಪ್ರತಿಯನ್ನು ಟ್ವಿಟರ್‌ ಮೂಲಕ ಹಂಚಿಕೊಂಡಿರುವ ರಾಹುಲ್ ‘ಮಸೂದೆಗೆ ಕಾಂಗ್ರೆಸ್ ಪಕ್ಷ ಭೇಷರತ್ ಬೆಂಬಲ ನೀಡುತ್ತದೆ’ ಎಂದು ಹೇಳಿದ್ದಾರೆ.

‘ನಮ್ಮ ಪ್ರಧಾನಿ ತಮ್ಮನ್ನು ಮಹಿಳಾ ಸಬಲೀಕರಣ ಹೋರಾಟಗಾರ ಎಂದು ಹೇಳಿಕೊಳ್ಳುತ್ತಾರೆ. ಸಂಸತ್ತಿನಲ್ಲಿ ಮಹಿಳಾ ಮೀಸಲಾತಿ ಮಸೂದೆಗೆ ಅಂಗೀಕಾರ ದೊರಕಿಸಿಕೊಡುವ ಮೂಲಕ ಅವರು ತಮ್ಮ ಮಾತುಗಳಿಗೆ ಕೃತಿರೂಪ ನೀಡಲು ಯತ್ನಿಸಬೇಕು. ಈ ಮಹತ್ವದ ವಿಚಾರದಲ್ಲಿ ಪಕ್ಷ ರಾಜಕಾರಣಕ್ಕೆ ಸೀಮಿತರಾಗಿ ಯೋಚನೆ ಮಾಡಬಾರದು. ಈ ವಿಷಯದಲ್ಲಿ ಕಾಂಗ್ರೆಸ್ ಪ್ರಧಾನಿ ಮೋದಿ ಅವರಿಗೆ ಭೇಷರತ್ ಬೆಂಬಲ ನೀಡುತ್ತದೆ’ ಎಂದು ರಾಹುಲ್ ಟ್ವಿಟ್ ಮಾಡಿದ್ದಾರೆ.

ಪತ್ರದಲ್ಲೇನಿದೆ?

‘ಸಂಸತ್ತಿನ ಮುಂಗಾರು ಅಧಿವೇಶನದಲ್ಲಿ ಮಹಿಳಾ ಮೀಸಲು ಮಸೂದೆಗೆ ಅಂಗೀಕಾರ ದೊರಕಿಸಿಕೊಡಲು ನಿಮ್ಮ ಬೆಂಬಲ ಕೋರುತ್ತೇನೆ’ ಎಂದು ಪತ್ರವನ್ನು ಆರಂಭಿಸಿರುವ ರಾಹುಲ್, ‘ನಿಮಗೇ ತಿಳಿದಿರುವಂತೆ 9ನೇ ಮಾರ್ಚ್ 2010ರಮದು ಮಹಿಳಾ ಮೀಸಲು ಮಸೂದೆಗೆ ರಾಜ್ಯಸಭೆಯಲ್ಲಿ ಅಂಗೀಕಾರ ದೊರೆಯಿತು. ಆದರೆ ಲೋಕಸಭೆಯಲ್ಲಿ ಕಳೆದ ಎಂಟು ವರ್ಷಗಳಿಂದ ಒಂದಲ್ಲಾ ಒಂದು ಕಾರಣದಿಂದ ಮಸೂದೆ ಹಿನ್ನಡೆ ಅನುಭವಿಸುತ್ತಿದೆ’ ಎಂದು ಗಮನ ಸೆಳೆದಿದ್ದಾರೆ.

‘ತಾನು ಅಧಿಕಾರಕ್ಕೆ ಬಂದರೆ ಲೋಕಸಭೆಯಲ್ಲಿ ಮಹಿಳಾ ಮಸೂದೆಗೆ ಅಂಗೀಕಾರ ದೊರಕಿಸಿಕೊಡಲಾಗುವುದು’ ಎಂದು ಬಿಜೆಪಿ 2014ರ ಚುನಾವಣೆಯಲ್ಲಿ ನೀಡಿದ್ದ ಭರವಸೆಯನ್ನೂ ರಾಹುಲ್ ತಮ್ಮ ಪತ್ರದಲ್ಲಿ ನೆನಪಿಸಿದ್ದಾರೆ.

‘ಪ್ರಧಾನಿಗಳೇ ಅನೇಕ ಸಾರ್ವಜನಿಕ ರ‍್ಯಾಲಿಗಳಲ್ಲಿ ನೀವು ಮಹಿಳಾ ಸಬಲೀಕರಣ ಮತ್ತು ಮಹಿಳೆಯರಿಗೆ ಸಾರ್ವಜನಿಕ ಬದುಕಿನಲ್ಲಿ ಮಹತ್ವದ ಸ್ಥಾನಮಾನ ನೀಡುವ ಕುರಿತು ಮಾತನಾಡಿದ್ದೀರಿ. ನಿಮ್ಮ ಮಾತುಗಳನ್ನು ಕೃತಿರೂಪಕ್ಕೆ ತರಲು ಇದಕ್ಕಿಂತಲೂ ದೊಡ್ಡ ಅವಕಾಶ ಮತ್ತೊಂದಿಲ್ಲ. ಮುಂಗಾರು ಅಧಿವೇಶನದಲ್ಲಿ ಮಸೂದೆ ಮಂಡನೆಯಾಗದಿದ್ದರೆ ಮುಂದಿನ ಲೋಕಸಭಾ ಚುನಾವಣೆಯ ಒಳಗೆ ಮಸೂದೆಗೆ ಅಂಗೀಕಾರ ದೊರಕಿಸುವ ಅವಕಾಶವೇ ತಪ್ಪಿ ಹೋಗುತ್ತದೆ’ ಎಂದು ಎಚ್ಚರಿಸಿದ್ದಾರೆ.

‘ಮಸೂದೆ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಕಾಂಗ್ರೆಸ್ ಪಕ್ಷವು 32 ಲಕ್ಷ ಜನರ ಸಹಿ ಸಂಗ್ರಹಿಸಿದೆ. ಈ ಸಹಿಗಳನ್ನೂ ನಿಮ್ಮ ಸುಪರ್ದಿಗೆ ಒಪ್ಪಿಸಿ, ಮಸೂದೆ ಅಂಗೀಕಾರವಾಗುವಂತೆ ಮಾಡಬೇಕು ಎಂದು ವಿನಮ್ರವಾಗಿ ಕೋರುತ್ತೇನೆ’ ಎಂದು ರಾಹುಲ್ ಹೇಳಿದ್ದಾರೆ.

#MahilaAakrosh ಅಭಿಯಾನ

ಟ್ವಿಟರ್‌ನಲ್ಲಿ #MahilaAakrosh ಹ್ಯಾಷ್‌ಟ್ಯಾಗ್ ಅಭಿಯಾನ ಆರಂಭವಾಗಿದೆ. ಮಸೂದೆಯ ಪರವಾಗಿರುವ ಹಲವರು ತಮ್ಮ ಈ ಹ್ಯಾಷ್‌ಟ್ಯಾಗ್ ಬಳಸಿ ತಮ್ಮ ಅಭಿಪ್ರಾಯ ಹಂಚಿಕೊಳ್ಳುತ್ತಿದ್ದಾರೆ. ಮಹಿಳೆಯರ ಹಲವು ಸಮಸ್ಯೆಗಳನ್ನು ಪ್ರಸ್ತಾಪಿಸುತ್ತಿದ್ದಾರೆ.

ಜುಲೈ 18ರಿಂದ ಅಧಿವೇಶನ

ಸಂಸತ್ತಿನ ಮುಂಗಾರು ಅಧಿವೇಶನವು ಜುಲೈ 18ರಿಂದ ಆಗಸ್ಟ್ 10ರವರೆಗೆ ನಡೆಯಲಿದೆ. ‘ಲೋಕಸಭೆಯಲ್ಲಿ ನಿಮಗೆ ಪೂರ್ಣ ಬಹುಮತವಿದೆ. ಇದನ್ನು ಬಳಸಿಕೊಂಡು ಬಹುಕಾಲದಿಂದ ಬಾಕಿ ಇರುವ ಮಹಿಳಾ ಮೀಸಲು ಮಸೂದೆಗೆ ಅಂಗೀಕಾರ ದೊರಕಿಸಿಕೊಡಿ’ ಎಂದು ಕಳೆದ ವರ್ಷ ಅಂದಿನ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಪ್ರಧಾನಿಗೆ ಮನವಿ ಮಾಡಿದ್ದರು.

2010ರಲ್ಲಿ ಮಹಿಳಾ ಮಿಸಲು ಮಸೂದೆಗೆ ರಾಜ್ಯಸಭೆಯಲ್ಲಿ ಅಂಗೀಕಾರ ದೊರಕಿದೆ. ಆಗ ಕಾಂಗ್ರೆಸ್ ನೇತೃತ್ವದ ಯುಪಿಎ ಅಧಿಕಾರದಲ್ಲಿತ್ತು.

 

ಬರಹ ಇಷ್ಟವಾಯಿತೆ?

 • 2

  Happy
 • 2

  Amused
 • 0

  Sad
 • 0

  Frustrated
 • 2

  Angry

Comments:

0 comments

Write the first review for this !