ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೂವರ ಆಂತರ್ಯದಲ್ಲೂ ತಳಮಳ

Last Updated 8 ಮೇ 2018, 19:30 IST
ಅಕ್ಷರ ಗಾತ್ರ

ಜಾತಿ, ಧರ್ಮ, ಭಾಷೆ ಮೀರಿದ ಬಾಂಧವ್ಯ, ಸಮ್ಮಿಶ್ರ ಸಂಸ್ಕೃತಿಯ ನೆಲೆ ಬೆಂಗಳೂರು ಉತ್ತರ ಭಾಗ. ಹಿಂದೊಮ್ಮೆ ಕಾಂಗ್ರೆಸ್‌ನ ಭದ್ರಕೋಟೆ. ಆದರೆ, ಇತ್ತೀಚಿನ ವರ್ಷಗಳಲ್ಲಿ ಈ ಕೋಟೆಯ ಗೋಡೆಗಳಲ್ಲಿ ಬಿರುಕು ಬಿದ್ದಿದೆ. ಕೆಲವೆಡೆ ಕಮಲ ಅರಳಿದೆ; ‘ತೆನೆ ಹೊತ್ತ ಮಹಿಳೆ’ಯ ಹೆಜ್ಜೆ ಗುರುತಿದೆ.

ಆಗರ್ಭ ಶ್ರೀಮಂತರಿರುವ ಡಾಲರ್ಸ್ ಕಾಲೊನಿ, ಸುಶಿಕ್ಷಿತರೇ ಹೆಚ್ಚಿರುವ ಮಲ್ಲೇಶ್ವರ, ಮಧ್ಯಮ ವರ್ಗದವರು ಬಹುಸಂಖ್ಯೆಯಲ್ಲಿರುವ ಹೆಬ್ಬಾಳ, ಕಿಷ್ಕಿಂಧೆಯಂತಿರುವ ಯಶವಂತಪುರ, ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಮತ್ತು ಬಹುರಾಷ್ಟ್ರೀಯ ಕಂಪನಿಗಳಿರುವ ಯಲಹಂಕ, ಗ್ರಾಮೀಣ ಪ್ರದೇಶದಂತಿರುವ ಕೆ.ಆರ್. ಪುರ, ಬ್ಯಾಟರಾಯನಪುರ ಕ್ಷೇತ್ರಗಳು ಈ ವ್ಯಾಪ್ತಿಯಲ್ಲಿವೆ.

ಈ ಪ್ರದೇಶಗಳಲ್ಲಿ ಒಕ್ಕಲಿಗ ಸಮುದಾಯದ ಪ್ರಾಬಲ್ಯ ಇದ್ದರೂ, ವಲಸಿಗರು, ಕೂಲಿ ಕಾರ್ಮಿಕ ಮತದಾರರೇ ನಿರ್ಣಾಯಕ. ಕೆಲವೆಡೆ ಕನ್ನಡೇತರರು ಗಮನಾರ್ಹ ಸಂಖ್ಯೆಯಲ್ಲಿದ್ದಾರೆ. ಕೆಲವು ಕ್ಷೇತ್ರಗಳು ನಗರ ಮತ್ತು ಹೊರವಲಯಕ್ಕೆ ಸಂಪರ್ಕ ಕಲ್ಪಿಸುತ್ತಿರುವುದರಿಂದ ಅನೇಕರ ಬೇಡಿಕೆ ಮೂಲಸೌಕರ್ಯ, ಸುಗಮ ಸಂಚಾರ ವ್ಯವಸ್ಥೆ. ಇಂಥ ಕಾರಣಗಳಿಂದ, ಇಲ್ಲಿ ಗೆಲ್ಲಲು ಜಾತಿ ಬಲಕ್ಕಿಂತ ವ್ಯಕ್ತಿಗತ ವರ್ಚಸ್ಸು, ಜನರೊಂದಿಗಿನ ಒಡನಾಟದ ಜೊತೆಗೆ ಹಣ ಬಲವೂ ಬೇಕು.

ಮತ್ತೆ ಅಧಿಕಾರದ ಚುಕ್ಕಾಣಿ ಹಿಡಿಯುವ ವಿಶ್ವಾಸದಲ್ಲಿರುವ ಕಾಂಗ್ರೆಸ್‌ ಮತ್ತು ಕೆಲವಾದರೂ ಸ್ಥಾನ ಕಿತ್ತುಕೊಳ್ಳಲು ಪಣ ತೊಟ್ಟಿರುವ ಬಿಜೆಪಿಗೆ ಈ ಕ್ಷೇತ್ರಗಳಲ್ಲಿನ ಗೆಲುವು ನಿರ್ಣಾಯಕ. ‘ಕಿಂಗ್‌ ಮೇಕರ್‌’ ಅಲ್ಲ ‘ಕಿಂಗ್‌’ ಎಂದು ಎದೆ ತಟ್ಟಿಕೊಂಡಿರುವ ಕುಮಾರಸ್ವಾಮಿ ಅವರಿಗೂ ಈ ಭಾಗದಲ್ಲಿ ಸೀಟು ಹೆಚ್ಚಿಸಿಕೊಳ್ಳುವ ವಿಶ್ವಾಸ. ಕೈಯಲ್ಲಿರುವ ಕ್ಷೇತ್ರಗಳನ್ನು ಉಳಿಸಿಕೊಳ್ಳುವ ಅನಿವಾರ್ಯದ ಜೊತೆಗೆ, ಇನ್ನೊಬ್ಬರ ಕ್ಷೇತ್ರಗಳನ್ನು ಮಡಿಲಿಗೆ ಹಾಕಿಕೊಳ್ಳಲೇಬೇಕಾದ ತುರ್ತು ಇದೆ. ಹೀಗಾಗಿ, ಮೂರೂ ಪಕ್ಷಗಳ ಆಂತರ್ಯದಲ್ಲಿ ತಳಮಳವಿದೆ.

ಜೆಡಿಎಸ್‌ ದೃಷ್ಟಿಯಲ್ಲಿ ಪುಲಿಕೇಶಿ ನಗರ (ಮೀಸಲು) ಕ್ಷೇತ್ರ ಅತಿ ಪ್ರತಿಷ್ಠೆ ಮತ್ತು ಸೇಡು ತೀರಿಸಿಕೊಳ್ಳಲೇ ಬೇಕಾದ ಕಣ. ಜೆಡಿಎಸ್ ತೊರೆದಿರುವ ಅಖಂಡ ಶ್ರೀನಿವಾಸಮೂರ್ತಿ, ಕೈ ಪಾಳಯಕ್ಕೆ ಹಾರಿದ್ದಾರೆ. ಕಾಂಗ್ರೆಸ್‌ ಟಿಕೆಟ್ ಕೈ ತಪ್ಪುತ್ತಿದ್ದಂತೆ ‘ತೆನೆ ಹೊತ್ತ ಮಹಿಳೆ’ಯನ್ನು ಮುದ್ದಾಡಿರುವ ಮಾಜಿ ಶಾಸಕ ಬಿ.ಪ್ರಸನ್ನ ಕುಮಾರ್‌ ತಮ್ಮ ‘ಶಕ್ತಿ ಪ್ರದರ್ಶನ’ದ ವಿಶ್ವಾಸದಲ್ಲಿದ್ದಾರೆ.

ಯಶವಂತಪುರ ಕ್ಷೇತ್ರದಲ್ಲಿ ತಮ್ಮ ಪ್ರಾಬಲ್ಯವನ್ನು ಮತ್ತಷ್ಟು ಗಟ್ಟಿಗೊಳಿಸುವ ಕಾಂಗ್ರೆಸ್‌ ಶಾಸಕ ಎಸ್.ಟಿ. ಸೋಮಶೇಖರ್ ಅವರ ಪ್ರಯತ್ನಕ್ಕೆ, ಬಿಜೆಪಿಯ ಜಗ್ಗೇಶ್‌, ಜೆಡಿಎಸ್‌ನಟಿ.ಎನ್‌. ಜವರಾಯಿಗೌಡ ಸವಾಲಾಗಿದ್ದಾರೆ.

ಜೆಡಿಎಸ್ ಬಂಡಾಯ ಶಾಸಕರ ಗುಂಪಿನಲ್ಲಿ ಕೆಲಕಾಲ ಗುರುತಿಸಿಕೊಂಡಿದ್ದ ಮಹಾಲಕ್ಷ್ಮಿ ಲೇಔಟ್‌ ಕ್ಷೇತ್ರದ ಶಾಸಕ ಕೆ. ಗೋಪಾಲಯ್ಯ ಅಂತಿಮವಾಗಿ ಪಕ್ಷದಲ್ಲೇ ಉಳಿದಿದ್ದಾರೆ. ದೇವೇಗೌಡ ಮತ್ತು ಕುಮಾರಸ್ವಾಮಿ ಬೆನ್ನಿಗೆ ನಿಂತಿರುವುದರಿಂದ ಮರು ಆಯ್ಕೆಗೆ ಕಸರತ್ತು ನಡೆಸುತ್ತಿದ್ದಾರೆ. ಈ ಕ್ಷೇತ್ರದಲ್ಲಿ ಕಾಂಗ್ರೆಸ್ ತೊರೆದು ಇತ್ತೀಚೆಗೆ ಬಿಜೆಪಿ ಸೇರ್ಪಡೆಗೊಂಡಿರುವ ನೆ.ಲ. ನರೇಂದ್ರಬಾಬು ಬಿಜೆಪಿ ಅಭ್ಯರ್ಥಿ. ವಿದ್ಯಾರ್ಥಿ ಕಾಂಗ್ರೆಸ್‌ ನಾಯಕ ಎಚ್‌.ಎಸ್‌. ಮಂಜುನಾಥ್ ಕೈ ಹುರಿಯಾಳು. ದಾಸರಹಳ್ಳಿ ಕ್ಷೇತ್ರದ ಹಾಲಿ ಬಿಜೆಪಿ ಶಾಸಕ ಮುನಿರಾಜು ಹ್ಯಾಟ್ರಿಕ್ ಗೆಲುವಿಗಾಗಿ ಕಾತರದಿಂದಿದ್ದಾರೆ. ಕಾಂಗ್ರೆಸ್‌ನಿಂದ ಪಿ.ಎನ್‌. ಕೃಷ್ಣಮೂರ್ತಿ ಕಣಕ್ಕಿಳಿದಿದ್ದಾರೆ. ಈ ಕ್ಷೇತ್ರದಲ್ಲಿ ಜೆಡಿಎಸ್‌ನಿಂದ ಆರ್‌. ಮಂಜುನಾಥ್‌ ಅಭ್ಯರ್ಥಿ.

ರಿಯಲ್‌ ಎಸ್ಟೇಟ್‌ ಉದ್ಯಮಿಗಳ ನಡುವಿನ ಸವಾಲಿನ ಕ್ಷೇತ್ರ ಕೆ.ಆರ್. ಪುರ. ಮುಖ್ಯಮಂತ್ರಿ ಆಪ್ತ ಬಿ.ಎ. ಬಸವರಾಜ್‌ (ಬೈರತಿ) ‘ಕೈ’ ಪಕ್ಷದಿಂದ ಎರ
ಡನೇ ಬಾರಿಗೆ ಅದೃಷ್ಟ ಪರೀಕ್ಷೆಗೆ ಒಡ್ಡಿಕೊಳ್ಳಲಿದ್ದಾರೆ. ಈ ಕ್ಷೇತ್ರದಲ್ಲಿ ಎದುರಾಳಿ ನಂದೀಶ್‌ ರೆಡ್ಡಿ ಬಿಜೆಪಿ ಉಮೇದುವಾರ. ಜೆಡಿಎಸ್‌ನಿಂದ ಡಿ.ಎ. ಗೋಪಾಲ್ ಅಖಾಡದಲ್ಲಿದ್ದಾರೆ. ಬ್ಯಾಟರಾಯನಪುರದಲ್ಲಿ ಸಚಿವ ಕೃಷ್ಣ ಬೈರೇಗೌಡ ಮತ್ತೆ ಜನಾದೇಶ ಪಡೆಯಲು ಮುಂದಾಗಿದ್ದಾರೆ. ಬಿಜೆಪಿಯಿಂದ ಆರ್. ಅಶೋಕ ಅವರ ಸಂಬಂಧಿ ಎ.ರವಿ ಈ ಬಾರಿಯೂ ಕಣದಲ್ಲಿದ್ದಾರೆ. ಟಿ.ಜೆ. ಚಂದ್ರ ರೇಸ್‌ನಲ್ಲಿರುವ ಜೆಡಿಎಸ್‌ ಅಭ್ಯರ್ಥಿ.

ಕಾರ್ಮಿಕ ಮುಖಂಡ ಎಂ.ಎಸ್. ಕೃಷ್ಣನ್ (ಸಿಪಿಎಂ) ಚುನಾಯಿತರಾಗಿದ್ದ ಕ್ಷೇತ್ರ ಮಲ್ಲೇಶ್ವರ. ಬದಲಾವಣೆಯ ಗಾಳಿ ಬೀಸಿದ ನಂತರ ಜನತಾ ಪಕ್ಷ ಪ್ರಾಬಲ್ಯಕ್ಕೆ ಬಂದಿತ್ತು. ಜೀವರಾಜ್ ಆಳ್ವ, ಅನಂತ ನಾಗ್ ಇಲ್ಲಿಂದಲೇ ಆಯ್ಕೆಯಾಗಿದ್ದರು. 1999, 2004ರಲ್ಲಿ ಅದು ಮತ್ತೆ ಕಾಂಗ್ರೆಸ್‌ಗೆ ಒಲಿದಿತ್ತು. ಕ್ಷೇತ್ರ ಪುನರ್‍ವಿಂಗಡಣೆಯ ನಂತರದ ಎರಡೂ ಚುನಾವಣೆಗಳಲ್ಲಿ ಗೆದ್ದಿರುವ ಬಿಜೆಪಿಯ ಡಾ. ಸಿ.ಎನ್‌. ಅಶ್ವತ್ಥ ನಾರಾಯಣ ಮತ್ತೊಮ್ಮೆ ಗೆಲ್ಲುವ ಹುಮ್ಮಸ್ಸಿನಲ್ಲಿ
ದ್ದಾರೆ. ಕಾಂಗ್ರೆಸ್‌ನಿಂದ ಸಚಿವ ಎಂ.ಆರ್. ಸೀತಾರಾಂ ಅವರಿಗೆ ಟಿಕೆಟ್‌ ಘೋಷಣೆಯಾಗಿದ್ದರೂ ಅವರು ಒಲ್ಲೆನೆಂದಾಗ ಲಾಟರಿ ಹೊಡೆದದ್ದು ಕೆಂಗಲ್ ಹನುಮಂತಯ್ಯನವರ ಮೊಮ್ಮಗ ಕೆಂಗಲ್‌ ಶ್ರೀಪಾದರೇಣುಗೆ. ಜೆಡಿಎಸ್‌ನಿಂದ ಎನ್‌. ಮಧುಸೂದನ್‌ ಕಣದಲ್ಲಿದ್ದಾರೆ.

ನಾಡಪ್ರಭು ಕೆಂಪೇಗೌಡರು ಹುಟ್ಟಿದ ಊರು ಯಲಹಂಕದಲ್ಲಿ ಬಿಜೆಪಿಯ ಎಸ್.ಆರ್.ವಿಶ್ವನಾಥ್ ಹ್ಯಾಟ್ರಿಕ್ ಜಯದ ತವಕದಲ್ಲಿದ್ದಾರೆ. ಇಲ್ಲಿ ಎಂ.ಎನ್‌. ಗೋಪಾಲಕೃಷ್ಣ ಕಾಂಗ್ರೆಸ್‌ ಅಭ್ಯರ್ಥಿ. ಎ.ಎಂ ಹನುಮಂತೇಗೌಡ ಜೆಡಿಎಸ್‌ ಅಭ್ಯರ್ಥಿ. ಕಾಂಗ್ರೆಸ್‍ ಮತ್ತು ಜೆಡಿಎಸ್‍ ಬಲಗೊಂಡಿರುವುದು, ಎರಡು ಸಾರಿ ಆಯ್ಕೆಯಾಗಿದ್ದರೂ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸುವಲ್ಲಿ ಯಶಸ್ಸು ಕಾಣದಿರುವುದು ಸೇರಿದಂತೆ ಹಲವು ಸವಾಲುಗಳು ವಿಶ್ವನಾಥ್ ಮುಂದಿದ್ದು, ಇವನ್ನೆಲ್ಲಾ ಅವರು ಹೇಗೆ ಮೆಟ್ಟಿ ನಿಲ್ಲುತ್ತಾರೆ ಎನ್ನುವುದು ಕುತೂಹಲಕರ.

ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಕೆಲವು ಪ್ರದೇಶಗಳು ಈ ಕ್ಷೇತ್ರಕ್ಕೆ ಸೇರಿರುವುದರಿಂದ ಯಾರ ಒಲವು ಯಾರ ಕಡೆ ಎಂಬುದು ಸ್ಪಷ್ಟವಾಗಿ ಗೋಚರಿಸುತ್ತಿಲ್ಲ.

ತೀವ್ರ ಪೈಪೋಟಿ

ಜಿದ್ದಾಜಿದ್ದಿನ ಕಣಗಳಲ್ಲಿ ಹೆಬ್ಬಾಳವೂ ಒಂದು. ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಇಲ್ಲಿ ಅರಳಿಸಿದ ‘ಕಮಲ’ ನಂತರ ಬಾಡಿಲ್ಲ. ಆದರೆ, ಭೂ ಅಕ್ರಮದಲ್ಲಿ ಭಾಗಿಯಾದ ಆರೋಪದ ಕಾರಣಕ್ಕೆ 2013ರಲ್ಲಿ ಕಟ್ಟಾಗೆ ಬಿಜೆಪಿ ಟಿಕೆಟ್‌ ನೀಡಿರಲಿಲ್ಲ. ಅವರ ಆಪ್ತ ಜಗದೀಶ್‌ ಕಣಕ್ಕಿಳಿದು ಗೆದ್ದಿದ್ದರು. ಆದರೆ, ಜಗದೀಶ್‌ ನಿಧನದಿಂದ 2016ರಲ್ಲಿ ನಡೆದ ಉಪಚುನಾವಣೆ ವೈ.ಎ. ನಾರಾಯಣಸ್ವಾಮಿ ಗೆದ್ದರು. ಈಗ ಮತ್ತೆ ಅವರಿಗೇ ಪಕ್ಷ ಟಿಕೆಟ್‌ ನೀಡಿದೆ. ಆದರೆ, ಮುಖ್ಯಮಂತ್ರಿ ಆಪ್ತ ಬಿ.ಎಸ್‌.ಸುರೇಶ್ (ಬೈರತಿ) ಕ್ಷೇತ್ರ ‘ಕೈ’ ವಶಕ್ಕೆ ಪಡೆದುಕೊಳ್ಳಲೇಬೇಕೆಂಬ ಉಮೇದಿನಲ್ಲಿದ್ದಾರೆ. ಈ ಇಬ್ಬರಿಗೆ ಜೆಡಿಎಸ್‌ನ ಹನುಮಂತೇಗೌಡ ಸಡ್ಡು ಹೊಡೆಯುತ್ತಿದ್ದಾರೆ. ಮುಸ್ಲಿಂ ಮತದಾರರು ದೊಡ್ಡ ಸಂಖ್ಯೆಯಲ್ಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT