ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತದಾನ ಹಕ್ಕು ಚಲಾಯಿಸಲು ಪ್ರೇರೇಪಿಸಿ:ರಾಹುಲ್‌,ಎಚ್‌ಡಿಕೆ,..ಸರ್ವರಲಿ ಮೋದಿ ಮನವಿ

Last Updated 13 ಮಾರ್ಚ್ 2019, 6:48 IST
ಅಕ್ಷರ ಗಾತ್ರ

ಬೆಂಗಳೂರು: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ದಾಖಲೆಯ ಮತದಾನ ನಡೆಯಲು ಅನುವಾಗುವಂತೆ ಪ್ರಧಾನಿ ನರೇಂದ್ರ ಮೋದಿ ವಿರೋಧ ಪಕ್ಷದ ಮುಖಂಡರು, ಸಿನಿಮಾ ತಾರೆಯರು, ಕ್ರೀಡಾ ಲೋಕದ ದಿಗ್ಗಜರು, ಮಾಧ್ಯಮಗಳು, ಸಾಮಾಜಿಕ ಕಾರ್ಯಕರ್ತರು ಸೇರಿ ಹಲವು ಪ್ರಮುಖರನ್ನು ಟ್ವಿಟರ್‌ನಲ್ಲಿ ಟ್ಯಾಗ್‌ ಮಾಡಿ ಬುಧವಾರ ಮನವಿ ಮಾಡಿದ್ದಾರೆ.

ಮುಖ್ಯಮಂತ್ರಿ ಕುಮಾರಸ್ವಾಮಿ, ಕ್ರಿಕೆಟಿಗ ಕೊಹ್ಲಿ, ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ, ನಟ ಅಮಿತಾಬ್‌ ಬಚ್ಚನ್‌, ಉದ್ಯಮಿ ಆನಂದ್‌ ಮಿಶ್ರಾ,...ಹೀಗೆ ಹತ್ತು ಹಲವು ಜನರನ್ನು ಪ್ರಧಾನಿ ಮೋದಿ ತಮ್ಮ ಟ್ವಿಟರ್‌ ಖಾತೆಯಲ್ಲಿ ಟ್ಯಾಗ್‌ ಮಾಡಿ; ಮತದಾರರನ್ನು ಹಕ್ಕು ಚಲಾಯಿಸಲು ಕರೆತರಲು ಪ್ರೇರೇಪಿಸುವಂತೆ ಕೋರಿದ್ದಾರೆ. ದೇಶದ ಎಲ್ಲ ಭಾಗದ ಹಾಗೂ ಬಹುತೇಕ ಎಲ್ಲ ವಲಯದ ಪ್ರಮುಖರಿಗೆ ಮೋದಿ ಲೋಕಸಭಾ ಚುನಾವಣೆಯ ನೆನಪು ಮಾಡಿದ್ದಾರೆ.

ಮತದಾರರಲ್ಲಿ ಜಾಗೃತಿ ಮೂಡಿಸಲು ನೆರವಾಗಿ, ಪ್ರಜಾಪ್ರಭುತ್ವದಲ್ಲಿ ಅತಿ ಹೆಚ್ಚು ಮತದಾನ ದಾಖಲಾಗಲು ಸಹಕರಿಸಿ ಎಂದಿರುವ ಮೋದಿ, ಬ್ಲಾಗ್‌ನಲ್ಲಿಯೂ ನಾಲ್ಕು ವಿಭಾಗಗಳಲ್ಲಿ ಮನವಿ ಮಾಡಿದ್ದಾರೆ. ‘ಚುನಾವಣೆ ಎಂಬುದು ಸಂಭ್ರಮಿಸುವ ಸಂದರ್ಭ, ಮತ ಚಲಾಯಿಸದಿದ್ದರೆ ಅತ್ಯಂತ ಸಂಕಟ ಉಂಟು ಮಾಡುತ್ತದೆ’ ಎಂದಿದ್ದಾರೆ.

‘ಮತದಾನಕ್ಕೆ ಅರ್ಹತೆ ಹೊಂದಿರುವವರು ಸ್ವಯಂ ಪ್ರೇರಿತರಾಗಿ ನೋಂದಾಯಿಸಿಕೊಳ್ಳಿ, ಮತದಾರರ ಪಟ್ಟಿಯಲ್ಲಿ ಹೆಸರು ಇರುವುದನ್ನು ಸ್ಪಷ್ಟಪಡಿಸಿಕೊಳ್ಳಿ, ಮತದಾನ ಮಾಡುವ ಸಮಯವನ್ನು ಮುಂಚಿತವಾಗಿಯೇ ಯೋಜಿಸಿಕೊಳ್ಳಿ ಹಾಗೂ ಸ್ನೇಹಿತರು, ಕುಟುಂಬದವರೊಂದಿಗೆ ಮತದಾನದ ಹಕ್ಕು ಚಲಾಯಿಸುವಂತೆ’ ಜನರಲ್ಲಿ ಕೋರಿದ್ದಾರೆ.

‘ಹೆಚ್ಚಿನ ಪ್ರಮಾಣದಲ್ಲಿ ಮತದಾನವೆಂದರೆ, ಬಲಿಷ್ಠವಾದ ಪ್ರಜಾಪ್ರಭುತ್ವ ಹಾಗೂ ಬಲಿಷ್ಠ ಪ್ರಜಾಪ್ರಭುತ್ವವೆಂದರೆ ಅಭಿವೃದ್ಧಿ ಹೊಂದಿದ ಭಾರತ’ ಎಂದಿದ್ದಾರೆ. ದೇಶದ ಒಟ್ಟು 543 ಲೋಕಸಭಾ ಕ್ಷೇತ್ರಗಳಿಗೆ ಏಪ್ರಿಲ್‌ 11ರಿಂದ ಮೇ 19ರ ವರೆಗೂ ಮತದಾನ ನಡೆಯಲಿದ್ದು, ಮೇ 23ರಂದು ಫಲಿತಾಂಶ ಹೊರಬರಲಿದೆ.

ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ, ನಟಿ ಅಲಿಯಾ ಭಟ್‌, ರಣವೀರ್‌ ಸಿಂಗ್‌, ದೀಪಿಕಾ ಪಡುಕೋಣೆ, ಮಾಯಾವತಿ, ಅಖಿಲೇಶ್ ಯಾದವ್‌, ತೇಜಸ್ವಿ ಯಾದವ್‌, ಸ್ಟಾಲಿನ್‌, ಅನುಷ್ಕಾ ಶರ್ಮಾ, ಶಾರೂಕ್‌ ಖಾನ್‌, ಸಲ್ಮಾನ್‌ ಖಾನ್‌, ಆಮಿರ್ ಖಾನ್‌, ಕರಣ್ ಜೋಹರ್‌, ಸೈನಾ ನೆಹ್ವಾಲ್‌, ಅನಿಲ್‌ ಕುಂಬ್ಳೆ, ಪಿ.ವಿ.ಸಿಂಧು, ಶ್ರೀ ಶ್ರೀ ರವಿ ಶಂಕರ್‌, ಸದ್ಗುರು, ನಿತೀಶ್ ಕುಮಾರ್‌, ಎನ್‌.ಚಂದ್ರಬಾಬು ನಾಯ್ಡು, ನವೀನ್‌ ಪಟ್ನಾಯಕ್‌, ಮಹೇಂದ್ರ ಸಿಂಗ್‌ ದೋನಿ, ವಿರೇಂದ್ರ ಸೆಹ್ವಾಗ್‌, ಸಚಿನ್‌, ರೆಹಮಾನ್‌..ಹೀಗೆ ಪ್ರಧಾನಿ ಟ್ಯಾಗ್‌ ಮಾಡಿರುವವರ ಪಟ್ಟಿ ದೊಡ್ಡದೇ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT