ಮಲ್ಯ ಪರಾರಿಗೆ ಮೋದಿ ನೆರವು: ರಾಹುಲ್‌

7

ಮಲ್ಯ ಪರಾರಿಗೆ ಮೋದಿ ನೆರವು: ರಾಹುಲ್‌

Published:
Updated:
Deccan Herald

ನವದೆಹಲಿ: ಉದ್ಯಮಿ ವಿಜಯ ಮಲ್ಯ ವಿದೇಶಕ್ಕೆ ಪರಾರಿಯಾಗುವಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಪಾತ್ರವಿದೆ ಎಂದು ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಶುಕ್ರವಾರ ನೇರವಾಗಿ ಆರೋಪಿಸಿದ್ದಾರೆ.

ಮಲ್ಯ ಪರಾರಿಯಾಗುವಲ್ಲಿ ಸಿಬಿಐ ಪಾತ್ರವೂ ಇದೆ. ಸಿಬಿಐ ನೇರವಾಗಿ ಪ್ರಧಾನಿಗೆ ವರದಿ ಸಲ್ಲಿಸುತ್ತದೆ. ಪ್ರಧಾನಿ ಸಮ್ಮತಿ ಇಲ್ಲದೆ ಸಿಬಿಐ ಹೇಗೆ ಮಲ್ಯ ವಿರುದ್ಧದ ಬಂಧನ ಆದೇಶ ಮತ್ತು ಲುಕ್‌ಔಟ್‌ ನೊಟಿಸ್‌ ಬದಲಿಸಲು ಸಾಧ್ಯ ಎಂದು ಅವರು ಪ್ರಶ್ನಿಸಿದ್ದಾರೆ.

‘ಹಣಕಾಸು ಸಚಿವ ಅರುಣ್‌ ಜೇಟ್ಲಿ  ಸುಳ್ಳು ಹೇಳುತ್ತಿದ್ದಾರೆ. ದೇಶ ಬಿಡುವ ಮೊದಲು ಮಲ್ಯ ತಮ್ಮನ್ನು ಭೇಟಿಯಾದ ವಿಷಯವನ್ನು ಅವರು ತನಿಖಾ ಸಂಸ್ಥೆಗಳಿಂದ ಮುಚ್ಚಿಟ್ಟಿದ್ದು ಏಕೆ’ ಎಂದು ರಾಹುಲ್‌ ಸುದ್ದಿಗೋಷ್ಠಿಯಲ್ಲಿ ಕೇಳಿದ್ದಾರೆ.

ಮಲ್ಯ ದೇಶ ತೊರೆದ ಪ್ರಕರಣದಲ್ಲಿ ಸಿಬಿಐ ತನ್ನ ತಪ್ಪನ್ನು ಒಪ್ಪಿಕೊಂಡ ಮೇಲೆ ಪ್ರಧಾನಿ ಹೇಗೆ ಜವಾಬ್ದಾರಿಯಿಂದ ನುಣಚಿಕೊಳ್ಳಲು ಸಾಧ್ಯ ಎಂದು ದೆಹಲಿ ಕಾಂಗ್ರೆಸ್‌ ಅಧ್ಯಕ್ಷ ಅಜಯ್‌ ಮಾಕನ್‌ ಕೇಳಿದ್ದಾರೆ.

ದೇಶ ಬಿಡುವ ಮೊದಲು ಹಣಕಾಸು ಸಚಿವ ಜೇಟ್ಲಿ ಅವರನ್ನು ಭೇಟಿ ಮಾಡಿದ್ದಾಗಿ ವಿಜಯ ಮಲ್ಯ ಹೇಳಿರುವುದು ರಾಜಕೀಯ ಕೋಲಾಹಲ ಸೃಷ್ಟಿಸಿದೆ.

ಹಣಕಾಸು ಸಚಿವರ ರಾಜೀನಾಮೆಗೆ ಒತ್ತಾಯಿಸಿ ದೆಹಲಿ ಯುವ ಕಾಂಗ್ರೆಸ್‌ ಕಾರ್ಯಕರ್ತರು ಜೇಟ್ಲಿ ನಿವಾಸದವರೆಗೂ ಪ್ರತಿಭಟನೆ ಹಮ್ಮಿಕೊಂಡಿದ್ದರು.

ಮೋದಿ, ಜೇಟ್ಲಿ, ಮಲ್ಯ ಅವರ ಮುಖವಾಡ ಧರಿಸಿದ್ದ ಕಾರ್ಯಕರ್ತರು ‘ಮಲ್ಯ ಭೇಟಿಯಾಗಿದ್ದ ಮಾಹಿತಿ ಏಕೆ ಬಹಿರಂಗ ಪಡಿಸಲಿಲ್ಲ’ ಎಂದು ಘೋಷಣೆ ಕೂಗಿದರು.

**

ಯಾವ ಲೋಪ ಆಗಿಲ್ಲ: ಎಸ್‌ಬಿಐ ಸ್ಪಷ್ಟನೆ

ವಿಜಯ ಮಲ್ಯ ಪ್ರಕರಣದಲ್ಲಿ ತನ್ನಿಂದ ಯಾವುದೇ ಲೋಪವಾಗಿಲ್ಲ ಎಂದು ಭಾರತೀಯ ಸ್ಟೇಟ್‌ ಬ್ಯಾಂಕ್‌ (ಎಸ್‌ಬಿಐ) ಸ್ಪಷ್ಟಪಡಿಸಿದೆ.

ಮಲ್ಯ ಅವರಿಂದ ಸಾಲ ವಸೂಲು ಮಾಡಲು ಬ್ಯಾಂಕ್‌ ಎಲ್ಲ ರೀತಿಯ ಕಾನೂನು ಕ್ರಮ ಅನುಸರಿಸಿದೆ ಎಂದು ಹೇಳಿದೆ.

ಮಲ್ಯ ವಿದೇಶಕ್ಕೆ ಪರಾರಿಯಾಗದಂತೆ ತಡೆಯಲು ಎಸ್‌ಬಿಐ ವಿಫಲವಾಗಿದೆ. ಸುಪ್ರೀಂ ಕೋರ್ಟ್ ಮೊರೆ ಹೋಗಲು ಎಸ್‌ಬಿಐ ವಿಳಂಬ ಮಾಡಿದೆ ಎಂಬ ಆರೋಪದ ಬೆನ್ನಲ್ಲೇ ಈ ಪ್ರತಿಕ್ರಿಯೆ ಹೊರಬಿದ್ದಿದೆ.

ಮಲ್ಯ ವಿದೇಶಕ್ಕೆ ಪರಾರಿಯಾದ ನಾಲ್ಕು ದಿನಗಳ ನಂತರ ಎಸ್‌ಬಿಐ ನೇತೃತ್ವದ 13 ಬ್ಯಾಂಕ್‌ಗಳ ಒಕ್ಕೂಟ ಸುಪ್ರೀಂ ಕೋರ್ಟ್ ಮೊರೆ ಹೋಗಿತ್ತು.

ಬರಹ ಇಷ್ಟವಾಯಿತೆ?

 • 5

  Happy
 • 0

  Amused
 • 0

  Sad
 • 1

  Frustrated
 • 0

  Angry

Comments:

0 comments

Write the first review for this !