ಛತ್ತೀಸಗಡದ ಜನರಿಗೆ ರಾಹುಲ್ ಗಾಂಧಿ ‘ಮನರಂಜನೆ’: ರಮಣ್ ಸಿಂಗ್ ಲೇವಡಿ

7
ರಾಹುಲ್‌ಗಾಂಧಿ–ರಮಣ್‌ಸಿಂಗ್ ಆರೋಪ–ಪ್ರತ್ಯಾರೋಪ

ಛತ್ತೀಸಗಡದ ಜನರಿಗೆ ರಾಹುಲ್ ಗಾಂಧಿ ‘ಮನರಂಜನೆ’: ರಮಣ್ ಸಿಂಗ್ ಲೇವಡಿ

Published:
Updated:

ರಾಯಪುರ್: 'ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಛತ್ತೀಸಗಡದ ಜನರಿಗೆ ಒಂದು ಥರದ ಮನರಂಜನೆ ಇದ್ದಂತೆ. ಅವರ ಪ್ರಚಾರ ವೈಖರಿ ಅವರ ಪಕ್ಷಕ್ಕೇ ಮುಳುವಾಗುವ ಸಾಧ್ಯತೆ ಇದೆ' ಎಂದು ಮುಖ್ಯಮಂತ್ರಿ ರಮಣ್ ಸಿಂಗ್ ಲೇವಡಿ ಮಾಡಿದರು

ವಿಧಾನಸಭೆ ಚುನಾವಣೆಯ ಮೊದಲ ಹಂತದ ಮತದಾನಕ್ಕೆ ಒಂದು ದಿನ ಮೊದಲು ಕಾಂಗ್ರೆಸ್ ಅಧ್ಯಕ್ಷರ ವಿರುದ್ಧ ವಾಗ್ದಾಳಿ ನಡೆಸಿದ ರಮಣ್ ಸಿಂಗ್, 'ರಾಹುಲ್ ಗಾಂಧಿಗೆ ಛತ್ತೀಸಗಡದ ಬಗ್ಗೆ ಏನೂ ಗೊತ್ತಿಲ್ಲ. ಅವರ ಬಹಿರಂಗ ಸಭೆಗಳು ಕಾಂಗ್ರೆಸ್ ಗೆ ಮತ ಸಂಪಾದಿಸಿ ಕೊಡಲಾರವು' ಎಂದು ಅಭಿಪ್ರಾಯಪಟ್ಟರು.

'ರಮಣ್ ಸಿಂಗ್ ಭ್ರಷ್ಟಾಚಾರದಲ್ಲಿ ಭಾಗಿಯಾಗಿದ್ದಾರೆ. ತಮ್ಮ ಕೈಗಾರಿಕೋದ್ಯಮಿ ಮಿತ್ರರ ಅನುಮತಿ ಪಡೆಯದೆ ಯಾವುದೇ ನಿರ್ಧಾರಗಳನ್ನು ತೆಗೆದುಕೊಳ್ಳುವುದಿಲ್ಲ' ಎಂದು ರಾಹುಲ್ ಗಾಂಧಿ ಶುಕ್ರವಾರ ರಮಣ್ ಸಿಂಗ್ ವಿರುದ್ಧ ಹರಿಹಾಯ್ದಿದ್ದರು. ಇದರಿಂದ ವಿಚಲಿತರಾದಂತೆ ಕಂಡು ಬಂದಿರುವ ರಮಣ್ ಸಿಂಗ್ ಇದೀಗ ಹೊಸದಾಗಿ ರಾಹುಲ್ ವಿರುದ್ಧ ವಾಗ್ದಾಳಿ ಮಾಡಿದ್ದಾರೆ.

'ರಾಹುಲ್ ಗಾಂಧಿಗೆ ಛತ್ತೀಸಗಡದ ಬಗ್ಗೆ ಏನೂ ಗೊತ್ತಿಲ್ಲ. ರಾಜ್ಯದ ಜನರೂ ಅವರನ್ನು ಗಂಭೀರವಾಗಿ ತೆಗೆದುಕೊಳ್ಳುವುದಿಲ್ಲ. ರಾಹುಲ್ ಮಾತುಗಳನ್ನು ಕೇಳಿಸಿಕೊಂಡು ಮಜಾ ತೆಗೆದುಕೊಳ್ಳುತ್ತಾರೆ. ಛತ್ತೀಸಗಡದ ಜನರಿಗೆ ರಾಹುಲ್ ಒಳ್ಳೆಯ ಮನರಂಜನೆ' ಎಂದು ರಮಣ್ ಸಿಂಗ್ ಹಾಸ್ಯ ಮಾಡಿದ್ದಾರೆ.

'ರಾಜ್ಯದಲ್ಲಿ ರಾಹುಲ್ ನಡೆಸುತ್ತಿರುವ ಪ್ರಚಾರದಿಂದ ಬಿಜೆಪಿಗೆ ಯಾವುದೇ ಅಪಾಯವಿಲ್ಲ. ಆದರೆ ಕಾಂಗ್ರೆಸ್ ಗೆ ತೊಂದರೆಯಾಗಬಹುದು' ಎಂದು ಅವರು ವಿಶ್ಲೇಷಿಸಿದರು.

ಕಾಂಗ್ರೆಸ್ ಪಕ್ಷ ಈ ಕುರಿತು ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ರಾಜಕಾರಣಿಗಳು ವ್ಯಕ್ತಿಗತವಾಗಿ ಮಾಡುವ ಇಂಥ ಟೀಕೆಗಳು ಬಿಸಿಬಿಸಿ ಆರೋಪ-ಪ್ರತ್ಯಾರೋಪಗಳಿಗೆ ಕಾರಣವಾಗುವುದು ವಾಡಿಕೆ. ಚುನಾವಣಾ ಕಣವನ್ನು ಇಂಥ ಹೇಳಿಕೆಗಳು ಮತ್ತಷ್ಟು ಕಾವೇರುವಂತೆ ಮಾಡುತ್ತವೆ.

ಬಿಜೆಪಿ ನೇತೃತ್ವದ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಮುಸುಕಿನ ಬಂಡವಾಳಶಾಹಿ ಚಟುವಟಿಕೆಗಳಲ್ಲಿ ತೊಡಗಿವೆ. ಉದ್ಯಮಿಗಳಿಗೆ ಅನುಕೂಲ ಮಾಡಿಕೊಡುತ್ತಿವೆ ಎಂದು ಕಾಂಗ್ರೆಸ್ ಟೀಕಿಸುತ್ತಿದೆ. ವಿಧಾನಸಭೆ ಚುನಾವಣೆ ಘೋಷಣೆಯಾಗಿರುವ ಎಲ್ಲ ಐದು ರಾಜ್ಯಗಳಲ್ಲಿ ಚುರುಕಾಗಿ ಚುನಾವಣಾ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವ ರಾಹುಲ್ ಗಾಂಧಿ ಸರ್ಕಾರಗಳ ವಿರುದ್ಧ ಇದೇ ಆರೋಪಗಳನ್ನು ಮಾಡುತ್ತಿದ್ದಾರೆ.

ಬಿಜೆಪಿ ಈ ಆರೋಪಗಳನ್ನು ನಿರಾಕರಿಸಿದೆ. 'ಈ ಹಿಂದೆ ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಮುಸುಕಿನ ಬಂಡವಾಳಶಾಹಿಗಳು ಸರ್ಕಾರದ ಮೇಲೆ ಹಿಡಿತ ಸಾಧಿಸಿದ್ದರು' ಎಂದು ಪ್ರತ್ಯಾರೋಪ ಮಾಡಿದೆ.

ಬರಹ ಇಷ್ಟವಾಯಿತೆ?

 • 5

  Happy
 • 1

  Amused
 • 0

  Sad
 • 1

  Frustrated
 • 2

  Angry

Comments:

0 comments

Write the first review for this !