ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೆರವು: ಕಾರ್ಯತಂತ್ರ ಬಹಿರಂಗಕ್ಕೆ ರಾಹುಲ್ ಗಾಂಧಿ ಆಗ್ರಹ

ಲಾಕ್‌ಡೌನ್‌ ವಿಫಲ– ರಾಹುಲ್‌ ಗಾಂಧಿ
Last Updated 26 ಮೇ 2020, 20:13 IST
ಅಕ್ಷರ ಗಾತ್ರ

ನವದೆಹಲಿ: ‘ದೇಶದಲ್ಲಿ ಹೇರಲಾಗಿರುವ ನಾಲ್ಕು ಹಂತಗಳ ಲಾಕ್‌ಡೌನ್‌ ಸಂಪೂರ್ಣ ವಿಫಲವಾಗಿದೆ. ಲಾಕ್‌ಡೌನ್‌ ತೆರವುಗೊಳಿಸಿ, ಜನಜೀವನವನ್ನು ಸಹಜಸ್ಥಿತಿಗೆ ತರಲು ಯಾವ ಕಾರ್ಯತಂತ್ರ ರೂಪಿಸಲಾಗಿದೆ ಎಂಬುದನ್ನು ಕೇಂದ್ರ ಸರ್ಕಾರ ಬಹಿರಂಗಪಡಿಸಬೇಕು’ ಎಂದು ಕಾಂಗ್ರೆಸ್‌ ಮುಖಂಡ ರಾಹುಲ್‌ ಗಾಂಧಿ ಆಗ್ರಹಿಸಿದರು.

ವಿಡಿಯೊ ಕಾನ್ಫರೆನ್ಸ್‌ ಮೂಲಕ ಮಂಗಳವಾರ ಪತ್ರಿಕಾಗೋಷ್ಠಿ ನಡೆಸಿದ ಅವರು, ‘ಪ್ರಧಾನಿ ನರೇಂದ್ರ ಮೋದಿ ಅವರ ನಿರೀಕ್ಷೆ ಹುಸಿಯಾಗಿದ್ದು, ದಿನೇದಿನೇ ಕೊರೊನಾ ವೈರಸ್‌ ಸೋಂಕು ಹೆಚ್ಚುತ್ತಿದೆ. ಲಾಕ್‌ಡೌನ್‌ ತೆರವುಗೊಳಿಸಿದ ನಂತರದ ಅವಧಿಯಲ್ಲಿ ಸರ್ಕಾರ ಸಮರ್ಪಕ ಕಾರ್ಯತಂತ್ರ ಅನುಸರಿಸದಿದ್ದರೆ, ಸೋಂಕು ಹೆಚ್ಚಿ ದೇಶ ಭಾರಿ ಅನಾಹುತ ಎದುರಿಸಬೇಕಾಗುತ್ತದೆ’ ಎಂದು ಎಚ್ಚರಿಸಿದರು.

‘ಕೊರೊನಾ ವೈರಸ್‌ನ ಸೋಂಕು ಹೆಚ್ಚುತ್ತಿರುವ ಸಂದರ್ಭದಲ್ಲಿಯೇ ಲಾಕ್‌ಡೌನ್‌ ತೆರವುಗೊಳಿಸುತ್ತಿರುವ ದೇಶವೆಂದರೆ ಭಾರತ ಮಾತ್ರ. ನಾನು ಈ ವಿಷಯದ ತಜ್ಞನಲ್ಲ. ಆದರೆ, ಲಾಕ್‌ಡೌನ್‌ ತೆರವು ಎಂಬುದು ತಾತ್ಕಾಲಿಕ ಪರಿಹಾರ ಎನಿಸುವಂತಿರಬಾರದು. ಅದು ಯೋಜಿತ ಹಾಗೂ ವ್ಯವಸ್ಥಿತವಾಗಿರಬೇಕು’ ಎಂದರು.

‘ದೇಶದ ಆರ್ಥಿಕತೆಯೂ ಕುಸಿದಿದೆ. ಜನರ ಕೈಗಳಲ್ಲಿ ಹಣ ಚಲಾವಣೆ ಅಗತ್ಯ. ಸಣ್ಣ ಮತ್ತು ಮಧ್ಯಮ ಪ್ರಮಾಣದ ಉದ್ದಿಮೆಗಳಿಗೂ ಹಣಕಾಸು ನೆರವು ನೀಡಬೇಕು. ಇಲ್ಲದೇ ಹೋದರೆ ಅದೂ ವಿನಾಶಕಾರಿಯಾಗಲಿದೆ’ ಎಂದು ರಾಹುಲ್‌ ಎಚ್ಚರಿಸಿದರು.

‘ಸರ್ಕಾರ ನಡೆಸುವುದು ಬೇರೆ; ಬೆಂಬಲ ಬೇರೆ’

‘ಸರ್ಕಾರವನ್ನು ನಡೆಸುವುದಕ್ಕೂ, ಒಂದು ಸರ್ಕಾರಕ್ಕೆ ಬೆಂಬಲ ನೀಡುವುದಕ್ಕೂ ವ್ಯತ್ಯಾಸ ಇದೆ’ ಎಂದು ರಾಹುಲ್‌ ಗಾಂಧಿ ಹೇಳಿದರು.

‘ಮಹಾರಾಷ್ಟ್ರದಲ್ಲಿ ಕೋವಿಡ್‌–19 ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದೆ. ಮಹಾರಾಷ್ಟ್ರ ಸರ್ಕಾರದಲ್ಲಿ ಕಾಂಗ್ರೆಸ್‌ ಸಹ ಭಾಗಿದಾರವಲ್ಲವೇ’ ಎಂಬ ಪ್ರಶ್ನೆಗೆ ಈ ರೀತಿ ಉತ್ತರಿಸಿದರು.

‘ಮಹಾರಾಷ್ಟ್ರದಲ್ಲಿನ ಸರ್ಕಾರಕ್ಕೆ ನಮ್ಮ ಬೆಂಬಲ ಇದೆ. ಆದರೆ, ನಿರ್ಧಾರ ಕೈಗೊಳ್ಳುವ ಮುಖ್ಯ ಸ್ಥಾನದಲ್ಲಿ ನಾವಿಲ್ಲ. ಈ ಮಹಾಮಾರಿ ವಿರುದ್ಧದ ಹೋರಾಟದಲ್ಲಿ ಮಹಾರಾಷ್ಟ್ರ ಸೇರಿದಂತೆ ಎಲ್ಲ ರಾಜ್ಯಗಳಿಗೆ ಕೇಂದ್ರದ ನೆರವು ಅಗತ್ಯ’ ಎಂದೂ ಪ್ರತಿಪಾದಿಸಿದರು.

‘ಪಾರದರ್ಶಕತೆ ಇರಲಿ’

‘ಭಾರತದ ಕೆಲವು ಪ್ರದೇಶಗಳನ್ನು ತನ್ನದೆಂದು ನೇಪಾಳ ಹೇಳುತ್ತಿದೆ. ಈ ಪ್ರದೇಶಗಳನ್ನು ಒಳಗೊಂಡಿರುವ ಹೊಸ ನಕಾಶೆಯನ್ನೂ ಬಿಡುಗಡೆ ಮಾಡಿದೆ. ಇನ್ನೊಂದೆಡೆ, ಕೇಂದ್ರಾಡಳಿತ ಪ್ರದೇಶ ಲಡಾಖ್‌ನ ಗಡಿಯಲ್ಲಿ ಚೀನಾ ಮತ್ತು ಭಾರತದ ಯೋಧರ ನಡುವೆ ಸಂಘರ್ಷ ನಡೆದಿದೆ. ಈ ವಿದ್ಯಮಾನಗಳ ಬಗ್ಗೆ ಕೇಂದ್ರ ಸರ್ಕಾರ ಕೈಗೊಂಡಿರುವ ಕ್ರಮಗಳು ಪಾರದರ್ಶಕವಾಗಿರಲಿ’ ಎಂದು ರಾಹುಲ್‌ ಗಾಂಧಿ ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT