ಬೇಷರತ್‌ ಕ್ಷಮೆ ಕೇಳಿದ ರಾಹುಲ್‌

ಶನಿವಾರ, ಮೇ 25, 2019
22 °C
ಸುಪ್ರೀಂ ಕೋರ್ಟ್‌ನ ಅಭಿಪ್ರಾಯವನ್ನು ತಪ್ಪಾಗಿ ಉಲ್ಲೇಖಿಸಿದ ಪ್ರಕರಣ

ಬೇಷರತ್‌ ಕ್ಷಮೆ ಕೇಳಿದ ರಾಹುಲ್‌

Published:
Updated:
Prajavani

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಕಳ್ಳ (ಚೋರ್‌) ಎಂದು ಸುಪ್ರೀಂ ಕೋರ್ಟ್‌ ಕೂಡ ಹೇಳಿದೆ ಎಂಬ ಹೇಳಿಕೆ ನೀಡಿದ್ದಕ್ಕೆ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಅವರು ಸುಪ್ರೀಂ ಕೋರ್ಟ್‌ನ ಬೇಷರತ್‌ ಕ್ಷಮೆ ಯಾಚಿಸಿದ್ದಾರೆ. 

ತನ್ನ ಹೇಳಿಕೆಯನ್ನು ತಪ್ಪಾಗಿ ಉಲ್ಲೇಖಿಸಲಾಗಿದೆ, ತಾನು ಹೇಳದೇ ಇರುವುದನ್ನು ಹೇಳಿದ್ದಾಗಿ ಬಿಂಬಿಸಲಾಗಿದೆ ಎಂದು ರಾಹುಲ್‌ ಹೇಳಿಕೆ ವಿರುದ್ಧ ಸುಪ್ರೀಂ ಕೋರ್ಟ್‌ ಆಕ್ರೋಶ ವ್ಯಕ್ತಪಡಿಸಿತ್ತು. ಅದಾದ ಬಳಿಕ ರಾಹುಲ್‌ ಅವರು ಎರಡು ಬಾರಿ ತಮ್ಮ ಹೇಳಿಕೆಗೆ ವಿಷಾದ ವ್ಯಕ್ತಪಡಿಸಿದ್ದರು. ಆದರೆ, ಇದು ಸುಪ್ರೀಂ ಕೋರ್ಟ್‌ಗೆ ತೃಪ್ತಿ ತಂದಿರಲಿಲ್ಲ. ಹಾಗಾಗಿ, ಹೊಸ ಪ್ರಮಾಣಪತ್ರ ಸಲ್ಲಿಸಿರುವ ಅವರು ಬೇಷರತ್‌ ಕ್ಷಮೆ ಕೇಳಿದ್ದಾರೆ. 

‘ನೇರವಾಗಿ ಅಥವಾ ಪರೋಕ್ಷವಾಗಿ ನ್ಯಾಯಾಂಗದ ಪ್ರಕ್ರಿಯೆಯಲ್ಲಿ ಮಧ್ಯಪ್ರವೇಶಿಸುವ ಉದ್ದೇಶ ನನಗೆ ಇರಲಿಲ್ಲ’ ಎಂದು ಪ್ರಮಾಣಪತ್ರದಲ್ಲಿ ಹೇಳಿದ್ದಾರೆ.

‘ಚೌಕೀದಾರ್‌ ಚೋರ್‌ ಹೈ’ ಎಂದು ಸುಪ್ರೀಂ ಕೋರ್ಟ್‌ ಹೇಳಿದೆ ಎಂದು ಹೇಳಿಕೆ ಕೊಟ್ಟ ಬಳಿಕ ಅದಕ್ಕೆ ವಿಷಾದ ವ್ಯಕ್ತಪಡಿಸಿ, ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಳ್ಳುತ್ತಲೇ ಹೋಗುವುದು ಸರಿಯಾದ
ಕ್ರಮ ಅಲ್ಲ ಎಂದು ಏಪ್ರಿಲ್‌ 30ರಂದು ಸುಪ್ರೀಂ ಕೋರ್ಟ್‌ ಅಭಿಪ್ರಾಯಪಟ್ಟಿತ್ತು. ಪ್ರಮಾಣಪತ್ರಗಳಲ್ಲಿ ವಿಷಾದವನ್ನು ಮಾತ್ರ ವ್ಯಕ್ತಪಡಿಸಿದ್ದಕ್ಕೆ ಅಸಮಾಧಾನ ಸೂಚಿಸಿತ್ತು.

ತಮ್ಮ ಹೇಳಿಕೆಗೆ ಕ್ಷಮೆ ಕೋರುವುದಕ್ಕೆ ರಾಹುಲ್ ಅವರಿಗೆ ಮೂರನೇ ಅವಕಾಶವನ್ನು ನ್ಯಾಯಾಲಯ ನೀಡಿತ್ತು. 

ರಫೇಲ್‌ ಯುದ್ಧ ವಿಮಾನಗಳನ್ನು ಫ್ರಾನ್ಸ್‌ನಿಂದ ಖರೀದಿಸುವುದಕ್ಕೆ ಸಂಬಂಧಿಸಿದ ಒಪ್ಪಂದದಲ್ಲಿ ಅವ್ಯವಹಾರ ಆಗಿದ್ದು ತನಿಖೆ ನಡೆಸಬೇಕು ಎಂದು ಕೋರಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್‌ ವಜಾ ಮಾಡಿತ್ತು. ಆದರೆ, ಕೆಲವು ಗೋಪ್ಯ ದಾಖಲೆಗಳ ಆಧಾರದಲ್ಲಿ ಈ ತೀರ್ಪನ್ನು ಪುನರ್‌ ಪರಿಶೀಲಿಸಲು ಸುಪ್ರೀಂ ಕೋರ್ಟ್‌ ಏಪ್ರಿಲ್‌ 10ರಂದು ಒಪ್ಪಿಕೊಂಡಿತ್ತು. ನ್ಯಾಯಾಲಯವು ಈ ನಿರ್ಧಾರ ಕೈಗೊಂಡ ಬಳಿಕ ‘ಚೌಕೀದಾರ್‌ ಚೋರ್‌ ಹೈ ಎಂದು ಸುಪ್ರೀಂ ಕೋರ್ಟ್‌ ಕೂಡ ಹೇಳಿದೆ’ ಎಂದು ರಾಹುಲ್‌ ಅವರು ಅಮೇಠಿ ಮತ್ತು ಕಟಿಹಾರ್‌ನಲ್ಲಿ ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಹೇಳಿದ್ದರು. 

ಬಿಜೆಪಿ ಸಂಸದೆ ಮೀನಾಕ್ಷಿ ಲೇಖಿ ಅವರು ರಾಹುಲ್‌ ಅವರ ಹೇಳಿಕೆ ವಿರುದ್ಧ ನ್ಯಾಯಾಂಗ ನಿಂದನೆ ದೂರು ಸಲ್ಲಿಸಿದ್ದರು. ಅದರ ಆಧಾರದಲ್ಲಿ ರಾಹುಲ್‌ ಅವರಿಗೆ ನ್ಯಾಯಾಲಯ ನೋಟಿಸ್‌ ನೀಡಿತ್ತು. 

***

ನ್ಯಾಯಾಲಯದ ಅಭಿಪ್ರಾಯದ ಬಗ್ಗೆ ತಪ್ಪು ಹೇಳಿಕೆ ನೀಡಿದ್ದಕ್ಕೆ ಬೇಷರತ್‌ ಕ್ಷಮೆಯಾಚಿಸುತ್ತೇನೆ. ಹೀಗೆ ಹೇಳಿಕೆ ಕೊಟ್ಟಿರುವುದು ಉದ್ದೇಶಪೂರ್ವಕ ಅಲ್ಲವೇ ಅಲ್ಲ

-ರಾಹುಲ್‌ ಗಾಂಧಿ,ಕಾಂಗ್ರೆಸ್‌ ಅಧ್ಯಕ್ಷ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !