ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಮುಖ್ಯಮಂತ್ರಿ ಯಾರಾಗಬೇಕು?’ ಕಾರ್ಯಕರ್ತರಿಗೆ ರಾಹುಲ್ ಗಾಂಧಿ ಆಡಿಯೊ ಮೆಸೇಜ್

ಕಾರ್ಯಕರ್ತರೊಂದಿಗೆ ಸಂಪರ್ಕ ಸಾಧಿಸಲು ತಂತ್ರಜ್ಞಾನದ ಸೇತುವೆ
Last Updated 13 ಡಿಸೆಂಬರ್ 2018, 12:49 IST
ಅಕ್ಷರ ಗಾತ್ರ

ಕಾಂಗ್ರೆಸ್ ಅಧ್ಯಕ್ಷ ರಾಹುಲ್‌ ಗಾಂಧಿ ಮಧ್ಯಪ್ರದೇಶ, ಛತ್ತೀಸಗಡ ಮತ್ತು ರಾಜಸ್ಥಾನದ ಸುಮಾರು ಮೂರು ಲಕ್ಷ ಕಾರ್ಯಕರ್ತರಿಗೆ ಮುಖ್ಯಮಂತ್ರಿ ಯಾರಾಗಬೇಕು ಎಂಬುದನ್ನು ಸೂಚಿಸುವಂತೆ ಕೋರಿ ಪಕ್ಷದ ಆಂತರಿಕ ಬಳಕೆಗೆ ಸೀಮಿತವಾಗಿರುವ ‘ಶಕ್ತಿ’ ಆ್ಯಪ್ ಮೂಲಕ ವಾಯ್ಸ್ ಮೆಸೇಜ್‌ ಕಳಿಸಿದ್ದಾರೆ.

‘ಬುಧವಾರ ಪಕ್ಷದ ಕಾರ್ಯಕರ್ತರಿಗೆ ರಾಹುಲ್ ಅವರಿಂದ ಆಡಿಯೊ ಮೆಸೇಜ್ ಬಂದಿದೆ’ ಛತ್ತೀಸಗಡ ಕಾಂಗ್ರೆಸ್ ಘಟಕದ ಪ್ರಧಾನ ಕಾರ್ಯದರ್ಶಿ ಶೈಲೇಶ್ ನಿತಿನ್ ತ್ರಿವೇದಿ ಅವರ ಹೇಳಿಕೆಯನ್ನು ‘ಟೈಮ್ಸ್‌ ಆಫ್ ಇಂಡಿಯಾ’ ವರದಿ ಮಾಡಿದೆ.

ಮೂರೂ ರಾಜ್ಯಗಳ ರಾಜ್ಯ ಘಟಕದ ನಾಯಕರನ್ನು ವಾಯ್ಸ್‌ ಮೆಸೇಜ್‌ನಲ್ಲಿ ರಾಹುಲ್ ಗಾಂಧಿ ಅಭಿನಂದಿಸಿದ್ದಾರೆ. ‘ಈಗ ನಾನು ನಿಮಗೆ ಒಂದು ಮುಖ್ಯ ಪ್ರಶ್ನೆ ಕೇಳುತ್ತೇನೆ. ಮುಖ್ಯಮಂತ್ರಿ ಯಾರಾಗಬೇಕು? ದಯವಿಟ್ಟು ಒಂದು ಹೆಸರನ್ನು ಮಾತ್ರ ಸೂಚಿಸಿ. ನೀವು ಯಾರು ಎಂಬುದು ನನಗೆ ಮಾತ್ರ ಗೊತ್ತಿರುತ್ತೆ. ಪಕ್ಷದ ಯಾವುದೇ ನಾಯಕನಿಗೆ ನೀವು ಯಾರು ಎಂಬುದು ತಿಳಿಯುವುದಿಲ್ಲ. ದಯವಿಟ್ಟು ಬೀಪ್ ಸದ್ದು ಕೇಳಿಸಿದ ನಂತರ ಮಾತನಾಡಿ’ ಎಂದು ರಾಹುಲ್ ಗಾಂಧಿ ಮನವಿ ಮಾಡಿದ್ದಾರೆ.

ಕಾರ್ಯಕರ್ತರ ವಲಯದಲ್ಲಿ ರಾಹುಲ್ ಕ್ರಮಕ್ಕೆ ಹರ್ಷ ವ್ಯಕ್ತವಾಗಿದೆ. ‘ನಾವು ಬಯಸಿದ್ದ ಕಾಂಗ್ರೆಸ್ ಇದು. ಕಾರ್ಯಕರ್ತರಿಗೆ ಮಾತಿಗೆ ಉನ್ನತ ನಾಯಕರು ಮನ್ನಣೆ ಕೊಡುವ ಕಾಲ ಮತ್ತೆ ಬಂದಿದೆ’ ಎಂಬ ಹೆಸರು ಹೇಳಲು ಇಚ್ಛಿಸದ ಪದಾಧಿಕಾರಿಯೊಬ್ಬರ ಹೇಳಿಕೆಯನ್ನು ‘ಎನ್‌ಡಿಟಿವಿ’ ತನ್ನ ವರದಿಯಲ್ಲಿ ಉಲ್ಲೇಖಿಸಿದೆ.

ಪಕ್ಷದ ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ವಿಚಾರದಲ್ಲಿ ರಾಹುಲ್ ‘ಶಕ್ತಿ’ ಆ್ಯಪ್ ಮೂಲಕ ಅಭಿಪ್ರಾಯ ಕೋರಿದ್ದರು. ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿಯೂ ಪಕ್ಷದ ಅಭ್ಯರ್ಥಿ ಆಯ್ಕೆಯನ್ನು ಅಂತಿಮಗೊಳಿಸುವ ಮೊದಲು6000 ಕಾರ್ಯಕರ್ತರ ಅಭಿಪ್ರಾಯ ಆಧರಿಸಿದ ಪಟ್ಟಿ ಸಿದ್ಧಪಡಿಸಲಾಗಿತ್ತು. ಪಕ್ಷದ ಕಾರ್ಯಕರ್ತರೊಂದಿಗೆ ನೇರ ಸಂಪರ್ಕ ಸಾಧಿಸುವ ಸೇತುವೆಯಾಗಿ ರಾಹುಲ್ ತಂತ್ರಜ್ಞಾನವನ್ನು ಬಳಸುತ್ತಿದ್ದಾರೆ. ತಮ್ಮ ಕೇದಾರನಾಥ ಯಾತ್ರೆಯ ಬಗ್ಗೆಯೂ ರಾಹುಲ್ ಕಾರ್ಯಕರ್ತರಿಗೆ ಆ್ಯಪ್‌ನಲ್ಲಿ ವಿವರ ನೀಡಿದ್ದರು.

ಬಳ್ಳಾರಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ವಿ.ಎಸ್.ಉಗ್ರಪ್ಪ ಗೆಲುವು ಸಾಧಿಸಿದಾಗ ‘ಶಕ್ತಿ’ಯ ಮೂಲಕ ಈ ಭಾಗದ ಎಲ್ಲ ಕಾರ್ಯಕರ್ತರಿಗೆ ಅಭಿನಂದನೆ ಸಂದೇಶ ಕಳಿಸಿದ್ದರು. ಮಧ್ಯಪ್ರದೇಶದಲ್ಲಿ ರ‍್ಯಾಲಿಯೊಂದಕ್ಕೆ ಹೋಗುವ ಮೊದಲು ಆ ಭಾಗದ ಕೆಲ ಕಾರ್ಯಕರ್ತರಿಗೆ ಕರೆ ಮಾಡಿ ಕುಶಲ ವಿಚಾರಿಸಿದ್ದರು. ಸಮಾರಂಭದ ಸ್ಥಳದಲ್ಲಿ ತನ್ನನ್ನು ಭೇಟಿಯಾಗಿ ಮಾತನಾಡುವಂತೆ ವಿನಂತಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT