ರಾಹುಲ್‌ಗೆ ಸಿಕ್ಕಿತು ದಿಢೀರ್‌ ಸ್ವೀಕೃತಿ

7

ರಾಹುಲ್‌ಗೆ ಸಿಕ್ಕಿತು ದಿಢೀರ್‌ ಸ್ವೀಕೃತಿ

Published:
Updated:
Deccan Herald

ನವದೆಹಲಿ: ಹಿಂದಿ ಭಾಷಿಕ ಮೂರು ರಾಜ್ಯಗಳಲ್ಲಿ ಬಿಜೆಪಿಯ ಸೋಲು ಪ್ರಧಾನಿ ನರೇಂದ್ರ ಮೋದಿ ವಿರುದ್ಧದ ಹೋರಾಟದಲ್ಲಿ ವಿರೋಧ ಪಕ್ಷಗಳಿಗೆ ಹೊಸ ಹುರುಪು ತುಂಬಿದೆ. ನೆಲಕಚ್ಚಿದ್ದ ಕಾಂಗ್ರೆಸ್‌ಗೆ ಈ ರಾಜ್ಯಗಳಲ್ಲಿ ಗೆಲ್ಲುವ ಮೂಲಕ ಪುನಶ್ಚೇನತವೂ ದೊರೆತಿದೆ. ಹಾಗಾಗಿ, ಪಕ್ಷದ ಅಧ್ಯಕ್ಷ ರಾಹುಲ್‌ ಗಾಂಧಿಯ ನಾಯಕತ್ವಕ್ಕೆ ಬಿಜೆಪಿಯೇತರ ಪಕ್ಷಗಳ ಮುಖಂಡರಿಂದ ಮನ್ನಣೆಯೂ ದೊರೆತಿದೆ. 

ಬಿಜೆಪಿ ವಿರುದ್ಧ ನಿರಂತರವಾಗಿ ವಾಗ್ದಾಳಿ ನಡೆಸಿದ್ದಕ್ಕೆ ಮತ್ತು ಹೋರಾಟವನ್ನು ಬಿಜೆಪಿಯ ಹಿತ್ತಿಲಿಗೇ ಒಯ್ದದ್ದಕ್ಕೆ ಬಿಜೆಪಿ ವಿರೋಧಿ ಪಕ್ಷಗಳಿಂದ ರಾಹುಲ್‌ಗೆ ಮೆಚ್ಚುಗೆಯೂ ವ್ಯಕ್ತವಾಗಿದೆ. ವಿರೋಧ ಪಕ್ಷಗಳ ನಡುವೆ ರಾಹುಲ್‌ ಅವರ ವರ್ಚಸ್ಸು ಬಹುವಾಗಿ ಹೆಚ್ಚಿದೆ  ಎಂದು ಹಲವು ಮುಖಂಡರು ಹೇಳಿದ್ದಾರೆ. 

ಬಿಜೆಪಿ ವಿರೋಧಿ ಪಾಳಯದಲ್ಲಿ ಇರುವ ಹಲವು ಹಿರಿಯ ಮುಖಂಡರಿಗೆ ರಾಹುಲ್‌ ನಾಯಕತ್ವದ ಬಗ್ಗೆ ಅಸಡ್ಡೆಯೇ ಇತ್ತು. ತಮಗಿಂತ ಕಿರಿಯ ವ್ಯಕ್ತಿ ಮಹಾಮೈತ್ರಿಕೂಟದ ನಾಯಕ ಆಗುವುದು ಹೇಗೆ ಎಂಬ ಪ್ರಶ್ನೆ ಅವರಲ್ಲಿ ಇತ್ತು. ಅವರಲ್ಲಿ ಹಲವು ಮಂದಿ ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ಜತೆಗೆ ನೇರವಾಗಿಯೇ ವ್ಯವಹರಿಸುತ್ತಿದ್ದರು. ವಿರೋಧ ಪಕ್ಷಗಳನ್ನು ಒಟ್ಟುಗೂಡಿಸುವ ಅಯಸ್ಕಾಂತ ಸೋನಿಯಾ ಅವರೇ ಎಂದು ಹಲವರು ಹೇಳಿದ್ದರು. 

‘ವಿರೋಧ ಪಕ್ಷಗಳ ನಡುವೆ ರಾಹುಲ್‌ ಅವರ ಸ್ಥಾನವನ್ನು ಈ ಫಲಿತಾಂಶ ಗಟ್ಟಿಗೊಳಿಸಿದೆ ಎಂಬುದನ್ನು ಒಪ್ಪಿಕೊಳ್ಳಲೇಬೇಕು. ಅವರು ಎಲ್ಲವನ್ನೂ ಸುಲಲಿತವಾಗಿ ನಿಭಾಯಿಸುವುದನ್ನು ಈಗ ಕಾಣಬಹುದು. ಈಗ ಅವರು ಎರಡು ವರ್ಷಗಳ ಹಿಂದೆ ನೋಡಿದ ರಾಹುಲ್‌ ಅಲ್ಲ. ಈಗಿನ ಫಲಿತಾಂಶ ಅವರ ಶಕ್ತಿ ಹೆಚ್ಚಿಸಲಿದೆ’ ಎಂದು ವಿರೋಧ ಪಕ್ಷವೊಂದರ ಹಿರಿಯ  ಮುಖಂಡರು ಹೇಳಿದ್ದಾರೆ. 

ಬಿಜೆಪಿಗೆ ಪರ್ಯಾಯವೊಂದನ್ನು ಸೃಷ್ಟಿಸುವಲ್ಲಿ ಕಾಂಗ್ರೆಸ್‌ ಮಹತ್ವದ ಪಾತ್ರ ವಹಿಸಿದೆ ಎಂದು ಎನ್‌ಸಿಪಿ ಮುಖ್ಯಸ್ಥ ಶರದ್‌ ಪವಾರ್‌ ಅಭಿಪ್ರಾಯಪಟ್ಟಿದ್ದಾರೆ. 

21 ಪಕ್ಷಗಳ ಮುಖಂಡರು ಭಾಗವಹಿಸಿದ ಸೋಮವಾರದ ಸಭೆಯಲ್ಲಿ ರಾಹುಲ್‌ ಅವರ ವರ್ತನೆ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಎಲ್ಲರನ್ನೂ ಜತೆಗೆ ಒಯ್ಯುವ ಅವರ ಮನೋಭಾವವನ್ನು ಎಲ್ಲರೂ ಇಷ್ಟಪಟ್ಟಿದ್ದಾರೆ ಎಂದು ಮೂಲಗಳು ಹೇಳಿವೆ.

ಪ್ರಾದೇಶಿಕ ಪಕ್ಷಗಳನ್ನು ಕಿರಿಯ ಪಾಲುದಾರರು ಎಂದು ಪರಿಗಣಿಸುವುದರ ವಿರುದ್ಧ ಮಮತಾ ಬ್ಯಾನರ್ಜಿ, ಎಂ.ಕೆ.ಸ್ಟಾಲಿನ್‌ ಮತ್ತು ಅರವಿಂದ ಕೇಜ್ರಿವಾಲ್‌ ಅವರು ಎಚ್ಚರಿಕೆ ನೀಡಿದ್ದರು. ಇದಕ್ಕೆ ಪ್ರತಿಕ್ರಿಯೆ ನೀಡಿದ್ದ ರಾಹುಲ್‌, ‘ಎಲ್ಲರ ಆಕಾಂಕ್ಷೆಗಳನ್ನು ಕಾಂಗ್ರೆಸ್‌ ಅರ್ಥ ಮಾಡಿಕೊಳ್ಳುತ್ತದೆ ಮತ್ತು ಜಿಗುಟುತನ ಪ್ರದರ್ಶಿಸುವುದಿಲ್ಲ’ ಎಂದು ಭರವಸೆ ನೀಡಿದ್ದರು. ಕರ್ನಾಟಕದಲ್ಲಿ ನಾಯಕತ್ವ ಸ್ಥಾನವನ್ನು ಜೆಡಿಎಸ್‌ಗೆ ಬಿಟ್ಟುಕೊಟ್ಟದ್ದನ್ನು ಅವರು ಉಲ್ಲೇಖಿಸಿದ್ದರು. 

ಉತ್ತರ ಪ್ರದೇಶದಲ್ಲಿ ಬಿಎಸ್‌ಪಿ ಮತ್ತು ಎಸ್‌ಪಿ ಜತೆಗಿನ ಸೀಟು ಹಂಚಿಕೆಯಲ್ಲಿ ಹೆಚ್ಚಿನ ಪಾಲು ಪಡೆಯುವುದಕ್ಕೂ ಈಗಿನ ಫಲಿತಾಂಶ ಕಾಂಗ್ರೆಸ್‌ಗೆ ನೆರವಾಗಬಹುದು ಎನ್ನಲಾಗಿದೆ. 

ಬರಹ ಇಷ್ಟವಾಯಿತೆ?

 • 12

  Happy
 • 1

  Amused
 • 0

  Sad
 • 0

  Frustrated
 • 3

  Angry

Comments:

0 comments

Write the first review for this !