ಭಾನುವಾರ, ಸೆಪ್ಟೆಂಬರ್ 22, 2019
22 °C
ರಾಹುಲ್‌ಗೆ ಭರ್ಜರಿ ಗೆಲುವು: ಎಡರಂಗಕ್ಕೆ ದುಬಾರಿ ಆದ ಶಬರಿಮಲೆ ವಿವಾದ

ಎಡರಂಗವನ್ನು ಗುಡಿಸಿ ಹಾಕಿದ ಯುಡಿಎಫ್‌

Published:
Updated:

ಬೆಂಗಳೂರು: ಕೇರಳದಲ್ಲಿ ಕಾಂಗ್ರೆಸ್‌ ನೇತೃತ್ವದ ಯುಡಿಎಫ್‌ ಭರ್ಜರಿ ಗೆಲುವು ಸಾಧಿಸಿದ್ದು, ಅಲ್ಲಿನ ಆಡಳಿತರೂಢ ಸಿಪಿಎಂ ನೇತೃತ್ವದ ಎಲ್‌ಡಿಎಫ್‌ ಹೀನಾಯ ಸೋಲು ಕಂಡಿದೆ. ಭಾರೀ ಸದ್ದು ಮಾಡಿದ್ದ ಬಿಜೆಪಿ ಇಲ್ಲಿ ಖಾತೆ ತೆರೆಯುವಲ್ಲಿ ಸೋತಿದೆ. ಇಲ್ಲಿ ರಾಹುಲ್‌ ಎಫೆಕ್ಟ್‌ಗಿಂತಲೂ ಶಬರಿಮಲೆ ವಿವಾದ ಕಾಂಗ್ರೆಸ್‌ ಅನ್ನು ದಡ ಮುಟ್ಟಿಸಿದೆ.

ಒಟ್ಟು 20 ಲೋಕಸಭಾ ಕ್ಷೇತ್ರಗಳಲ್ಲಿ ಯುಡಿಎಫ್‌ 19 ಸ್ಥಾನಗಳನ್ನು ಗೆದ್ದುಕೊಂಡಿದ್ದು, ಎಲ್‌ಡಿಎಫ್‌ ಕೇವಲ ಒಂದು ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದೆ.

ಕಾಂಗ್ರೆಸ್ ಅಧ್ಯಕ್ಷ ರಾಹುಲ್‌ಗಾಂಧಿ ಉತ್ತರ ಪ್ರದೇಶದ ಅಮೇಥಿ ಜತೆಗೆ ಎರಡನೇ ಕ್ಷೇತ್ರವಾಗಿ ವಯನಾಡು ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡಿದ್ದರು. ನಿರೀಕ್ಷೆಯಂತೆ ಇಲ್ಲಿ ಭಾರೀ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಈ ಮೂಲಕ ಅವರು ಲೋಕಸಭೆಗೆ ಪ್ರವೇಶಿಸಿದ್ದಾರೆ (ಅಮೇಥಿಯಲ್ಲಿ ರಾಹುಲ್‌ ಸೋಲು ಅನುಭವಿಸಿದ್ದಾರೆ). ರಾಹುಲ್‌ಗಾಂಧಿ ಕಾರಣಕ್ಕೆ ಕೇರಳದಲ್ಲಿ ಯುಡಿಎಫ್‌ ಅಭೂತಪೂರ್ವ ಗೆಲುವು ಸಾಧಿಸಿದ್ದಲ್ಲ, ಆಡಳಿತಾರೂಢ ಎಲ್‌ಡಿಎಫ್‌ ಆಡಳಿತ ವಿರೋಧಿ ಅಲೆಯೇ ಕಾರಣ ಎಂದು ವಿಶ್ಲೇಷಿಸಲಾಗಿದೆ.

ರಾಹುಲ್‌ ಕೇರಳದಲ್ಲಿ ಸ್ಪರ್ಧಿಸಿದ್ದರಿಂದ ಅಲ್ಲಿ ಮಾತ್ರವಲ್ಲ, ನೆರೆಯ ಕರ್ನಾಟಕದ ಹಳೇ ಮೈಸೂರು ಪ್ರದೇಶದ ಲೋಕಸಭಾ ಕ್ಷೇತ್ರಗಳು ಮತ್ತು ತಮಿಳುನಾಡಿನ ಹಲವು ಕ್ಷೇತ್ರಗಳ ಮೇಲೆ ಪರಿಣಾಮ ಬೀರುತ್ತದೆ. ಇದರಿಂದ ಕಾಂಗ್ರೆಸ್‌ಗೆ ಹೆಚ್ಚಿನ ಸ್ಥಾನಗಳು ಸಿಗುತ್ತವೆ ಎಂದು ಕಾಂಗ್ರೆಸ್‌ ನಾಯಕರು ಹೇಳಿಕೊಂಡಿದ್ದರು. ಆದರೆ, ಕರ್ನಾಟಕದಲ್ಲಿ ಕಾಂಗ್ರೆಸ್ ಧೂಳಿಪಟವಾಗಿದೆ.

ಶಬರಿಮಲೆ ಅಯ್ಯಪ್ಪ ದೇವಸ್ಥಾನಕ್ಕೆ ಮಹಿಳೆಯರ ಪ್ರವೇಶದ ವಿಷಯಕ್ಕೆ ಸಂಬಂಧಿಸಿದಂತೆ ಬಿಜೆಪಿ ಆ ರಾಜ್ಯದಲ್ಲಿ ಭಾರೀ ಹೋರಾಟವನ್ನೇ ಮಾಡಿತ್ತು. ಆದರೆ, ಅದರ ಲಾಭವನ್ನು ಬಿಜೆಪಿ ಪಡೆದುಕೊಳ್ಳಲು ಸಾಧ್ಯವಾಗಲಿಲ್ಲ. ನಿರೀಕ್ಷಿತ ಹಿಂದೂ ಮತಗಳನ್ನು ಕ್ರೋಡೀಕರಿಸಲು ಸಾಧ್ಯವಾಗಲಿಲ್ಲ. ಹಿಂದೂಗಳು ತೀವ್ರ ಅಸಮಾಧಾನಗೊಂಡಿದ್ದು ನಿಜ. ಆದರೆ, ಆ ಮತಗಳು ಅಂತಿಮವಾಗಿ ಕಾಂಗ್ರೆಸ್‌ಗೆ ವರ್ಗಾವಣೆ ಆಗಿವೆ ಎಂದು ವಿಶ್ಲೇಷಿಸಲಾಗುತ್ತಿದೆ. ತಿರುವನಂತಪುರ ಮತ್ತು ಪಟ್ಟನಂತಿಟ್ಟ ಬಿಜೆಪಿ ಗೆಲ್ಲಬಹುದಾದ ಕ್ಷೇತ್ರಗಳಾಗಿದ್ದವು. ಅಲ್ಲಿ ಆ ಪಕ್ಷ ಭಾರೀ ಪೈಪೋಟಿಯನ್ನು ನೀಡಿದೆ.

ಕೇರಳದಲ್ಲಿ ಈಳವ ಸಮುದಾಯ ಬಹಳ ಹಿಂದಿನಿಂದಲೂ ಎಡಪಕ್ಷಗಳ ಮತ ಬ್ಯಾಂಕ್‌ ಆಗಿತ್ತು. ಈ ಮತ ಬ್ಯಾಂಕ್‌ ಈ ಬಾರಿ ಎಡಪಕ್ಷಗಳಿಂದ ದೂರ ಸರಿದಿರುವುದು ನಿಚ್ಚಳ. ಶಬರಿಮಲೆ ವಿವಾದವೂ ಇದಕ್ಕೆ ಮುಖ್ಯ ಕಾರಣ. ಈಳವರ ಮತ ಬಿಜೆಪಿಯ ಬದಲಿಗೆ ಕಾಂಗ್ರೆಸ್‌ ಮಿತ್ರ ಪಕ್ಷಗಳಿಗೆ ವರ್ಗಾವಣೆಯಾಗಿದೆ ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.

ಶಬರಿಮಲೆ ವಿಚಾರದಲ್ಲಿ ಹಿಂದೂ ಮತಗಳ ಕ್ರೋಡೀಕರಣಕ್ಕೆ ವಿರುದ್ಧವಾಗಿ ಮುಸ್ಲಿಂ ಮತ್ತು ಕ್ರೈಸ್ತ ಸಮುದಾಯದ ಮತ ಬ್ಯಾಂಕ್‌ ಪ್ರರ್ಯಾಯವಾಗಿ ಧ್ರುವೀಕರಣವಾಗಿ ಕಾಂಗ್ರೆಸ್‌ಗೇ ಚಲಾವಣೆಗೊಂಡಿದೆ.  ಎರಡೂ ಕಡೆಯಿಂದ ಲಾಭ ಗಿಟ್ಟಿಸಿದ ಪರಿಣಾಮ ಕಾಂಗ್ರೆಸ್ ಅಭೂತಪೂರ್ವ ರೀತಿಯಲ್ಲಿ ಗೆಲುವು ಸಾಧಿಸಿದೆ. ಶಬರಿಮಲೆ ವಿಷಯದಲ್ಲಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ತೆಗೆದುಕೊಂಡ ನಿಲುವು ಎಡಪಕ್ಷಕ್ಕೆ ಭಾರಿ ಪೆಟ್ಟು ನೀಡಿದೆ ಎಂದೇ ವಿಶ್ಲೇಷಿಸಲಾಗಿದೆ.

2014 ರಲ್ಲಿ ಯುಡಿಎಫ್‌ 12 ಸ್ಥಾನ ಗೆದ್ದಿತ್ತು, ಎಲ್‌ಡಿಎಫ್‌ 8 ಸ್ಥಾನಗಳನ್ನು ಗೆದ್ದಿತ್ತು. ಕೇರಳದಲ್ಲಿ ಎಲ್‌ಡಿಎಫ್‌ ಸೋಲು ರಾಷ್ಟ್ರೀಯ ಮಟ್ಟದಲ್ಲೂ ಎಡಪಕ್ಷಗಳ ಭಾರೀ ಹಿನ್ನಡೆಗೆ ಕಾರಣವಾಗಿದೆ. ಕಳೆದ ಚುನಾವಣೆಯಲ್ಲಿ ಸಿಪಿಎಂ 5 ಸ್ಥಾನಗಳನ್ನು ಗೆದ್ದಿತ್ತು. ಈ ಬಾರಿ ಕೇವಲ ಒಂದು ಸ್ಥಾನ ಗೆದ್ದುಕೊಂಡಿದೆ.

Post Comments (+)