ಪ್ರಧಾನಿ ಮೋದಿ ಯಾರ ಚೌಕಿದಾರ?: ಕೇಂದ್ರ ಸರ್ಕಾರದ ವಿರುದ್ಧ ಹರಿಹಾಯ್ದ ರಾಹುಲ್‌

7

ಪ್ರಧಾನಿ ಮೋದಿ ಯಾರ ಚೌಕಿದಾರ?: ಕೇಂದ್ರ ಸರ್ಕಾರದ ವಿರುದ್ಧ ಹರಿಹಾಯ್ದ ರಾಹುಲ್‌

Published:
Updated:

ಧೋಲ್‌ಪುರ (ರಾಜಸ್ಥಾನ): ಪ್ರಧಾನಿ ನರೇಂದ್ರ ಮೋದಿ ಅವರು ಉದ್ಯಮಿ ಅನಿಲ್‌ ಅಂಬಾನಿ ಅವರ ಚೌಕಿದಾರ (ಕಾವಲುಗಾರ) ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್‌ ಗಾಂಧಿ ಲೇವಡಿ ಮಾಡಿದ್ದಾರೆ. 

ಉತ್ತರ ಪ್ರದೇಶ ಮತ್ತು ಮಧ್ಯಪ್ರದೇಶದ ಗಡಿಯಲ್ಲಿರುವ ಪೂರ್ವ ರಾಜಸ್ಥಾನದ ಧೋಲ್‌‍ಪುರ ಜಿಲ್ಲೆಯ ಮಣಿಯಾದಿಂದ 150 ಕಿ.ಮೀ. ರೋಡ್‌ಶೋದ ಆರಂಭದಲ್ಲಿ ರಾಹುಲ್‌ ಮಾತನಾಡಿದರು. ರಫೇಲ್‌ ಒಪ್ಪಂದ, ಕಾನೂನು ಮತ್ತು ಸುವ್ಯವಸ್ಥೆಯಿಂದ ಹಿಡಿದು ನೋಟು ರದ್ದತಿವರೆಗಿನ ವಿಚಾರದಲ್ಲಿ ಅವರು ಕೇಂದ್ರ ಸರ್ಕಾರದ ವಿರುದ್ಧ ಹರಿಹಾಯ್ದರು.

‘ತಾವು ಚೌಕಿದಾರನಾಗಲು ಬಯಸುವುದಾಗಿ 2014ರ ಲೋಕಸಭಾ ಚುನಾವಣೆ ವೇಳೆ ಮೋದಿ ಅವರು ಹೇಳಿದ್ದರು. ಆದರೆ ಯಾರ ಚೌಕಿದಾರ ಎಂಬುದನ್ನು ಸ್ಪಷ್ಟಪಡಿಸಿರಲಿಲ್ಲ’ ಎಂದು ರಾಹುಲ್‌ ಹೇಳಿದ್ದಾರೆ.

‘ಯುವ ಜನರು ಮೋದಿಯವರನ್ನು ನಂಬಿದರು. ತಮಗೆ ಪ್ರಧಾನಿಯಾಗುವುದು ಬೇಕಿಲ್ಲ, ತಾವು ಚೌಕಿದಾರ ಎಂದು ಮೋದಿ ಹೇಳಿದ್ದರು. ಈಗ ಜನರು ನಗುತ್ತಿದ್ದಾರೆ. ಯಾರ ಚೌಕಿದಾರ ಎಂಬುದನ್ನು ಮೋದಿ ಹೇಳಿರಲಿಲ್ಲ. ಆದರೆ ಅವರು ಅನಿಲ್‌ ಅಂಬಾನಿಯನ್ನು ರಕ್ಷಿಸುತ್ತಿದ್ದಾರೆ ಎಂಬುದು ಜನರಿಗೆ ಅರಿ
ವಾಗಿದೆ’ ಎಂದು ರಾಹುಲ್‌ ಹೇಳಿದರು. 

ಮೋದಿ ಅವರು ರೈತರಿಗೆ ನೆರವಾಗುವ ಬದಲಿಗೆ ದೇಶದ ಅತ್ಯಂತ ದೊಡ್ಡ 15–20 ಉದ್ಯಮಿಗಳಿಗೆ ಅನುಕೂಲ ಮಾಡಿಕೊಟ್ಟಿದ್ದಾರೆ ಎಂದು ಆರೋಪಿಸಿದರು. 

ರಫೇಲ್‌ ಒಪ್ಪಂದದ ಬಗ್ಗೆ ಮಾತನಾಡಿದ ಅವರು, ಹಿಂದೂಸ್ತಾನ್‌ ಎರೊನಾಟಿಕ್ಸ್‌ ಲಿ. ಅನ್ನು ನಿರ್ಲಕ್ಷಿಸಲಾಗಿದೆ. ಯುಪಿಎ ಸರ್ಕಾರ ನಿಗದಿ ಮಾಡಿದ ದರವನ್ನು ಹೆಚ್ಚಿಸಿ ಅದರ ಮೂಲಕ ಕೈಗಾರಿಕೋದ್ಯಮಿ ಗೆಳೆಯರಿಗೆ ಮೋದಿ ನೆರವಾಗಿದ್ದಾರೆ ಎಂಬ ತಮ್ಮ ಆರೋಪವನ್ನು ರಾಹುಲ್ ಪುನರುಚ್ಚರಿಸಿದರು. ರಫೇಲ್‌ ಹಗರಣದ ಬಗ್ಗೆ ಗಮನ ಸೆಳೆದಾಗ ಮೋದಿ ಅವರು ಒಂದು ಅಕ್ಷರವನ್ನೂ ಮಾತನಾಡಲಿಲ್ಲ ಎಂದೂ ಅವರು ಹೇಳಿದರು. 

ಹಿಂದಿನ ಯುಪಿಎ ಸರ್ಕಾರವು ರೈತರ ₹70 ಸಾವಿರ ಕೋಟಿ ಸಾಲ ಮನ್ನಾ ಮಾಡಿತ್ತು. ಆದರೆ ಈಗಿನ ಸರ್ಕಾರ ಉದ್ಯಮಿಗಳ ₹3.5 ಲಕ್ಷ ಕೋಟಿ ಸಾಲವನ್ನು ವಜಾ ಮಾಡಿದೆ. ರೈತರ ಒಂದು ರೂಪಾಯಿಯನ್ನೂ ಮೋದಿ ಮನ್ನಾ ಮಾಡಿಲ್ಲ ಎಂದು ಟೀಕಿಸಿದರು.  ರಾಜಸ್ಥಾನ ವಿಧಾನಸಭೆಗೆ ಡಿಸೆಂಬರ್‌ನಲ್ಲಿ ಚುನಾವಣೆ ನಡೆಯಲಿದೆ. 

***

ಎಸ್‌ಪಿ ಹಾಗೂ ಸಮಾಜವಾದಿ ಪಕ್ಷಗಳು ಮಹಾಮೈತ್ರಿಯ ಭಾಗವಾಗಲಿವೆ

–ವೀರಪ್ಪ ಮೊಯಿಲಿ, ಕಾಂಗ್ರೆಸ್ ಮುಖಂಡ

ಮೈತ್ರಿಕೂಟದಲ್ಲಿ ಸ್ಥಾನಗಳಿಗಾಗಿ ಪಕ್ಷ ಭಿಕ್ಷೆ ಬೇಡುವುದಿಲ್ಲ. ಅಗತ್ಯಬಿದ್ದರೆ ಏಕಾಂಗಿಯಾಗಿ ಸ್ಪರ್ಧಿಸುತ್ತೇವೆ

–ಮಾಯಾವತಿ, ಬಿಎಸ್‌ಪಿ ನಾಯಕಿ

ಬರಹ ಇಷ್ಟವಾಯಿತೆ?

 • 2

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !