ರಾಹುಲ್‌ ಪ್ರವೇಶ: ಎಡರಂಗಕ್ಕೆ ಅಸ್ತಿತ್ವದ ಭೀತಿ

ಶನಿವಾರ, ಏಪ್ರಿಲ್ 20, 2019
29 °C
ಲೋಕಸಭೆ ಮಾತ್ರವಲ್ಲ ಮುಂದಿನ ವಿಧಾನಸಭಾ ಚುನಾವಣೆ ಮೇಲೂ ಪರಿಣಾಮ ಬೀರುವ ಸಾಧ್ಯತೆ

ರಾಹುಲ್‌ ಪ್ರವೇಶ: ಎಡರಂಗಕ್ಕೆ ಅಸ್ತಿತ್ವದ ಭೀತಿ

Published:
Updated:

ತಿರುವನಂತಪುರ: ‘ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ವಯನಾಡ್‌ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಲು ತೀರ್ಮಾನಿಸಿದ್ದರಿಂದ, ಬಿಜೆಪಿಯ ವಿರುದ್ಧ ರಾಷ್ಟ್ರಮಟ್ಟದಲ್ಲಿ ಒಗ್ಗಟ್ಟಾಗಿ ಹೋರಾಡುವ ವಿರೋಧಪಕ್ಷಗಳ ಯೋಜನೆಗೆ ಧಕ್ಕೆಯಾಗಿದೆ’ ಎಂದು ಸಿಪಿಐ ಮತ್ತು ಸಿಪಿಎಂಗಳು ಹೇಳುತ್ತಿದ್ದರೂ ವಾಸ್ತವದಲ್ಲಿ ಈ ಎರಡು ಪಕ್ಷಗಳ ಭವಿಷ್ಯವೇ ಡೋಲಾಯಮಾನವಾಗಿದೆ.

2014ರ ಲೋಕಸಭಾ ಚುನಾವಣೆಯಲ್ಲಿ ಗೆದ್ದಿದ್ದ ಸಿಪಿಎಂನ 9 ಮಂದಿ ಸದಸ್ಯರಲ್ಲಿ ಐವರು ಕೇರಳದಿಂದ ಆಯ್ಕೆಯಾಗಿ ಸಂಸತ್ತನ್ನು ಪ್ರವೇಶಿಸಿದವರು. ಪಶ್ಚಿಮ ಬಂಗಾಳ ಮತ್ತು ತ್ರಿಪುರಾದಿಂದ ತಲಾ ಇಬ್ಬರು ಆಯ್ಕೆಯಾಗಿದ್ದರು. ಸಿಪಿಐನಿಂದ ಒಬ್ಬ ಸದಸ್ಯ ಮಾತ್ರ ಆಯ್ಕೆಯಾಗಿದ್ದರು. ಅವರೂ ಕೇರಳದಿಂದ ಚುನಾವಣೆ ಗೆದ್ದವರೇ.

ಕೇರಳ ಬಿಟ್ಟರೆ ಬೇರೆ ಯಾವ ರಾಜ್ಯದಲ್ಲೂ ಸಿಪಿಎಂ ಅಧಿಕಾರದಲ್ಲಿಲ್ಲ. ಚುನಾವಣೆಯ ಬಳಿಕ ಕೇಂದ್ರದಲ್ಲಿ ಒಂದುವೇಳೆ ಬಿಜೆಪಿ ವಿರೋಧಿ ಒಕ್ಕೂಟ ಅಧಿಕಾರಕ್ಕೆ ಬಂದರೆ, ಅಧಿಕಾರದಲ್ಲಿ ದೊಡ್ಡ ಪಾಲು ಪಡೆಯಲು ಹೆಚ್ಚಿನ ಸಂಖ್ಯೆಯಲ್ಲಿ ಸಂಸದರನ್ನು ಆಯ್ಕೆ ಮಾಡಿ ಕಳುಹಿಸುವುದು ಆ ಪಕ್ಷಕ್ಕೆ ಅನಿವಾರ್ಯವಾಗಿದೆ. ರಾಹುಲ್‌, ವಯನಾಡ್‌ನಿಂದ ಸ್ಪರ್ಧಿಸುವುದರಿಂದ ಸಿಪಿಎಂನ ಈ ಕನಸು ಭಗ್ನವಾಗುವ ಹಂತಕ್ಕೆ ಬಂದಿದೆ.

ರಾಹುಲ್‌ ಅವರನ್ನು ಮುಂದಿನ ಪ್ರಧಾನಿ ಎಂದು ಕಾಂಗ್ರೆಸ್‌ ಬಿಂಬಿಸುತ್ತಿರುವುದರಿಂದ ವಯನಾಡ್‌ ಮಾತ್ರವಲ್ಲ, ಕೇರಳದ 20 ಲೋಕಸಭಾ ಕ್ಷೇತ್ರಗಳ ಫಲಿತಾಂಶದ ಮೇಲೂ ಪರಿಣಾಮ ಉಂಟಾಗುತ್ತದೆ ಎಂದು ವಿಶ್ಲೇಷಕರು ಹೇಳುತ್ತಾರೆ.

‘ಪಕ್ಷದ ಸಂಸದರ ಸಂಖ್ಯೆ ಕಡಿಮೆ ಇರುವುದರಿಂದ ಸಿಪಿಎಂ ಈಗಾಗಲೇ ರಾಷ್ಟ್ರಮಟ್ಟದಲ್ಲಿ ಪ್ರಾಮುಖ್ಯತೆ ಕಳೆದುಕೊಂಡಿದೆ. ಹೇಗಾದರೂ ರಾಷ್ಟ್ರಮಟ್ಟದಲ್ಲಿ ವರ್ಚಸ್ಸನ್ನು ಹೆಚ್ಚಿಸಬೇಕು ಎಂದುಕೊಂಡಿರುವ ಪಕ್ಷ, ಕೇರಳವನ್ನೇ ನಂಬಿಕೊಂಡಿದೆ. ಇಲ್ಲಿಂದ ಹೆಚ್ಚು ಅಭ್ಯರ್ಥಿಗಳನ್ನು ಗೆಲ್ಲಿಸಬೇಕೆಂದು ಯೋಜನೆ ರೂಪಿಸುತ್ತಿದೆ. ರಾಹುಲ್‌ ಪ್ರವೇಶವು ಅವರ ಯೋಜನೆಗಳೆಲ್ಲ ತಲೆಕೆಳಗಾಗುವಂತೆ ಮಾಡಿದೆ’ ಎಂದು ರಾಜಕೀಯ ವಿಶ್ಲೇಷಕ, ಕೇರಳ ವಿಶ್ವವಿದ್ಯಾಲಯದ ಸಹ ಪ್ರಾಧ್ಯಾಪಕ ಡಾ. ಜೋಸ್‌ಕುಟ್ಟಿ ಸಿ.ಎ. ಅಭಿಪ್ರಾಯಪಟ್ಟಿದ್ದಾರೆ.

ಈ ಬಾರಿಯ ಚುನಾವಣೆಯಲ್ಲಿ ಸಿಪಿಎಂನ ಎಷ್ಟು ಅಭ್ಯರ್ಥಿಗಳು ಗೆಲ್ಲಬ ಹುದು ಎಂಬ ಪ್ರಶ್ನೆಗೆ ಉತ್ತರ ನೀಡಲು ಪಕ್ಷದ ಕಾರ್ಯದರ್ಶಿ ಸೀತಾರಾಂ ಯೆಚೂರಿ ಸಹ ಹಿಂಜರಿ ಯುತ್ತಾರೆ. ತಿರುವನಂತಪುರದ ಮಾಧ್ಯಮಗೋಷ್ಠಿಯೊಂದರಲ್ಲಿ ಅವರಿಗೆ ಈ ಪ್ರಶ್ನೆ ಕೇಳಿದಾಗ, ‘ಇಂತಿಷ್ಟೇ ಸ್ಥಾನಗಳನ್ನು ಗೆಲ್ಲುತ್ತೇವೆ ಎಂದು ಈಗಲೇ ಹೇಳಲು ಸಾಧ್ಯವಾಗದು. ಆದರೆ, 2004ರ ಚುನಾವಣೆಯಲ್ಲಿ ಜಾತ್ಯತೀತ ಸರ್ಕಾರವೊಂದನ್ನು ಅಧಿಕಾರಕ್ಕೆ ತರುವಲ್ಲಿ ಸಿಪಿಎಂ ಮಹತ್ವದ ಕಾಣಿಕೆ ನೀಡಿತ್ತು. ಅದೇ ಸಾಧನೆಯನ್ನು ಈ ಚುನಾ ವಣೆಯಲ್ಲೂ ಮಾಡುತ್ತೇವೆ’ ಎಂದಿದ್ದಾರೆ.

2004ರ ಚುನಾವಣೆಯಲ್ಲಿ ಸಿಪಿಎಂನ 44 ಹಾಗೂ ಸಿಪಿಐಯ 11 ಸದಸ್ಯರು ಆಯ್ಕೆಯಾಗಿದ್ದರು. 2009ರ ಚುನಾವಣೆಯಲ್ಲಿ ಈ ಸಂಖ್ಯೆ ಕ್ರಮವಾಗಿ 16 ಮತ್ತು 4ಕ್ಕೆ ಇಳಿಯಿತು. 2014ರಲ್ಲಿ ಅದು 9 ಮತ್ತು 1ಕ್ಕೆ ಕುಸಿದಿದೆ. ಆದ್ದರಿಂದ ಈ ಬಾರಿ ಎರಡೂ ಪಕ್ಷಗಳಿಗೆ ‘ಮಾಡು ಇಲ್ಲವೆ ಮಡಿ’ ಎಂಬ ಸ್ಥಿತಿ ನಿರ್ಮಾಣ ಆಗಿದೆ.

ರಾಹುಲ್‌ ಗಾಂಧಿ ಪ್ರವೇಶವು ಈ ಲೋಕಸಭಾ ಚುನಾವಣೆ ಮಾತ್ರವಲ್ಲ 2021ರಲ್ಲಿ ನಡೆಯಲಿರುವ ಕೇರಳ ವಿಧಾನಸಭಾ ಚುನಾವಣೆಯ ಮೇಲೂ ಪರಿಣಾಮ ಉಂಟುಮಾಡಲಿದೆ ಎಂದು ವಿಶ್ಲೇಷಕರು ಹೇಳುತ್ತಾರೆ.

‘ರಾಹುಲ್‌ ಪ್ರವೇಶವು ಕೇರಳ ರಾಜಕೀಯದಲ್ಲಿ ಕಾಂಗ್ರೆಸ್‌ನ ಹಿಡಿತವನ್ನು ಗಟ್ಟಿಗೊಳಿಸಲಿದೆ. ಕೇಂದ್ರದಲ್ಲಿ ಕಾಂಗ್ರೆಸ್‌ ಸರ್ಕಾರ ಬಾರದಿದ್ದರೂ, ರಾಜ್ಯದಲ್ಲಿ ಸರ್ಕಾರ ರಚಿಸುವ ನಿಟ್ಟಿನಲ್ಲಿ ಈ ನಿರ್ಧಾರ ಸಹಾಯಕವಾಗಲಿದೆ’ ಎಂದು ಜೋಸ್‌ಕುಟ್ಟಿ ಹೇಳುತ್ತಾರೆ.

**

‘ದಕ್ಷಿಣ ಭಾರತದ ಜನರ ಜೊತೆಗೆ ನಾವು ಇದ್ದೇವೆ’ ಎಂದು ತಿಳಿಸಲು ವಯನಾಡ್‌ನಿಂದ ಸ್ಪರ್ಧಿಸುತ್ತಿದ್ದೇನೆ. ಮೋದಿ ತಮ್ಮನ್ನು ನಿರ್ಲಕ್ಷಿಸಿದ್ದಾರೆ ಎಂಬ ಭಾವನೆ ಈ ಭಾಗದ ಜನರಲ್ಲಿದೆ.

- ರಾಹುಲ್‌ ಗಾಂಧಿ, ಕಾಂಗ್ರೆಸ್‌ ಅಧ್ಯಕ್ಷ

 

ಬರಹ ಇಷ್ಟವಾಯಿತೆ?

 • 12

  Happy
 • 3

  Amused
 • 1

  Sad
 • 0

  Frustrated
 • 1

  Angry

Comments:

0 comments

Write the first review for this !