‘ಗ್ರಾಮಾಫೋನ್‌’ ಗೇಲಿಗೆ ರಾಹುಲ್‌ ಮರುಗೇಲಿ

7

‘ಗ್ರಾಮಾಫೋನ್‌’ ಗೇಲಿಗೆ ರಾಹುಲ್‌ ಮರುಗೇಲಿ

Published:
Updated:

ನವದೆಹಲಿ: ಒಂದೆಡೆ ಸಿಲುಕಿಕೊಂಡು ಹಾಡಿದ್ದನ್ನೇ ಹಾಡುವ ಗ್ರಾಮಾಫೋನ್‌ಗೆ ತಮ್ಮನ್ನು ಹೋಲಿಸಿದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ತಿರುಗೇಟು ನೀಡಿದ್ದಾರೆ. ತಮ್ಮ ಭಾಷಣಗಳಲ್ಲಿ ಮೋದಿ ಅವರು ಮತ್ತೆ ಮತ್ತೆ ನೆಹರೂ–ಗಾಂಧಿ ಕುಟುಂಬವನ್ನು ಪ್ರಸ್ತಾಪಿಸಿರುವ ವಿಡಿಯೊವನ್ನು ರಾಹುಲ್‌ ಪ್ರಕಟಿಸಿದ್ದಾರೆ.

ರಾಹುಲ್‌ ಅವರು ಒಂದೆಡೆ ಸಿಲುಕಿಕೊಂಡ ಗ್ರಾಮಾಫೋನ್‌ನಂತೆ ಹೇಳಿದ್ದನ್ನೇ ಹೇಳುತ್ತಾರೆ. ಅವರ ಹುಡುಗಾಟಿಕೆಯ ಹೇಳಿಕೆಗಳು ಮತ್ತು ಸರ್ಕಾರದ ವಿರುದ್ಧದ ಸುಳ್ಳುಗಳನ್ನು ಜನರು ಒಪ್ಪುವುದಿಲ್ಲ, ಗೇಲಿ ಮಾಡುತ್ತಾರೆ ಎಂದು ಬಿಜೆಪಿ ಮುಖಂಡರ ಜತೆ ಅಕ್ಟೋಬರ್‌ನಲ್ಲಿ ನಡೆಸಿದ ವಿಡಿಯೊ ಸಂವಾದದಲ್ಲಿ ಮೋದಿ ಹೇಳಿದ್ದರು.

ತಮ್ಮ ಕುಟುಂಬವನ್ನು ಪದೇ ಪದೇ ಪ್ರಸ್ತಾಪಿಸಿದ ಮೋದಿ ಅವರ ಭಾಷಣಗಳ ವಿಡಿಯೊವನ್ನು ಟ್ವಿಟರ್‌ನಲ್ಲಿ ರಾಹುಲ್‌ ಪ್ರಕಟಿಸಿದ್ದಾರೆ. ‘ಈ ಮನರಂಜನೆ ವಿಡಿಯೊವನ್ನು ಪ್ರಸ್ತುತಪಡಿಸಿದವರು ಶ್ರೀಮಾನ್‌ 36! ಇದನ್ನು ನೋಡಿ ಆನಂದಪಡುವಿರಿ ಎಂಬ ವಿಶ್ವಾಸವಿದೆ. ನಿಮ್ಮ ಕುಟುಂಬದ ಸದಸ್ಯರು ಮತ್ತು ಗೆಳೆಯರ ಜತೆಗೂ ಹಂಚಿಕೊಳ್ಳಿ. ಅವರೂ ಖುಷಿಪಡಲಿ’ ಎಂದು ಟ್ವೀಟ್‌ ಮಾಡಿದ್ದಾರೆ. 

‘ಹಿಂದೆಲ್ಲ ಗ್ರಾಮಾಫೋನ್‌ ರೆಕಾರ್ಡ್‌ಗಳಿದ್ದವು. ಕೆಲವೊಮ್ಮೆ ಅವು ಒಂದೆಡೆ ಸಿಲುಕಿಕೊಂಡು ಹೇಳಿದ್ದನ್ನೇ ಹೇಳುತ್ತಿದ್ದವು. ಕೆಲವು ಜನರು ಅದನ್ನು ಇಷ್ಟಪಡುವವರು ಇದ್ದಾರೆ. ಮನಸ್ಸಿನಲ್ಲಿ ಒಂದು ವಿಷಯ ಬಂದು ಕುಳಿತರೆ ಅವರು ಅದನ್ನೇ ಹೇಳುತ್ತಿರುತ್ತಾರೆ’ ಎಂದು ಮೋದಿ ಹೇಳಿದ್ದರು. 

ಈಗ ರಾಹುಲ್‌ ಪ್ರಕಟಿಸಿರುವ ವಿಡಿಯೊದಲ್ಲಿ ಮೋದಿ ಅವರ ಹಲವು ಭಾಷಣಗಳ ತುಣುಕುಗಳಿವೆ. ಈ ಭಾಷಣಗಳಲ್ಲಿ ಮೋದಿ ಅವರು ಜವಾಹರಲಾಲ್‌ ನೆಹರೂ, ಇಂದಿರಾ ಗಾಂಧಿ, ರಾಜೀವ್‌ ಗಾಂಧಿ, ಸೋನಿಯಾ ಗಾಂಧಿ ಮತ್ತು ರಾಹುಲ್‌ ಗಾಂಧಿ ಅವರನ್ನು ಮತ್ತೆ ಮತ್ತೆ ಉಲ್ಲೇಖಿಸಿದ್ದಾರೆ. 

ಬರಹ ಇಷ್ಟವಾಯಿತೆ?

 • 32

  Happy
 • 3

  Amused
 • 0

  Sad
 • 0

  Frustrated
 • 4

  Angry

Comments:

0 comments

Write the first review for this !