ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಯನಾಡ್‌ನಲ್ಲಿ ರಾಹುಲ್‌ಗೆ ಭವ್ಯ ಸ್ವಾಗತ

ನೀವು ನಮಗೆ ಬೇಕು, ನಾವು ನಿಮ್ಮ ಜೊತೆಗಿದ್ದೇವೆ– ಜನರ ಭರವಸೆ
Last Updated 7 ಜೂನ್ 2019, 20:00 IST
ಅಕ್ಷರ ಗಾತ್ರ

ತಿರುವನಂತಪುರ: ಲೋಕಸಭೆ ಚುನಾವಣೆಯ ಬಳಿಕ ಮೊದಲ ಬಾರಿಗೆ ತಮ್ಮ ಕ್ಷೇತ್ರ ವಯನಾಡ್‌ಗೆ ಭೇಟಿನೀಡಿದ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ, ಮಳೆಯನ್ನೂ ಲೆಕ್ಕಿಸದೆ ಕಾಳಿಕ್ಕಾವ್‌ ಪಟ್ಟಣದಲ್ಲಿ ಶುಕ್ರವಾರ ರೋಡ್‌ ಶೋ ನಡೆಸಿದರು.

ಮೂರು ದಿನಗಳ ಪ್ರವಾಸಕ್ಕಾಗಿ ವಯನಾಡ್‌ಗೆ ಬಂದಿರುವ ರಾಹುಲ್‌, ತೆರೆದ ವಾಹನದಲ್ಲಿ ನಿಂತು ಕಾಳಿಕ್ಕಾವ್‌ನ ರಸ್ತೆಗಳಲ್ಲಿ ಸಂಚರಿಸಿದರು. ಮಹಿಳೆಯರು ಮಕ್ಕಳು ಸೇರಿದಂತೆ ರಸ್ತೆಯ ಇಕ್ಕೆಲದಲ್ಲಿ ಸೇರಿದ್ದ ಸಾವಿರಾರು ಜನರತ್ತ ಕೈಬೀಸಿ ಕೃತಜ್ಞತೆಗಳನ್ನು ಹೇಳಿದರು.

ಕಾಳಿಕ್ಕಾವ್‌ನಲ್ಲಿ ಶುಕ್ರವಾರ ಸಂಜೆ ಮಳೆಯಾಗಿದ್ದರೂ ರಾಹುಲ್‌ ಅವರನ್ನು ನೋಡಲು ಬಂದ ಜನರ ಸಂಖ್ಯೆ ಕಡಿಮೆ ಇರಲಿಲ್ಲ. ರಸ್ತೆಯಮೇಲೆ ನೀರು ಹರಿಯುತ್ತಿದ್ದುದನ್ನೂ ಲೆಕ್ಕಿಸದೆ ಪಕ್ಷದ ಕಾರ್ಯಕರ್ತರು, ‘ನೀವು ನಮಗೆ ಬೇಕು, ನಾವು ನಿಮ್ಮ ಜೊತೆಗಿದ್ದೇವೆ’ ಎಂಬ ಘೋಷಣೆ ಕೂಗುತ್ತಾ ಮೆರವಣಿಗೆಯ ಜೊತೆ ಸಾಗಿದರು. ಕಾಂಗ್ರೆಸ್‌ ಪಕ್ಷದ ಧ್ವಜಗಳ ಜೊತೆಗೆ ಅದರ ಮಿತ್ರಪಕ್ಷವಾದ ಇಂಡಿಯನ್‌ ಯೂನಿಯನ್‌ ಮುಸ್ಲಿಂ ಲೀಗ್‌ನ (ಐಯುಎಂಎಲ್‌) ಹಸಿರು ಧ್ವಜಗಳೂ ಮೆರವಣಿಗೆಯಲ್ಲಿ ಕಾಣಿಸಿದವು.

ಕಾಂಗ್ರೆಸ್‌ ನಾಯಕರಾದ ಮುಲ್ಲಪ್ಪಳ್ಳಿ ರಾಮಚಂದ್ರನ್‌, ವಿಧಾನಸಭೆಯಲ್ಲಿ ವಿರೋಧಪಕ್ಷದ ನಾಯಕ ರಮೇಶ್‌ ಚನ್ನಿತಲ, ಶಾಸಕ ಎ.ಪಿ. ಅನಿಲ್‌ಕುಮಾರ್‌ ಮತ್ತಿತರರು ಜೊತೆಗಿದ್ದರು.

ಕ್ಷೇತ್ರದ ಜನರನ್ನುದ್ದೇಶಿಸಿ ಮಾತನಾಡಿದ ರಾಹುಲ್, ‘ನಾನು ನಿಮ್ಮ ಜೊತೆಗಿದ್ದು ವಯನಾಡ್‌ ಕ್ಷೇತ್ರದ ಅಭಿವೃದ್ಧಿಗಾಗಿ ಕೆಲಸ ಮಾಡುತ್ತೇನೆ, ಸಂಸತ್ತಿನ ಒಳಗೆ ಮತ್ತು ಹೊರಗೆ ಈ ಕ್ಷೇತ್ರಕ್ಕಾಗಿ ಧ್ವನಿ ಎತ್ತುವೆ. ನನ್ನ ಬಗ್ಗೆ ತೋರಿದ ಪ್ರೀತಿ ಮತ್ತು ಕಾಳಜಿಗಾಗಿ ಧನ್ಯವಾದಗಳು’ ಎಂದರು.

‘ನಾನು ಕಾಂಗ್ರೆಸ್‌ ಪಕ್ಷದವನಾಗಿದ್ದರೂ, ಎಲ್ಲಾ ವರ್ಗದ ಜನರ ಅಭಿವೃದ್ಧಿಗಾಗಿ ಪಕ್ಷ ಮೀರಿ ಕೆಲಸ ಮಾಡುವೆ. ಸಂಸತ್ತಿನಲ್ಲಿ ವಯನಾಡ್‌ ಅಷ್ಟೇ ಅಲ್ಲ ಇಡೀ ರಾಜ್ಯದ ಪ್ರತಿನಿಧಿಯಾಗಿ ಕೆಲಸ ಮಾಡುತ್ತೇನೆ’ ಎಂದರು.

ವಯನಾಡ್‌ ಕ್ಷೇತ್ರದ ವಿವಿಧೆಡೆ ರಾಹುಲ್‌ ಅವರನ್ನು ಸನ್ಮಾನಿಸುವ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿದ್ದು, ಮುಂದಿನ ಎರಡು ದಿನಗಳಲ್ಲಿ ಅವರು ಕನಿಷ್ಠ 15 ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲಿದ್ದಾರೆ.

‘ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಹೆಚ್ಚಿನ ಹುಮ್ಮಸ್ಸಿನಿಂದ ಕೆಲಸ ಮಾಡುವ ನಿಟ್ಟಿನಲ್ಲಿ ರಾಹುಲ್‌ ಭೇಟಿಯು ಕಾರ್ಯಕರ್ತರಲ್ಲಿ ಹೊಸ ನೈತಿಕ ಸ್ಥೈರ್ಯವನ್ನು ತುಂಬಿದೆ’ ಎಂದು ಪಕ್ಷದ ಹಿರಿಯ ಮುಖಂಡರೊಬ್ಬರು ಪ್ರತಿಕ್ರಿಯೆ ನೀಡಿದ್ದಾರೆ.

ಕಾಳಿಕ್ಕಾವ್‌ ನಕ್ಸಲ್‌ ಪೀಡಿತ ಪ್ರದೇಶವಾಗಿರುವುದರಿಂದ ನಗರದಲ್ಲಿ ಬಿಗಿ ಭದ್ರತಾ ವ್ಯವಸ್ಥೆ ಮಾಡಲಾಗಿತ್ತು.

ಭಿನ್ನಮತ ಶಮನಗೊಳಿಸಿ: ವೀರಪ್ಪ ಮೊಯಿಲಿ

ಹೈದರಾಬಾದ್: ‘ಕೆಲ ರಾಜ್ಯಗಳ‌ಲ್ಲಿ ಕಾಂಗ್ರೆಸ್‌ ಪಕ್ಷದಲ್ಲಿ ಕಂಡುಬಂದಿರುವ ಭಿನ್ನಮತವನ್ನು ಶಮನಗೊಳಿಸುವ ನಿಟ್ಟಿನಲ್ಲಿ ಕಾರ್ಯತತ್ಪರರಾಗಬೇಕು’ ಎಂದು ರಾಹುಲ್ ಗಾಂಧಿ ಅವರಿಗೆ ಕಾಂಗ್ರೆಸ್‌ ಮುಖಂಡ ವೀರಪ್ಪ ಮೊಯಿಲಿ ಮನವಿ ಮಾಡಿದ್ದಾರೆ.

‘ಅಧ್ಯಕ್ಷ ಸ್ಥಾನಕ್ಕೆ ಪರ್ಯಾಯ ಸೂಚಿಸದೇ ರಾಜೀನಾಮೆ ನೀಡಬಾರದು. ನಮಗೆಲ್ಲರಿಗೂ ಪಕ್ಷದ ಬಗ್ಗೆ ಕಾಳಜಿ ಇದೆ’ ಎಂದು ಮೊಯಿಲಿ ಹೇಳಿದ್ದಾರೆ. ಪಂಜಾಬ್‌, ರಾಜಸ್ಥಾನ, ತೆಲಂಗಾಣ ಮತ್ತು ಮಹಾರಾಷ್ಟ್ರದ ಕಾಂಗ್ರೆಸ್‌ ಘಟಕಗಳಲ್ಲಿ ಉದ್ಭವಿಸಿರುವ ಭಿನ್ನಮತದ ಹಿನ್ನೆಲೆಯಲ್ಲಿ ಈ ಮನವಿ ಮಾಡಿದರು.

‘ನಾಯಕತ್ವ ದುರ್ಬಲವಾದಾಗ ಇಂಥ ಬೆಳವಣಿಗೆಗಳು ನಡೆಯುತ್ತವೆ. ರಾಹುಲ್‌ ಗಾಂಧಿ ಅವರು ರಾಜೀನಾಮೆ ನೀಡಲು ಬಯಸಿದರೂ ಅದಕ್ಕೆ ಇದು ಸಕಾಲವಲ್ಲ. ಪರಿಸ್ಥಿತಿಯನ್ನು ನಿಭಾಯಿಸಲು ಪರ್ಯಾಯ ನಾಯಕತ್ವ ಸೂಚಿಸದೇ ಅವರು ಸ್ಥಾನದಿಂದ ನಿರ್ಗಮಿಸುವುದು ಸರಿಯಲ್ಲ ಎಂಬುದು ನನ್ನ ಅಭಿಪ್ರಾಯ. ಕೂಡಲೇ ಅವರು ರಾಜೀನಾಮೆ ಹಿಂಪಡೆಯಬೇಕು. ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತೆಗೆದುಕೊಳ್ಳಬೇಕು. ಪಕ್ಷದಲ್ಲಿ ಶಿಸ್ತು ಮೂಡಿಸಲು ಹಾಗೂ ಆತ್ಮವಿಶ್ವಾಸವನ್ನು ಬೆಳೆಸಲು ಒತ್ತು ನೀಡಬೇಕು’ ಎಂದು ಮೊಯಿಲಿ ಹೇಳಿದರು.

‘ಸೋಲಿಗೆ ಕಾರಣ ಏನೇ ಇರಬಹುದು. ಅವುಗಳನ್ನು ಎದುರಿಸಿ ಪಕ್ಷವನ್ನು ಗಟ್ಟಿಗೊಳಿಸಲು ಒಟ್ಟಾಗಿರುವುದು ಮುಖ್ಯ. ಎಲ್ಲ ಮುಖಂಡರ ಸಭೆಯನ್ನು ಕರೆದು ಚರ್ಚಿಸಬೇಕು. ಇಂಥವೇ ಸಭೆಗಳು ರಾಜ್ಯ ಮಟ್ಟದಲ್ಲಿಯೂ ನಡೆಯಬೇಕು’ ಎಂದು ಅವರು ಸಲಹೆ ನೀಡಿದರು.
ಎರಡನೇ ಅವಧಿಗೆ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಮೊದಲ ಬಾರಿ ಕೇರಳಕ್ಕೆ ಭೇಟಿ ನೀಡುತ್ತಿರುವ ಮೋದಿ ಅವರು ತುಲಾಭಾರ ಸೇವೆಯ ನಂತರ ತ್ರಿಶ್ಶೂರ್‌ನಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಲಿದ್ದಾರೆ. ಶಬರಿಮಲೆ ದೇವಸ್ಥಾನಕ್ಕೆ ಎಲ್ಲ ವಯೋಮಾನದ ಮಹಿಳೆಯರಿಗೆ ಪ್ರವೇಶ ಕಲ್ಪಿಸುವ ವಿಚಾರವಾಗಿ ಮೋದಿ ಕೆಲವು ಘೋಷಣೆಗಳನ್ನು ಮಾಡುವ ಸಾಧ್ಯತೆ ಇದೆ ಎನ್ನಲಾಗಿದೆ.

ತೆಲಂಗಾಣದಲ್ಲಿ ಪ್ರತಿಭಟನೆ

ಕಾಂಗ್ರೆಸ್‌ನ 12 ಶಾಸಕರ ಪಕ್ಷಾಂತರ ನಡೆಯನ್ನು ಖಂಡಿಸಿ ಪಕ್ಷದ ಕಾರ್ಯಕರ್ತರು ಶುಕ್ರವಾರ ಬೀದಿಗಿಳಿದು ಪ್ರತಿಭಟಿಸಿದರು. ತೆಲಂಗಾಣ ರಾಜ್ಯದ ವಿವಿಧೆಡೆ ಕಾರ್ಯಕರ್ತರು ಶಾಸಕರ ನಿಲುವಿಗೆ ಆಕ್ರೋಶ ವ್ಯಕ್ತಪಡಿಸಿದರು.

ವರಂಗಲ್‌, ಕರೀಂನಗರ ಸೇರಿ ವಿವಿಧೆಡೆ ಪ್ರತಿಭಟನೆ ನಡೆಯಿತು. ಪಕ್ಷಾಂತರ ಕಾರ್ಯಕ್ಕೆ ಉತ್ತೇಜನ ನೀಡುತ್ತಿದ್ದಾರೆ ಎಂದು ಮುಖ್ಯಮಂತ್ರಿ ಕೆ. ಚಂದ್ರಶೇಖರ ರಾವ್ ವಿರುದ್ಧವೂ ಆಕ್ರೋಶ ವ್ಯಕ್ತಪಡಿಸಿದರು. ಉಸ್ಮಾನಿಯಾ ವಿಶ್ವವಿದ್ಯಾಲಯ ವಿದ್ಯಾರ್ಥಿಗಳ ಸಮೂಹವೊಂದು ಪಕ್ಷಾಂತರಕ್ಕೆ ಮುಂದಾಗಿರುವ ಶಾಸಕರ ಅಣಕು ಶವಯಾತ್ರೆಯನ್ನು ನಡೆಸಿದೆ ಎಂದು ಕಾಂಗ್ರೆಸ್‌ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT