ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಯನಾಡ್‌ನಲ್ಲಿ ಸ್ಪರ್ಧೆಗೆ ಎಡಪಕ್ಷಗಳ ಆಕ್ಷೇಪ

Last Updated 31 ಮಾರ್ಚ್ 2019, 19:46 IST
ಅಕ್ಷರ ಗಾತ್ರ

ನವದೆಹಲಿ:ಕಾಂಗ್ರೆಸ್ ಬಿಜೆಪಿ ವಿರುದ್ಧ ಸ್ಪರ್ಧಿಸುತ್ತಿದೆಯೇ ಅಥವಾ ಎಡಪಕ್ಷಗಳ ವಿರುದ್ಧ ಸ್ಪರ್ಧಿಸುತ್ತಿದೆಯೇ ಎಂದು ಸಿಪಿಐ ರಾಷ್ಟ್ರೀಯ ಕಾರ್ಯದರ್ಶಿ ಡಿ.ರಾಜಾ ಅವರು ಪ್ರಶ್ನಿಸಿದ್ದಾರೆ.

ಕೇರಳದ ವಯನಾಡ್‌ನಿಂದ ರಾಹುಲ್‌ ಗಾಂಧಿ ಸ್ಪರ್ಧಿಸುವ ವಿಚಾರ ಬಹಿರಂಗವಾದ ನಂತರ ‘ಪ್ರಜಾವಾಣಿ’ಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಅವರು ಈ ಮಾತು ಹೇಳಿದ್ದಾರೆ. ಎಡಪಕ್ಷಗಳ ಉಳಿದ ನಾಯಕರೂ ಕಾಂಗ್ರೆಸ್‌ ಮುಂದೆ ಇದೇ ಪ್ರಶ್ನೆ ಇಟ್ಟಿದ್ದಾರೆ.

‘ಕೋಮುವಾದಿ ಬಿಜೆಪಿಯನ್ನು ಅಧಿಕಾರದಿಂದ ದೂರವಿಡಬೇಕು ಎಂಬುದು ವಿರೋಧಪಕ್ಷಗಳ ಏಕೈಕ ಗುರಿಯಾಗಿದೆ. ಆದರೆ ಕಾಂಗ್ರೆಸ್‌ ಏಕೆ ಹೀಗೆ ನಡೆದುಕೊಳ್ಳುತ್ತಿದೆ ಎಂಬುದೇ ಅರ್ಥವಾಗುತ್ತಿಲ್ಲ. ಕೇರಳದಲ್ಲಿ ಪೈಪೋಟಿ ಇರುವುದು ಎಡಪಕ್ಷಗಳ ಎಲ್‌ಡಿಎಫ್ ಮತ್ತು ಕಾಂಗ್ರೆಸ್‌ ನೇತೃತ್ವದ ಯುಡಿಎಫ್ ನಡುವೆ. ರಾಹುಲ್ ಗಾಂಧಿ ಕೇರಳದಿಂದ ಸ್ಪರ್ಧಿಸಿದರೆ ಅದು ಕಾಂಗ್ರೆಸ್ ಮತ್ತು ಎಡಪಕ್ಷಗಳ ನಡುವಣ ಸ್ಪರ್ಧೆಯಾಗುತ್ತದೆಯೇ ಹೊರತು, ಬಿಜೆಪಿ ವಿರುದ್ಧದ ಹೋರಾಟವಾಗುವುದಿಲ್ಲ’ ಎಂದು ಅವರು ವಿವರಿಸಿದ್ದಾರೆ.

‘ರಾಹುಲ್‌ ಗಾಂಧಿ ಅವರು ಎರಡನೇ ಕ್ಷೇತ್ರವಾಗಿ ವಯನಾಡ್‌ ಅನ್ನು ಆಯ್ಕೆಮಾಡಿಕೊಳ್ಳುವ ಮೂಲಕ ಕಾಂಗ್ರೆಸ್‌ ದೇಶಕ್ಕೆ ಯಾವ ಸಂದೇಶ ರಾವಾನಿಸುತ್ತಿದೆ? ಅವರ ಎದುರಾಳಿ ಯಾರು ಎಂದು ತೋರಿಸುತ್ತಿದೆ’ ಎಂದು ಪ್ರಶ್ನಿಸಿದ್ದಾರೆ.

‘ನಾವು (ಎಡಪಕ್ಷಗಳು) ಯಾರ ವಿರುದ್ಧ ಹೋರಾಡುತ್ತಿದ್ದೇವೆ ಎಂಬುದರ ಬಗ್ಗೆ ನಮಗೆ ಸ್ಪಷ್ಟತೆಯಿದೆ. ಆದರೆ ತಾವು ಯಾರ ವಿರುದ್ಧ ಹೋರಾಡುತ್ತಿದ್ದೇವೆ ಎಂಬುದರ ಬಗ್ಗೆ ಕಾಂಗ್ರೆಸ್‌ಗೆ ಸ್ಪಷ್ಟತೆ ಇರಬೇಕು. ಆ ಸ್ಪಷ್ಟತೆ ಇಲ್ಲದಿದ್ದರೆ ಅದು ಅವರ ಸಮಸ್ಯೆ. ಅದನ್ನು ಅವರು ಮೊದಲು ಬಗೆಹರಿಸಿಕೊಳ್ಳಲಿ’ ಎಂದು ಡಿ.ರಾಜಾ ಹೇಳಿದ್ದಾರೆ.

‘ಕೇರಳದ ನಾಯಕರಲ್ಲಿ ಯಾರಾದರೊಬ್ಬರು ಈ ಕ್ಷೇತ್ರದಿಂದ ಸ್ಪರ್ಧಿಸಬಹುದಿತ್ತು. ಆದರೆ ರಾಹುಲ್ ಸ್ಪರ್ಧಿಸುತ್ತಿರುವುದರಿಂದ ದೇಶಕ್ಕೆ ತಪ್ಪು ಸಂದೇಶ ರವಾನೆಯಾಗುತ್ತದೆ’ ಎಂದು ಅವರು ಹೇಳಿದ್ದಾರೆ.

ಗೆಲುವು ಸುಲಭವಲ್ಲ

* ಅರ್ಜುನ್ ರಘುನಾಥ್

ತಿರುವನಂತಪುರ: ವಯನಾಡ್‌ ಲೋಕಸಭಾ ಕ್ಷೇತ್ರ ರಚನೆಯಾದ ದಿನದಿಂದಲೂ (2009) ಇಲ್ಲಿ ಕಾಂಗ್ರೆಸ್‌ನದ್ದೇ ಪ್ರಾಬಲ್ಯ. ಕಾಂಗ್ರೆಸ್‌ಗೆ ಇಲ್ಲಿ ಪ್ರಬಲ ಪೈಪೋಟಿ ಕೊಡುತ್ತಿರುವುದು ಎಡಪಕ್ಷಗಳು ಮಾತ್ರ. ಬಿಜೆಪಿಯ ಅಸ್ತಿತ್ವ ನಗಣ್ಯ ಎನ್ನಬಹುದು.

2009 ಮತ್ತು 2014ರ ಲೋಕಸಭಾ ಚುನಾ ವಣೆಗಳಲ್ಲಿ ಕಾಂಗ್ರೆಸ್‌ನ ಎಂ.ಐ.ಶಾನವಾಜ್‌ ಜಯಗಳಿಸಿದ್ದರು. ಅವರು ಮೃತಪಟ್ಟ ಕಾರಣ ಕ್ಷೇತ್ರ ತೆರವಾಗಿತ್ತು. 2009ರಲ್ಲಿ ಅವರು 1.53 ಲಕ್ಷ ಮತಗಳ ಅಂತರದಿಂದ ಜಯಗಳಿಸಿದ್ದರು. ಆದರೆ 2014ರಲ್ಲಿ ಈ ಅಂತರ 20,870 ಮತಗಳಿಗೆ ಕುಸಿದಿತ್ತು. ಈ ಕ್ಷೇತ್ರದಲ್ಲಿ 7 ವಿಧಾನಸಭಾ ಕ್ಷೇತ್ರಗಳು ಬರುತ್ತವೆ. 2016ರ ಕೇರಳ ವಿಧಾನಸಭಾ ಚುನಾವಣೆಯಲ್ಲಿ ಈ ಏಳರಲ್ಲಿ ನಾಲ್ಕನ್ನು ಎಲ್‌ಡಿಎಫ್ ಗೆದ್ದುಕೊಂಡಿತ್ತು.

**
ಅಮೇಠಿಯಲ್ಲಿ ಕುಸಿದ ಅಂತರ

ಲಖನೌ ಅಮೇಠಿಯಲ್ಲಿ ರಾಹುಲ್ ಗಾಂಧಿಯ ಜನಪ್ರಿಯತೆ ಕುಸಿದಿದೆ. ಹೀಗಾಗಿಯೇ ಅಮೇಠಿ ಜತೆಗೆ ರಾಹುಲ್ ಅವರು ವಯನಾಡ್‌ ಅನ್ನೂ ಆಯ್ಕೆಮಾಡಿಕೊಂಡಿದ್ದಾರೆ ಎಂದು ಬಿಜೆಪಿ ಮೂಲಗಳು ಅಭಿಪ್ರಾಯಪಟ್ಟಿವೆ.

2009ರಲ್ಲಿ ರಾಹುಲ್ ಗಾಂಧಿ ಅವರು ಅಮೇಠಿಯಲ್ಲಿ 4.64 ಲಕ್ಷ ಮತಗಳನ್ನು ಪಡೆದಿದ್ದರು. ಒಟ್ಟು ಮತಗಳಲ್ಲಿ (6.46ಲಕ್ಷ) ಶೇ 70ಕ್ಕೂ ಹೆಚ್ಚು ಮತಗಳ ರಾಹುಲ್ ಗಾಂಧಿಗೆ ಬಿದ್ದಿದ್ದವು. ಆದರೆ 2014ರ ಚುನಾವಣೆಯಲ್ಲಿ ರಾಹುಲ್‌ ಪಡೆದ ಮತಗಳ ಸಂಖ್ಯೆ ಕುಸಿದಿತ್ತು. ಒಟ್ಟು 8.74 ಲಕ್ಷ ಮತಗಳಲ್ಲಿ ರಾಹುಲ್ ಗಾಂಧಿ 4.08 ಲಕ್ಷ ಮತಗಳನ್ನಷ್ಟೇ ಪಡೆದಿದ್ದರು. ಆದರೆ ರಾಹುಲ್ ವಿರುದ್ಧ ಸ್ಪರ್ಧಿಸಿದ್ದ ಬಿಜೆಪಿಯ ಸ್ಮೃತಿ ಇರಾನಿ 3 ಲಕ್ಷ ಮತಗಳನ್ನು ಪಡೆದಿದ್ದರು.

ಈ ಬಾರಿಯೂ ರಾಹುಲ್ ವಿರುದ್ಧ ಬಿಜೆಪಿಯಿಂದ ಸ್ಮೃತಿ ಇರಾನಿ ಕಣಕ್ಕೆ ಇಳಿದಿದ್ದಾರೆ.

**
* 1980ರಲ್ಲಿ ಇಂದಿರಾ ಗಾಂಧಿ ಅವರು ರಾಯ್‌ಬರೇಲಿ ಮತ್ತು ಅವಿಭಜಿತ ಆಂಧ್ರಪ್ರದೇಶದ ಮೆದಕ್‌ನಿಂದ ಸ್ಪರ್ಧಿಸಿದ್ದರು

* 1999ರಲ್ಲಿ ಸೋನಿಯಾ ಗಾಂಧಿ ಸಹ ರಾಯ್‌ಬರೇಲಿ ಮತ್ತು ಕರ್ನಾಟಕದ ಬಳ್ಳಾರಿಯಿಂದ ಸ್ಪರ್ಧಿಸಿದ್ದರು

* 2104ರಲ್ಲಿ ನರೇಂದ್ರ ಮೋದಿ ಅವರು ಗುಜರಾತ್‌ನ ವಡೋದರಾ ಮತ್ತು ವಾರಾಣಸಿಯಿಂದ ಸ್ಪರ್ಧಿಸಿದ್ದರು.
**

ರಾಹುಲ್ ಗಾಂಧಿಯನ್ನು ಅಮೇಠಿಯೇ ತಿರಸ್ಕರಿಸಿದೆ. ಬೇರೆ ಕ್ಷೇತ್ರಗಳಲ್ಲಿ ಸ್ಪರ್ಧಿಸುವಂತೆ ಒತ್ತಾಯ ಬಂದಾಗಲೇ ಇದು ಬಹಿರಂಗವಾಗಿತ್ತು. ಈಗ ರಾಹುಲ್ ಕೇರಳಕ್ಕೆ ಓಡಿಯಾಗಿದೆ
- ಸ್ಮೃತಿ ಇರಾನಿ, ಕೇಂದ್ರ ಸಚಿವೆ, ಅಮೇಠಿಯಲ್ಲಿ ಬಿಜೆಪಿ ಅಭ್ಯರ್ಥಿ
**

2014ರಲ್ಲಿ ಮೋದಿ ಗುಜರಾತ್‌ನ ವಡೋದರಾ ಜತೆಗೆ ವಾರಾಣಸಿಯಿಂದ ಸ್ಪರ್ಧಿಸಿದ್ದರು. ಮೋದಿ ಎರಡು ಕಡೆ ಏಕೆ ಸ್ಪರ್ಧಿಸುತ್ತಿದ್ದಾರೆ ಎಂದು ಆಗಲೂ ಬಿಜೆಪಿ ಕೇಳಬಹುದಿತ್ತಲ್ಲ
- ರಣದೀಪ್ ಸಿಂಗ್ ಸುರ್ಜೇವಾಲಾ, ಕಾಂಗ್ರೆಸ್ ವಕ್ತಾರ

**
ಕಾಂಗ್ರೆಸ್‌ನ ಈ ನಡೆಯನ್ನು ನಾವು ಖಂಡಿಸುತ್ತೇವೆ. ವಯನಾಡ್‌ನಲ್ಲಿ ನಮ್ಮ ಅಭ್ಯರ್ಥಿಯನ್ನು ಹಿಂಪಡೆಯುವುದಿಲ್ಲ. ರಾಹುಲ್ ಗಾಂಧಿಯನ್ನು ಸೋಲಿಸಲು ದುಡಿಯುತ್ತೇವೆ
- ಪ್ರಕಾಶ್ ಕಾರಟ್, ಸಿಪಿಎಂ ಪಾಲಿಟ್ ಬ್ಯೂರೊ ಸದಸ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT