ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಹುಲ್‌ ಜನ್ಮದಿನ| ಶುಭಕೋರಿದ ಪ್ರಧಾನಿ ಮೋದಿ

Last Updated 19 ಜೂನ್ 2019, 18:36 IST
ಅಕ್ಷರ ಗಾತ್ರ

ನವದೆಹಲಿ: ‘ರಾಹುಲ್‌ ಅವರ ಜನ್ಮದಿನವೇ? ಅದು ಇಂದೋ ಅಥವಾ ನಾಳೆಯೋ?...’. ಆರ್‌ಪಿಐ ಸಂಸದ ರಾಮದಾಸ್‌ ಅಠವಳೆ ಅವರಾಡಿದ ಈ ಮಾತು ಇಡೀ ಸದನವನ್ನು ನಗೆಗಡಲಲ್ಲಿ ತೇಲಿಸಿತು. ಸ್ವತಃ ರಾಹುಲ್‌ಗಾಂಧಿ ಸಹ ನಸುನಕ್ಕರು.

ನೂತನ ಸ್ಪೀಕರ್‌ ಆಗಿ ಆಯ್ಕೆಯಾದ ಓಂ ಬಿರ್ಲಾ ಅವರನ್ನು ಅಭಿನಂದಿಸಲು ಎದ್ದು ನಿಂತ ಅಠವಳೆ, ತಮ್ಮ ಮಾತಿನ ನಡುವೆ ರಾಹುಲ್‌ ಗಾಂಧಿ ಅವರ ಜನ್ಮದಿನವನ್ನೂ ಪ್ರಸ್ತಾಪಿಸಿ ಮೇಲಿನಂತೆ ಹೇಳಿದರು. ರಾಹುಲ್‌ ಅವರು ತಲೆ ಅಲ್ಲಾಡಿಸುವ ಮೂಲಕ ‘ಇಂದೇ ನನ್ನ ಜನ್ಮದಿನ’ ಎಂಬ ಸಂಜ್ಞೆ ನೀಡಿದರು.

‘ಇರಲಿ. ರಾಹುಲ್‌ ನನ್ನ ಆತ್ಮೀಯ ಸ್ನೇಹಿತ. ಮತ್ತೆ ಈ ಸದನದಲ್ಲಿ ಕುಳಿತುಕೊಳ್ಳುವ ಅವಕಾಶ ಅವರಿಗೆ ಲಭಿಸಿದ್ದಕ್ಕೆ ಅಭಿನಂದಿಸುವೆ’ ಎಂದರು.

‘ನೀವು ತುಂಬಾನೇ ಕಷ್ಟಪಟ್ಟಿರಿ. ಆದರೆ, ಪ್ರಜಾಪ್ರಭುತ್ವದಲ್ಲಿ ಹೀಗೇ ಆಗುತ್ತದೆ ಎಂದು ಹೇಳಲು ಆಗುವುದಿಲ್ಲ. ನೀವು ಅಧಿಕಾರದಲ್ಲಿದ್ದಾಗ ನಾನು ನಿಮ್ಮ ಜೊತೆ ಇದ್ದೆ. ಈಗ ಮೋದಿ ಅವರೊಂದಿಗೆ ಇದ್ದೇನೆ. ಲೋಕಸಭಾ ಚುನಾವಣೆಗೂ ಮುನ್ನ ನನ್ನ ಜೊತೆ ಮಾತನಾಡಿದ ಕಾಂಗ್ರೆಸ್‌ ನಾಯಕರೊಬ್ಬರು, ಬಿಜೆಪಿ ಬಿಟ್ಟು ನಮ್ಮ ಜೊತೆ ಬನ್ನಿ ಎಂದರು. ಈ ಬಾರಿ ಮೋದಿ ಅಲೆ ಇರುವಾಗ ನಾನು ಅಲ್ಲಿ (ಕಾಂಗ್ರೆಸ್‌ನಲ್ಲಿ) ಏನು ಮಾಡಲಿ ಎಂದು ಉತ್ತರಿಸಿದೆ’ ಎಂದು ಅಠವಳೆ ಹೇಳಿದಾಗ ಇಡೀ ಸದನದಲ್ಲಿ ಮತ್ತೆ ನಗು ತುಂಬಿತ್ತು. ಬಹುತೇಕ ಸಂಸದರು ಮೇಜು ಕುಟ್ಟಿ ಬೆಂಬಲ ಸೂಚಿಸಿದರು.

ಮೋದಿ ಶುಭಾಶಯ
ಬುಧವಾರ 49ನೇ ಹುಟ್ಟುಹಬ್ಬ ಆಚರಿಸಿಕೊಂಡ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಅವರಿಗೆ ಸದೃಢ ಆರೋಗ್ಯ ಹೊಂದಿ ದೀರ್ಘಾಯುಷಿ ಆಗುವಂತೆ ಪ್ರಧಾನಿ ನರೇಂದ್ರ ಮೋದಿ ಟ್ವೀಟ್‌ ಮೂಲಕ ಶುಭಾಶಯ ಹೇಳಿದ್ದಾರೆ.

‘ನರೇಂದ್ರ ಮೋದಿಜಿ ನಿಮ್ಮ ಶುಭಾಶಯಕ್ಕೆ ಕೃತಜ್ಞತೆಗಳು. ಇದು ನನಗೆ ಮೆಚ್ಚುಗೆ ಆಗಿದೆ’ ಎಂದು ರಾಹುಲ್‌ ಟ್ವೀಟ್‌ ಮಾಡಿದ್ದಾರೆ.

ಇಲ್ಲಿನ ಅಕ್ಬರ್‌ ರಸ್ತೆಯಲ್ಲಿರುವ ಪಕ್ಷದ ಕೇಂದ್ರ ಕಚೇರಿಯಲ್ಲಿ ರಾಹುಲ್‌ ಅವರಿಗೆ ಕಾಂಗ್ರೆಸ್‌ ನಾಯಕರು, ಕಾರ್ಯಕರ್ತರು ಶುಭಾಶಯ ಕೋರಿದರು.

‘ಬಿಹಾರದಲ್ಲಿ 100ಕ್ಕೂ ಹೆಚ್ಚು ಮಕ್ಕಳ ಸಾವು ಸಂಭವಿಸಿದ್ದರಿಂದ ಜನ್ಮದಿನವನ್ನು ಸರಳವಾಗಿ ಆಚರಿಸಲಾಯಿತು’ ಎಂದು ಪಕ್ಷದ ಮುಖಂಡರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT