ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಪಚುನಾವಣೆ: ಮತಯಂತ್ರ ಕಾರ್ಯವೈಖರಿಗೆ ಮತ್ತೆ ಅಪಸ್ವರ!

Last Updated 28 ಮೇ 2018, 19:30 IST
ಅಕ್ಷರ ಗಾತ್ರ

‌ನವದೆಹಲಿ: ಲೋಕಸಭೆಯ ನಾಲ್ಕು ಮತ್ತು ವಿಧಾನಸಭೆಯ ಒಂಬತ್ತು ಕ್ಷೇತ್ರಗಳಿಗೆ ಸೋಮವಾರ ನಡೆದ ಉಪ ಚುನಾವಣೆ ವೇಳೆ ಮತ್ತೆ ಮತಯಂತ್ರಗಳ ಕುರಿತು ಭಾರಿ ಅಪಸ್ವರ ಕೇಳಿಬಂದಿದೆ.

ಮತಯಂತ್ರ ಮತ್ತು ವಿವಿಪ್ಯಾಟ್‌ ಯಂತ್ರಗಳ ಕಾರ್ಯವೈಖರಿಯ ಬಗ್ಗೆ ವಿರೋಧ ಪಕ್ಷಗಳು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು, ಚುನಾವಣಾ ಆಯೋಗದ ಮೊರೆ ಹೋಗಿವೆ.

ಇದನ್ನು ಹೊರತುಪಡಿಸಿದರೆ ಮತದಾನ ಬಹುತೇಕ ಶಾಂತಿಯುತವಾಗಿತ್ತು. ಕನಿಷ್ಠ ಶೇ 40 ರಿಂದ ಗರಿಷ್ಠ ಶೇ 90ರವರೆಗೆ ಮತದಾನವಾದ ಬಗ್ಗೆ ವರದಿಯಾಗಿದೆ.

ಉತ್ತರ ಪ್ರದೇಶದ ಕೈರಾನಾ, ಮಹಾರಾಷ್ಟ್ರದ ಪಾಲ್ಘರ್‌ ಮತ್ತು ಭಂಡಾರಾ –ಗೋಂದಿಯಾ ಲೋಕಸಭಾ ಕ್ಷೇತ್ರಗಳಲ್ಲಿ ಮತಯಂತ್ರ ಮತ್ತು ವಿವಿಪ್ಯಾಟ್‌ ಬಗ್ಗೆ ವ್ಯಾಪಕ ದೂರುಗಳು ಕೇಳಿ ಬಂದಿವೆ.

ಮತಯಂತ್ರಗಳ ಬಗ್ಗೆ ವಿರೋಧ ಪಕ್ಷಗಳು ಮಾಡಿರುವ ಆರೋಪಗಳನ್ನು ಚುನಾವಣಾ ಆಯೋಗ ‘ಉತ್ಪ್ರೇಕ್ಷಿತ’ ಎಂದು ತಳ್ಳಿ ಹಾಕಿದೆ.

ದೋಷಪೂರಿತ ಮತಯಂತ್ರ ಮತ್ತು ವಿವಿಪ್ಯಾಟ್‌ ಯಂತ್ರ ಬದಲಿಸುವುದು ಸಹಜ ಪ್ರಕ್ರಿಯೆ. ಇದನ್ನು ಮುಂದಿಟ್ಟುಕೊಂಡು ಇಡೀ ಚುನಾವಣಾ ಪ್ರಕ್ರಿಯೆಯನ್ನು ಸಂದೇಹದ ದೃಷ್ಟಿಯಿಂದ ನೋಡಲು ಆಗದು ಎಂದು ಆಯೋಗ ಪ್ರತಿಕ್ರಿಯಿಸಿದೆ.

ಕೈರಾನಾ ಕ್ಷೇತ್ರದ ವಿರೋಧ ಪಕ್ಷಗಳ ಒಮ್ಮತದ ಅಭ್ಯರ್ಥಿ ತಬಸ್ಸುಮ್‌ ಹಸನ್‌ ಅವರು 150 ಮತಯಂತ್ರಗಳ ಬಗ್ಗೆ ಸಂಶಯ ವ್ಯಕ್ತಪಡಿಸಿ ಆಯೋಗಕ್ಕೆ ದೂರು ನೀಡಿದ್ದಾರೆ. ಶೇ 25ರಷ್ಟು ಮತಯಂತ್ರಗಳ ಕಾರ್ಯವೈಖರಿ ಬಗ್ಗೆ ಎನ್‌ಸಿಪಿ ಕೂಡ ಸಂದೇಹ ವ್ಯಕ್ತಪಡಿಸಿದೆ.

2019ರ ಲೋಕಸಭಾ ಮತ್ತು ಹಲವು ರಾಜ್ಯಗಳ ವಿಧಾನಸಭಾ ಚುನಾವಣೆಗೂ ಮುನ್ನ ನಡೆದ ಈ ಉಪ ಚುನಾವಣೆಗಳನ್ನು ಕಾಂಗ್ರೆಸ್‌ ಮತ್ತು ಬಿಜೆಪಿ ಪ್ರತಿಷ್ಠೆಯ ಪ್ರಶ್ನೆಯಾಗಿ ಪರಿಗಣಿಸಿವೆ. ಉಪ ಚುನಾವಣೆ ನಡೆದ ಎಲ್ಲ ನಾಲ್ಕು ಲೋಕಸಭಾ ಕ್ಷೇತ್ರಗಳೂ ಎನ್‌ಡಿಎಗೆ ಸೇರಿವೆ. ಒಂದೇ ಒಂದುಸ್ಥಾನ ಕಳೆದು
ಕೊಂಡರೂ ಬಿಜೆಪಿಗೆ ಹಿನ್ನಡೆಯಾಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT