ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದುರಂತಕ್ಕೆ ರೈಲ್ವೆ ಇಲಾಖೆ ಹೊಣೆಯಲ್ಲ: ಸ್ಪಷ್ಟನೆ

ಅಮೃತಸರ : ಮ್ಯಾಜಿಸ್ಟ್ರೇಟ್ ತನಿಖೆಗೆ ಪಂಜಾಬ್‌ ಸರ್ಕಾರ ಆದೇಶ l ನಾಲ್ಕು ವಾರದಲ್ಲಿ ವರದಿ ಸಲ್ಲಿಸಲು ಆದೇಶ
Last Updated 20 ಅಕ್ಟೋಬರ್ 2018, 19:49 IST
ಅಕ್ಷರ ಗಾತ್ರ

ಅಮೃತಸರ/ನವದೆಹಲಿ:ಅಮೃತಸರದಲ್ಲಿ ರಾವಣ ಪ್ರತಿಕೃತಿ ದಹನದ ವೇಳೆ ರೈಲಿಗೆ ಸಿಲುಕಿ 61 ಜನರು ಮೃತಪಟ್ಟ ಭೀಕರ ಘಟನೆಗೆ ತಾನು ಹೊಣೆಯಲ್ಲ ಎಂದು ರೈಲ್ವೆ ಇಲಾಖೆ ಸ್ಪಷ್ಟಪಡಿಸಿದೆ.

‘ಕಾರ್ಯಕ್ರಮದ ಬಗ್ಗೆ ರೈಲ್ವೆ ಇಲಾಖೆಗೆ ಯಾವುದೇ ಮಾಹಿತಿ ಇರಲಿಲ್ಲ. ಇದರಲ್ಲಿ ರೈಲ್ವೆ ಇಲಾಖೆಯ ಲೋಪವಿಲ್ಲ. ಇಲಾಖೆ ಈ ಅವಘಡದ ಹೊಣೆ ಹೊರುವುದಿಲ್ಲ’ ಎಂದು ರೈಲ್ವೆ ಖಾತೆ ರಾಜ್ಯ ಸಚಿವ ಮನೋಜ್ ಸಿನ್ಹಾ ಶನಿವಾರ ಸ್ಪಷ್ಟಪಡಿಸಿದ್ದಾರೆ.

ರೈಲ್ವೆ ಚಾಲಕನಿಂದ ಯಾವುದೇ ತಪ್ಪು ಆಗಿಲ್ಲ.ಆತನ ವಿರುದ್ಧ ಶಿಸ್ತುಕ್ರಮ ಜರುಗಿಸುವ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂದು ರೈಲ್ವೆ ಮಂಡಳಿ ಅಧ್ಯಕ್ಷ ಅಶ್ವನಿ ಲೋಹಾನಿ ತಿಳಿಸಿದ್ದಾರೆ.

‘ಇದು ರೈಲು ಅಪಘಾತ ಅಲ್ಲ. ಹೀಗಾಗಿ ಈ ಕುರಿತು ಇಲಾಖೆ ತನಿಖೆ ನಡೆಸುವುದಿಲ್ಲ’ ಎಂದು ಸ್ಪಷ್ಟಪಡಿಸಿದ್ದಾರೆ.

‘ಘಟನಾ ಸ್ಥಳಕ್ಕಿಂತ ಮೊದಲು ಒಂದು ದೀರ್ಘ ತಿರುವಿದೆ. ಆ ತಿರುವಿನಲ್ಲಿ ರೈಲು ಬರುತ್ತಿದ್ದರಿಂದ ಮತ್ತು ಪಟಾಕಿಯಿಂದ ದಟ್ಟ ಹೊಗೆ ಕವಿದಿದ್ದರಿಂದ ಜನರು ನಿಂತಿದ್ದು ಚಾಲಕನಿಗೆ ಗೊತ್ತಾಗಿಲ್ಲ’ ಎಂದು ರೈಲ್ವೆ ಅಧಿಕಾರಿಗಳು ಹೇಳಿದ್ದಾರೆ. ಹಸಿರು ಸಿಗ್ನಲ್ ಕೊಡಲಾಗಿತ್ತು ಎಂದು ಚಾಲಕ ಹೇಳಿಕೆ ನೀಡಿದ್ದಾನೆ.

ಮ್ಯಾಜಿಸ್ಟ್ರೇಟ್‌ ತನಿಖೆಗೆ ಆದೇಶ: ರೈಲು ದುರಂತವನ್ನು ಪಂಜಾಬ್ ಸರ್ಕಾರ ಮ್ಯಾಜಿಸ್ಟ್ರೇಟ್‌ ತನಿಖೆಗೆ ವಹಿಸಿದ್ದು, ನಾಲ್ಕು ವಾರಗಳಲ್ಲಿ
ತನಿಖೆ ಪೂರ್ಣಗೊಳಿಸಿ ವರದಿ ಸಲ್ಲಿಸುವಂತೆ ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ಸೂಚನೆ ನೀಡಿದ್ದಾರೆ.

‘ಪ್ರತಿ ವರ್ಷ ರಾವಣ ದಹನ ವೀಕ್ಷಿಸಲು ಜನರು ರೈಲು ಹಳಿಗಳ ಮೇಲೆ ನಿಲ್ಲುತ್ತಿದ್ದರು. ಇಲ್ಲಿಗೆ ಬರುತ್ತಿದ್ದಂತೆಯೇ ರೈಲು ನಿಧಾನವಾಗಿ ಚಾಲಕ ‘ಹಾರ್ನ್‌’ ಮಾಡುತ್ತಿದ್ದ. ಜನರು ಹಳಿಗಳಿಂದ ದೂರ ಸರಿಯುತ್ತಿದ್ದರು’ ಎಂದು ಸ್ಥಳೀಯರುಹೇಳಿದ್ದಾರೆ.

‘ಈ ಬಾರಿ ರೈಲಿನ ಚಾಲಕ ಹಾರ್ನ್ ಮಾಡಿ ಎಚ್ಚರಿಸಲಿಲ್ಲ. ಜತೆಗೆ ರೈಲಿನ ವೇಗವೂ ತಗ್ಗಿರಲಿಲ್ಲ’ ಎಂದು ಪ್ರತ್ಯಕ್ಷದರ್ಶಿಗಳು ಆರೋಪಿಸಿದ್ದಾರೆ.

ಆರೋಪ, ಪ್ರತ್ಯಾರೋಪ: ಈ ಮಧ್ಯೆ ರೈಲ್ವೆ ಇಲಾಖೆ, ಅಮೃತಸರ ನಗರ ಪಾಲಿಕೆ ಮತ್ತು ಕಾರ್ಯಕ್ರಮ ಆಯೋಜಕರು ಪರಸ್ಪರ ಆರೋಪ ಪ್ರತ್ಯಾರೋಪಗಳಲ್ಲಿ ತೊಡಗಿವೆ.

‘ಜೋದಾ ಪಾಠಕ್ ಬಳಿ ರಾವಣ ಪ್ರತಿಕೃತಿ ದಹನ ಕಾರ್ಯಕ್ರಮಕ್ಕೆ ಆಯೋಜಕರು ಪಾಲಿಕೆಯ ಅನುಮತಿ ಪಡೆದಿರಲಿಲ್ಲ’ಎಂದು ಅವರು ಹೇಳಿದ್ದಾರೆ.

ಸಾಮೂಹಿಕ ಅಂತ್ಯಕ್ರಿಯೆ

ಚಲಿಸುತ್ತಿದ್ದ ರೈಲಿಗೆ ಸಿಲುಕಿ ದೇಹದ ಅಂಗಾಂಗಗಳು ಛಿದ್ರವಾಗಿ ಗುರುತು ಸಿಗದಷ್ಟು ವಿಕಾರವಾಗಿದ್ದ ಶವಗಳನ್ನು ಸಾಮೂಹಿಕವಾಗಿ ಅಂತ್ಯಕ್ರಿಯೆಯನ್ನು ನಡೆಸಲಾಗಿದೆ.ದುರಂತದ ದೃಶ್ಯ, ಗಾಯಾಳುಗಳ ರೋದನ ಮತ್ತು ಮೃತರ ಸಂಬಂಧಿಗಳು ಗೋಳಾಡುತ್ತಿರುವ ದೃಶ್ಯಗಳು, ರೈಲು ಎರಗಿದ ದೃಶ್ಯಗಳ ವಿಡಿಯೊಗಳೂ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.

ರಾವಣನ ಪ್ರತಿಕೃತಿಗೆ ಬೆಂಕಿ ಹಚ್ಚುವವರೆಗೂ ಅಲ್ಲಿನ ವಾತಾವರಣ ಶಾಂತವಾಗೇ ಇತ್ತು. ಬೆಂಕಿ ಹಚ್ಚುತ್ತಿದ್ದಂತೆಯೇ ಮೈದಾನದ ಮತ್ತೊಂದೆಡೆ ಪಟಾಕಿಗಳನ್ನೂ ಹಚ್ಚಲಾಯಿತು. ಬೆಂಕಿಯ ಜ್ವಾಲೆ ಹೆಚ್ಚಾದ ಕಾರಣ ಜನರು ಅಲ್ಲಿಂದ ದೂರ ಓಡತೊಗಿದರು. ಅಷ್ಟರಲ್ಲೇ ಜನರ ಗುಂಪಿನ ಮಧ್ಯೆ ರೈಲು ಭಾರಿ ವೇಗದಲ್ಲಿ ನುಗ್ಗಿಹೋಗಿಯಿತು. ರೈಲಿಗೆ ಸಿಲುಕಿ ಜನರು ಛಿದ್ರವಾಗಿ ಸಿಡಿದು ಹೋಗುವುದೂ ಮೊಬೈಲ್‌ನ ದೃಶ್ಯಾವಳಿಗಳಲ್ಲಿ ಸೆರೆಯಾಗಿದೆ.

ಅವಘಡಕ್ಕೂ ಮುನ್ನ ಮತ್ತೊಂದು ರೈಲು ಅದೇ ಸ್ಥಳವನ್ನು ನಿಧಾನವಾಗಿ ಹಾದುಹೋಗುವ ದೃಶ್ಯವನ್ನು ಮತ್ತೊಬ್ಬರು ಚಿತ್ರೀಕರಿಸಿದ್ದಾರೆ.ಮೊದಲ ರೈಲು ಬಲದಿಂದ ಎಡಕ್ಕೆ ಚಲಿಸುತ್ತದೆ. ಆ ರೈಲು ಬರುವಾಗ ಬಹಳಷ್ಟು ಮಂದಿ ಮತ್ತೊಂದು ಹಳಿಯತ್ತ ಸರಿಯುತ್ತಾರೆ. ಆದರೆ ಮುಂದಿನ 25 ಸೆಕೆಂಡ್‌ಗಳಲ್ಲೇ ಇನ್ನೊಂದು ರೈಲು ಆ ಹಳಿಯಲ್ಲಿ ಭಾರಿ ವೇಗದಲ್ಲಿ ಬರುತ್ತದೆ. ರೈಲಿಗೆ ಸಿಲುಕಿದವರ ಕೂಗಾಟ–ಅರಚಾಟವೂ ಅದರಲ್ಲಿದೆ.

ದಹನದ ಸೆಲ್ಫಿ: ಮೃತರಲ್ಲಿ ಬಹುತೇಕ ಮಂದಿ ಹಳಿಯ ಮೇಲೆ ನಿಂತು, ರಾವಣ ದಹನದ ಜತೆಗೆ ಸೆಲ್ಫಿ ತೆಗೆದುಕೊಳ್ಳುತ್ತಿದ್ದರು. ರೈಲು ಹಳಿಯ ಸಮೀಪ ಪತ್ತೆಯಾದ ಹಲವು ಮೊಬೈಲ್‌ಗಳಲ್ಲಿ ಸೆಲ್ಫಿ ಚಿತ್ರಗಳು ಇವೆ. ರೈಲು ಬಂದು ಅಪ್ಪಳಿಸುವ ವಿಡಿಯೊಗಳೂ ಮೃತರ ಮೊಬೈಲ್‌ಗಳಲ್ಲಿ ಸೆರೆಯಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.

ಸಿಧು ಪತ್ನಿ ಮೇಲೆ ಆಕ್ರೋಶ

ಈ ಕಾರ್ಯಕ್ರಮಕ್ಕೆ ಪಂಜಾಬ್ ಸಚಿವ ನವಜೋತ್ ಸಿಂಗ್ ಸಿಧು ಅವರ ಪತ್ನಿ ನವಜೋತ್ ಕೌರ್ ಸಿಧು ಅವರನ್ನು ಮುಖ್ಯ ಅತಿಥಿಯನ್ನಾಗಿ ಆಹ್ವಾನಿಸಲಾಗಿತ್ತು. ಅವಘಡ ನಡೆಯುತ್ತಿದ್ದಂತೆ ಅವರು ಅಲ್ಲಿಂದ ಓಡಿ ಹೋದರು ಎಂದು ಬಿಜೆಪಿ ಮತ್ತು ಅಕಾಲಿ ದಳದ ನಾಯಕರು ಆರೋಪಿಸಿದ್ದಾರೆ.

‘ಕಾಂಗ್ರೆಸ್‌ನ ಕೌನ್ಸಿಲರ್ ಒಬ್ಬರ ಪತಿ ಈ ಕಾರ್ಯಕ್ರಮ ಆಯೋಜಿಸಿದ್ದರು. ಅನುಮತಿ ಪಡೆಯದೇ, ರೈಲ್ವೆಗೆ ಮಾಹಿತಿ ನೀಡದೇ ಅವರು ಕಾರ್ಯಕ್ರಮ ಆಯೋಜಿಸಿದ್ದು ಹೇಗೆ? ಸಂತ್ರಸ್ತರ ನೆರವಿಗೆ ಧಾವಿಸದೇ ಕೌರ್ ಅವರು ಓಡಿಹೋಗಿದ್ದಾರೆ’ ಎಂದು ಅಕಾಲಿ ದಳದ ನಾಯಕರು ಆರೋಪಿಸಿದ್ದಾರೆ.

‘500 ರೈಲು ಬಂದರೂ ಹೋಗುವುದಿಲ್ಲ...’

‘ಮೇಡಂ. ಇವರೆಲ್ಲಾ ನಿಮ್ಮ ಅಭಿಮಾನಿಗಳು. ಹೀಗಾಗಿ ಇಷ್ಟು ಜನ ಸೇರಿದ್ದಾರೆ. ಅಲ್ಲಿ ನೋಡಿ ರೈಲು ಹಳಿ ಮೇಲೆ 5,000 ಜನ ನಿಂತಿದ್ದಾರೆ. ಈಗ 500 ರೈಲು ಬಂದರೂ ಅವರು ಅಲ್ಲಿಂದ ಹೋಗುವುದಿಲ್ಲ’.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿದ್ದ ನವಜೋತ್ ಕೌರ್ ಸಿಧು ಅವರನ್ನು ಹೊಗಳುವಾಗಕಾರ್ಯಕ್ರಮದ ಆಯೋಜಕ ಹೇಳಿರುವ ಮಾತುಗಳಿವು. ಈ ಮಾತುಗಳಿರುವ ವಿಡಿಯೊ ಸಹ ಈಗ ವೈರಲ್ ಆಗಿದೆ.

ಜೀವ ಉಳಿಸಿದ ‘ರಾವಣ’

ರಾವಣ ದಹನಕ್ಕೂ ಮೊದಲು ನಡೆದಿದ್ದ ರಾಮಲೀಲಾ ಪ್ರದರ್ಶನದಲ್ಲಿ ರಾವಣನ ಪಾತ್ರ ಮಾಡಿದ್ದ ದಲ್ಬೀರ್ ಸಿಂಗ್ (23) ಎಂಬುವವರೂ ಘಟನೆಯಲ್ಲಿ ಮೃತಪಟ್ಟಿದ್ದಾರೆ.

‘ರಾವಣ ದಹನದ ವೇಳೆ ದಲ್ಬೀರ್ ರೈಲು ಹಳಿಯ ಬಳಿ ಬರುತ್ತಿದ್ದ. ರೈಲು ಬರುವುದನ್ನು ಗಮನಿಸಿದ ಆತ, ಹಳಿಯ ಮೇಲಿದ್ದ ಏಳು ಜನರನ್ನು ದೂಡಿ ಪಾರು ಮಾಡಿದ. ಅಷ್ಟರಲ್ಲಿ ಆತನೇ ರೈಲಿಗೆ ಸಿಲುಕಿದ’ ಎಂದು ದಲ್ಬೀರ್ ಸಿಂಗ್ ಗೆಳೆಯರೊಬ್ಬರು ಹೇಳಿಕೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT