ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಮೃತಸರ ದುರಂತಕ್ಕೆ ನಾವು ಹೊಣೆಯಲ್ಲ, ಪರಿಹಾರ ನೀಡಲ್ಲ: ರೈಲ್ವೆ ಇಲಾಖೆ

Last Updated 20 ಅಕ್ಟೋಬರ್ 2018, 12:56 IST
ಅಕ್ಷರ ಗಾತ್ರ

ಅಮೃತಸರ/ನವದೆಹಲಿ: ಅಮೃತಸರದ ಜೋದಾ ಪಾಠಕ್‌ನಲ್ಲಿ ರಾವಣ ಪ್ರತಿಕೃತಿ ದಹನದ ವೇಳೆ ರೈಲಿಗೆ ಸಿಲುಕಿ 61 ಜನರು ಮೃತಪಟ್ಟದ್ದಕ್ಕೆ ಇಲಾಖೆ ಹೊಣೆಯಲ್ಲ. ಮೃತಪಟ್ಟವರು ರೈಲಿನ ಪ್ರಯಾಣಿಕರಲ್ಲ. ಹೀಗಾಗಿ ಪರಿಹಾರವನ್ನೂ ನೀಡುವುದಿಲ್ಲ ಎಂದು ರೈಲ್ವೆ ಇಲಾಖೆ ಮೂಲಗಳು ತಿಳಿಸಿವೆ.

ರೈಲು ವೇಗವಾಗಿ ಚಲಿಸುತ್ತಿತ್ತು. ಹಳಿ ಮೇಲೆ ಜನರು ಇದ್ದುದ್ದನ್ನು ನೋಡಿ ಚಾಲಕ ದಿಢೀರ್ ಎಂದು ಬ್ರೇಕ್ ಹಾಕಿದ್ದಿದ್ದರೆ, ರೈಲಿನೊಳಗಿದ್ದ ಪ್ರಯಾಣಿಕರು ಮೃತಪಡುವ ಅಪಾಯವಿತ್ತು ಎಂದು ರೈಲ್ವೆ ಮಂಡಳಿ ಅಧ್ಯಕ್ಷ ಅಶ್ವಾನಿ ಲೋಹಾನಿ ಪ್ರತಿಕ್ರಿಯೆ ನೀಡಿದ್ದಾರೆ.

ಇದನ್ನೂ ಓದಿ:ಅಮೃತಸರ: ನುಗ್ಗಿದ ರೈಲು - 61 ಮಂದಿ ಬಲಿ

ತನಿಖೆಗೆ ಆದೇಶ
ಘಟನೆಯನ್ನು ಮ್ಯಾಜಿಸ್ಟ್ರೇಟ್ ತನಿಖೆಗೆ ವಹಿಸಿ ಪಂಜಾಬ್ ಸರ್ಕಾರ ಆದೇಶ ಹೊರಡಿಸಿದೆ. ಮುಂದಿನ ನಾಲ್ಕು ವಾರಗಳಲ್ಲಿ ತನಿಖೆ ಪೂರ್ಣಗೊಳಿಸುವಂತೆ ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ಸೂಚನೆ ನೀಡಿದ್ದಾರೆ.

ಇದರ ಮಧ್ಯೆಯೇ ರೈಲ್ವೆ ಇಲಾಖೆ, ಅಮೃತಸರ ನಗರಸಭೆ ಪರಸ್ಪರ ಆರೋಪ ಪ್ರತ್ಯಾರೋಪಗಳಲ್ಲಿ ತೊಡಗಿವೆ. ಕಾರ್ಯಕ್ರಮದ ಆಯೋಜಕರ ವಿರುದ್ಧವೂ ನಗರಸಭೆ ಅಧಿಕಾರಿಗಳು ಕಿಡಿಕಾರಿದ್ದಾರೆ, ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

‘ಜೋದಾ ಪಾಠಕ್ ಬಳಿ ರಾವಣ ಪ್ರತಿಕೃತಿ ದಹನ ಕಾರ್ಯಕ್ರಮ ಆಯೋಜಿಸಲು ಅನುಮತಿ ಕೋರಿ ಯಾರೂ ಅರ್ಜಿ ಸಲ್ಲಿಸಿರಲಿಲ್ಲ. ನಾವು ಅನುಮತಿಯನ್ನೂ ನೀಡಿರಲಿಲ್ಲ’ ಎಂದು ಅಮೃತಸರ ನಗರಸಭೆ ಅಧಿಕಾರಿಗಳು ಹೇಳಿಕೆ ನೀಡಿದ್ದಾರೆ.

‘ರೈಲ್ವೆಯ ಜಾಗವನ್ನು ಅತಿಕ್ರಮ ಪ್ರವೇಶ ಮಾಡಿದ್ದರಿಂದ ಈ ಅವಘಡ ನಡೆದಿದೆ. ದುರಂತ ಸಂಭವಿಸಿದಸ್ಥಳ ಅಮೃತಸರ ಮತ್ತು ಮನವಾಲಾ ನಿಲ್ದಾಣಗಳ ಮಧ್ಯೆ ಇದೆ. ಜೋದಾ ಪಾಠಕ್‌ನಿಂದ 400 ಮೀಟರ್‌ನಷ್ಟು ದೂರದಲ್ಲಿ ಲೆವೆಲ್‌ಕ್ರಾಸಿಂಗ್ ಇದೆ. ಅಲ್ಲಿ ಗೇಟ್‌ಮ್ಯಾನ್ ಇರುತ್ತಾನೆ. ಲೆವೆಲ್ ಕ್ರಾಸಿಂಗ್‌ನಲ್ಲಿ ವಾಹನಗಳ ಸಂಚಾರವನ್ನು ನಿಯಂತ್ರಿಸುವುದಷ್ಟೇ ಅವನ ಕೆಲಸ. ಇಲ್ಲಿ ಇಲಾಖೆ ಕಡೆಯಿಂದ ಯಾವುದೇ ಕರ್ತವ್ಯ ಲೋಪವಾಗಿಲ್ಲ’ ಎಂದು ರೈಲ್ವೆ ಮಂಡಳಿ ಅಧ್ಯಕ್ಷ ಅಶ್ವಾನಿ ಲೋಹಾನಿ ಹೇಳಿದ್ದಾರೆ.

‘ರಕ್ಷಣಾ ಕಾರ್ಯದಲ್ಲಿ ನಮ್ಮ ಇಲಾಖೆ ಪಾಲ್ಗೊಳ್ಳುವ ಅವಶ್ಯಕತೆಯೇ ಇರಲಿಲ್ಲ. ಆದರೂ ತಡರಾತ್ರಿಯಲ್ಲಿ ನಮ್ಮ ಅಧಿಕಾರಿಗಳು ಮತ್ತು ಸಿಬ್ಬಂದಿ ಸ್ಥಳಕ್ಕೆ ತೆರಳಿ ರಕ್ಷಣಾ ಕಾರ್ಯದಲ್ಲಿ ನಗರಾಡಳಿತಕ್ಕೆ ನೆರವಾಗಿದ್ದಾರೆ’ ಎಂದು ಅವರು ಹೇಳಿದ್ದಾರೆ.

ಸಾಮೂಹಿಕ ಅಂತ್ಯಕ್ರಿಯೆ

ರೈಲಿಗೆ ಸಿಲುಕಿ ದೇಹಗಳು ಛಿದ್ರವಾಗಿದ್ದ ಕಾರಣ ಮೃತರ ಅಂತ್ಯಕ್ರಿಯೆಯನ್ನು ಸಾಮೂಹಿಕವಾಗಿ ನಡೆಸಲಾಗಿದೆ.

ತಮ್ಮವರ ಶವ ಸಿಗದ ಕಾರಣ ಮೃತರ ಸಂಬಂಧಿಗಳು ಆಸ್ಪತ್ರೆ ಎದುರಿನಲ್ಲಿ ಗೋಳಾಡುತ್ತಿರುವ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.

ಮೃತರಲ್ಲಿ ಬಹುತೇಕ ಮಂದಿ ಹಳಿಯ ಮೇಲೆ ನಿಂತು, ರಾವಣದ ದಹನದ ಜತೆಗೆ ಸೆಲ್ಫಿ ತೆಗೆದುಕೊಳ್ಳುತ್ತಿದ್ದರು. ರೈಲು ಹಳಿಯ ಸಮೀಪ ಪತ್ತೆಯಾದ ಹಲವು ಮೊಬೈಲ್‌ಗಳಲ್ಲಿ ಸೆಲ್ಫಿ ಚಿತ್ರಗಳು ಇರುವುದು ಗೊತ್ತಾಗಿದೆ.

*****

ಅಲ್ಲಿ ಕಾರ್ಯಕ್ರಮವನ್ನು ಆಯೋಜಿಸಿದ್ದು ಏಕೆ? ಅದರ ಬಗ್ಗೆ ನಮಗೆ ನೋಟಿಸನ್ನೂ ನೀಡಿರಲಿಲ್ಲ, ಮಾಹಿತಿಯನ್ನೂ ನೀಡಿರಲಿಲ್ಲ. ಹೀಗಾಗಿ ರೈಲ್ವೆ ಇಲಾಖೆ ಅವಘಡದ ಹೊಣೆ ಹೊರುವುದಿಲ್ಲ

– ಮನೋಜ್ ಸಿನ್ಹಾ, ರೈಲ್ವೆ ಇಲಾಖೆಯ ರಾಜ್ಯ ಖಾತೆ ಸಚಿವ

ತನಿಖೆ ಆರಂಭವಾಗಿದ್ದು, ತಪ್ಪಿತಸ್ಥರಿಗೆ ಶಿಕ್ಷೆಯಾಗಲಿದೆ. ಈ ವಿಚಾರದಲ್ಲಿ ಈಗ ಯಾರೂ ರಾಜಕೀಯ ನಡೆಸಬಾರದು. ವಿರೋಧ ಪಕ್ಷಗಳು ಪರಿಹಾರ ಕಾರ್ಯದಲ್ಲಿ ಸರ್ಕಾರದ ಜತೆ ಕೈಜೋಡಿಸಬೇಕು

– ಕ್ಯಾಪ್ಟನ್ ಅಮರಿಂದರ್ ಸಿಂಗ್, ಪಂಜಾಬ್ ಮುಖ್ಯಮಂತ್ರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT