ಕೇರಳ ಮಳೆ: ಇಡುಕ್ಕಿಯಿಂದ ಮತ್ತಷ್ಟು ನೀರು ಹೊರಕ್ಕೆ, ಪ್ರವಾಸ ಬೇಡವೆಂದ ಅಮೆರಿಕ

7

ಕೇರಳ ಮಳೆ: ಇಡುಕ್ಕಿಯಿಂದ ಮತ್ತಷ್ಟು ನೀರು ಹೊರಕ್ಕೆ, ಪ್ರವಾಸ ಬೇಡವೆಂದ ಅಮೆರಿಕ

Published:
Updated:

ತಿರುವನಂತಪುರಂ: ಕೇರಳದಲ್ಲಿ ವ್ಯಾಪಕವಾಗಿ ಮಳೆ ಬೀಳುತ್ತಿದ್ದು, ಶುಕ್ರವಾರವೂ ಮುಂದುವರಿದಿದೆ. ಇಡುಕ್ಕಿ ಜಲಾಶಯದ ನೀರಿನ ಗರಿಷ್ಠ ಮಟ್ಟ 2,401 ಅಡಿ ತಲುಪಿದ್ದು, ಇಂದು ಮತ್ತೆ ಎರಡು ಗೇಟ್‌ಗಳನ್ನು ತೆರೆದು ನೀರನ್ನು ಹೊರ ಬಿಡಲಾಗುತ್ತಿದೆ. ಇದರ ಬೆನ್ನಲ್ಲೆ ಅಮೆರಿಕ ತನ್ನ ಪ್ರಜೆಗಳಿಗೆ ಅಲ್ಲಿಗೆ ಪ್ರವಾಸಕ್ಕೆ ತೆರಳಬೇಡಿ ಎಂದು ಸಲಹೆ ನೀಡಿದೆ.

ಏಷ್ಯಾದ ಅತಿ ದೊಡ್ಡ ಕಮಾನು ಅಣೆಕಟ್ಟೆ ಎನಿಸಿದ ಚೆರುತೋನಿ 1992ರಿಂದ ಭರ್ತಿಯಾಗಿರಲಿಲ್ಲ. 26 ವರ್ಷಗಳ ಬಳಿಕ ನೀರನ್ನು ಹೊರ ಬಿಡಲಾಗುತ್ತಿದೆ. ಎರ್ನಾಕುಲಂ ಜಿಲ್ಲೆಯ ಇದಮಲಯಾರ್‌ ಜಲಾಶಯದಿಂದಲೂ ನೀರು ಬಿಡಲಾಗಿದೆ.

ಗುರುವಾರ ಇಡುಕ್ಕಿ ಜಲಾಶಯದ ಒಂದು ಗೇಟ್‌ ತೆರೆದು ನೀಡು ಹೊರ ಬಿಡಲಾಗಿತ್ತು. ಇಂದು ಬೆಳಿಗ್ಗೆ ಮತ್ತೆರಡು ಗೇಟ್‌ಗಳನ್ನು ತೆರೆಯಲಾಗಿದೆ. ಒಟ್ಟು ಮೂರು ಗೇಟ್‌ಗಳ ಮೂಲಕ ನೀರು ಹೊರ ಹೋಗುತ್ತಿದೆ.  

ಕಳೆದೆರಡು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಗೆ ಭೂ ಕುಸಿತ ಮತ್ತು ಪ್ರವಾಹಕ್ಕೆ 26 ಜನ ಸಾವಿಗೀಡಾಗಿದ್ದಾರೆ. ಇಡುಕ್ಕಿ ಜಲಾಶಯ ವ್ಯಾಪ್ತಿಯಲ್ಲಿ 129.80 ಮಿ.ಮೀ. ಮಳೆ ಬಿದ್ದಿದೆ.

ರಾಜ್ಯ ಮತ್ತು ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡ ರಕ್ಷಣಾ ಕಾರ್ಯಾಚರಣೆ ಕೈಗೊಂಡಿದ್ದು, 241 ತಾತ್ಕಾಲಿಕ ಶಿಬಿರಗಳನ್ನು ತೆರೆಯಲಾಗಿದೆ. 15,695 ಜನರನ್ನು ಸ್ಥಳಾಂತರಿಸಲಾಗಿದೆ.

ಗಾಳಿ ಸಹಿತ ಮಳೆ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಅವರು ಪ್ರವಾಹ ಪರಿಸ್ಥಿತಿಯ ಮಾಹಿತಿ ಪಡೆದಿದ್ದು, ತುರ್ತು ಕಾರ್ಯಗಳನ್ನು ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಕೇರಳಕ್ಕೆ ಪ್ರವಾಸ ಬೇಡ: ಅಮೆರಿಕ

ನವದೆಹಲಿ: ಕೇರಳದಲ್ಲಿ ಪ್ರವಾಹ ಪರಿಸ್ಥಿತಿ ಇರುವುದರಿಂದ ತಮ್ಮ ದೇಶದ ಪ್ರಜೆಗಳು ಅಲ್ಲಿಗೆ ಪ್ರವಾಸಕ್ಕೆ ತೆರಳಬಾರದು ಎಂದು ಅಮೆರಿಕ ಇಂದು ಸಲಹೆ ನೀಡಿದೆ.

ನೈರುತ್ಯ ಮುಂಗಾರು ಮಳೆ ಭಾರಿ ಪ್ರಮಾಣದಲ್ಲಿ ಸುರಿಯುತ್ತಿದ್ದು, ಭೂಕುಸಿತ ಮತ್ತು ಪ್ರವಾಹ ಎದುರಾಗಿದೆ. ಆದ್ದರಿಂದ, ಅಮೆರಿಕದ ಪ್ರಜೆಗಳು ಅಂತಹ ಸ್ಥಳಗಳಿಗೆ ತೆರಳಬಾರದು ಎಂದು ಅಮೆರಿಕದ ಸಲಹಾ ಮಂಡಳಿ ಹೇಳಿದೆ.
 

ಬರಹ ಇಷ್ಟವಾಯಿತೆ?

 • 11

  Happy
 • 0

  Amused
 • 3

  Sad
 • 0

  Frustrated
 • 0

  Angry

Comments:

0 comments

Write the first review for this !