ಮಳೆ: ರೈಲು ಸಂಚಾರ ವ್ಯತ್ಯಯ

7

ಮಳೆ: ರೈಲು ಸಂಚಾರ ವ್ಯತ್ಯಯ

Published:
Updated:

ತಿರುವನಂತಪುರ: ಪ್ರವಾಹ ಮತ್ತು ಭೂಕುಸಿತದಿಂದ ರೈಲುಗಳ ಸಂಚಾರದಲ್ಲೂ ವ್ಯತ್ಯಯ ಉಂಟಾಗಿದೆ. ಕುಳಿತೊರೈ ಮತ್ತು ಎರನೀಲ್‌ ಮಾರ್ಗದ ನಡುವೆ ಭೂಕುಸಿತದಿಂದಾಗಿ ಬುಧವಾರ ನಾಲ್ಕು ರೈಲುಗಳ ಸಂಚಾರದಲ್ಲಿ ವ್ಯತ್ಯಯವಾಯಿತು.

ಗುರುವಾಯೂರು–ಚೆನ್ನೈ ಎಗ್‌ಮೋರ್‌ ಎಕ್ಸ್‌ಪ್ರೆಸ್‌, ಕನ್ಯಾಕುಮಾರಿ–ಮುಂಬೈ ಸಿಎಸ್‌ಎಂಟಿ ಎಕ್ಸ್‌ಪ್ರೆಸ್‌, ದಿಬುಗರ್‌–ಕನ್ಯಾಕುಮಾರಿ ವಿವೇಕ್‌ ಎಕ್ಸ್‌ಪ್ರೆಸ್‌ ಹಾಗೂ ಗಾಂಧಿಧಾಮ್‌– ತಿರುವೆನೆಲಿ ಹಮ್‌ಸಫರ್‌ ಎಕ್ಸ್‌ಪ್ರೆಸ್‌ಗಳ ಸಂಚಾರ ವ್ಯತ್ಯಯ ಆಯಿತು ಎಂದು ಮೂಲಗಳು ಹೇಳಿವೆ.

ಪ್ರತೀಕೂಲ ಹವಾಮಾನದಿಂದಾಗಿ ಕೊಲ್ಲಂ –ಪುನಲೂರು ಚೆಂಗೊಟ್ಟಾಯ್‌ ಮಾರ್ಗದಲ್ಲಿ ಕೆಲವು ಪ್ರಯಾಣಿಕ ರೈಲುಗಳ ಸಂಚಾರ ರದ್ದುಗೊಳಿಸಲಾಗಿತ್ತು. ನದಿ ಮತ್ತು ಸರೋವರಗಳು ಉಕ್ಕೇರುತ್ತಿರುವುದರಿಂದ ತಿರುವನಂತಪುರ–ತ್ರಿಶೂರ್‌ ಮಾರ್ಗದಲ್ಲಿ ರೈಲುಗಳ ವೇಗಕ್ಕೆ ಮಿತಿ ಹೇರಲಾಗಿತ್ತು. ಎಂಜಿನಿಯರ್‌ಗಳು ರೈಲ್ವೆ ಮೇಲು ಸೇತುವೆಗಳ ಸುರಕ್ಷತೆಯ ನಿರಂತರ ಮೇಲ್ವಿಚಾರಣೆ ನಡೆಸುತ್ತಿದ್ದಾರೆ ಎಂದು ರೈಲ್ವೆ ಇಲಾಖೆ ತಿಳಿಸಿದೆ.

ಶಬರಿಮಲೆ ಯಾತ್ರೆಗೆ ನಿರ್ಬಂಧ: ಪಂಪಾ ನದಿ ಅಪಾಯದ ಮಟ್ಟದಲ್ಲಿ ಹರಿಯುತ್ತಿದ್ದು, ಅಯ್ಯಪ್ಪಸ್ವಾಮಿ ಭಕ್ತರು ಸದ್ಯಕ್ಕೆ ಶಬರಿಮಲೈ ಯಾತ್ರೆ ಕೈಗೊಳ್ಳಬಾರದೆಂದು ಸೂಚಿಸಲಾಗಿದೆ.

ಬಸ್‌ ಸಂಚಾರ ರದ್ದು (ಬೆಂಗಳೂರು ವರದಿ): ಭಾರಿ ಮಳೆಯ ಕಾರಣದಿಂದ ಬೆಂಗಳೂರಿನಿಂದ ಕೇರಳಕ್ಕೆ ಬಸ್‌ಗಳ ಸಂಚಾರವನ್ನು ಕೆಎಸ್‌ಆರ್‌ಟಿಸಿ ರದ್ದುಗೊಳಿಸಿದೆ.

ಮಂಗಳೂರು, ಧರ್ಮಸ್ಥಳ, ಸುಬ್ರಹ್ಮಣ್ಯ ಹಾಗೂ ಕುಂದಾಪುರಕ್ಕೆ ತೆರಳುವ 49 ಬಸ್‌ಗಳ ಸಂಚಾರವನ್ನು ಸಂಸ್ಥೆ ಮಂಗಳವಾರ ರದ್ದುಗೊಳಿಸಲಾಗಿತ್ತು. ಚಾರ್ಮಾಡಿ ಘಾಟ್‌ ಮೂಲಕ ಎಕ್ಸ್‌ಪ್ರೆಸ್‌ ಬಸ್‌ಗಳಷ್ಟೇ ಸಂಚರಿಸುತ್ತಿವೆ. ಬೆಂಗಳೂರಿನಿಂದ ಕಣ್ಣನೂರು, ಕಲ್ಲಿಕೋಟೆ, ಕಾಸರಗೋಡು ಬಸ್‌ಗಳ ಸಂಚಾರ ಬುಧವಾರ ಸ್ಥಗಿತಗೊಂಡಿತ್ತು.

ತಮಿಳುನಾಡಿಗೆ ಕೇರಳ ಮನವಿ
ಕೊಚ್ಚಿ:
ಮುಲ್ಲಪೆರಿಯಾರ್ ಜಲಾಶಯದ ನೀರಿನ ಪ್ರಮಾಣ ತಗ್ಗಿಸಲು ಸಹಕಾರ ನೀಡುವಂತೆ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ತಮಿಳುನಾಡಿಗೆ ಮನವಿ ಮಾಡಿದ್ದಾರೆ.

ಈ ಜಲಾಶಯದ ನೀರಿನ ಗರಿಷ್ಠ ಸಂಗ್ರಹ ಪ್ರಮಾಣ 142 ಅಡಿ ಇದ್ದು, ಜಲಾಶಯ ಸಂಪೂರ್ಣ ಭರ್ತಿಯಾಗಿದೆ. ಭಾರಿ ಮಳೆ ಸುರಿಯುತ್ತಿರುವುದರಿಂದ ಒಳ ಹರಿವು ಹೆಚ್ಚಾಗಿದೆ. ಜಲಾಶಯದ ನೀರಿನ ಮಟ್ಟವನ್ನು 142 ಅಡಿಯಿಂದ 139 ಅಡಿಗೆ ತಗ್ಗಿಸಲು ಕೇರಳ ಮುಖ್ಯಮಂತ್ರಿ, ತಮಿಳುನಾಡು ಮುಖ್ಯಮಂತ್ರಿಗೆ ಪತ್ರ ಬರೆದು ಒತ್ತಾಯಿಸಿದ್ದಾರೆ.

*
ಕೇರಳ ರಾಜ್ಯದಲ್ಲಿ ಪ್ರವಾಹ ಪರಿಸ್ಥಿತಿ ನಿಯಂತ್ರಿಸಲು ಕೇಂದ್ರ ಸರ್ಕಾರ ಎಲ್ಲ ರೀತಿಯ ನೆರವು ನೀಡಲಿದೆ.
-ನರೇಂದ್ರ ಮೋದಿ, ಪ್ರಧಾನಮಂತ್ರಿ

*
ರಾಜ್ಯದಲ್ಲಿ ಕಳೆದ ಮೇ ತಿಂಗಳಿನಿಂದ ಇಲ್ಲಿಯವರೆಗೆ ಮಳೆ ಮತ್ತು ಪ್ರವಾಹದಿಂದ 200ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದಾರೆ
-ಶೇಖರ್‌ ಲುಕೋಸ್‌ ಕುರಿಯಕೋಸ್‌, ಕೇರಳ ವಿಕೋಪ ನಿರ್ವಹಣಾ ಪ್ರಾಧಿಕಾರದ ಹಿರಿಯ ಅಧಿಕಾರಿ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 1

  Sad
 • 0

  Frustrated
 • 0

  Angry

Comments:

0 comments

Write the first review for this !