ನಿಲ್ಲದ ಮಳೆ ಅಬ್ಬರ: ಕೇರಳ ತತ್ತರ

7

ನಿಲ್ಲದ ಮಳೆ ಅಬ್ಬರ: ಕೇರಳ ತತ್ತರ

Published:
Updated:
Deccan Herald

ತಿರುವನಂತಪುರ/ಕೊಚ್ಚಿ: ದೇವರನಾಡು ಕೇರಳದಲ್ಲಿ ನೈರುತ್ಯ ಮುಂಗಾರು ಮಳೆಯ ಆರ್ಭಟ ಬುಧವಾರವೂ ಮುಂದುವರಿದಿದೆ. ಶತಮಾನದಲ್ಲೇ ಕಂಡರಿಯದ ಭೀಕರ ಪ್ರವಾಹಕ್ಕೆ ಇಡೀ ರಾಜ್ಯ ತತ್ತರಿಸಿದೆ. ಭೂಕುಸಿತ ಮತ್ತು ಪ್ರವಾಹದಿಂದ ಇದುವರೆಗೆ ಮೃತಪಟ್ಟವರ ಸಂಖ್ಯೆ 47ಕ್ಕೆ ಏರಿಕೆಯಾಗಿದೆ.

ಮುಂದಿನ ನಾಲ್ಕು ದಿನಗಳವರೆಗೆ ಭಾರಿ ಮಳೆ ಸುರಿಯುವುದಾಗಿ ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದ್ದು, ಇಡೀ ರಾಜ್ಯದಾದ್ಯಂತ ಕಟ್ಟೆಚ್ಚರ (ರೆಡ್‌ ಅಲರ್ಟ್‌) ಘೋಷಿಸಲಾಗಿದೆ.

ಮಲ್ಲಪ್ಪುರಂ ಜಿಲ್ಲೆಯಲ್ಲಿ ಮನೆ ಕುಸಿದು ಒಂದೇ ದಿನ 8 ಮಂದಿ ಮೃತಪಟ್ಟಿದ್ದಾರೆ. ಕಂಜೂರಿನಲ್ಲಿ ಮಂಗಳವಾರ ಐದು ಮಂದಿ ಮೃತಪಟ್ಟಿದ್ದರು.

ತುರ್ತು ಸಭೆ ನಡೆಸಿದ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌, ಪರಿಸ್ಥಿತಿ ನಿಭಾಯಿಸಲು ಸನ್ನದ್ಧ ಸ್ಥಿತಿಯಲ್ಲಿರುವಂತೆ ಎಲ್ಲ ಇಲಾಖೆಗಳಿಗೆ ಸೂಚನೆ ನೀಡಿದ್ದಾರೆ.

ಜಲಾಶಯಗಳಿಂದ ನೀರು ಬಿಡುಗಡೆ: ರಾಜ್ಯದ ಇತಿಹಾಸದಲ್ಲಿಯೇ ಇದೇ ಮೊದಲ ಬಾರಿಗೆ 35 ಜಲಾಶಯಗಳು ಭರ್ತಿಯಾಗಿದ್ದು, ಎಲ್ಲ ಜಲಾಶಯಗಳಿಂದ ಭಾರಿ ಪ್ರಮಾಣದಲ್ಲಿ ನೀರು ಹೊರ ಬಿಡಲಾಗುತ್ತಿದೆ.

ಭಾರಿ ಮಳೆಯಿಂದಾಗಿ ಮಲ್ಲಾಪೆರಿಯಾರ್ ಅಣೆಕಟ್ಟೆಗೆ ಒಳ ಹರಿವು ಹೆಚ್ಚಾಗಿದ್ದು, ಮಧ್ಯಾಹ್ನದ ವೇಳೆಗೆ ಜಲಾಶಯ ಗರಿಷ್ಠ ಸಂಗ್ರಹ ಮಟ್ಟ 142 ಅಡಿಗೆ ತಲುಪಿತ್ತು. ಸಂಜೆ ಜಲಾಶಯದ ಎಲ್ಲ 13 ಗೇಟ್‌ಗಳನ್ನು ತೆರೆಯಲಾಯಿತು. ಇಡುಕ್ಕಿ ಜಲಾಶಯದಿಂದಲೂ ಎಲ್ಲ ಐದೂ ಗೇಟ್‌ಗಳಿಂದ ನೀರು ಹೊರ ಬಿಡಲಾಗುತ್ತಿದೆ.

ಜಲಾಶಯಗಳ ಕೆಳಭಾಗದ ತಗ್ಗುಪ್ರದೇಶದ ಜನರು ಮುಳುಗಡೆ ಭೀತಿ ಎದುರಿಸುತ್ತಿದ್ದಾರೆ. ಕಾಸರಗೋಡಿನಿಂದ ತಿರುವನಂತಪುರದವರೆಗೆ ಎಲ್ಲಾ ನದಿಗಳಲ್ಲೂ ಪ್ರವಾಹ ಉಕ್ಕೇರಿದೆ. ಭಾರತೀಯ ಸೇನೆ ಮತ್ತು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಗಳು (ಎನ್‌ಡಿಆರ್‌ಎಫ್‌) ನೆರೆ ಸಂತ್ರಸ್ತರ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿವೆ.

**

ಕಟ್ಟೆಚ್ಚರ ವಹಿಸಲು ಡಿ.ಸಿಗಳಿಗೆ ಸೂಚನೆ

ಬೆಂಗಳೂರು: ಕೆಲವು ದಿನಗಳಿಂದ ಭಾರಿ ಮಳೆ ಸುರಿಯುತ್ತಿರುವ ಕೊಡಗು, ದಕ್ಷಿಣ ಕನ್ನಡ, ಹಾಸನ, ಚಿಕ್ಕಮಗಳೂರು, ಶಿವಮೊಗ್ಗ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಯಾವುದೇ ಅನಾಹುತ ಸಂಭವಿಸದಂತೆ ಕಟ್ಟೆಚ್ಚರ ವಹಿಸುವಂತೆ ಜಿಲ್ಲಾಧಿಕಾರಿಗಳಿಗೆ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ನಿರ್ದೇಶನ ನೀಡಿದ್ದಾರೆ.

ಈ ಜಿಲ್ಲೆಗಳ ಪ್ರವಾಹ ಪರಿಸ್ಥಿತಿ ಅವಲೋಕಿಸಿರುವ ಅವರು, ‘ಮಳೆಯಿಂದ ಸಂಭವಿಸಬಹುದಾದ ಪ್ರವಾಹ, ಭೂ ಕುಸಿತದ ಕುರಿತು ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕು. ಪರಿಹಾರ ಒದಗಿಸಲು ಸನ್ನದ್ಧರಾಗಿರಬೇಕು’ ಎಂದು ಸೂಚಿಸಿದ್ದಾರೆ.

ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳು ಜಿಲ್ಲೆಗಳಿಗೆ ಭೇಟಿ ನೀಡಿ, ಮಳೆ ಹಾನಿ ಕುರಿತು ನಿಗಾ ವಹಿಸಬೇಕು. ಜಿಲ್ಲಾ ಉಸ್ತುವಾರಿ ಸಚಿವರು ಕೂಡ ಈ ಕುರಿತು ಪರಿಶೀಲನೆ ನಡೆಸಬೇಕು ಎಂದೂ ಕುಮಾರಸ್ವಾಮಿ 
ತಿಳಿಸಿದ್ದಾರೆ.

**

ಅಂಕಿ ಅಂಶ

14: ಜಿಲ್ಲೆಗಳಲ್ಲೂ ರಾಜ್ಯ ಸರ್ಕಾರ ಕಟ್ಟೆಚ್ಚರ ಘೋಷಣೆ

35: ಜಲಾಶಯಗಳು ಭರ್ತಿಯಾಗಿದ್ದು, ನೀರು ಹೊರ ಬಿಡಲಾಗುತ್ತಿದೆ

67: ಪ್ರವಾಹ ಮತ್ತು ಭೂಕುಸಿತದಿಂದ ಮೃತಪಟ್ಟವರು

50,000: ಪ್ರವಾಹ ಸಂತ್ರಸ್ತರು

**

ಕೊಚ್ಚಿ ವಿಮಾನ ನಿಲ್ದಾಣ ಸ್ಥಗಿತ

ಪ್ರವಾಹದಿಂದಾಗಿ ಕೊಚ್ಚಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಆ.18ರವರೆಗೆ ಸ್ಥಗಿತಗೊಳಿಸಲಾಗಿದೆ. ಎಲ್ಲ ವಿಮಾನಗಳ ಸಂಚಾರವನ್ನು ಬೇರೆಯ ನಿಲ್ದಾಣಗಳಿಂದ ಕಾರ್ಯಾಚರಿಸಲು ವ್ಯವಸ್ಥೆ ಮಾಡಲಾಗಿದೆ.

ನಿಲ್ದಾಣದ ರನ್‌ವೇ ಮತ್ತು ಪಾರ್ಕಿಂಗ್‌ ಸ್ಥಳಗಳೆಲ್ಲವೂ ಜಲಾವೃತವಾಗಿವೆ. ನಿಲ್ದಾಣವನ್ನು ಇದೇ ಶನಿವಾರದವರೆಗೆ ಮುಚ್ಚಲಾಗಿದೆ ಎಂದು ಮುಖ್ಯಮಂತ್ರಿ ತಿಳಿಸಿದ್ದಾರೆ.

ಏರ್‌ಲೈನ್ಸ್‌, ಇಂಡಿಗೊ, ಏರ್‌ ಇಂಡಿಯಾ, ಸ್ಪೈಸ್‌ ಜೆಟ್‌ ವಿಮಾನಯಾನ ಸಂಸ್ಥೆಗಳು ಕಾರ್ಯಾಚರಣೆ ಸ್ಥಗಿತಗೊಳಿಸಿರುವುದಾಗಿ ಹೇಳಿವೆ.

**

ರೈಲು ಸಂಚಾರ ವ್ಯತ್ಯಯ

ಪ್ರವಾಹ ಮತ್ತು ಭೂಕುಸಿತದಿಂದ ರೈಲುಗಳ ಸಂಚಾರದಲ್ಲೂ ವ್ಯತ್ಯಯ ಉಂಟಾಗಿದೆ. ಕುಳಿತೊರೈ ಮತ್ತು ಎರನೀಲ್‌ ಮಾರ್ಗದ ನಡುವೆ ಭೂಕುಸಿತದಿಂದಾಗಿ ಬುಧವಾರ ನಾಲ್ಕು ರೈಲುಗಳ ಸಂಚಾರದಲ್ಲಿ ವ್ಯತ್ಯಯವಾಯಿತು.

ಗುರುವಾಯೂರು–ಚೆನ್ನೈ ಎಗ್‌ಮೋರ್‌ ಎಕ್ಸ್‌ಪ್ರೆಸ್‌, ಕನ್ಯಾಕುಮಾರಿ–ಮುಂಬೈ ಸಿಎಸ್‌ಎಂಟಿ ಎಕ್ಸ್‌ಪ್ರೆಸ್‌, ದಿಬುಗರ್‌–ಕನ್ಯಾಕುಮಾರಿ ವಿವೇಕ್‌ ಎಕ್ಸ್‌ಪ್ರೆಸ್‌ ಹಾಗೂ ಗಾಂಧಿಧಾಮ್‌– ತಿರುವೆನೆಲಿ ಹಮ್‌ಸಫರ್‌ ಎಕ್ಸ್‌ಪ್ರೆಸ್‌ಗಳ ಸಂಚಾರ ವ್ಯತ್ಯಯ ಆಯಿತು ಎಂದು ಮೂಲಗಳು ಹೇಳಿವೆ.

ಪ್ರತೀಕೂಲ ಹವಾಮಾನದಿಂದಾಗಿ ಕೊಲ್ಲಮ್‌ –ಪುನಲೂರು ಸೆಂಗೊಟ್ಟಾಯ್‌ ಮಾರ್ಗದಲ್ಲಿ ಕೆಲವು ಪ್ರಯಾಣಿಕ ರೈಲುಗಳ ಸಂಚಾರ ರದ್ದುಗೊಳಿಸಲಾಗಿತ್ತು. ನದಿ ಮತ್ತು ಸರೋವರಗಳು ಉಕ್ಕೇರುತ್ತಿರುವುದರಿಂದ ತಿರುವನಂತಪುರ–ತ್ರಿಶೂರ್‌ ಮಾರ್ಗದಲ್ಲಿ ರೈಲುಗಳ ವೇಗಕ್ಕೆ ಮಿತಿ ಹೇರಲಾಗಿತ್ತು. ಎಂಜಿನಿಯರ್‌ಗಳು ರೈಲ್ವೆ ಮೇಲು ಸೇತುವೆಗಳ ಸುರಕ್ಷತೆಯ ನಿರಂತರ ಮೇಲ್ವಿಚಾರಣೆ ನಡೆಸುತ್ತಿದ್ದಾರೆ ಎಂದು ರೈಲ್ವೆ ಇಲಾಖೆ ತಿಳಿಸಿದೆ.

**

ಶಬರಿಮಲೈ ಯಾತ್ರೆ ಕೈಗೊಳ್ಳದಂತೆ ಸೂಚನೆ

ಪಂಪಾ ನದಿ ಅಪಾಯದ ಮಟ್ಟದಲ್ಲಿ ಹರಿಯುತ್ತಿದ್ದು, ಅಯ್ಯಪ್ಪಸ್ವಾಮಿ ಭಕ್ತರು ಸದ್ಯಕ್ಕೆ ಶಬರಿಮಲೈ ಯಾತ್ರೆ ಕೈಗೊಳ್ಳಬಾರದು ಎಂದು ಕೇರಳ ಸರ್ಕಾರ ಸೂಚನೆ ನೀಡಿದೆ.

ಬುಧವಾರ ವಿಶೇಷ ಪೂಜೆ ನಿಗದಿಯಾಗಿದ್ದರೂ, ನದಿ ಉಕ್ಕಿ ಹರಿಯುತ್ತಿರುವುದರಿಂದ ಭಕ್ತಾದಿಗಳಿಗೆ ದೇವಸ್ಥಾನದ ಬಾಗಿಲು ಮುಚ್ಚಲಾಗಿತ್ತು.

**

ತ.ನಾಡಿನಲ್ಲೂ ವರುಣನ ಅಬ್ಬರ

ಚೆನ್ನೈ: ಪೆಚಿಪರೈ ಮತ್ತು ಪೆರುಂಜನೈ ಅಣೆಕಟ್ಟುಗಳ ಜಲಾನಯನ ಪ್ರದೇಶಗಳಲ್ಲಿ ಭಾರಿ ಮಳೆಯಾಗುತ್ತಿದೆ.

ಕನ್ಯಾಕುಮಾರಿ ಜಿಲ್ಲೆಯಲ್ಲಿ ಸುಮಾರು 100ಕ್ಕೂ ಹೆಚ್ಚು ಕುಟುಂಬಗಳನ್ನು ಬುಧವಾರ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ. ಶಾಲೆಗಳಿಗೆ ರಜೆ ಘೋಷಿಸಲಾಗಿದೆ.

ಕೇರಳದಲ್ಲಿ ಪ್ರವಾಹ ಉಕ್ಕೇರಿರುವುದರಿಂದ ರಾಜ್ಯಕ್ಕೆ ಹೆಚ್ಚು ನೀರು ಹರಿದು ಬರುತ್ತಿದೆ. ಜತೆಗೆ ತಮಿಳುನಾಡಿನ ದಕ್ಷಿಣ ಭಾಗಗಳಲ್ಲಿ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ.

ನಾಗರಕೋಯಿಲ್‌ ಸೇರಿದಂತೆ ಹಲವು ಭಾಗಗಳಲ್ಲಿ ಭಾರಿ ಮಳೆಯಿಂದ ನದಿ, ಹಳ್ಳ, ಕೊಳ್ಳಗಳು ತುಂಬಿ ಹರಿಯುತ್ತಿವೆ. ಕೆರೆ, ಕಟ್ಟೆಗಳು ಭರ್ತಿಯಾಗಿವೆ. ನದಿ ಪಾತ್ರಗಳ ಅನೇಕ ಗ್ರಾಮಗಳು ಜಲಾವೃತಗೊಂಡಿವೆ.

ತಗ್ಗು ಪ್ರದೇಶಗಳಲ್ಲಿ ಜನವಸತಿಗಳು ನೀರಿನಲ್ಲಿ ಮುಳುಗಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ.

 

ಬರಹ ಇಷ್ಟವಾಯಿತೆ?

 • 25

  Happy
 • 1

  Amused
 • 6

  Sad
 • 0

  Frustrated
 • 2

  Angry

Comments:

0 comments

Write the first review for this !