ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೇರಳಕ್ಕೆ ಮುಂಗಾರು ಮಳೆ ಸಿಂಚನ

Last Updated 8 ಜೂನ್ 2019, 19:45 IST
ಅಕ್ಷರ ಗಾತ್ರ

ನವದೆಹಲಿ/ತಿರುವನಂತಪುರ: ಕರಾವಳಿಯನ್ನು ಮುಂಗಾರು ಮಾರುತಗಳು ಪ್ರವೇಶಿಸಿದ ಶನಿವಾರವೇ ಮಧ್ಯ ಮತ್ತು ಉತ್ತರ ಕೇರಳದ ಹಲವೆಡೆ ಭಾರಿ ಮಳೆಯಾಗಿದೆ. ಕೆಲವು ಜಿಲ್ಲೆಗಳಲ್ಲಿ ಮುನ್ನೆಚ್ಚರಿಕೆ ವಹಿಸಬೇಕು ಎಂದು ಭಾರತೀಯ ಹವಾಮಾನ ಇಲಾಖೆಯು ಶುಕ್ರವಾರ ಸೂಚಿಸಿತ್ತು. ಆದರೆ, ಮುಂಗಾರು ಋತುವಿನ ಆರಂಭಿಕ ದಿನಗಳಲ್ಲಿ ತೀವ್ರತೆ ಕಡಿಮೆ ಇರಲಿದೆ ಎಂಬ ಕಾರಣಕ್ಕೆ ಈ ಸೂಚನೆಯನ್ನು ಹಿಂದಕ್ಕೆ ಪಡೆಯಲಾಗಿದೆ.

ಕಳೆದ ವರ್ಷ ಕೇರಳದಲ್ಲಿ ಭಾರಿ ಪ್ರವಾಹ ಉಂಟಾಗಿತ್ತು. ಹಾಗಾಗಿ, ಅಲ್ಲಿನ ವಿಪತ್ತು ನಿರ್ವಹಣಾ ಇಲಾಖೆಯು ಯಾವುದೇ ಪರಿಸ್ಥಿತಿ ಎದುರಿಸಲು ಸನ್ನದ್ಧವಾಗಿದೆ. ತಾಲೂಕು ಮಟ್ಟದಲ್ಲಿನ ವಿಪತ್ತು ಸ್ಪಂದನಾ ವ್ಯವಸ್ಥೆಯನ್ನು ಸಜ್ಜುಗೊಳಿಸಲಾಗಿದೆ. ಅಧಿಕಾರಿಗಳಿಗೆ ಮಾರ್ಗದರ್ಶಿ ಸೂತ್ರಗಳನ್ನು ನೀಡಲಾಗಿದೆ.

ಇಡುಕ್ಕಿ ಜಿಲ್ಲೆಯ ಪೀರಮೇಡುವಿನಲ್ಲಿ ಶನಿವಾರ ಭಾರಿ ಮಳೆ ಸುರಿದಿದೆ. ಮಲಪ್ಪುರ ಜಿಲ್ಲೆಯ ಮಂಜೇರಿ ಮತ್ತು ಇಡುಕ್ಕಿ ಜಿಲ್ಲೆಯ ತೊಡುಪುಯದಲ್ಲಿ ಸಾಧಾರಣ ಮಳೆಯಾಗಿದೆ. ಭಾನುವಾರವೂ ಅಲ್ಲಲ್ಲಿ ಭಾರಿ ಮಳೆಯಾಗಬಹುದು ಎಂದು ಹವಾಮಾನ ಇಲಾಖೆ ಹೇಳಿದೆ. ಮುಂಗಾರು ಪೂರ್ವದಲ್ಲಿಯೂ ಕೇರಳದಲ್ಲಿ ಈ ಬಾರಿ ಸಾಕಷ್ಟು ಮಳೆ ಸುರಿದಿದೆ.

ಕೇರಳಕ್ಕೆ ಮುಂಗಾರು ಮಾರುತ ಪ್ರವೇಶವಾಗಿದ್ದರೂ ಇತರೆಡೆ ವಿಸ್ತರಿಸಲು ಇನ್ನೂ ಕೆಲವು ದಿನ ಬೇಕಾಗುತ್ತದೆ. ದೆಹಲಿಯಲ್ಲಿ ಮುಂಗಾರು ಮಳೆ ಎರಡರಿಂದ ಮೂರು ದಿನ ವಿಳಂಬವಾಗಬಹುದು ಎಂದು ಭಾರತೀಯ ಹವಾಮಾನ ಇಲಾಖೆ ಹೇಳಿದೆ.

ಸಾಮಾನ್ಯವಾಗಿ ಇಲ್ಲಿ ಜೂನ್‌ 29ರಂದು ಮಳೆ ಆರಂಭವಾಗುತ್ತದೆ. ಹವಾಮಾನ ಸಂಸ್ಥೆ ಸ್ಕೈಮೆಟ್‌ ಪ್ರಕಾರ, ಇಲ್ಲಿ ಒಂದು ವಾರ ತಡವಾಗಿ ಮಳೆ ಆರಂಭವಾಗಲಿದೆ.

ಎಲ್‌ನಿನೊ ಪರಿಣಾಮ ನಗಣ್ಯ: ಎಲ್‌ನಿನೊ (ಪೆಸಿಫಿಕ್‌ ಸಾಗರದ ಮೇಲ್ಮೈಯಲ್ಲಿನ ತಾಪಮಾನದಲ್ಲಿ ಆಗುವ ಬದಲಾವಣೆ) ಜೂನ್‌ ತಿಂಗಳಲ್ಲಿ ಬೀಳುವ ಮಳೆಯ ಮೇಲೆ ಪರಿಣಾಮ ಬೀರಲಿದೆ. ಆದರೆ, ಈ ಬಾರಿ ಎಲ್‌ನಿನೊ ದುರ್ಬಲವಾಗಿದೆ. ಮುಂಗಾರು ವಿಳಂಬ
ವಾಗಿರುವುದರಿಂದ ಒಟ್ಟು ಮಳೆಯ ಪ್ರಮಾಣದಲ್ಲಿ ಕಡಿಮೆ ಆಗುವ ಸಾಧ್ಯತೆ ಇಲ್ಲ. ಆದರೆ, ಮುಂಗಾರು ಮಾರುತವು ದೇಶದ ಇತರೆಡೆ ವಿಸ್ತರಿಸುವುದು ವಿಳಂಬ ಆಗಲಿದೆ. ದಕ್ಷಿಣ ಅಂಡಮಾನ್‌ ಸಮುದ್ರಕ್ಕೆ ಮೇ 18ರಂದೇ ಮುಂಗಾರು ಮಾರುತವು ಪ್ರವೇಶಿಸಿತ್ತು. ಅಲ್ಲಿಂದ ನೇರವಾಗಿ ಕೇರಳ ಕರಾವಳಿಯತ್ತ ಮಾರುತವು ಸಾಗುತ್ತದೆ. ಈ ಬಾರಿ, ಮಾರುತವು ಮುಂದೆ ಸಾಗುವುದಕ್ಕೆ ಪೂರಕವಾದ ವಾತಾವರಣ ಇರಲಿಲ್ಲ. ಹಾಗಾಗಿ, ಕೇರಳ ಕರಾವಳಿ ಪ್ರವೇಶವು ಒಂದು ವಾರ ತಡವಾಗಿದೆ.

**

ಭಾನುವಾರ (ಜೂನ್‌ 9)

*ಉತ್ತರ ಒಳನಾಡಿನಲ್ಲಿ ಗುಡುಗು, ಮಿಂಚು ಮತ್ತು ತಾಸಿಗೆ 40–50 ಕಿ.ಮೀ. ವೇಗದ ಗಾಳಿ

*ದಕ್ಷಿಣ ಒಳನಾಡಿನಲ್ಲಿ ತಾಸಿಗೆ 30–40 ಕಿ.ಮೀ. ವೇಗದಲ್ಲಿ ಗಾಳಿ

*ಕರಾವಳಿಯ ಅಲ್ಲಲ್ಲಿ ಭಾರಿ ಮಳೆ, ತಾಸಿಗೆ 45–55 ಕಿ. ಮೀ. ವೇಗದ ಗಾಳಿ

ಸೋಮವಾರ (ಜೂನ್‌ 10)

* ಉತ್ತರ ಒಳನಾಡಿನಲ್ಲಿ 40–50 ಕಿ.ಮೀಗದ ಗಾಳಿ, ಗುಡುಗು ಮಿಂಚು

* ಕರಾವಳಿ ಮತ್ತು ದಕ್ಷಿಣ ಒಳನಾಡಿನಲ್ಲಿ ಭಾರಿ ಮಳೆ ಸಾಧ್ಯತೆ

* ಕರಾವಳಿಯಲ್ಲಿ ತಾಸಿಗೆ 55–65 ಕಿ.ಮೀ. ವೇಗದ ಗಾಳಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT