ಅಕಾಲಿಕ ಮಳೆ, ಬಿರುಗಾಳಿಗೆ 50 ಬಲಿ

ಬುಧವಾರ, ಮೇ 22, 2019
29 °C
ರಾಜಸ್ಥಾನ, ಮಧ್ಯಪ್ರದೇಶ, ಗುಜರಾತ್‌, ಮಹಾರಾಷ್ಟ್ರದ ಕೆಲವೆಡೆ ಅನಾಹುತ

ಅಕಾಲಿಕ ಮಳೆ, ಬಿರುಗಾಳಿಗೆ 50 ಬಲಿ

Published:
Updated:

ಅಹಮದಾಬಾದ್‌/ಭೋಪಾಲ್‌/ಜೈಪುರ: ರಾಜಸ್ಥಾನ, ಮಧ್ಯಪ್ರದೇಶ, ಗುಜರಾತ್‌ ಮತ್ತು ಮಹಾರಾಷ್ಟ್ರ ರಾಜ್ಯಗಳ ಹಲವು ಭಾಗಗಳಲ್ಲಿ ಮಂಗಳವಾರ ರಾತ್ರಿಯಿಡೀ ಸಿಡಿಲಿನ ಆರ್ಭಟದೊಂದಿಗೆ ಸುರಿದ ಅಕಾಲಿಕ ಮಳೆಗೆ ಮತ್ತು ಬೀಸಿದ ಬಿರುಗಾಳಿಗೆ 50 ಮಂದಿ ಮೃತಪಟ್ಟಿದ್ದಾರೆ. ಹಲವರು ಗಾಯಗೊಂಡಿದ್ದಾರೆ.

ರಾಜಸ್ಥಾನದಲ್ಲಿ 21, ಮಧ್ಯಪ್ರದೇಶದಲ್ಲಿ 15, ಗುಜರಾತ್‌ನಲ್ಲಿ 10 ಮತ್ತು ಮಹಾರಾಷ್ಟ್ರದಲ್ಲಿ ಮೂವರು ಮೃತಪಟ್ಟಿದ್ದಾರೆ. ಮೃತ ಕುಟುಂಬದವರಿಗೆ ಪ್ರಧಾನಮಂತ್ರಿ ರಾಷ್ಟ್ರೀಯ ಪರಿಹಾರ ನಿಧಿಯಿಂದ ತಲಾ ₹2 ಲಕ್ಷ ಹಾಗೂ ಗಾಯಗೊಂಡವರಿಗೆ ತಲಾ ₹50,000 ಪರಿಹಾರ ಘೋಷಿಸಲಾಗಿದೆ. 

ರಾಜಸ್ಥಾನದಲ್ಲಿ ಭಾರಿ ಮಳೆ ಮತ್ತು ಬಿರುಗಾಳಿಯಿಂದ ಜನಜೀವನ ಅಸ್ತವ್ಯಸ್ತಗೊಂಡಿದೆ. ಮೃತರ ಕುಟುಂಬಗಳಿಗೆ ರಾಜ್ಯ ಸರ್ಕಾರ ತಲಾ ₹4 ಲಕ್ಷ ಪರಿಹಾರ ಘೋಷಿಸಿದೆ.

ಇದನ್ನೂ ಓದಿ: ಕೊಂಬೆ ಬಿದ್ದು ಸ್ಕೂಟರ್ ಸವಾರ ಸಾವು

ಗುಜರಾತ್‌ ಉತ್ತರ ಮತ್ತು ಸೌರಾಷ್ಟ್ರ ಭಾಗದಲ್ಲಿ ಅಕಾಲಿಕ ಮಳೆ ಆಗಿದೆ. ಮುಖ್ಯಮಂತ್ರಿ ವಿಜಯ್‌ ರೂಪಾನಿ ಅವರು ಮೃತರ ಕುಟುಂಬಗಳಿಗೆ ತಲಾ ₹2 ಲಕ್ಷ ಪರಿಹಾರ ಘೋಷಿಸಿದ್ದಾರೆ. 

ಉತ್ತರ ಗುಜರಾತ್‌ನಲ್ಲಿ ಪ್ರಧಾನಿ ಮೋದಿ ಅವರ ಚುನಾವಣಾ ಪ್ರಚಾರಕ್ಕೆ ಹಾಕಿದ್ದ ವೇದಿಕೆಗೆ ಹಾನಿಯಾಗಿದೆ.

ಮಹಾರಾಷ್ಟ್ರದ ನಾಸಿಕ್‌ ಜಿಲ್ಲೆಯಲ್ಲಿ 71 ವರ್ಷ ವಯಸ್ಸಿನ ಮಹಿಳೆ, 32 ವರ್ಷದ ವ್ಯಕ್ತಿ ಹಾಗೂ ದೇವಸ್ಥಾನದ ಅರ್ಚಕರೊಬ್ಬರು ಮೃತಪಟ್ಟಿದ್ದಾರೆ.

ಭಾರಿ ಮಳೆ ಮುನ್ಸೂಚನೆ: ದೇಶದ ಉತ್ತರ ಹಾಗೂ ಈಶಾನ್ಯ ಭಾಗದಲ್ಲಿ  ಭಾನುವಾರದವರೆಗೂ ಬಿರುಗಾಳಿ, ಆಲಿಕಲ್ಲು–ಸಿಡಿಲು ಸಹಿತ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ರಾಜ್ಯದಲ್ಲಿ ಮೂರು ಸಾವು
ಬೆಂಗಳೂರು: ಹೆಬ್ಬಾಳದ ಲುಂಬಿನಿ ಗಾರ್ಡನ್ ಬಳಿ ಬುಧವಾರ ಗಾಳಿಸಹಿತ ಮಳೆಗೆ ಬೃಹತ್ ಮರವೊಂದು ಸ್ಕೂಟರ್‌ ಮೇಲೆ ಬಿದ್ದು ಕಿರಣ್ (27) ಎಂಬುವರು ಮೃತಪಟ್ಟಿದ್ದಾರೆ.

ಕುಣಿಗಲ್‌ನ ಕಿರಣ್, ನಗರದಲ್ಲಿ ಕೊರಿಯರ್ ಕೆಲಸ ಮಾಡಿಕೊಂಡಿದ್ದರು. ಸ್ಕೂಟರ್‌ನಲ್ಲಿ ಅಮೃತಹಳ್ಳಿ ಕಡೆಗೆ ಹೋಗುತ್ತಿದ್ದಾಗ ಮರ ಅವರ ಮೇಲೆ ಬಿದ್ದಿತು. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲ್ಲೂಕಿನ ಹೊಸಹಳ್ಳಿ ಗ್ರಾಮದಲ್ಲಿ ಮಳೆಯಿಂದ ಮನೆ ಗೋಡೆ ಕುಸಿದು ಭಾಗ್ಯಮ್ಮ ಕೇಶವರೆಡ್ಡಿ (45), ವೆಂಕಿ (10) ಮೃತಪಟ್ಟಿದ್ದಾರೆ.

ಇದನ್ನೂ ಓದಿ: ಗುಡುಗು–ಸಿಡಿಲಿನ ಆರ್ಭಟ: ಚುನಾವಣಾ ಕಾವಿಗೆ ತಂಪೆರೆದ ಮಳೆ

ರಾಜಕೀಯ ಬೇಡ: ಮೋದಿ
ಹಿಮ್ಮತ್‌ನಗರ್‌ (ಗುಜರಾತ್‌): ಅಕಾಲಿಕ ಮಳೆ ಹಾಗೂ ಬಿರುಗಾಳಿಯಿಂದ ಬಲಿಯಾದವರನ್ನಿಟ್ಟುಕೊಂಡು ಯಾರೂ ರಾಜಕೀಯ ಮಾಡಬಾರದು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ,

‘ಇಂಥ ದುಃಖದ ಸಮಯದಲ್ಲಿ ರಾಜಕೀಯ ಮಾಡಬಾರದು. ಚುನಾವಣೆಗಳು ಬರುತ್ತವೆ, ಹೋಗುತ್ತವೆ. ಆದರೆ, ಇಂಥ ಸಮಯದಲ್ಲಿ ನೊಂದವರ ದುಃಖದಲ್ಲಿ ಭಾಗಿಯಾಗಬೇಕು. ಅವರಿಗೆ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಸೇರಿ ಎಲ್ಲ ರೀತಿಯ ನೆರವನ್ನು ಒದಗಿಸುವ ಅಗತ್ಯವಿದೆ’ ಎಂದು ಚುನಾವಣಾ ಪ್ರಚಾರದ ರ‍್ಯಾಲಿಯಲ್ಲಿ ಅವರು ರಾಜಕೀಯ ಪಕ್ಷಗಳನ್ನು ವಿನಂತಿಸಿಕೊಂಡರು.

**

ಅಕಾಲಿಕ ಮಳೆ ಆಗಿರುವ ಪ್ರದೇಶಗಳಲ್ಲಿನ ಪರಿಸ್ಥಿತಿಯ ಮೇಲ್ವಿಚಾರಣೆ ನಡೆಸಲಾಗುತ್ತಿದೆ. ಹಾನಿಗೊಳಗಾಗಿರುವ ರಾಜ್ಯಗಳಿಗೆ ಸಾಧ್ಯವಿರುವ ಎಲ್ಲ ಸಹಾಯಗಳನ್ನು ನೀಡಲು ಕೇಂದ್ರ ಸಿದ್ಧವಿದೆ.
ರಾಜನಾಥ್‌ ಸಿಂಗ್‌, ಕೇಂದ್ರ ಗೃಹ ಸಚಿವ

ಇರ್ತಾರಾ ಮೋದಿ? ಬರ್ತಾರಾ ರಾಹುಲ್?

ಲೋಕಸಭೆ ಫಲಿತಾಂಶಕ್ಕಾಗಿ ವಿಶ್ವವೇ ಬೆರಗುಗಣ್ಣಿನಿಂದ ಕಾಯುತ್ತಿದೆ. ನರೇಂದ್ರ ಮೋದಿ ಗೆಲ್ತಾರಾ? ರಾಹುಲ್‌ ಗಾಂಧಿ ಬರ್ತಾರಾ? ರಾಜಕಾರಣದ ಕ್ಷಣಕ್ಷಣದ ಮಾಹಿತಿ, ತಾಜಾ ಅಪ್‌ಡೇಟ್‌ಗಳಿಗಾಗಿ www.prajavani.net/prajamatha ನೋಡಿ.

ಫೇಸ್‌ಬುಕ್‌ನಲ್ಲಿ ನಮ್ಮನ್ನು ಲೈಕ್ ಮಾಡಿ ಅಥವಾ ಟ್ವಿಟರ್, ಯೂಟ್ಯೂಬ್, ಇನ್‌ಸ್ಟಾಗ್ರಾಂನಲ್ಲಿ ಫಾಲೊ ಮಾಡಿ.

ತ್ವರಿತ ಸುದ್ದಿ, ನಿಖರ ವಿಶ್ಲೇಷಣೆಗೆ www.prajavani.net ಓದಿ. 'ಪ್ರಜಾವಾಣಿ' ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 3

  Happy
 • 2

  Amused
 • 3

  Sad
 • 0

  Frustrated
 • 1

  Angry

Comments:

0 comments

Write the first review for this !