ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಪ್ಪನ್ನು ಪುನರಾವರ್ತಿಸಬೇಡಿ: ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಪಾಕ್‌ಗೆ ಎಚ್ಚರಿಕೆ

Last Updated 22 ಸೆಪ್ಟೆಂಬರ್ 2019, 18:24 IST
ಅಕ್ಷರ ಗಾತ್ರ

ಪಟ್ನಾ: ‘1965 ಮತ್ತು 1971ರಲ್ಲಿ ಮಾಡಿದ್ದ ತಪ್ಪುಗಳನ್ನು ಪುನರಾವರ್ತಿಸಬೇಡಿ’ ಎಂದುರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಅವರು ಪಾಕಿಸ್ತಾನಕ್ಕೆ ಎಚ್ಚರಿಕೆ ನೀಡಿದ್ದಾರೆ.

‘ಪಾಕಿಸ್ತಾನವು ತನ್ನ ದೇಶದೊಳಗೇ ಮಾನವಹಕ್ಕುಗಳ ಉಲ್ಲಂಘನೆ ಮಾಡುತ್ತಿದ್ದು, ಇದರ ವಿರುದ್ಧ ಆಂತರಿಕವಾಗಿ ಭಾರಿ ಚಳವಳಿ ನಡೆದು ದೇಶ ಛಿದ್ರವಾಗುವ ಸಂದರ್ಭ ಬರಬಹುದು’ ಎಂದಿದ್ದಾರೆ.

ಬಿಜೆಪಿ ವತಿಯಿಂದ ಆಯೋಜಿಸಲಾಗಿದ್ದ ಜನ ಜಾಗೃತಿ ಸಭೆಯಲ್ಲಿ ಮಾತನಾಡಿದ ಅವರು ಸಂವಿಧಾನದ 370ನೇ ವಿಧಿಯನ್ನು ರದ್ದು ಮಾಡಿದ ಸರ್ಕಾರದ ಕ್ರಮವನ್ನು ಸಮರ್ಥಿಸಿಕೊಂಡರು. ‘370ನೇ ವಿಧಿಯು ಕಾಶ್ಮೀರದ ಮಟ್ಟಿಗೆ ‘ಕ್ಯಾನ್ಸರ್‌’ನಂತಾಗಿತ್ತು. ಆ ರಾಜ್ಯದ ನಾಲ್ಕನೇ ಮೂರರಷ್ಟು ಜನರು ಈ ವಿಧಿಯನ್ನು ರದ್ದು ಮಾಡುವುದರ ಪರವಾಗಿದ್ದರು’ ಎಂದರು.

‘ಅಧಿಕಾರದಲ್ಲಿ ಇರಲಿ ಅಥವಾ ಇಲ್ಲದಿರಲಿ, 370ನೇ ವಿಧಿಯನ್ನು ಕುರಿತ ಬಿಜೆಪಿಯ ನಿಲುವಿನಲ್ಲಿ ಯಾವುದೇ ಬದಲಾವಣೆ ಆಗಿರಲಿಲ್ಲ. ಈ ವಿಧಿಯನ್ನು ರದ್ದು ಮಾಡಿದ್ದರಿಂದ ‘ಪಕ್ಷವು ತನ್ನ ನಿಲುವಿಗೆ ಬದ್ಧವಾಗಿರುತ್ತದೆ’ ಎಂದು ಸಾಬೀತುಪಡಿಸಿದಂತಾಗಿದೆ. ಭಯೋತ್ಪಾದನೆಗೆ ಬೆಂಬಲ ನೀಡುವುದನ್ನು ನಿಲ್ಲಿಸುವವರೆಗೂ ಪಾಕಿಸ್ತಾನದ ಜೊತೆ ಮಾತುಕತೆಯ ಸಾಧ್ಯತೆಯೇ ಇಲ್ಲ. ಜಮ್ಮು ಕಾಶ್ಮೀರ ಭಾರತದ ಅವಿಭಾಜ್ಯ ಅಂಗ, ಮಾತುಕತೆ ಏನಿದ್ದರೂ ಪಾಕ್‌ ಆಕ್ರಮಿತ ಕಾಶ್ಮೀರಕ್ಕೆ ಸೀಮಿತವಾಗಿರುತ್ತದೆ ಎಂಬುದನ್ನು ಆ ದೇಶವು ಅರ್ಥ ಮಾಡಿಕೊಳ್ಳಬೇಕು’ ಎಂದರು.

‘ಪಾಕಿಸ್ತಾನದ ವಿರುದ್ಧ ನಾವೇನೂ ಮಾಡಬೇಕಾಗಿಲ್ಲ. ಆ ದೇಶವು ಆಯ್ಕೆ ಮಾಡಿಕೊಂಡ ಹಾದಿಯೇ ಅದನ್ನು ಛಿದ್ರಗೊಳಿಸಲಿದೆ. ಅಲ್ಲಿ ನಡೆಯುತ್ತಿರುವ ಮಾನವ ಹಕ್ಕುಗಳ ಉಲ್ಲಂಘನೆ ಮತ್ತು ಬೆಳೆಯುತ್ತಿರುವ ಭಯೋತ್ಪಾದನೆಗಳು ಆ ರಾಷ್ಟ್ರವನ್ನು ಒಳಗಿನಿಂದ ದುರ್ಬಲಗೊಳಿಸುತ್ತಿದೆ’ ಎಂದರು.

‘ಒಂದು ರಾಷ್ಟ್ರದ ಭಯೋತ್ಪಾದಕರು ಇನ್ನೊಂದು ರಾಷ್ಟ್ರದಲ್ಲಿ ಸ್ವಾತಂತ್ರ್ಯ ಹೋರಾಟಗಾರರಾಗಿರುತ್ತಾರೆ’ ಎಂಬ ಪಾಕಿಸ್ತಾನದ ವಾದವನ್ನು ಒಪ್ಪಲು ಸಾಧ್ಯವಿಲ್ಲ ಎಂದರು.

***

ಅವರೆಷ್ಟು ಭಯೋತ್ಪಾದಕರನ್ನು ಕಳುಹಿಸುತ್ತಾರೋ ನೋಡೋಣ. ಬಂದವರಲ್ಲಿ ಒಬ್ಬರೂ ಮರಳಿ ಪಾಕಿಸ್ತಾನಕ್ಕೆ ಹೋಗಲಾರರು –ರಾಜನಾಥ್‌ ಸಿಂಗ್‌,ರಕ್ಷಣಾ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT