ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆರೆ,ಕಟ್ಟೆ ಮಂಜೂರಿಗೆ ಅವಕಾಶ ಇಲ್ಲ

2000ರ ಸುತ್ತೋಲೆ ರದ್ದು: ಸಚಿವ ದೇಶಪಾಂಡೆ
Last Updated 15 ಜೂನ್ 2018, 19:30 IST
ಅಕ್ಷರ ಗಾತ್ರ

ಬೆಂಗಳೂರು: ‘ಮೂಲಸ್ವರೂಪ ಕಳೆದುಕೊಂಡಿರುವ ಸರ್ಕಾರಿ ಕೆರೆ, ಕಟ್ಟೆ, ಕುಂಟೆ ಮತ್ತು ಹಳ್ಳಗಳನ್ನು ಖಾಸಗಿ ಉದ್ದಿಮೆಗಳು ಮತ್ತು ಸಂಘಸಂಸ್ಥೆಗಳಿಗೆ ಮಂಜೂರು ಮಾಡಲು ಅವಕಾಶವಿದ್ದ 2000ರ ಸುತ್ತೋಲೆಯನ್ನು ತಕ್ಷಣದಿಂದ ಜಾರಿಗೆ ಬರುವಂತೆ ಹಿಂತೆಗೆದುಕೊಳ್ಳಲಾಗಿದೆ’ ಎಂದು ಕಂದಾಯ ಸಚಿವ ಆರ್.ವಿ. ದೇಶಪಾಂಡೆ ತಿಳಿಸಿದ್ದಾರೆ.

‘ಹೀಗಾಗಿ ಸರ್ಕಾರಿ ಜಲಮೂಲ ಪ್ರದೇಶಗಳನ್ನು ಖಾಸಗಿ ಉದ್ದಿಮೆಗಳು ಮತ್ತು ಸಂಘ-ಸಂಸ್ಥೆಗಳಿಗೆ ಮಾರಾಟ ಮಾಡಬಹುದೆಂಬ ಯಾವುದೇ ಪ್ರಸ್ತಾವವನ್ನೂ ಕಳುಹಿಸದಂತೆ ಎಲ್ಲಾ ಜಿಲ್ಲಾಧಿಕಾರಿಗಳಿಗೂ ಸೂಚಿಸಲಾಗಿದೆ’ ಎಂದು ಅವರು ಹೇಳಿದ್ದಾರೆ.

ಸರ್ಕಾರಿ ಜಲಮೂಲ ಪ್ರದೇಶಗಳನ್ನು ಸಾರ್ವಜನಿಕ ಉದ್ದೇಶಕ್ಕಾಗಲಿ ಅಥವಾ ಖಾಸಗಿ ಉದ್ದೇಶಕ್ಕೇ ಆಗಲಿ ಉಪಯೋಗಿಸಿಕೊಳ್ಳುವಂತಿಲ್ಲ ಎಂದು ಸುಪ್ರೀಂ ಕೋರ್ಟ್‌ ನಿರ್ದೇಶನ ನೀಡಿದೆ. ಜೊತೆಗೆ, ಕೇಂದ್ರ ಪರಿಸರ ಮತ್ತು ಅರಣ್ಯ ಸಚಿವಾಲಯವು 2010ರಲ್ಲಿ ಜಾರಿಗೆ ತಂದಿರುವ ಜಲಪ್ರದೇಶಗಳ ಸಂರಕ್ಷಣೆ ಮತ್ತು ನಿರ್ವಹಣೆ ನಿಯಮಗಳಡಿಯಲ್ಲಿ ಕೆರೆಗಳನ್ನೂ ಸೇರಿಸಲಾಗಿದೆ. ಸರ್ಕಾರಿ ಜಲಮೂಲಗಳ ಸಂರಕ್ಷಣೆಗೆ ತುರ್ತು ಕ್ರಮಗಳನ್ನು ಕೈಗೊಳ್ಳುವಂತೆ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (ಎನ್‌ಜಿಟಿ) 2016ರ ಮೇ 4ರಂದು ಆದೇಶಿಸಿತ್ತು.

ಕರ್ನಾಟಕ ಸರೋವರ ಸಂರಕ್ಷಣೆ ಮತ್ತು ಅಭಿವೃದ್ಧಿ ಪ್ರಾಧಿಕಾರದ ನಿಯಮ 2014ರ ಪ್ರಕರಣ 1(ಎಚ್)ರ ಅನ್ವಯ ‘ನೀರು ಇರಲಿ ಅಥವಾ ಇಲ್ಲದಿರಲಿ, ಸರ್ಕಾರಿ ಕೆರೆ, ಖರಾಬು, ಕುಂಟೆ, ಕಟ್ಟೆ, ರಾಜಕಾಲುವೆ ಮುಂತಾದವೆಲ್ಲವೂ ಜಲಮೂಲ ಪ್ರದೇಶಗಳೇ ಆಗಿರುತ್ತವೆ’ ಎಂದು ವ್ಯಾಖ್ಯಾನಿಸಲಾಗಿದೆ.

‘ಈ ಎಲ್ಲ ಅಂಶಗಳನ್ನು ಗಮನಿಸಿ ಸುತ್ತೋಲೆಯನ್ನು ಹಿಂತೆಗೆದುಕೊಳ್ಳಲಾಗಿದೆ. ಇದರಿಂದಾಗಿ ರಾಜ್ಯದ ಜಲಮೂಲಗಳನ್ನು ಉಳಿಸಿಕೊಳ್ಳಬಹುದು’ ಎಂದು ದೇಶಪಾಂಡೆ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT