ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಂಗ್ರೆಸ್‌ ರೀತಿಯ ಜಾತಿ ರಾಜಕಾರಣ ಮಾಡುವುದಿಲ್ಲ

ರಾಜಸ್ಥಾನ ಬಿಜೆಪಿಯ ಚುನಾವಣಾ ಉಸ್ತುವಾರಿ ಪ್ರಕಾಶ್‌ ಜಾವಡೇಕರ್‌ ಸಂದರ್ಶನ
Last Updated 5 ನವೆಂಬರ್ 2018, 19:54 IST
ಅಕ್ಷರ ಗಾತ್ರ

*ರಾಜಸ್ಥಾನ ಚುನಾವಣೆ ಉಸ್ತುವಾರಿಯಲ್ಲಿ ನಿಮಗಾದ ಅನುಭವಗಳೇನು? ಹೊಣೆ ವಹಿಸಿಕೊಂಡ ನಂತರ ನೀವು ತಂದ ಬದಲಾವಣೆಗಳು ಯಾವುವು?
ರಾಜಸ್ಥಾನದ ಉಸ್ತುವಾರಿ ವಹಿಸಿಕೊಂಡು ಒಂದು ತಿಂಗಳಾಯಿತು. ಜನರ ಜತೆಗೆ ಮಾತ್ರವಲ್ಲ, ಪಕ್ಷದೊಳಗೆ ಕೂಡ ಸಂವಹನದ ಸಮಸ್ಯೆ ಇದೆ ಎಂಬುದನ್ನು ನಾನು ಅರಿತುಕೊಂಡಿದ್ದೇನೆ. ತಾವೇನು ಮಾಡಿದ್ದೇವೆ ಎಂಬುದನ್ನು ಶಾಸಕರು ಜನರಿಗೆ ತಿಳಿಸುವ ಕೆಲಸ ಮಾಡಿಲ್ಲ. ಈ ಸಮಸ್ಯೆಯನ್ನು ಪರಿಹರಿಸಿಕೊಂಡಿದ್ದೇವೆ. ರಾಜಸ್ಥಾನದಲ್ಲಿ ಮಾತ್ರವಲ್ಲ, ಉಳಿದ ಮೂರು ರಾಜ್ಯಗಳಲ್ಲಿಯೂ ಬಿಜೆಪಿ ಗೆಲ್ಲಲಿದೆ.

*ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿಯ ಭವಿಷ್ಯ ಉಜ್ವಲವಾಗಿದೆ ಎಂದು ನಿಮ್ಮ ಭಾವನೆಯೇ?
ನಾವು ಅಧಿಕಾರ ಉಳಿಸಿಕೊಳ್ಳುವುದು ಖಚಿತ. ರಾಜ್ಯಗಳಲ್ಲಿ ಅಧಿಕಾರ ಉಳಿಸಿಕೊಳ್ಳುವಲ್ಲಿ ಬಿಜೆಪಿಯ ಶಕ್ತಿ ಏನು ಎಂಬುದು ಕಳೆದ ನಾಲ್ಕು ವರ್ಷಗಳ ಸಾಧನೆ ನೋಡಿದರೆ ಗೊತ್ತಾಗುತ್ತದೆ. 2014ರಲ್ಲಿ ಬಿಜೆಪಿ ಆಳ್ವಿಕೆ ಇದ್ದ ರಾಜ್ಯಗಳು ಆರಾಗಿದ್ದರೆ 14 ರಾಜ್ಯಗಳಲ್ಲಿ ಕಾಂಗ್ರೆಸ್‌ ಸರ್ಕಾರ ಇತ್ತು. ಈಗ ಬಿಜೆಪಿ 19 ರಾಜ್ಯಗಳಲ್ಲಿ ಅಧಿಕಾರದಲ್ಲಿದ್ದರೆ ಕಾಂಗ್ರೆಸ್‌ ನಾಲ್ಕರಲ್ಲಿ ಮಾತ್ರ ಇದೆ. ಭಾರತದ ಜನರು ಆಗಲೇ ದೃಢ ನಿರ್ಧಾರ ಮಾಡಿದ್ದಾರೆ ಮತ್ತು ಅವರಿಗೆ ಬದಲಾವಣೆ ಬೇಕಾಗಿದೆ. ನರೇಂದ್ರ ಮೋದಿ ಅವರು ಮತ್ತೆ ಪ್ರಧಾನಿಯಾಗಬೇಕು ಎಂದು ಜನರು ಬಯಸುವ ರೀತಿಯಲ್ಲಿಯೇ ರಾಜಸ್ಥಾನದಲ್ಲಿ ವಸುಂಧರಾ ರಾಜೇ ಸರ್ಕಾರ ಮತ್ತೆ ಬರಬೇಕು ಎಂದು ಬಯಸುತ್ತಿದ್ದಾರೆ.

ಕಾಂಗ್ರೆಸ್‌ ಈಗ ಅಪ್ರಸ್ತುತವಾದ, ಮೂಲೆಗುಂಪಾಗಿರುವ ಪಕ್ಷ. ಮೊದಲಿಗೆ ಅವರು ಚುನಾವಣಾ ಆಯೋಗವನ್ನು ಸಬಲಗೊಳಿಸಿದ್ದರು. ಈಗ ಅವರೇ ಆಯೋಗವನ್ನು ತೆಗಳುತ್ತಿದ್ದಾರೆ. ಹಾಗೆಯೇ, ಆಧಾರ್‌ ಮತ್ತು ಜಿಎಸ್‌ಟಿ ಪ್ರಕ್ರಿಯೆಗೆ ಚಾಲನೆ ಕೊಟ್ಟವರು ಅವರೇ. ಆದರೆ, ಈಗ ಅವನ್ನು ವಿರೋಧಿಸುತ್ತಿದ್ದಾರೆ.

*180 ಕ್ಷೇತ್ರಗಳಲ್ಲಿ ಬಿಜೆಪಿ ಗೆಲ್ಲಲಿದೆ ಎಂದು ವಸುಂಧರಾ ರಾಜೇ ಹೇಳುತ್ತಿದ್ದಾರೆ. ಆದರೆ ಅವರು ನಡೆಸಿದ ‘ಗೌರವ ಯಾತ್ರೆ’ಗೆ ಸಿಕ್ಕ ಪ್ರತಿಕ್ರಿಯೆ ಬಹಳಸಪ್ಪೆಯಾಗಿತ್ತಲ್ಲವೇ...
ಮುಖ್ಯಮಂತ್ರಿ ಸ್ಥಾನದ ನಮ್ಮ ಅಭ್ಯರ್ಥಿ ರಾಜೇ ಅವರ ಯಾತ್ರೆಯ ಸಂದರ್ಭದಲ್ಲಿ ನಡೆದ ಪ್ರತಿಭಟನೆಗಳ ಹಿಂದೆ ಕಾಂಗ್ರೆಸ್ ಇತ್ತು. ಕಾಂಗ್ರೆಸ್‌ ಮುಖಂಡರಾದ ಸಚಿನ್‌ ಪೈಲಟ್‌ ಮತ್ತು ಅಶೋಕ್‌ ಗೆಹ್ಲೋಟ್‌ ಪರಸ್ಪರ ಮುಖ ನೋಡುವ ಸ್ಥಿತಿಯಲ್ಲಿಯೂ ಇಲ್ಲ. ಹಾಗಿದ್ದರೂ ಅವರು ಪ್ರತಿಭಟನೆ ಸಂಘಟಿಸುವಲ್ಲಿ ಯಶಸ್ವಿಯಾಗಿದ್ದಾರೆ. ಯಾತ್ರೆಯ ಸಂದರ್ಭದಲ್ಲಿ ಎಲ್ಲರ ಜತೆಗೂ ರಾಜೇ ಅವರು ಮಾತನಾಡಿದ್ದಾರೆ.

*ಟಿಕೆಟ್‌ ಹಂಚಿಕೆಯ ಕಾರ್ಯತಂತ್ರ ಏನು? ಮಧ್ಯ ಪ್ರದೇಶ ಮತ್ತು ಛತ್ತೀಸಗಡದಲ್ಲಿ ಮಾಡಿದ ಹಾಗೆ ಶಾಸಕರಿಗೆ ಟಿಕೆಟ್‌ ನಿರಾಕರಿಸಲಾಗುವುದೇ?
ಟಿಕೆಟ್‌ ನೀಡಲು ಗೆಲ್ಲುವ ಶಕ್ತಿಯೇ ಅತ್ಯಂತ ಮುಖ್ಯ ಮಾನದಂಡ. ನಮ್ಮ ಪಕ್ಷದ ಶಕ್ತಿ ಇರುವುದೇ ಕಾರ್ಯಕರ್ತರು. ಮತಗಟ್ಟೆಯ ಸುತ್ತ ಗಮನ ಕೇಂದ್ರೀಕರಿಸುವುದು ಚುನಾವಣೆಯ ಹೊಸ ಕಾರ್ಯತಂತ್ರ. ರಾಜಸ್ಥಾನದಲ್ಲಿಯೂ ಕೆಲವು ಶಾಸಕರನ್ನು ಕೈಬಿಡಲಾಗುವುದು.

*ಅಭ್ಯರ್ಥಿ ಪಟ್ಟಿಯಲ್ಲಿ ಯುವ ಜನರು ಮತ್ತು ಮಹಿಳೆಯರ ಸಂಖ್ಯೆ ಹೆಚ್ಚು ಇರಲಿದೆಯೇ? ಜಾತಿ ಲೆಕ್ಕಾಚಾರದ ಸಮತೋಲನ ಹೇಗೆ?
ಪ್ರತಿ ಕ್ಷೇತ್ರದಲ್ಲಿಯೂ ಗೆಲ್ಲುಸ ಸಾಮರ್ಥ್ಯವೇ ಮುಖ್ಯ. ಜಾತಿ ಸಮೀಕರಣಗಳನ್ನು ಪರಿಶೀಲಿಸಲಾಗುತ್ತಿದೆ. ಆದರೆ, ನಾವು ಕಾಂಗ್ರೆಸ್‌ನಂತೆ ಜಾತಿ ರಾಜಕಾರಣ ಮಾಡುವುದಿಲ್ಲ.

*ಕಳೆದ ಚುನಾವಣೆಯಲ್ಲಿ ನಾಲ್ವರು ಮುಸ್ಲಿಮರಿಗೆ ಬಿಜೆಪಿ ಟಿಕೆಟ್‌ ನೀಡಲಾಗಿತ್ತು. ಈ ಬಾರಿ ಈ ಸಂಖ್ಯೆ ಇನ್ನೂ ಹೆಚ್ಚಾಗಲಿದೆಯೇ?
ಈಗಲೇ ಏನನ್ನೂ ಹೇಳಲಾಗದು.

*ಜಾಟ್, ರಜಪೂತ ಮತ್ತು ಗುಜ್ಜರ್‌ ಸಮುದಾಯ ಹಾಗೂ ರೈತರು ಬಿಜೆಪಿಯ ಬಗ್ಗೆ ಅಸಮಾಧಾನಗೊಂಡಿದ್ದಾರೆ. ಇದು ಚುನಾವಣೆಯ ಮೇಲೆ ಪರಿಣಾಮ ಬೀರಬಹುದೇ?
ಕೆಲವು ವಿಚಾರಗಳು ಇವೆ, ಆದರೆ, ಇವು ಯಾವುವೂ ಸರ್ಕಾರ ಸೃಷ್ಟಿಸಿದ್ದಲ್ಲ. ಅತೃಪ್ತಿ ಇರುವ ಎಲ್ಲ ಸಮುದಾಯಗಳ ಜತೆಗೂ ಮಾತುಕತೆ ನಡೆಸಲಾಗಿದೆ. ಈಗ ಎಲ್ಲವೂ ಶಾಂತವಾಗಿದೆ.

*ವಿರೋಧ ಪಕ್ಷ ಕಾಂಗ್ರೆಸ್‌ನ ಸ್ಥಿತಿ ಹೇಗಿದೆ? ಪೈಲಟ್‌ ಅಥವಾ ಗೆಹ್ಲೋಟ್‌ ಅವರಲ್ಲಿ ಯಾರನ್ನು ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಬಿಂಬಿಸಬಹುದು?
ಕಾಂಗ್ರೆಸ್‌ ಒಂದು ಗೊಂದಲದ ಗೂಡು. ಪೈಲಟ್‌ ಅವರನ್ನು ಬಿಂಬಿಸಬೇಕು ಎಂಬ ಬಯಕೆ ರಾಹುಲ್‌ ಗಾಂಧಿಗೆ ಇದೆ. ಆದರೆ, ಹಾಗೆ ಮಾಡುವ ಧೈರ್ಯ ಇಲ್ಲ. ಅದರಿಂದಾಗುವ ಪರಿಣಾಮಗಳನ್ನು ಎದುರಿಸಲು ಅವರು ಸಿದ್ಧರಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT