ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊರೊನಾ ಚಿತ್ರಣ | ‘ಬಿಲ್ವಾಡಾ ಮಾದರಿ’ ಕಡೆಗಣನೆಗೆ ಭಾರಿ ಬೆಲೆತೆತ್ತ ರಾಜಸ್ಥಾನ

Last Updated 15 ಮೇ 2020, 20:00 IST
ಅಕ್ಷರ ಗಾತ್ರ

ರಾಜಸ್ಥಾನದಲ್ಲಿ ಮೊದಲ ಕೋವಿಡ್ ಪ್ರಕರಣ ಪತ್ತೆಯಾಗಿದ್ದು ಜೈಪುರದಲ್ಲಿ, ಅದೂ ಮಾರ್ಚ್ 2ರಂದು. ಜೈಪುರಕ್ಕೆ ಭೇಟಿ ನೀಡಿದ್ದ ಇಟಲಿಯ ಪ್ರವಾಸಿ ದಂಪತಿಯಲ್ಲಿ ಪತಿಗೆ ಸೋಂಕು ಇರುವುದು ದೃಢಪಟ್ಟಿತು. ಮೂರು ದಿನಗಳ ನಂತರ ಆತನ ಪತ್ನಿಗೂ ಸೋಂಕು ಇರುವುದು ದೃಡಪಟ್ಟಿತು. ಈ ವೇಳೆಗೆ ಪ್ರವಾಸಿ ದಂಪತಿ ಜೋಧಪುರ, ಜೈಪುರ ಮತ್ತು ಹನುಮಾನ್‌ಗಡಕ್ಕೆ ಭೇಟಿ ನೀಡಿದ್ದರು. ಇವರ ಸಂಪರ್ಕಕ್ಕೆ ಬಂದಿದ್ದವರನ್ನು ಪತ್ತೆ ಮಾಡಿ ಕ್ವಾರಂಟೈನ್ ಮಾಡಲಾಯಿತು. ವಿದೇಶಗಳಿಂದ ಹಿಂತಿರುಗುವವರು ಮತ್ತು ವಿದೇಶಿ ಪ್ರವಾಸಿಗರನ್ನು ಕಡ್ಡಾಯವಾಗಿ ತಪಾಸಣೆ ಮತ್ತು ಕ್ವಾರಂಟೈನ್‌ ಮಾಡಲು ಆರಂಭಿಸಿತು. ಹೀಗಾಗಿ ರಾಜ್ಯದಲ್ಲಿ ಸೋಂಕು ನಿಯಂತ್ರಣದಲ್ಲಿದೆ ಎಂದು ಭಾವಿಸಲಾಗಿತ್ತು.

ಆದರೆ, ಮಾರ್ಚ್ 18ರ ವೇಳೆಗೆ ವಿದೇಶಿ ಪ್ರವಾಸಿಗರೂ ಸೇರಿ ವಿದೇಶಗಳಿಂದ ಹಿಂತಿರುಗಿದ 7 ಮಂದಿಗೆ ಸೋಂಕು ತಗುಲಿರುವುದು ಪತ್ತೆಯಾಯಿತು. ಮರುದಿನವೇ ಸರ್ಕಾರವು ಹಲವು ಜಿಲ್ಲೆಗಳಲ್ಲಿ ನಿರ್ಬಂಧಗಳನ್ನು ಜಾರಿ ಮಾಡಿತು. ಪ್ರಧಾನಿ ನರೇಂದ್ರ ಮೋದಿ ಮಾರ್ಚ್ 22ರಂದು ಜನತಾ ಕರ್ಫ್ಯೂ ಘೋಷಿಸಿದರು. ಆದರೆ, ರಾಜಸ್ಥಾನ ಸರ್ಕಾರ ಮಾರ್ಚ್‌ 22ರಂದು ರಾಜ್ಯದಾದ್ಯಂತ ಲಾಕ್‌ಡೌನ್ ಘೋಷಿಸಿತು. ಮಾರ್ಚ್ 30ರ ಹೊತ್ತಿಗೆ 69 ಜನರಿಗೆ ಸೋಂಕು ತಗುಲಿರುವುದು ದೃಢಪಟ್ಟಿತು. ನಂತರ ಸರ್ಕಾರ ತಪಾಸಣೆಗಳ ಸಂಖ್ಯೆ ಏರಿಕೆ ಮಾಡಿತು. ಹೀಗಾಗಿ ಪತ್ತೆಯಾಗುವ ಸೋಂಕು ಪ್ರಕರಣಗಳ ಸಂಖ್ಯೆ ದಿಢೀರ್ ಏರಿಕೆಯಾಯಿತು.

ಈ ಅವಧಿಯಲ್ಲಿ ರಾಜ್ಯದ ಬಿಲ್ವಾಡಾ ಜಿಲ್ಲೆಯಲ್ಲಿ 27 ಜನರಿಗೆ ಸೋಂಕು ತಗುಲಿತ್ತು. ಬಿಲ್ವಾಡಾ ಜಿಲ್ಲಾಡಳಿತವು, ಬಿಲ್ವಾಡಾ ನಗರದ 80,000 ಮನೆಗಳ ಸಮೀಕ್ಷೆಯನ್ನು ಒಂದು ವಾರದಲ್ಲಿ ಪೂರ್ಣಗೊಳಿಸಿತು. ಪದೇ–ಪದೇ ಸಮೀಕ್ಷೆ ಮತ್ತು ತಪಾಸಣೆ ನಡೆಸಲಾಯಿತು. ಕಟ್ಟುನಿಟ್ಟಿನ ಕ್ವಾರಂಟೈನ್ ಮತ್ತು ಸೀಲ್‌ಡೌನ್ ಜಾರಿ ಮಾಡಲಾಯಿತು. ಜಿಲ್ಲೆಯಲ್ಲಿ ಪತ್ತೆಯಾಗಿದ್ದ 27 ಪ್ರಕರಣಗಳಲ್ಲಿಏಪ್ರಿಲ್ 10ರ ಹೊತ್ತಿಗೆ 25 ಜನರು ಗುಣಮುಖರಾಗಿದ್ದರು. ಈ ಅವಧಿಯಲ್ಲಿ ಜಿಲ್ಲೆಯಲ್ಲಿ ಒಂದೂ ಹೊಸ ಪ್ರಕರಣ ಪತ್ತೆಯಾಗಲಿಲ್ಲ. ರಾಜ್ಯದಲ್ಲಿ 500 ಪ್ರಕರಣಗಳಷ್ಟೇ ಇದ್ದವು. ಸೋಂಕು ನಿಯಂತ್ರಣಕ್ಕೆ ‘ಬಿಲ್ವಾಡಾ ಮಾದರಿ’ ಅನುಸರಿಸಿ ಎಂಬ ಸಲಹೆಗಳು ಬಂದವು. ಜಿಲ್ಲಾಡಳಿತವು ಕಂಟೈನ್‌ಮೆಂಟ್ ನಿಯಮಗಳನ್ನು ಸಡಿಲಗೊಳಿಸಿತು. ರಾಜ್ಯದ ಇತರ ಜಿಲ್ಲೆಗಳಲ್ಲೂ ‘ಬಿಲ್ವಾಡಾ ಮಾದರಿ’ ಅನುಸರಿಸುವ ಮಾತನ್ನು ಆಡಲಾಯಿತು. ಅದು ಅನುಷ್ಠಾನಕ್ಕೆ ಬರಲಿಲ್ಲ, ಬದಲಿಗೆ ತಪಾಸಣೆ, ಕ್ವಾರಂಟೈನ್ ಕಾರ್ಯಗಳನ್ನು ಸಡಿಲ ಮಾಡಲಾಯಿತು. ಹೀಗಾಗಿ ಸೋಂಕು ವ್ಯಾಪಕವಾಗಿ ಹರಡಿತು.

ಏಪ್ರಿಲ್ 10ರ ನಂತರ ರಾಜ್ಯದಲ್ಲಿ ಪ್ರತಿ 5 ದಿನಗಳಿಗೆ 500 ಹೊಸ ಪ್ರಕರಣಗಳು ಪತ್ತೆಯಾದವು. ಏಪ್ರಿಲ್ 30ರವರೆಗೂ ಇದೇ ಸ್ಥಿತಿ ಇತ್ತು. ಮೇ ಮೊದಲ ವಾರದ ಮೊದಲ ನಾಲ್ಕು ದಿನದಲ್ಲೇ (ಮೇ 4ರ ವೇಳೆಗೆ) 500 ಹೊಸ ಪ್ರಕರಣಗಳು ಪತ್ತೆಯಾದವು. ನಾಲ್ಕು ದಿನಕ್ಕೆ 500 ಪ್ರಕರಣಗಳುಪತ್ತೆಯಾಗುವ ಸರಣಿ ಮುಂದುವರಿಯಿತು. ‘ಬಿಲ್ವಾಡಾ ಮಾದರಿ’ಗೆ ದೊರೆತಿದ್ದ ಯಶಸ್ಸನ್ನು ಬೇರೆ ಜಿಲ್ಲೆಗಳಲ್ಲಿ ಬಳಸಿಕೊಳ್ಳಲು ರಾಜ್ಯ ಸರ್ಕಾರ ಸೋತಿತು. ಸ್ವತಃ ಬಿಲ್ವಾಡಾ ಜಿಲ್ಲೆಯಲ್ಲಿ ಈಗ 75ಕ್ಕೂ ಹೆಚ್ಚು ಪ್ರಕರಣಗಳು ಸಕ್ರಿಯವಾಗಿವೆ. ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 5,000ವನ್ನು ಸಮೀಪಿಸುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT