ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಲಿಂಪಿಕ್ಸ್‌ ಅಂಗಣದಿಂದ ಚುನಾವಣಾ ಕಣಕ್ಕೆ

ಕುತೂಹಲ ಮೂಡಿಸಿದ ಜೈಪುರ ಗ್ರಾಮೀಣ ಕ್ಷೇತ್ರ * ರಾಥೋಡ್ – ಪೂನಿಯಾ ಹಣಾಹಣಿ
Last Updated 2 ಏಪ್ರಿಲ್ 2019, 20:10 IST
ಅಕ್ಷರ ಗಾತ್ರ

ಜೈಪುರ: ಇಬ್ಬರೂ ಅಂತರರಾಷ್ಟ್ರೀಯ ಮಟ್ಟದಲ್ಲಿ ಭಾರತವನ್ನು ಪ್ರತಿನಿಧಿಸಿದ್ದವರು. ಪುರಸ್ಕಾರಗಳನ್ನು ಪಡೆದು ದೇಶಕ್ಕೆ ಹೆಮ್ಮೆಯ ಗರಿ ಮೂಡಿಸಿದ್ದವರು. ಈಗ, ಒಲಿಂಪಿಕ್ಸ್ ಪದಕವಿಜೇತ, ಕೇಂದ್ರ ಸಚಿವ ರಾಜ್ಯವರ್ಧನ್ ಸಿಂಗ್ ರಾಥೋಡ್ ಹಾಗೂ ಡಿಸ್ಕಸ್‌ ಎಸೆತಗಾರ್ತಿ ಕೃಷ್ಣಾ ಪುನಿಯಾ ಅವರು ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಎದುರಾಳಿಗಳಾಗಿ ಕಣಕ್ಕಿಳಿದಿದ್ದು, ಎಲ್ಲರ ಚಿತ್ತ ರಾಜಸ್ಥಾನದತ್ತ ನೆಟ್ಟಿದೆ.

ಜೈಪುರ ಗ್ರಾಮೀಣ ಕ್ಷೇತ್ರದ ಹಾಲಿ ಸಂಸದರೂ ಆಗಿರುವ ರಾಜ್ಯವರ್ಧನ್ ಅವರು ಬಿಜೆಪಿಯಿಂದ ಸ್ಪರ್ಧಿಸಿದ್ದಾರೆ. ಪೂನಿಯಾ ಅವರಿಗೆ ಕಾಂಗ್ರೆಸ್ ಟಿಕೆಟ್ ನೀಡಿದೆ. ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಬಂಗಾರದ ಪದಕ ಪಡೆದಿದ್ದ, ಸಾದುಲ್‌ಪುರ ವಿಧಾನಸಭಾ ಕ್ಷೇತ್ರದ ಶಾಸಕಿಯೂ ಆಗಿರುವ ಪೂನಿಯಾ ಅವರನ್ನು ಕಾಂಗ್ರೆಸ್ ಕಣಕ್ಕಿಳಿಸಿದೆ.

ರಾಥೋಡ್ ಅವರು ಪ್ರಭಾವಿ ರಜಪೂತರನ್ನು ಪ್ರತಿನಿಧಿಸಿದರೆ, ಪೂನಿಯಾ ಅವರು ಜಾಟ್‌ ಸಮುದಾಯದ ನಾಯಕಿಯಾಗಿ ಪ್ರವರ್ಧಮಾನಕ್ಕೆ ಬರುತ್ತಿದ್ದಾರೆ.

ರ್‍ಯಾಲಿಗಳಲ್ಲಿ ಜನರನ್ನು ಸೇರಿಸುವ ಸಾಮರ್ಥ್ಯ ಹೊಂದಿರುವ ಪೂನಿಯಾ, 2013ರಲ್ಲಿ ರಾಜಕೀಯ ಪ್ರವೇಶಿಸಿದರು. 2018ರಲ್ಲಿ ಸಾದುಲ್‌ಪುರ ಕ್ಷೇತ್ರದಲ್ಲಿ ಬಿಎಸ್‌ಪಿ ಶಾಸಕ ಮನೋಜ್ ಕುಮಾರ್ ನ್ಯಾಂಗಲಿ ಅವರನ್ನು ಪರಾಭವಗೊಳಿಸಿ ಶಾಸನಸಭೆಗೆ ಆಯ್ಕೆಯಾದರು.

2010ರ ಕಾಮನ್‌ವೆಲ್ತ್ ಗೇಮ್ಸ್‌ನ ಡಿಸ್ಕಸ್ ಥ್ರೋನಲ್ಲಿ ಚಿನ್ನದ ಪದಕಕ್ಕೆ ಮುತ್ತಿಕ್ಕುವ ಮೂಲಕಈ ಸಾಧನೆ ಮಾಡಿದ ಮೊದಲ ಭಾರತೀಯ ಮಹಿಳೆ ಎಂಬ ಶ್ರೇಯಕ್ಕೆ ಪೂನಿಯಾ ಪಾತ್ರರಾಗಿದ್ದರು. 2012ರ ಲಂಡನ್ ಒಲಿಂಪಿಕ್ಸ್‌ ಹಾಗೂ 2008ರ ಬೀಜಿಂಗ್ ಒಲಿಂಪಿಕ್ಸ್‌ನಲ್ಲಿ ಪದಕ ಪಡೆಯಲು ಅವರಿಗೆ ಆಗಲಿಲ್ಲ.

ರಾಥೋಡ್ ಅವರು ರಾಜಸ್ಥಾನದಲ್ಲಿ ಬಿಜೆಪಿಯ ಪ್ರಮುಖ ನಾಯಕ ಎನಿಸಿಕೊಂಡಿದ್ದಾರೆ. ಭಾರತೀಯ ಸೇನೆಯ ಕರ್ನಲ್ ಆಗಿ ನಿವೃತ್ತರಾದ ಬಳಿಕ 2013ರಲ್ಲಿ ರಾಜಕೀಯಕ್ಕೆ ಸೇರಿದರು. 2014ರಲ್ಲಿ ಜೈಪುರ ಗ್ರಾಮೀಣ ಕ್ಷೇತ್ರದಲ್ಲಿ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಸಿ.ಪಿ. ಜೋಷಿ ವಿರುದ್ಧ 3.32 ಲಕ್ಷ ಮತಗಳ ಭಾರಿ ಅಂತರದಿಂದ ಜಯ ಗಳಿಸಿದರು.

ಈ ಜಯಕ್ಕೆ ಕೇಂದ್ರದಲ್ಲಿಸಚಿವ ಸ್ಥಾನ ಸಿಕ್ಕಿತು. ಕೇಂದ್ರ ಯುವಜನ, ಕ್ರೀಡೆ ಮತ್ತು ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ಸ್ವತಂತ್ರ ನಿರ್ವಹಣೆ ರಾಥೋಡ್ ಅವರಿಗೆ ಒಲಿದು ಬಂದಿತು.

ಪೂನಿಯಾ ಅವರಂತೆಯೇ ಸಮಾವೇಶಗಳಿಗೆ ಜನರನ್ನು ಸೆಳೆಯುವ ಶಕ್ತಿ ರಾಥೋಡ್ ಅವರಿಗೂ ಇದೆ. 2004ರ ಅಥೆನ್ಸ್ ಒಲಿಂಪಿಕ್ಸ್‌ನಲ್ಲಿ ವೈಯಕ್ತಿಕ ವಿಭಾಗದಲ್ಲಿ ಬೆಳ್ಳಿ ಪದಕ ಗೆಲ್ಲುವ ಮೂಲಕ ಈ ಸಾಧನೆ ಮಾಡಿದ ಮೊದಲ ಭಾರತೀಯ ಎನಿಸಿಕೊಂಡ ಶ್ರೇಯ ಅವರದ್ದು.

ಏಪ್ರಿಲ್ 29 ಹಾಗೂ ಮೇ 6ರಂದು ಒಟ್ಟು ಎರಡು ಹಂತಗಳಲ್ಲಿ ರಾಜಸ್ಥಾನದಲ್ಲಿ ಮತದಾನ ನಿಗದಿಯಾಗಿದೆ.2014ರಲ್ಲಿ ರಾಜಸ್ಥಾನದ ಎಲ್ಲಾ 25 ಸ್ಥಾನಗಳನ್ನು ಕಮಲ ಪಾಳಯ ಗೆದ್ದುಕೊಂಡಿತ್ತು. ಅದರೆ 2018ರಲ್ಲಿ ನಡೆದ ಉಪಚುನಾವಣೆಯಲ್ಲಿ ಎರಡು ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಗೆದ್ದಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT