ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

3 ರಾಜ್ಯಗಳ ಚುನಾವಣೆ– ಮಹಾಸಮರಕ್ಕೆ ಸೆಮಿಫೈನಲ್‌

ಹಿಂದಿ ಹೃದಯಭಾಗದ ರಾಜ್ಯಗಳಾದ ರಾಜಸ್ಥಾನ, ಮಧ್ಯಪ್ರದೇಶ
Last Updated 17 ಅಕ್ಟೋಬರ್ 2018, 1:59 IST
ಅಕ್ಷರ ಗಾತ್ರ

ನವದೆಹಲಿ: ಲೋಕಸಭೆ ಚುನಾವಣೆಗಳಿಗೆ ಇನ್ನು ಉಳಿದಿರುವುದು ತಿಂಗಳುಗಳ ಲೆಕ್ಕ. ಈ ಹಂತದಲ್ಲಿ ಯಾವುದೇ ವಿಧಾನಸಭಾ ಚುನಾವಣೆ ನಡೆದರೂ ಅದರ ಫಲಿತಾಂಶದ ಕುರಿತು ಕುತೂಹಲ ಸ್ವಾಭಾವಿಕ. ಐದು ರಾಜ್ಯಗಳ ವಿಧಾನಸಭಾ ಚುನಾವಣೆಗಳು ಘೋಷಣೆಯಾಗಿವೆ. ದೆಹಲಿ ಗದ್ದುಗೆಯ ದಾರಿಗಳು ಮುಖ್ಯವಾಗಿ ಹಿಂದಿ ಹೃದಯಭಾಗದ ರಾಜ್ಯಗಳಿಂದಲೇ ಹಾದು ಹೋಗುತ್ತವೆ ಎಂಬ ರೂಢಿಗತ ರಾಜಕೀಯ ಮಾತಿದೆ. ಈ ಮಾತು ಅತ್ಯಂತ ವಾಸ್ತವ.

ದೇಶದ ಅತಿ ದೊಡ್ಡ ರಾಜ್ಯ ಉತ್ತರಪ್ರದೇಶ ಲೋಕಸಭೆಯ 80 ಸ್ಥಾನಗಳಿಗೆ ಸಂಸದರನ್ನು ಆರಿಸಿ ಕಳಿಸುತ್ತದೆ. ಬಿಹಾರದ ಲೋಕಸಭಾ ಸೀಟುಗಳ ಸಂಖ್ಯೆ 40. ಒಂದೊಮ್ಮೆ ಬಿಹಾರದ ಭಾಗವಾಗಿದ್ದ ಜಾರ್ಖಂಡ್‌ನ ಸೀಟುಗಳು 14. ಇದೀಗ ವಿಧಾನಸಭಾ ಚುನಾವಣೆ ಕಣಕ್ಕೆ ಧುಮುಕಿರುವ ಮಧ್ಯಪ್ರದೇಶ, ಛತ್ತೀಸಗಢ ಹಾಗೂ ರಾಜಸ್ಥಾನದಲ್ಲಿನ ಒಟ್ಟು ಲೋಕಸಭಾ ಸೀಟುಗಳು 65. ಅಂದರೆ ಹಿಂದೀ ಹೃದಯಭಾಗದ ರಾಜ್ಯಗಳು ಆರಿಸಿ ಕಳಿಸುವ ಒಟ್ಟು ಸಂಸದರ ಸಂಖ್ಯೆ 199!

2014ರಲ್ಲಿ ಈ 199ರ ಪೈಕಿ ಮಿತ್ರಪಕ್ಷಗಳ ನೆರವಿನಿಂದ 180 ಸ್ಥಾನಗಳನ್ನು ಬಾಚಿಕೊಂಡದ್ದು ಬಿಜೆಪಿಯ ಅದ್ಭುತ ಸಾಧನೆ. ಪಕ್ಷ ಅಥವಾ ಪಕ್ಷಗಳ ಕೂಟ ಕೇಂದ್ರದಲ್ಲಿ ಸರ್ಕಾರ ರಚಿಸಲು ಲೋಕಸಭೆಯಲ್ಲಿ ಅಗತ್ಯವಿರುವ ಸರಳ ಬಹುಮತದ ಸಂಖ್ಯೆ 273. ಹಿಂದೀ ಹೃದಯ ಭಾಗದ ರಾಜ್ಯಗಳಲ್ಲಿ ಮಿತ್ರಪಕ್ಷಗಳೊಂದಿಗೆ 180 ಸ್ಥಾನಗಳನ್ನು ಗೆದ್ದ ಬಿಜೆಪಿಗೆ ಉಳಿದ ರಾಜ್ಯಗಳಿಂದ ಸರಳ ಬಹುಮತಕ್ಕೆ ಬೇಕಿದ್ದ ಸ್ಥಾನಗಳ ಸಂಖ್ಯೆ 93 ಮಾತ್ರವಿತ್ತು.

2014ರ ಇದೇ ಚಮತ್ಕಾರದ ಸಾಧನೆಯನ್ನು ಬಿಜೆಪಿ ಹಿಂದಿ ಹೃದಯಭಾಗದಲ್ಲಿ ಮರಳಿ ಮಾಡಿ ತೋರೀತೇ ಎಂಬ ಕುರಿತು ದೇಶದ ರಾಜಕೀಯ ವಲಯಗಳಲ್ಲಿ ಗಂಭೀರ ಚರ್ಚೆ ಜರುಗಿದೆ. ಕಳೆದ ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಆಕ್ರಮಣಕಾರಿ ನಾಯಕತ್ವ ಪ್ರದರ್ಶಿಸಿದ ಮೋದಿ ತಮ್ಮ ಪರವಾಗಿ ಜನಪ್ರಿಯತೆಯ ಅಲೆಯನ್ನು ರೂಪಿಸುವಲ್ಲಿ ಯಶಸ್ಸು ಕಂಡರು. ರಾಜಕೀಯ ವಿಶ್ಲೇಷಕರ ಪ್ರಕಾರ ಅದು ಮೋದಿ ಜನಪ್ರಿಯತೆಯ ಪರಾಕಾಷ್ಠೆಯ ಹಂತ.

ಶಿಖರ ಮುಟ್ಟಿದ ನಂತರ ಏರಲು ಉಳಿದದ್ದೇನೂ ಇಲ್ಲ. ಒಂದೋ ಅಲ್ಲಿಯೇ ಬೀಡು ಬಿಡಬೇಕು, ಇಲ್ಲವೇ ಕೆಳಗಿಳಿಯಬೇಕು. ಕಳೆದ ನಾಲ್ಕೂವರೆ ವರ್ಷಗಳ ಮೋದಿ ಸರ್ಕಾರದ ಆಡಳಿತ ಶಿಖರದಲ್ಲಿಯೇ ಬೀಡು ಬಿಡಲು ಸಾಲುವಷ್ಟು ಜನಮನ ಗೆದ್ದಿಲ್ಲ. ಕಳೆದ ಬಾರಿಯ ಸಾಧನೆಯನ್ನು ಉಳಿಸಿಕೊಳ್ಳಲು ಒಂದೊಮ್ಮೆ ಬಿಜೆಪಿ ವಿಫಲವಾದರೆ, ಇಲ್ಲಿ ಕಳೆದುಕೊಂಡ ಸೀಟುಗಳನ್ನು ದೇಶದ ಬೇರೆ ಭಾಗಗಳಲ್ಲಿ ಹೊಂದಿಸಬೇಕಾಗುತ್ತದೆ.

ಮೂರು ಪ್ರಮುಖ ರಾಜ್ಯಗಳಾದ ಮಧ್ಯಪ್ರದೇಶ, ಛತ್ತೀಸಗಢ ಹಾಗೂ ರಾಜಸ್ಥಾನ ಇದೀಗ ವಿಧಾನಸಭೆ ಚುನಾವಣೆಗಳಿಗೆ ಸಜ್ಜಾಗಿವೆ. 2014ರಲ್ಲಿ, ಈ ರಾಜ್ಯಗಳಲ್ಲಿರುವ ಒಟ್ಟು 65 ಲೋಕಸಭಾ ಸೀಟುಗಳ ಪೈಕಿ 62ನ್ನು ಬಿಜೆಪಿ ಗೆದ್ದುಕೊಂಡಿತ್ತು. ಹೀಗಾಗಿ ಈ ಮೂರೂ ರಾಜ್ಯಗಳ ವಿಧಾನಸಭೆ ಚುನಾವಣೆಗಳು 2019ರ ಲೋಕಸಭಾ ಚುನಾವಣೆಗಳ ಫಲಿತಾಂಶಗಳಿಗೆ ಕೈಮರ ಆಗುವ ಎಲ್ಲ ಸಾಧ್ಯತೆಯನ್ನು ರಾಜಕೀಯ ಪಂಡಿತರು ಎದುರುನೋಡುತ್ತಿದ್ದಾರೆ.

ವಿಧಾನಸಭೆ ಚುನಾವಣೆ ಎದುರಿಸಿರುವ ಮಧ್ಯಪ್ರದೇಶ, ಛತ್ತೀಸಗಢ ಹಾಗೂ ರಾಜಸ್ತಾನದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಹೆಚ್ಚು ಕಡಿಮೆ ನೇರ ಸ್ಪರ್ಧಿಗಳು. ಮೂರನೇ ಪಕ್ಷ ಅಥವಾ ರಾಜಕೀಯ ಶಕ್ತಿ ಈ ರಾಜ್ಯಗಳಲ್ಲಿ ಇನ್ನೂ ಬೆಳೆದು ನಿಂತಿಲ್ಲ. ಮೂರೂ ರಾಜ್ಯಗಳಲ್ಲಿ ಬಿಜೆಪಿ ಅಧಿಕಾರದಲ್ಲಿರುವ ಪಕ್ಷ. ಮಧ್ಯಪ್ರದೇಶ ಮತ್ತು ಛತ್ತೀಸಗಢದಲ್ಲಂತೂ 15 ವರ್ಷಗಳಿಂದ ಬಿಜೆಪಿ ಆಡಳಿತದಲ್ಲಿದೆ. ರಾಜಸ್ಥಾನದ ಮತದಾರರು ಒಮ್ಮೆ ಬಹುಮತ ನೀಡಿದ ಪಕ್ಷವನ್ನು ಸತತವಾಗಿ ಎರಡನೆಯ ಸಲ ಆರಿಸಿದ ಉದಾಹರಣೆ ಇತ್ತೀಚಿನ ದಶಕಗಳಲ್ಲಿ ಇಲ್ಲ.

ಹೀಗಾಗಿ ಹಾಲಿ ವಿಧಾನಸಭಾ ಚುನಾವಣೆಗಳಲ್ಲಿ ಆಡಳಿತ ವಿರೋಧಿ ಭಾವನೆ ಬಿಜೆಪಿಯ ಪಾಲಿಗೆ ಬಹುದೊಡ್ಡ ಸವಾಲು. ಬಿಜೆಪಿಗೆ ನಕಾರಾತ್ಮಕ ಆಗಬಹುದಾದ ಈ ಅಂಶವನ್ನು ವಿರೋಧಪಕ್ಷವಾದ ಕಾಂಗ್ರೆಸ್ ತನ್ನ ಅನುಕೂಲಕ್ಕೆ ಬಳಸಿಕೊಂಡೀತು ಎಂಬುದು ಸ್ವಾಭಾವಿಕ ನಿರೀಕ್ಷೆ. ಸೋತು ಸುಣ್ಣವಾಗಿ ರಾಜಕೀಯ ಆಳಿವಿನ ಅಂಚಿನಲ್ಲಿ ನೇತಾಡಿರುವ ಒಂದು ಕಾಲದ ದೈತ್ಯ ಪಕ್ಷ ಕಾಂಗ್ರೆಸ್‌ಗೆ ಈ ಮೂರು ರಾಜ್ಯಗಳ ಚುನಾವಣೆ ಅಳಿವು ಉಳಿವಿನ ಕಣ. ಈ ಚುನಾವಣೆಗಳಲ್ಲಿ ಸೋಲು ಎದುರಾದರೆ ಸದ್ಯೊಭವಿಷ್ಯದಲ್ಲಿ ಮತ್ತೆ ತಲೆಯೆತ್ತುವುದು ಕಷ್ಟ. ಹೀಗಾಗಿ ಹಾಲಿ ಚುನಾವಣೆಗಳು, ಕಾಂಗ್ರೆಸ್ ಪಕ್ಷದ ನಾಯಕತ್ವ, ಸಂಘಟನಾ ಸಾಮರ್ಥ್ಯ, ರಾಜಕೀಯ ಜಾಣ್ಮೆ, ಸಮರತಂತ್ರ ಹಾಗೂ ಗೆಲುವಿನ ಹಸಿವನ್ನು ಅಗ್ನಿಪರೀಕ್ಷೆಗೆ ಒಡ್ಡಲಿವೆ.

ಇನ್ನೂ ಆಕಾರ ಪಡೆಯದೆ ಗಾಳಿಯಲ್ಲಿ ತೇಲಿರುವ ವಿರೋಧ ಪಕ್ಷಗಳ ಮಹಾಮೈತ್ರಿಯ ಸಂಭವನೀಯ ಪಕ್ಷಗಳು ಮತ್ತು ಬಿಜೆಪಿ ಮತ್ತು ಅದರ ಮಿತ್ರಪಕ್ಷಗಳ ನಡುವೆ ನಡೆಯಲಿರುವ ಸೆಮಿಫೈನಲ್ ಸಮರವಿದು ಎಂದೇ ಪರಿಗಣಿಸಲಾಗಿದೆ. 2019ರ ಸೋಲು-ಗೆಲುವಿನ ಅಜಮಾಸು ರೂಪುರೇಖೆಗಳು ಈ ಹಂತದಲ್ಲಿ ಮೈದಳೆಯಲಿವೆ. ಎರಡೂ ಬಣಗಳು ಈ ಸುತ್ತಿನಲ್ಲಿ ಹೂಡುವ ತಂತ್ರ– ಪ್ರತಿತಂತ್ರಗಳನ್ನು ದೇಶ ಕುತೂಹಲದಿಂದ ಎದುರು ನೋಡತೊಡಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT