ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜಸ್ಥಾನ: ‘ಕೇಸರಿ’ ಅಲೆಯಲ್ಲಿ ಗೆಹ್ಲೋಟ್‌ ವಿಲವಿಲ

Last Updated 23 ಮೇ 2019, 18:54 IST
ಅಕ್ಷರ ಗಾತ್ರ

ಜೈಪುರ: ರಾಜಸ್ಥಾನದಲ್ಲಿ ಬಿಜೆಪಿ ಮತ್ತೊಮ್ಮೆ ವಿಜಯದ ನಗೆಬೀರಿದೆ. ರಾಜ್ಯದಲ್ಲಿ ಇತ್ತೀಚೆಗಷ್ಟೇ ಕಾಂಗ್ರೆಸ್‌ ನೇತೃತ್ವದ ಸರ್ಕಾರ ರಚನೆಯಾಗಿರುವುದರ ಹೊರತಾಗಿಯೂ ಬಿಜೆಪಿ ಎಲ್ಲಾ 25 ಲೋಕಸಭಾ ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿ (ಒಂದು ಕ್ಷೇತ್ರದಲ್ಲಿ
ಮೈತ್ರಿಪಕ್ಷವಾದ ರಾಷ್ಟ್ರೀಯ ಲೋಕ ತಾಂತ್ರಿಕ ಪಾರ್ಟಿ ಅಭ್ಯರ್ಥಿ ಗೆದ್ದಿದ್ದಾರೆ) ಕಾಂಗ್ರೆಸ್‌ಗೆ ಇರುಸುಮುರುಸು ಉಂಟುಮಾಡಿದೆ.

ಈ ಬಾರಿ ಪುನಃ ಬಿಜೆಪಿಗೆ ಮಣೆ ಹಾಕುವ ಮೂಲಕ ರಾಜಸ್ಥಾನದ ಜನರು ಹೊಸ ದಾಖಲೆ ಬರೆದಿದ್ದಾರೆ. 1993ರಿಂದೀಚೆಗೆ ಈ ರಾಜ್ಯದ ಜನರು ಸತತ ಎರಡು ಅವಧಿಗೆ ಒಂದೇ ಪಕ್ಷವನ್ನು ಆಯ್ಕೆ ಮಾಡಿದ್ದಿಲ್ಲ. ಈ ಬಾರಿ ಬಿಜೆಪಿಯನ್ನು ಗೆಲ್ಲಿಸಿದ್ದಷ್ಟೇ ಅಲ್ಲ 2014ರಂತೆ ಎಲ್ಲಾ 25 ಸ್ಥಾನಗಳಲ್ಲೂ ಎನ್‌ಡಿಎ ಅಭ್ಯರ್ಥಿಗಳನ್ನೇ ಆಯ್ಕೆ ಮಾಡಿದ್ದು ವಿಶೇಷವಾಗಿದೆ.

ಜೋಧಪುರ ಕ್ಷೇತ್ರದಿಂದ ಮುಖ್ಯಮಂತ್ರಿ ಅಶೋಕ್‌ ಗೆಹ್ಲೋಟ್‌ ಅವರ ಪುತ್ರ ವೈಭವ್‌ ಗೆಹ್ಲೋಟ್‌ ಅವರು ಕೆಂದ್ರದ ಸಚಿವ ರಾಜೇಂದ್ರ ಸಿಂಗ್‌ ಶೇಖಾವತ್‌ ವಿರುದ್ಧ ಸ್ಪರ್ಧಿಸಿದ್ದರು. ವೈಭವ್‌ ಅವರು 2.70 ಲಕ್ಷ ಮತಗಳ ಅಂತರದಿಂದ ಸೋಲು ಕಂಡಿದ್ದು, ಇದು ಮುಖ್ಯಮಂತ್ರಿ ಅಶೋಕ್‌ ಗೆಹ್ಲೋಟ್‌ ಅವರಿಗೆ ಆಗಿರುವ ಹಿನ್ನಡೆ ಎಂದು ವಿಶ್ಲೇಷಿಸಲಾಗುತ್ತಿದೆ.

ಕಳೆದ ವರ್ಷ ನಡೆದ ವಿಧಾನಸಭಾ ಚುನಾವಣೆಯಲ್ಲಿ ರಾಜಸ್ಥಾನದ ಜನರು ಬಿಜೆಪಿ ಆಡಳಿತವನ್ನು ಕೊನೆಗೊಳಿಸಿ ಕಾಂಗ್ರೆಸ್‌ಗೆ ಮಣೆಹಾಕಿದ್ದರು. ಐದು ಲೋಕಸಭಾ ಚುನಾವಣೆಗಳಲ್ಲಿ ಗೆದ್ದಿದ್ದ ಮತ್ತು ಅದಾಗಲೇ ಎರಡು ಬಾರಿ ರಾಜ್ಯದ ಮುಖ್ಯಮಂತ್ರಿಯೂ ಆಗಿದ್ದ ಅನುಭವಿ ರಾಜಕಾರಣಿ ಅಶೋಕ್‌ ಗೆಹ್ಲೋಟ್‌ ಅವರು 2018ರ ಡಿಸೆಂಬರ್‌ನಲ್ಲಿ ಮೂರನೇ ಬಾರಿಗೆ ರಾಜ್ಯದ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದರು. ಮುಖ್ಯಮಂತ್ರಿ ಹುದ್ದೆಯ ಆಕಾಂಕ್ಷಿಯಾಗಿದ್ದ ಯುವ ನಾಯಕ ಸಚಿನ್‌ ಪೈಲಟ್‌ ಉಪಮುಖ್ಯ
ಮಂತ್ರಿಯಾದರು.

ಆದರೆ ಈ ಸರ್ಕಾರ ಜನರ ನಿರೀಕ್ಷೆಯ ಮಟ್ಟಕ್ಕೆ ಏರುವಲ್ಲಿ ವಿಫಲವಾಯಿತು, ಸರ್ಕಾರದ ಯೋಜನೆಗಳು ಜನಸಾಮಾನ್ಯರನ್ನು ತಲುಪಿಲ್ಲ ಎಂಬುದನ್ನು ಈ ಫಲಿತಾಂಶ ತೋರಿಸಿಕೊಟ್ಟಿದೆ. ಲೋಕಸಭಾ ಚುನಾವಣೆಗೆ ಕೆಲವೇ ತಿಂಗಳು ಉಳಿದಿವೆ ಎಂದಾಗ ಅಲ್ವರ್‌ ಅತ್ಯಾಚಾರ ಘಟನೆ ರಾಷ್ಟ್ರಮಟ್ಟದಲ್ಲಿ ಸದ್ದು ಮಾಡಿತು. ‘ಚುನಾವಣೆಯಲ್ಲಿ ಸೋಲಾಗಬಹುದೆಂಬ ಭೀತಿಯಿಂದ ಅತ್ಯಾಚಾರ ಪ್ರಕರಣ
ವನ್ನು ಸರ್ಕಾರ ಮುಚ್ಚಿಡುತ್ತಿದೆ’ ಎಂದು ಬಿಜೆಪಿ ಆರೋಪಿಸಿತು. ಅಲ್ವರ್‌ ಘಟನೆಯ ಪರಿಣಾಮ ರಾಜಸ್ಥಾನಕ್ಕೆ ಮಾತ್ರ ಸೀಮಿತವಾಗಲಿಲ್ಲ. ಉತ್ತರಪ್ರದೇಶದ ಚುನಾವಣಾ ಪ್ರಚಾರದಲ್ಲೂ ಪ್ರಧಾನಿ ಮೋದಿ ಇದನ್ನು ಬಳಸಿಕೊಂಡು, ‘ದಲಿತ ಮಹಿಳೆಯ ಬಗ್ಗೆ ಕಾಳಜಿ ಇದ್ದರೆ ರಾಜಸ್ಥಾನ ಸರ್ಕಾರಕ್ಕೆ ನೀಡಿದ್ದ ಬೆಂಬಲವನ್ನು ವಾಪಸ್‌ ತೆಗೆದುಕೊಳ್ಳಿ’ ಎಂದು ಬಿಎಸ್‌ಪಿ ಅಧ್ಯಕ್ಷೆ ಮಾಯಾವತಿಗೆ ಸವಾಲು ಹಾಕಿದರು. ಮಾಯಾವತಿಗೂ ಈ ಘಟನೆ ನುಂಗಲಾರದ ತುತ್ತಾಯಿತು. ರಾಜಸ್ಥಾನ ಸರ್ಕಾರದ ವೈಫಲ್ಯ ಹಾಗೂ ಅಲ್ವರ್‌ ಘಟನೆಗಳು ಪ್ರಚಾರದುದ್ದಕ್ಕೂ ಬಳಕೆಯಾಗಿದ್ದರ ಪರಿಣಾಮ ರಾಜ್ಯದಲ್ಲಿ ಕಾಂಗ್ರೆಸ್‌ ತೀವ್ರ ಮುಖಭಂಗ ಎದುರಿಸುವಂತಾಯಿತು.

ಮಾಜಿ ಮುಖ್ಯಮಂತ್ರಿ ವಸುಂಧರಾ ರಾಜೆ ಅವರ ಪುತ್ರ ದುಶ್ಯಂತ್‌ ಸಿಂಗ್‌ 4.52 ಲಕ್ಷ ಮತಗಳಿಂದ ಮತ್ತು ರಾಜ ಮನೆತನದ ಇನ್ನೊಬ್ಬ ಅಭ್ಯರ್ಥಿ ದಿವ್ಯಕುಮಾರಿ 5.51 ಲಕ್ಷ ಮತಗಳಿಂದ ಗೆದ್ದಿದ್ದಾರೆ.

**

ಜನರ ತೀರ್ಪನ್ನು ನಾವು ನಮ್ರತೆಯಿಂದ ಸ್ವೀಕರಿಸುತ್ತೇವೆ. ಸರ್ಕಾರದ ಯೋಜನೆಗಳ ಬಗ್ಗೆ ಜನರಿಗೆ ತಿಳಿವಳಿಕೆ ನೀಡುವಲ್ಲಿ ಶ್ರಮಿಸಿದ ಕಾರ್ಯಕರ್ತರು ಈ ಸೋಲಿನಿಂದ ಎದೆಗುಂದಬಾರದು
–ಅಶೋಕ್‌ ಗೆಹ್ಲೋಟ್‌, ರಾಜಸ್ಥಾನದ ಮುಖ್ಯಮಂತ್ರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT