ಒಬ್ಬನೆದುರು 10 ಮಂದಿ; ಯಾರು ಪರಾಕ್ರಮಿ?– ಬಿಜೆಪಿ ಕುರಿತು ರಜನಿಕಾಂತ್‌ ಸ್ಪಷ್ಟನೆ

7

ಒಬ್ಬನೆದುರು 10 ಮಂದಿ; ಯಾರು ಪರಾಕ್ರಮಿ?– ಬಿಜೆಪಿ ಕುರಿತು ರಜನಿಕಾಂತ್‌ ಸ್ಪಷ್ಟನೆ

Published:
Updated:

ಚೆನ್ನೈ: ’ಒಬ್ಬ ವ್ಯಕ್ತಿಯನ್ನು ವಿರೋಧಿಸಲು ಹತ್ತು ಮಂದಿ ಜತೆಗೂಡುವುದಾದರೆ, ಇಲ್ಲಿ ಶಕ್ತಿಶಾಲಿ ಯಾರು? ಹತ್ತು ಜನರೋ ಅಥವಾ ಆ ಒಬ್ಬ ವ್ಯಕ್ತಿಯೋ? ಈ ಬಗ್ಗೆ ನಿರ್ಧರಿಸಿಕೊಳ್ಳುವುದು ನಿಮಗೆ ಬಿಟ್ಟ ವಿಚಾರ’ ಎಂದು ಪೋಸ್‌ ಗಾರ್ಡನ್‌ನ ನಿವಾಸದಲ್ಲಿ ಭಾವೀ ರಾಜಕಾರಣಿ ನಟ ರಜನಿಕಾಂತ್‌ ಹೇಳಿದರು. 

2019ರ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸಡ್ಡು ಹೊಡೆಯಲು ಪ್ರತಿಪಕ್ಷಗಳು ಒಗ್ಗೂಡುವ ಪ್ರಯತ್ನದ ಕುರಿತು ಸೂಪರ್‌ಸ್ಟಾರ್‌ ರಜನಿಕಾಂತ್‌ ಅಣಕವಾಡಿದರು. ಮಂಗಳವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ದೇಶದಲ್ಲಿನ ರಾಜಕೀಯ ಬೆಳವಣಿಗೆ ಕುರಿತು ಮಾತನಾಡಿದ ಅವರು, ನೇರವಾಗಿ ಮೋದಿ ಬಲಿಷ್ಠ ರಾಜಕಾರಣಿ ಎಂದು ಹೇಳದೆಯೇ ವಿರೋಧ ಪಕ್ಷಗಳೆಲ್ಲ ಬಿಜೆಪಿ ಮಣಿಸಲು ಒಗ್ಗೂಡುತ್ತಿರುವುದನ್ನು ಪ್ರಸ್ತಾಪಿಸಿದರು. 

ವಿರೋಧ ಪಕ್ಷದ ನಾಯಕರಿಗಿಂತ ಪ್ರಧಾನಿ ಮೋದಿ ಹೆಚ್ಚು ಶಕ್ತಿಶಾಲಿ ಎಂಬುದಾಗಿ ನೀವು ಹೇಳುತ್ತಿರುವುದೇ ಎಂದು ಮೇಲಿಂದ ಮೇಲೆ ಕೇಳಲಾದ ಪ್ರಶ್ನೆಗೆ ರಜನಿಕಾಂತ್‌, ’ಇದನ್ನು ಜನರು ಹೇಳಬೇಕು, ಯಾರಿಗಿಂತ ಯಾರು ಬಲಿಷ್ಠರು ಎಂಬುದನ್ನು ನಾನು ನಿರ್ಧರಿಸುವುದಲ್ಲ’ ಎಂದು ಪುನರುಚ್ಚರಿಸಿದರು. ಮೋದಿ ಅವರಿಗೆ ನಿಮ್ಮ ಬೆಂಬಲವಿದೆಯೇ ಎಂಬ ಮತ್ತೊಂದು ಪ್ರಶ್ನೆಗೆ ಉತ್ತರವಾಗಿ, ’ಇದಕ್ಕಿಂತಲೂ ಸ್ಪಷ್ಟವಾಗಿ ನಾನೀಗ ಉತ್ತರಿಸಲಾರೆ’ ಎಂದರು.

ಸೋಮವಾರ ರಜನಿಕಾಂತ್‌ ಮೋದಿ ಮತ್ತು ಪ್ರತಿಪಕ್ಷಗಳ ಕುರಿತು ನೀಡಿದ ಹೇಳಿಕೆಯ ಬಗ್ಗೆ ಸ್ಪಷ್ಟಪಡಿಸುವಂತೆ ಕೇಳಿದಾಗ, ’ಪ್ರತಿಪಕ್ಷಗಳು ಯೋಚಿಸುತ್ತಿರುವಂತೆ ಮೋದಿ ಅಪಾಯಕಾರಿಯೇ ಎಂದು ನನಗೆ ಪ್ರಶ್ನೆ ಕೇಳಲಾಯಿತು. ಇದಕ್ಕೆ ಉತ್ತರವಾಗಿ, ಒಬ್ಬ ವ್ಯಕ್ತಿ ಅಪಾಯಕಾರಿ ಎಂದು 10 ಜನ ಯೋಚಿಸುವುದೇ ಆದರೆ, ಆ ವ್ಯಕ್ತಿ ಅವರಿಗೆ ಅಪಾಯಕಾರಿ ಆಗಿರುವುದು ಖಂಡಿತ ಎಂದು ಹೇಳಿದೆ’.

ಇನ್ನೂ ರಾಜೀವ್‌ ಗಾಂಧಿ ಹತ್ಯೆ ಪ್ರಕರಣದಲ್ಲಿ ಶಿಕ್ಷೆ ಅನುಭವಿಸುತ್ತಿರುವ ಏಳು ಮಂದಿ ಅಪರಾಧಿಗಳ ಬಿಡುಗಡೆಯ ಬಗ್ಗೆ ರಜನಿಕಾಂತ್ ಧೋರಣೆಯ ವಿರುದ್ಧ ಸಾಮಾಜಿಕ ಮಾಧ್ಯಮಗಳಲ್ಲಿ ಟೀಕೆ ವ್ಯಕ್ತವಾಗಿತ್ತು. ಈ ಕುರಿತು ಪ್ರತಿಕ್ರಿಯಿಸಿದ ರಜನಿಕಾಂತ್‌, ನನ್ನ ಬಗ್ಗೆ ಭ್ರಾಂತಿ ಸೃಷ್ಟಿಸಿದ್ದ ಕಾರಣ ಸ್ಪಷ್ಟೀಕರಣಕ್ಕೆ ಒತ್ತಡವಿತ್ತು. ಈ ಪ್ರಕರಣದ ಅಪರಾಧಿಗಳಲ್ಲಿ ಒಬ್ಬರಾದ ಪೆರಾರಿವಾಲನ್‌ ಪೆರೋಲ್‌ ಮೇಲೆ ಹೊರಬಂದಿದ್ದಾಗ(2017ರ ಆಗಸ್ಟ್‌) ಆತನೊಂದಿಗೆ ಫೋನ್‌ನಲ್ಲಿ ಹತ್ತು ನಿಮಿಷ ಮಾತನಾಡಿದ್ದೆ. ಪ್ರಕರಣದ ಕುರಿತು ನನಗೆ ಪೂರ್ಣ ಮಾಹಿತಿಯಿದೆ. ಈಗಾಗಲೇ 27 ವರ್ಷಗಳು ಜೈಲಿನಲ್ಲಿ ಕಳೆದಿರುವ ಏಳು ಅಪರಾಧಿಗಳನ್ನು ಬಿಡುಗಡೆಗೊಳಿಸಬೇಕು’ ಎಂದು ಅಭಿಪ್ರಾಯಪಟ್ಟರು. 

ರಾಜ್ಯದಲ್ಲಿ ನಿತ್ಯದ ಘಟನೆಗಳು, ಬೆಳವಣಿಗೆಗಳ ಕುರಿತು ತನಗೆ ಪ್ರಶ್ನೆ ಕೇಳದಂತೆ ಮಾಧ್ಯಮದವರಿಗೆ ತಾಕೀತು ಮಾಡಿದ ರಜನಿಕಾಂತ್‌, ’ಸಕ್ರಿಯ ರಾಜಕೀಯಕ್ಕೆ ನಾನು ಪ್ರವೇಶಿಸಿದ ಬಳಿಕ, ಎಲ್ಲ ವಿಷಯಗಳ ಕುರಿತು ನಾನು ಪ್ರತಿಕ್ರಿಯಿಸುತ್ತೇನೆ’ ಎಂದು ಹೇಳಿದರು. 

ಬರಹ ಇಷ್ಟವಾಯಿತೆ?

 • 36

  Happy
 • 1

  Amused
 • 1

  Sad
 • 0

  Frustrated
 • 7

  Angry

Comments:

0 comments

Write the first review for this !