ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುಜರಾತ್ ರಾಜಕಾರಣ | ಮೂವರ ರಾಜೀನಾಮೆ: ರೆಸಾರ್ಟ್‌ಗೆ ಕಾಂಗ್ರೆಸ್‌ ಶಾಸಕರು

Last Updated 7 ಜೂನ್ 2020, 6:13 IST
ಅಕ್ಷರ ಗಾತ್ರ

ಅಹಮದಾಬಾದ್: ಮೂವರು ಶಾಸಕರು ರಾಜೀನಾಮೆ ನೀಡಿದ ನಂತರ ಆತಂಕಕ್ಕೆ ಒಳಗಾಗಿರುವ ಕಾಂಗ್ರೆಸ್‌ ಪಕ್ಷವು 'ಆಪರೇಷನ್‌' ತಡೆಯಲು ತನ್ನ ಶಾಸಕರನ್ನು ರೆಸಾರ್ಟ್‌ಗಳು ಮತ್ತು ಬಂಗಲೆಗಳಿಗೆ ರವಾನಿಸಿದೆ. ರಾಜ್ಯಸಭಾ ಚುನಾವಣೆಯು ಜೂನ್ 19ರಂದು ನಡೆಯಲಿದೆ. ಚುನಾವಣೆಗೆ ಮುನ್ನ ನಡೆದ ಕೆಲ ರಾಜಕೀಯ ಬೆಳವಣಿಗೆಗಳು ಕಾಂಗ್ರೆಸ್ ಪಕ್ಷವನ್ನು ಆತಂಕಕ್ಕೆ ತಳ್ಳಿದೆ.

ಜೂನ್ 3ರಂದು ಅಕ್ಷಯ್ ಪಟೇಲ್ ಮತ್ತು ಜಿತು ಚೌಧರಿ, ಜೂನ್ 5ರಂದು ಬ್ರಿಜೇಶ್ ಮೆರ್ಜಾ ರಾಜೀನಾಮೆ ನೀಡಿದ್ದರು. 182 ಸದಸ್ಯ ಬಲದ ಗುಜರಾತ್ ವಿಧಾನಸಭೆಯಲ್ಲಿ ಕಾಂಗ್ರೆಸ್‌ ಪಕ್ಷದ ಪ್ರತಿನಿಧಿಗಳ ಸಂಖ್ಯೆ 65ಕ್ಕೆ ಕುಸಿದಿದೆ. 10 ಸ್ಥಾನಗಳು ಖಾಲಿ ಉಳಿದಿರುವುದರಿಂದ ಸದನದ ಒಟ್ಟು ಸಂಖ್ಯೆಯೂ ಈಗ 172ಕ್ಕೆ ಇಳಿದಿದೆ. ಎರಡು ಸ್ಥಾನಗಳು ನ್ಯಾಯಾಲಯಗಳ ಪ್ರಕರಣಗಳ ಕಾರಣದಿಂದ ಉಳಿದ ಸ್ಥಾನಗಳು ರಾಜೀನಾಮೆಯಿಂದಾಗಿ ತೆರವಾಗಿವೆ.

ಉತ್ತರ ಗುಜರಾತ್‌ನ ಕೆಲ ಶಾಸಕರನ್ನು ಬನಸ್ಕಾಂತಾ ಜಿಲ್ಲೆಯ ಅಂಬಾಜಿ ಸಮೀಪದ ರೆಸಾರ್ಟ್‌ಗೆ ಕರೆದೊಯ್ಯಲಾಗಿದೆ. ದಕ್ಷಿಣ ಮತ್ತು ಮಧ್ಯ ಗುಜರಾತ್‌ನ ಶಾಸಕರನ್ನು ಆನಂದ್‌ ನಗರದ ಸಮೀಪವಿರುವ ಬಂಗಲೆಗಳಲ್ಲಿ ಇರಿಸಲಾಗಿದೆ.ಸೌರಾಷ್ಟ್ರದ ಶಾಸಕರನ್ನು ರಾಜಕೋಟ್‌ ಸಮೀಪದ ರೆಸಾರ್ಟ್‌ಗೆ ಕರೆದೊಯ್ಯಲಾಗಿದೆಎಂದು ಗುಜರಾತ್ ಕಾಂಗ್ರೆಸ್ ಸಮಿತಿಯ ವಕ್ತಾರ ಮನೀಶ್ ದೋಷಿ ಹೇಳಿದ್ದಾರೆ.

'ತಮ್ಮ ಕೆಲಸಗಳು ಮುಗಿದ ನಂತರ ಶನಿವಾರ ರೆಸಾರ್ಟ್‌ಗಳಿಗೆ ಬರಬೇಕು ಎಂದು ಪಕ್ಷದ ಹೈಕಮಾಂಡ್ ಆದೇಶಿಸಿತ್ತು. ಈಗಾಗಲೇ ಹಲವರು ರೆಸಾರ್ಟ್‌ಗಳನ್ನು ತಲುಪಿದ್ದಾರೆ. ಬಾಕಿಯಿರುವವರು ಶೀಘ್ರ ರೆಸಾರ್ಟ್‌ ತಲುಪಲಿದ್ದಾರೆ. ಅಲ್ಲಿ ಅವರೊಂದಿಗೆ ಪಕ್ಷದ ಹಿರಿಯ ನಾಯಕರು ಮಾತುಕತೆ ನಡೆಸಲಿದ್ದಾರೆ' ಎಂದು ಮನೀಶ್ ತಿಳಿಸಿದರು.

ಜೂನ್ 19ರಂದು ಗುಜರಾತ್‌ ರಾಜ್ಯದಿಂದ ಬಾಕಿಯಿರುವ ನಾಲ್ಕು ರಾಜ್ಯಸಭಾ ಸ್ಥಾನಗಳಿಗೆ ಚುನಾವಣೆ ನಡೆಯಲಿದೆ.ಅಲ್ಲಿಯವರೆಗೆ ಶಾಸಕರು ರೆಸಾರ್ಟ್‌ಗಳಲ್ಲಿಯೇ ಇರಬೇಕು ಎಂದು ಹೇಳಿದರು.

ಗುಜರಾತ್‌ನ ಮೇಲ್ಮನೆಗೆ ಮಾರ್ಚ್‌ 26ರಂದು ಚುನಾವಣೆ ನಿಗದಿಯಾಗಿತ್ತು. ಚುನಾವಣೆಗೂ ಮೊದಲು ಐವರು ಶಾಸರು ರಾಜೀನಾಮೆ ನೀಡಿದ್ದರು. ಈ ಬೆಳವಣಿಗೆಯ ನಂತರ ಆಗಲೂ ಕಾಂಗ್ರೆಸ್‌ ತನ್ನ ಶಾಸಕರನ್ನು ರೆಸಾರ್ಟ್‌ಗೆ ಕರೆದೊಯ್ದಿತ್ತು. ಆದರೆ ಕೊರೊನಾ ವೈರಸ್ ಪಿಡುಗಿನಿಂದ ಲಾಕ್‌ಡೌನ್ ಘೋಷಣೆಯಾದ ಕಾರಣ ಚುನಾವಣೆ ನಡೆಯಲಿಲ್ಲ.

ಸದನದಲ್ಲಿ 103 ಶಾಸಕರ ಬಲ ಹೊಂದಿರುವ ಬಿಜೆಪಿ ಜೂನ್ 19ರಂದು ನಡೆಯಲಿರುವ ರಾಜ್ಯಸಭೆ ಚುನಾವಣೆಗೆ ಅಭಯ್ ಭಾರದ್ವಾಜ್, ರಾಮಿಲಾಬೆನ್ ಬಾರಾ ಮತ್ತು ನರಹರಿ ಅಮಿನ್ ಅವರನ್ನು ಕಣಕ್ಕಿಳಿಸಿದೆ.

ಬಿಜೆಪಿಯು ತನ್ನ ಶಾಸಕರನ್ನು ಬ್ಲಾಕ್‌ಮೇಲ್ ಮಾಡುವ, ಬೆದರಿಸುವ ಮತ್ತು ಹಣದ ಆಮಿಷವೊಡ್ಡುವ ಮೂಲಕ ರಾಜೀನಾಮೆ ಕೊಡಿಸಲು ಯತ್ನಿಸುತ್ತಿದೆ ಎಂದು ಕಾಂಗ್ರೆಸ್ ನಾಯಕರು ಆರೋಪಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT