ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಕೇಶ್‌ ಅಸ್ತಾನಾ ಭ್ರಷ್ಟಾಚಾರ ಪ್ರಕರಣ: ತನಿಖಾ ತಂಡಕ್ಕೆ ದೆಹಲಿಯಿಂದ ಎತ್ತಂಗಡಿ

ತನಿಖೆಗೆ ಹೊಸ ತಂಡ ನೇಮಿಸಿದ ಕೇಂದ್ರ ಸರ್ಕಾರ
Last Updated 24 ಅಕ್ಟೋಬರ್ 2018, 19:55 IST
ಅಕ್ಷರ ಗಾತ್ರ

ನವದೆಹಲಿ: ಸಿಬಿಐನ ವಿಶೇಷ ನಿರ್ದೇಶಕರಾಗಿದ್ದ ರಾಕೇಶ್‌ ಅಸ್ತಾನಾ ಅವರ ವಿರುದ್ಧದ ಭ್ರಷ್ಟಾಚಾರ ಆರೋಪಗಳ ತನಿಖೆ ನಡೆಸುತ್ತಿದ್ದ ತಂಡದಲ್ಲಿದ್ದ ಎಲ್ಲ ಅಧಿಕಾರಿಗಳನ್ನು ದೆಹಲಿಯಿಂದ ಹೊರಗಿನ ಊರುಗಳಿಗೆ ವರ್ಗಾಯಿಸಲಾಗಿದೆ. ತನಿಖೆಗೆ ಹೊಸ ತಂಡವನ್ನು ರಚಿಸಲಾಗಿದೆ. ‘ಸಾರ್ವಜನಿಕ ಹಿತಾಸಕ್ತಿ’ಯಿಂದಾಗಿ ‘ತಕ್ಷಣದಿಂದಲೇ’ ಹೊಸ ತಂಡ ಅಧಿಕಾರ ವಹಿಸಿಕೊಂಡಿದೆ ಎಂದು ಸರ್ಕಾರ ಹೇಳಿದೆ.

ಸಿಬಿಐನ ಮಧ್ಯಂತರ ನಿರ್ದೇಶಕರಾಗಿ ಸಂಸ್ಥೆಯ ಜಂಟಿ ನಿರ್ದೇಶಕ ಎಂ. ನಾಗೇಶ್ವರ ರಾವ್‌ ಅವರು ಅಧಿಕಾರ ವಹಿಸಿಕೊಂಡ ತಕ್ಷಣವೇ ಈ ವರ್ಗಾವಣೆ ನಡೆದಿದೆ.

ಇದೇ 15ರಂದು ಅಸ್ತಾನಾ ವಿರುದ್ಧ ದಾಖಲಾಗಿರುವ ಪ್ರಕರಣದ ತನಿಖೆಯ ನೇತೃತ್ವವನ್ನು ಸತೀಶ್‌ ಡಾಗರ್‌ ಅವರಿಗೆ ವಹಿಸಲಾಗಿದೆ. ದೇರಾ ಸಚ್ಚಾ ಸೌದಾ ಮುಖ್ಯಸ್ಥ ಗುರ್ಮೀತ್‌ ರಾಮ್‌ ರಹೀತ್‌ ಅವರ ವಿರುದ್ಧದ ಪ್ರಕರಣಗಳ ತನಿಖೆಯನ್ನು ಡಾಗರ್‌ ಅವರೇ ನಡೆಸಿದ್ದರು.

ಸಿಬಿಐ ನಿರ್ದೇಶಕರಾಗಿದ್ದ ಅಲೋಕ್‌ ಕುಮಾರ್‌ ಅವರ ನಿರ್ದೇಶನದಂತೆ ಡಿಎಸ್‌ಪಿ ಎ.ಕೆ. ಬಸ್ಸಿ ಅವರು ತಮ್ಮ ವಿರುದ್ಧ ‘ಸೇಡು ತೀರಿಸಿಕೊಳ್ಳುವ ರೀತಿಯಲ್ಲಿ’ ತನಿಖೆ ನಡೆಸುತ್ತಿದ್ದಾರೆ ಎಂದು ಅಸ್ತಾನಾ ಅವರು ಕೇಂದ್ರ ಜಾಗೃತ ಆಯೋಗಕ್ಕೆ ದೂರು ನೀಡಿದ್ದರು.

ಕಟ್ಟುನಿಟ್ಟಿನ ನಾಗೇಶ್ವರ ರಾವ್‌

ನಾಗೇಶ್ವರ ರಾವ್‌ ಅವರು ಕಟ್ಟು ನಿಟ್ಟಿನ ಅಧಿಕಾರಿ ಎಂದೇ ಪ್ರಸಿದ್ಧ. ಜತೆಗೆ ಅವರು ವಿನೂತನ ತನಿಖಾ ವಿಧಾನಗಳನ್ನು ಅನುಸರಿಸುತ್ತಾರೆ ಎಂಬ ಹೆಗ್ಗಳಿಕೆಯನ್ನೂ ಹೊಂದಿದ್ದಾರೆ.

ಉಸ್ಮಾನಿಯಾ ವಿಶ್ವವಿದ್ಯಾಲಯದಿಂದ ರಸಾಯನ ವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ರಾವ್‌, ಮದ್ರಾಸ್‌ ಐಐಟಿಯಲ್ಲಿ ಸಂಶೋಧನೆಯನ್ನೂ ನಡೆಸಿದ್ದಾರೆ. ತೆಲಂಗಾಣದ ವರಂಗಲ್‌ನವರಾದ ಅವರು ಒಡಿಶಾದಲ್ಲಿ ವಿವಿಧ ಹುದ್ದೆಗಳಲ್ಲಿ ಕೆಲಸ ಮಾಡಿದ್ದಾರೆ. ಚೆನ್ನೈ ಕೇಂದ್ರ ಸ್ಥಾನವಾಗಿರುವ ಸಿಬಿಐ ದಕ್ಷಿಣ ವಲಯದ ಜಂಟಿ ನಿರ್ದೇಶಕರಾಗಿದ್ದಾಗ ಅವರನ್ನು ದೆಹಲಿಗೆ ಕರೆಸಿಕೊಳ್ಳಲಾಗಿತ್ತು.

ಕೇಂದ್ರ ಕಚೇರಿಯಲ್ಲಿ ಜಂಟಿ ನಿರ್ದೇಶಕರಾಗಿದ್ದಾಗ ಅವರಿಗೆ ಒಡಿಶಾ, ಪಶ್ಚಿಮ ಬಂಗಾಳ, ಹರಿಯಾಣ, ಹಿಮಾಚಲ ಪ್ರದೇಶ ಮತ್ತು ಜಮ್ಮು ಹಾಗೂ ಕಾಶ್ಮೀರದ ಹೊಣೆ ವಹಿಸಲಾಗಿತ್ತು.

ಒಡಿಶಾದಲ್ಲಿ ಅವರು ಕೆಲಸ ಮಾಡುತ್ತಿದ್ದಾಗ 1996ರ ಅತ್ಯಾಚಾರ ಪ್ರಕರಣವೊಂದರಲ್ಲಿ ಡಿಎನ್‌ಎ ಮಾಹಿತಿ ಬಳಸಿ ಪ್ರಕರಣ ಭೇದಿಸಿದ್ದರು. ಮಣಿಪುರದಲ್ಲಿ ಸಿಆರ್‌ಪಿಎಫ್‌ನಲ್ಲಿ ಕೆಲಸ ಮಾಡುತ್ತಿದ್ದಾಗ ನುಸುಳುವಿಕೆ ತಡೆ ಮತ್ತು ನಕ್ಸಲ್‌ ನಿಗ್ರಹ ಕಾರ್ಯಾಚರಣೆಯಲ್ಲಿ ಅವರ ಸಾಧನೆಗೆ ಮೆಚ್ಚುಗೆ ವ್ಯಕ್ತವಾಗಿತ್ತು.

ಆದರೆ, ಸಿಬಿಐ ಮಧ್ಯಂತರ ಮುಖ್ಯಸ್ಥರಾಗಿ ಅವರನ್ನು ನೇಮಕ ಮಾಡಿರುವುದಕ್ಕೆ ಅಪಸ್ವರವೂ ವ್ಯಕ್ತವಾಗಿದೆ. ರಾವ್‌ ಅವರ ವಿರುದ್ಧ ಅಧಿಕಾರ ದುರ್ಬಳಕೆ ಮತ್ತು ಭ್ರಷ್ಟಾಚಾರ ಆರೋಪ ಹೊರಿಸಿ ಪ್ರಕಟವಾಗಿರುವ ವರದಿಗಳ ಲಿಂಕ್‌ ಕೊಟ್ಟು ವಕೀಲ ಪ್ರಶಾಂತ್‌ ಭೂಷಣ್‌ ಟ್ವೀಟ್‌ ಮಾಡಿದ್ದಾರೆ.

ಮಲ್ಯಗೆ ಅನುಕೂಲ?

ಬಹುಕೋಟಿ ಸಾಲ ಹಗರಣದಲ್ಲಿ ಸಿಲುಕಿಕೊಂಡು ಬ್ರಿಟನ್‌ನಿಂದ ಭಾರತಕ್ಕೆ ಗಡಿಪಾರು ಪ್ರಕರಣ ಎದುರಿಸುತ್ತಿರುವ ಉದ್ಯಮಿ ವಿಜಯ ಮಲ್ಯ ಅವರು ಸಿಬಿಐನಲ್ಲಿ ನಡೆಯುತ್ತಿರುವ ಕಚ್ಚಾಟದ ಲಾಭ ಪಡೆದುಕೊಳ್ಳಬಹುದು ಎಂದು ಮೂಲಗಳು ಹೇಳಿವೆ.

ರಾಕೇಶ್‌ ಅಸ್ತಾನಾ ವಿರುದ್ಧ ಕೇಳಿ ಬಂದಿರುವ ಭ್ರಷ್ಟಾಚಾರ ಆರೋಪಗಳನ್ನು ಲಂಡನ್‌ ನ್ಯಾಯಾಲಯದಲ್ಲಿ ಮಲ್ಯ ಅವರು ಎತ್ತಿದರೆ ಅದನ್ನು ತಕ್ಕ ತಿರುಗೇಟು ನೀಡುವುದು ಸಿಬಿಐಗೆ ಕಷ್ಟವಾಗಬಹುದು. ಮಲ್ಯ ವಿರುದ್ಧದ ತನಿಖೆ ಮತ್ತು ಗಡಿಪಾರು ಪ್ರಕರಣದ ಉಸ್ತುವಾರಿಯನ್ನು ಅಸ್ತಾನಾ ಅವರೇ ನೋಡಿಕೊಳ್ಳುತ್ತಿದ್ದರು.

ಭಾರತದ ಸೆರೆಮನೆಗಳಲ್ಲಿ ತಮ್ಮ ಜೀವಕ್ಕೆ ಬೆದರಿಕೆ ಇದೆ ಎಂದು ಮಲ್ಯ ಅವರು ಲಂಡನ್‌ ನ್ಯಾಯಾಲಯಕ್ಕೆ ಈಗಾಗಲೇ ಹೇಳಿದ್ದಾರೆ. ಗಡಿಪಾರು ತಪ್ಪಿಸಿಕೊಳ್ಳಲು ಈಗಿನ ಪರಿಸ್ಥಿತಿಯನ್ನು ಅವರು ಬಳಸಿಕೊಳ್ಳದೆ ಇರುವುದಿಲ್ಲ ಎಂದು ಮೂಲಗಳು ತಿಳಿಸಿವೆ.

ಯಾರು ಎಲ್ಲಿಗೆ ವರ್ಗ

* ಅಸ್ತಾನಾ ವಿರುದ್ಧದ ತನಿಖೆ ನಡೆಸುತ್ತಿದ್ದ ಡಿಎಸ್‌ಪಿ ಎ.ಕೆ. ಬಸ್ಸಿ ಪೋರ್ಟ್‌ಬ್ಲೇರ್‌ಗೆ ವರ್ಗ

* ತನಿಖೆಯ ಮೇಲ್ವಿಚಾರಣೆ ನೋಡಿಕೊಳ್ಳುತ್ತಿದ್ದ ಉಪ ಮಹಾನಿರೀಕ್ಷಕ ಎಂ.ಕೆ. ಸಿನ್ಹಾಗೂ ಎತ್ತಂಗಡಿ

* ಅಸ್ತಾನಾ ವಿರುದ್ಧ ಎಫ್‌ಐಆರ್‌ ದಾಖಲಿಸಿಕೊಂಡ ಹೆಚ್ಚುವರಿ ಎಸ್‌ಪಿ ಎಸ್‌.ಎಸ್‌. ಗುರ್ಮ್‌ ಜಬಲ್ಪುರಕ್ಕೆ

* ನೀತಿ ವಿಭಾಗದ ಜಂಟಿ ನಿರ್ದೇಶಕ ಅರುಣ್‌ ಕುಮಾರ್‌ ಶರ್ಮಾ, ಬಹುಶಿಸ್ತೀಯ ನಿಗಾ ಸಂಸ್ಥೆಗೆ (ಎಂಡಿಎಂಎ)

* ಜಂಟಿ ನಿರ್ದೇಶಕ ವಿ.ಮುರುಗೇಶನ್‌ ಕೇಂದ್ರ ಕಚೇರಿಗೆ ವಾಪಸ್‌, ಭ್ರಷ್ಟಾಚಾರ ತಡೆ ವಿಭಾಗದ ಹೆಚ್ಚುವರಿ ಹೊಣೆ

* ಜಂಟಿ ನಿರ್ದೇಶಕ ಸಾಯಿ ಮನೋಹರ್‌ ಚಂಡೀಗಡ ವಲಯಕ್ಕೆ ವರ್ಗ

* ಆರ್ಥಿಕ ಅಪರಾಧಗಳ ವಿಭಾಗದ ಡಿಐಜಿ ಅಮಿತ್‌ ಕುಮಾರ್‌ಗೆ ನೀತಿ ವಿಭಾಗದ ಜಂಟಿ ನಿರ್ದೇಶಕರಾಗಿ ಹೆಚ್ಚುವರಿ ಹೊಣೆಗಾರಿಕೆ

ಇವನ್ನೂ ಓದಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT