ಮಂಗಳವಾರ, ಸೆಪ್ಟೆಂಬರ್ 24, 2019
29 °C

ಜೇಠ್ಮಲಾನಿ: ಮೊನಚು ಮಾತಿನ ಸ್ವತಂತ್ರ ವ್ಯ‌ಕ್ತಿತ್ವ

Published:
Updated:
Prajavani

ನವದೆಹಲಿ: ಸತತ ಏಳು ದಶಕಗಳ ಕಾಲ ಕ್ರಿಮಿನಲ್ ಲಾ ಹಾಗೂ ಸಾಂವಿಧಾನಿಕ ಮಹತ್ವದ ಪ್ರಕರಣಗಳನ್ನು ಸಮರ್ಥವಾಗಿ ನಿಭಾಯಿಸಿ, ಕಾನೂನು ವೃತ್ತಿಯಲ್ಲಿ ನಿಷ್ಣಾತರೆನಿಸಿಕೊಂಡಿದ್ದ ಹಿರಿಯ ವಕೀಲ ರಾಮ್ ಜೇಠ್ಮಲಾನಿ ಅವರ ರಾಜಕೀಯ ಜೀವನ ಮಾತ್ರ ಭಾರಿ ಏರಿಳಿತದಿಂದ ಕೂಡಿತ್ತು. 

ಸಿಂಧ್‌ನಲ್ಲಿ 1923ರ ಸೆಪ್ಟೆಂಬರ್ 23ರಂದು ಜನಿಸಿದ ಜೇಠ್ಮಲಾನಿ, ಕರಾಚಿಯ ಶಹಾನಿ ಕಾನೂನು ಕಾಲೇಜಿನಿಂದ ಪದವಿ ಪಡೆದು, 17ನೇ ವಯಸ್ಸಿಗೆ ವಕೀಲ ವೃತ್ತಿ ಆರಂಭಿಸಿದವರು. ಇಂದಿರಾಗಾಂಧಿ, ರಾಜೀವ್‌ಗಾಂಧಿ, ಜೆಸ್ಸಿಕಾ ಲಾಲ್ ಹತ್ಯೆ ಮೊದಲಾದ ಮಹತ್ವದ ಪ್ರಕರಣಗಳಲ್ಲಿ ಆರೋಪಿಗಳ ಪರವಾಗಿ ವಾದಿಸಿದ್ದರು. ಸಂಸತ್ ಮೇಲಿನ ದಾಳಿಯಲ್ಲಿ ಉಗ್ರರಿಗೆ ನೀಡಿದ್ದ ಗಲ್ಲು ಶಿಕ್ಷೆಯನ್ನು ಸಮರ್ಥಿಸಿಕೊಂಡಿದ್ದರು. 

ಅರುಣ್ ಜೇಟ್ಲಿ ಅವರು ಹೂಡಿದ್ದ ಮಾನನಷ್ಟ ಮೊಕದ್ದಮೆಯಲ್ಲಿ ಅರವಿಂದ ಕೇಜ್ರಿವಾಲ್ ಪರ ವಾದ ಮಾಡಿದ್ದರು. ಹವಾಲಾ ಹಗರಣದಲ್ಲಿ ಎಲ್.ಕೆ. ಅಡ್ವಾಣಿ, ಸೊಹ್ರಾಬುದ್ದೀನ್ ಶೇಕ್ ಎನ್‌ಕೌಂಟರ್ ಪ್ರಕರಣದಲ್ಲಿ ಅಮಿತ್ ಶಾ, ಭ್ರಷ್ಟಾಚಾರ ಪ್ರಕರಣದಲ್ಲಿ ಜಯಲಲಿತಾ ಹಾಗೂ ಮೇವು ಹಗರಣದಲ್ಲಿ ಲಾಲೂ ಪ್ರಸಾದ್ ಪರವಾಗಿ ಕೋರ್ಟ್‌ನಲ್ಲಿ ಹೋರಾಡಿದ್ದರು. 

ಕಪ್ಪುಹಣವನ್ನು ಭಾರತಕ್ಕೆ ತರುವ ಹೋರಾಟದಲ್ಲಿ ಜೇಠ್ಮಲಾನಿ ಭಾಗಿಯಾಗಿದ್ದರು. ಇವರು ಸಲ್ಲಿಸಿದ್ದ ಅರ್ಜಿ ಮಾನ್ಯ ಮಾಡಿದ್ದ ಕೋರ್ಟ್, ಇದಕ್ಕಾಗಿ ವಿಶೇಷ ತನಿಖಾ ತಂಡವನ್ನು ರಚನೆ ಮಾಡಿತ್ತು. 

ಜೇಠ್ಮಲಾನಿ ಅವರದ್ದು ಮುಚ್ಚು ಮರೆಯಿಲ್ಲದೆ ಮಾತನಾಡುವ ವ್ಯಕ್ತಿತ್ವ. ಇದು ಅವರ ರಾಜಕೀಯ ಜೀವನದಲ್ಲಿ ಪ್ರತಿಫಲಿಸಿದೆ. 1962ರಲ್ಲಿ ಸೋಷಲಿಸ್ಟ್ ಪಕ್ಷದ ಆಚಾರ್ಯ ಕೃಪಲಾನಿ ಅವರ ವಿರುದ್ಧ ಸ್ಪರ್ಧಿಸಿದ್ದ ವಿ.ಕೆ.ಕೃಷ್ಣ ಮೆನನ್ ಪರವಾಗಿ ಪ್ರಚಾರ ಆರಂಭಿಸುವ ಮೂಲಕ ಅವರ ರಾಜಕೀಯ ಜೀವನ ಶುರುವಾಯಿತು. 

ಕಾಂಗ್ರೆಸ್ ಸೇರಿ, ಅಲ್ಲಿಂದ ಚುನಾವಣೆಗೆ ಸ್ಪರ್ಧಿಸುವ ಯತ್ನಗಳು ಫಲ ನೀಡಲಿಲ್ಲ. ಹೀಗಾಗಿ ಶಿವಸೇನಾ, ಬಳಿಕ ಜನಸಂಘವನ್ನು ಅವರು ಬೆಂಬಲಿಸಿದರು. ಇಂದಿರಾ ಗಾಂಧಿ ಅವರು ಹೇರಿದ್ದ ತುರ್ತು ಪರಿಸ್ಥಿತಿಯನ್ನು ತೀವ್ರವಾಗಿ ವಿರೋಧಿಸಿದ್ದರು. ತುರ್ತು ಪರಿಸ್ಥಿತಿ ವಿರುದ್ಧ ಮಾತನಾಡಿದ್ದಕ್ಕೆ ಬಂಧನ ವಾರಂಟ್ ಜಾರಿಯಾಗಿತ್ತು. ಹೀಗಾಗಿ ಅವರು ಕೆನಡಾಕ್ಕೆ ಸ್ವಯಂ ಗಡಿಪಾರು ಆಗಿದ್ದರು. 

1977ರಲ್ಲಿ ಜನಸಂಘದ ಅಭ್ಯರ್ಥಿಯಾಗಿ ಕಾನೂನು ಸಚಿವ ಎಚ್.ಆರ್. ಗೋಖಲೆ ಅವರನ್ನು ಮಣಿಸಿ ಇತಿಹಾಸ ಸೃಷ್ಟಿಸಿದ ಜೇಠ್ಮಲಾನಿ ಸಂಪುಟದಲ್ಲಿ ಸ್ಥಾನ ಪಡೆಯುವಲ್ಲಿ ವಿಫಲರಾದರು. 1980ರಲ್ಲಿ ಬಿಜೆಪಿ ಸದಸ್ಯರಾಗಿ ಆಯ್ಕೆಯಾದರು. 1988ರಲ್ಲಿ ರಾಮಕೃಷ್ಣ ಹೆಗಡೆ ಅವರ ಬೆಂಬಲದೊಂದಿಗೆ ರಾಜ್ಯಸಭೆ ಪ್ರವೇಶಿಸಿದರು. 

1996ರಲ್ಲಿ 13 ದಿನಗಳ ವಾಜಪೇಯಿ ಸರ್ಕಾರದಲ್ಲಿ ಕಾನೂನು, ಕಂಪನಿ ವ್ಯವಹಾರ ಸಚಿವರಾಗಿದ್ದರು. ಎರಡು ವರ್ಷದ ಬಳಿಕ ನಗರಾಭಿವೃದ್ಧಿ ಸಚಿವರಾಗಿ ನೇಮಕಗೊಂಡರು. 1999ರಲ್ಲಿ ಕಾನೂನು ಸಚಿವರಾಗಿ ಪದಗ್ರಹಣ ಮಾಡಿದರು. ಆದರೆ ಆಗ ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯಾಗಿದ್ದ ಎ.ಎಸ್. ಆನಂದ್ ಹಾಗೂ ಅಟಾರ್ನಿ ಜನರಲ್ ಸೋಲಿ ಸೊರಾಬ್ಜಿ ಜೊತೆಗಿನ ಭಿನ್ನಮತದ ಕಾರಣ ಬಹುಕಾಲ ಈ ಪದವಿ ಉಳಿಯಲಿಲ್ಲ. ಜೇಠ್ಮಲಾನಿ ಉತ್ತರಾಧಿಕಾರಿಯಾಗಿ ಜೇಟ್ಲಿ ಅಧಿಕಾರ ವಹಿಸಿಕೊಂಡರು. ಪಕ್ಷದಿಂದ ಉಚ್ಚಾಟನೆಗೊಂಡಿದ್ದಕ್ಕೆ ಆಕ್ರೋಶಗೊಂಡ ಅವರು ವಾಜಪೇಯಿ ವಿರುದ್ಧ ಸ್ಪರ್ಧಿಸಿ ಸೋತಿದ್ದರು. 

ಮೋದಿ ಅವರು ಗುಜರಾತ್ ಮುಖ್ಯಮಂತ್ರಿ ಆಗಿದ್ದಾಗ ಅವರಿಗೆ ಜೇಠ್ಮಲಾನಿ ಹತ್ತಿರವಾದರು. 2010ರಲ್ಲಿ ಬಿಜೆಪಿ ಸದಸ್ಯರಾಗಿ ರಾಜ್ಯಸಭೆ ಪ್ರವೇಶಿಸಿದರು. ಪಕ್ಷದ ಹಿರಿಯ ನಾಯಕರ ಮೇಲೆ ಭ್ರಷ್ಟಾಚಾರ ಆರೋಪ ಹೊರಿಸಿದ ಕಾರಣ 2013ರಲ್ಲಿ ಮತ್ತೆ ಇವರನ್ನು ಪಕ್ಷ ಹೊರಹಾಕಿತು. 

2015ರಲ್ಲಿ ಜೆಡಿಯು–ಆರ್‌ಜೆಡಿ–ಕಾಂಗ್ರೆಸ್ ಮಹಾಮೈತ್ರಿಕೂಟವನ್ನು ಬೆಂಬಲಿಸಿದ್ದರು. ಲಾಲೂ ಪ್ರಸಾದ್ ಜೊತೆಗಿನ ಒಡನಾಟದಿಂದಾಗಿ ಮತ್ತೆ ರಾಜ್ಯಸಭೆ ಮೆಟ್ಟಿಲೇರಿದರು. ಮುಕ್ತ ಮಾತುಗಾರಿಕೆಯಿಂದಾಗಿ ಎಲ್ಲ ಪಕ್ಷಗಳಲ್ಲಿಯೂ ಅವರು ಸ್ನೇಹ ಸಂಪಾದಿಸಿದ್ದರು. ಹಾಗೆಯೇ ವಿಚಾರಗಳನ್ನು ನಿಷ್ಠುರವಾಗಿ ವ್ಯಕ್ತಪಡಿಸುತ್ತಿದ್ದ  ಕಾರಣ ಸಾಕಷ್ಟು ವಿರೋಧವನ್ನೂ  ಕಟ್ಟಿಕೊಳ್ಳಬೇಕಾಯಿತು. 

 

ಹಾಲಿ ರಾಜ್ಯಸಭಾ ಸದಸ್ಯ; ಎರಡು ಬಾರಿ ಕಾನೂನು ಸಚಿವ ಹುದ್ದೆ ನಿರ್ವಹಣೆ

ಸಂಸತ್ ದಾಳಿ ಆರೋಪಿ ಎಸ್‌ಎಆರ್ ಗಿಲಾನಿ ಪರ ವಾದ; ಖುಲಾಸೆ

ಬಾರ್ ಕೌನ್ಸಿಲ್‌ನ ಕಿರಿಯ ಸದಸ್ಯನಾಗಿ ಪ್ರವೇಶಿಸಿದ್ದ ಅವರು, ಅತಿ ಹಿರಿಯ ಸದಸ್ಯ ಕೂಡ ಆಗಿದ್ದಾರೆ

ದೇಶದಲ್ಲಿ ಅತಿಹೆಚ್ಚು ಸಂಭಾವನೆ ಪಡೆಯುವ ವಕೀಲರಲ್ಲಿ ಮೊದಲಿಗರು

ಮೋದಿ ಸರ್ಕಾರದ ನ್ಯಾಯಾಂಗ ನೇಮಕಾತಿ ಆಯೋಗ ಕಾಯ್ದೆಗೆ ವಿರೋಧ

ಸುಪ್ರೀಂ ಕೋರ್ಟ್‌ ವಕೀಲರ ಸಂಘ ಹಾಗೂ ವಕೀಲರ ಪರಿಷತ್‌ ಮುಖ್ಯಸ್ಥರಾಗಿ ಕೆಲಸ

ಭಾರತ್ ಮುಕ್ತಿ ಮೋರ್ಚಾ, ಪವಿತ್ರ ಹಿಂದೂಸ್ಥಾನ್ ಕಳಗಂ ಎಂಬ ರಾಜಕೀಯ ವೇದಿಕೆ ಸ್ಥಾಪನೆ

ಆತ್ಮಚರಿತ್ರೆ: ‘ರಾಮ್ ಜೇಠ್ಮಲಾನಿ, ಮಾವೆರಿಕ್, ಅನ್‌ಚೇಂಜ್ಡ್‌ ಅನ್‌ರಿಪೆನ್‌ಟೆಂಟ್’

Post Comments (+)