ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಛತ್ತೀಸಗಡ ವಿಧಾನಸಭೆ ಚುನಾವಣೆ: ರಮಣ್‌ಗೆ ಪ್ರಬಲ ಸ್ಪರ್ಧೆ

ವಾಜಪೇಯಿ ಸೋದರ ಸೊಸೆ ಕಣದಲ್ಲಿ
Last Updated 10 ನವೆಂಬರ್ 2018, 20:21 IST
ಅಕ್ಷರ ಗಾತ್ರ

ರಾಜನಂದಗಾಂವ್‌: ಈ ಬಾರಿ ಛತ್ತೀಸಗಡ ವಿಧಾನಸಭೆ ಚುನಾವಣೆಯಲ್ಲಿ ಮತ್ತೆ ಮತ್ತೆ ಕೇಳಿ ಬಂದ ಪದ ‘ಪರಿವರ್ತನೆ’. ಅದೇನೇ ಇದ್ದರೂ ಬಿಜೆಪಿಗೆ ಇಲ್ಲಿ ಬಹುದೊಡ್ಡ ಆಧಾರಸ್ತಂಭ ಮುಖ್ಯಮಂತ್ರಿ ರಮಣ್‌ ಸಿಂಗ್‌ ಅವರೇ. ಆದರೆ, ಸ್ವಕ್ಷೇತ್ರ ರಾಜನಂದಗಾಂವ್‌ನಲ್ಲಿ ಸಿಂಗ್ ಅವರಿಗೆ ಪ್ರಬಲ ಸ್ಪರ್ಧೆ ಒಡ್ಡಲು ಕಾಂಗ್ರೆಸ್‌ ಸಜ್ಜಾಗಿದೆ.

15 ವರ್ಷಗಳ ಆಳ್ವಿಕೆಯ ಬಳಿಕ ನಾಲ್ಕನೇ ಅವಧಿಗೆ ಜನರ ಆಶೀರ್ವಾದ ಪಡೆಯಲು ರಮಣ್‌ ಸಿಂಗ್‌ ಬಯಸಿದ್ದಾರೆ. ಆದರೆ, ಈ ಸುದೀರ್ಘ ಆಡಳಿತದ ಅವಧಿಯ ಆಡಳಿತ ವಿರೋಧಿ ಅಲೆ ಮತ್ತು ಭ್ರಷ್ಟಾಚಾರದ ಕೆಲವು ಆರೋಪಗಳನ್ನೂ ಅವರು ಎದುರಿಸಬೇಕಾಗಿದೆ.

ಮಾಜಿ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ಅವರ ಸೋದರನ ಮಗಳು ಕರುಣಾ ಶುಕ್ಲಾ ಅವರನ್ನು ಸಿಂಗ್‌ ವಿರುದ್ಧ ಕಾಂಗ್ರೆಸ್ ಕಣಕ್ಕಿಳಿಸಿದೆ. ಅವರ ನಾಮಪತ್ರ ಸಲ್ಲಿಕೆಯೇ ಅದ್ದೂರಿಯಾಗಿತ್ತು. ಕ್ಷೇತ್ರದಲ್ಲಿ ಸಂಚಲನ ಸೃಷ್ಟಿಸಿತ್ತು. ಇಲ್ಲಿ ವಾಜಪೇಯಿ ಅವರ ಬಗ್ಗೆ ಜನರಿಗೆ ಬಹಳ ಅಭಿಮಾನ ಇದೆ. ಅದನ್ನು ಬಳಸಿಕೊಂಡು ಸಿಂಗ್‌ ಅವರ ನಿದ್ದೆಗೆಡಿಸುವುದು ಕಾಂಗ್ರೆಸ್‌ನ ಉದ್ದೇಶ.

ಕಳೆದ ಚುನಾವಣೆಯಲ್ಲಿ ರಮಣ್‌ ಅವರು 35 ಸಾವಿರ ಮತಗಳ ಅಂತರದಿಂದ ಗೆದ್ದಿದ್ದರು. ಮುನ್ನಡೆಯ ಹೆಚ್ಚಿನ ಮತಗಳು ಅವರಿಗೆ ನಗರ ಪ್ರದೇಶಗಳಲ್ಲಿಯೇ ಸಿಕ್ಕಿದ್ದವು. ಈ ಬಾರಿ ವಾಜಪೇಯಿಯವರ ಸೋದರ ಸೊಸೆ ಕಣದಲ್ಲಿ ಇರುವುದರಿಂದ ನಗರ ಪ್ರದೇಶಗಳಲ್ಲಿ ಹೆಚ್ಚಿನ ಮತಗಳು ಅವರಿಗೆ ದೊರೆಯಬಹುದು ಎಂಬ ಲೆಕ್ಕಾಚಾರ ಕಾಂಗ್ರೆಸ್‌ನದ್ದಾಗಿದೆ.

ನಗರ ಪ್ರದೇಶದ ವರ್ತಕರಿಗೆ ನೋಟು ರದ್ದತಿ ಮತ್ತು ಜಿಎಸ್‌ಟಿ ಬಗ್ಗೆ ಭಾರಿ ಅಸಮಾಧಾನ ಇದೆ. ಅದರ ಲಾಭವೂ ದೊರೆತರೆ ಶುಕ್ಲಾ ಅವರ ಗೆಲುವು ಸುಲಭ ಎಂದು ಕಾಂಗ್ರೆಸ್‌ ಭಾವಿಸಿದೆ.

ಪಕ್ಷದಲ್ಲಿ ತಮ್ಮನ್ನು ನಿರ್ಲಕ್ಷಿಸಲಾಗುತ್ತಿದೆ ಎಂದು ಹೇಳಿ 2013ರಲ್ಲಿ ಶುಕ್ಲಾ ಅವರು ಬಿಜೆಪಿ ತೊರೆದು ಕಾಂಗ್ರೆಸ್‌ ಸೇರಿದ್ದರು. ತೀರಾ ಇತ್ತೀಚೆಗೆ ಅವರು ಬಿಜೆಪಿ ನಾಯಕತ್ವದ ವಿರುದ್ಧ ತೀವ್ರ ಟೀಕಾ ಪ್ರಹಾರ ನಡೆಸಿದ್ದಾರೆ. ವಾಜಪೇಯಿ ಪರಂಪರೆಯನ್ನೂ ಬಿಜೆಪಿ ನಿರ್ಲಕ್ಷಿಸುತ್ತಿದೆ ಎಂದಿದ್ದಾರೆ.

ರಮಣ್‌ ವಿರುದ್ಧ ಕಾಂಗ್ರೆಸ್‌ ಹುರುಪಿನ ಪ್ರಚಾರ ನಡೆಸುತ್ತಿದೆ. ಪನಾಮಾ ದಾಖಲೆ ಸೋರಿಕೆಯಿಂದ ಹಿಡಿದು, ಭ್ರಷ್ಟಾಚಾರದ ವಿವಿಧ ಆರೋಪಗಳ ಆಧಾರದಲ್ಲಿ ಮುಖ್ಯಮಂತ್ರಿ ವಿರುದ್ಧ ವಾಗ್ದಾಳಿ ನಡೆಸುತ್ತಿದೆ.

*
ಶುಕ್ಲಾ ಅವರು ಪ್ರಬಲ ಸ್ಪರ್ಧೆ ಒಡ್ಡಿದ್ದರೂ ರಮಣ್‌ ಸಿಂಗ್‌ ಅವರಿಗೆ ಪರ್ಯಾಯ ಇಲ್ಲ. ಜನರಿಗೆ ಪರಿವರ್ತನೆ ಬೇಕು. ಹಾಗಾಗಿ ಈ ಸಂದರ್ಭದಲ್ಲಿ ಅವರನ್ನು ಸೋಲಿಸುವ ಪ್ರಶ್ನೆಯೇ ಇಲ್ಲ.
-ಅಜಯ್‌ ವೈದ್‌, ರಾಜನಂದಗಾಂವ್‌ನ ವರ್ತಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT