ಬಂಡಾಯಗಾರ ರಂಜನ್‌ ಗೊಗೊಯ್‌ ಮುಂದಿನ ಮುಖ್ಯ ನ್ಯಾಯಮೂರ್ತಿ

7

ಬಂಡಾಯಗಾರ ರಂಜನ್‌ ಗೊಗೊಯ್‌ ಮುಂದಿನ ಮುಖ್ಯ ನ್ಯಾಯಮೂರ್ತಿ

Published:
Updated:
Deccan Herald

‘ಬದಲಾಗುತ್ತಿರುವ ಸಮಾಜಕ್ಕೆ ಸ್ಪಂದಿಸುವ ರೀತಿಯಲ್ಲಿ ನ್ಯಾಯಾಂಗ ಬದಲಾಗಬೇಕಿದ್ದರೆ ಬರೀ ಸುಧಾರಣೆ ಸಾಲದು, ಕ್ರಾಂತಿಯೇ ಆಗಬೇಕು’ ಎಂಬ ಮನೋಭಾವ ಹೊಂದಿರುವ ಮತ್ತು ಅದನ್ನು ಸ್ಪಷ್ಟವಾಗಿ ಹೇಳಿರುವ ರಂಜನ್‌ ಗೊಗೊಯ್‌ ಅವರು ಸುಪ್ರೀಂ ಕೋರ್ಟ್‌ನ 46ನೇ ಮುಖ್ಯ ನ್ಯಾಯಮೂರ್ತಿಯಾಗಿ ಅಕ್ಟೋಬರ್‌ 3ರಂದು ಅಧಿಕಾರ ವಹಿಸಿಕೊಳ್ಳಲಿದ್ದಾರೆ. ಇವರು 13 ತಿಂಗಳು ಈ ಹುದ್ದೆಯಲ್ಲಿ ಇರಲಿದ್ದಾರೆ.

ಈಶಾನ್ಯ ಭಾರತದಿಂದ ಈ ಹುದ್ದೆಗೆ ಏರುತ್ತಿರುವ ಮೊದಲ ವ್ಯಕ್ತಿ ಎಂಬ ಹಿರಿಮೆ ಅವರದ್ದಾಗಲಿದೆ. ಅಸ್ಸಾಂನ ಮುಖ್ಯಮಂತ್ರಿಯಾಗಿದ್ದ ಕೇಶವ ಚಂದ್ರ ಗೊಗೊಯ್‌ ಅವರ ಮಗ ರಂಜನ್‌, ದಿಬ್ರೂಗಡದಿಂದ ನ್ಯಾಯಾಂಗದ ತುತ್ತತುದಿಯ ಹುದ್ದೆಗೆ ಏರುವವರೆಗೆ ಕ್ರಮಿಸಿದ ಹಾದಿ ಸುದೀರ್ಘವಾದದ್ದು. 

ಮುಖ್ಯ ನ್ಯಾಯಮೂರ್ತಿಯ ವಿರುದ್ಧ ಬಂಡಾಯ ಸಾರಿದ್ದ ಸುಪ್ರೀಂ ಕೋರ್ಟ್‌ನ ನಾಲ್ವರು ಹಿರಿಯ ನ್ಯಾಯಮೂರ್ತಿಗಳಲ್ಲಿ ಗೊಗೊಯ್‌ ಅವರೂ ಇದ್ದರು. ಸುಪ್ರೀಂ ಕೋರ್ಟ್‌ ಇತಿಹಾಸದಲ್ಲಿಯೇ ಹಾಲಿ ನ್ಯಾಯಮೂರ್ತಿಗಳು ಮೊದಲ ಬಾರಿಗೆ ಮಾಧ್ಯಮಗೋಷ್ಠಿ ನಡೆಸಿ ಅಚ್ಚರಿ ಮೂಡಿಸಿದ್ದರು. ಸುಪ್ರೀಂ ಕೋರ್ಟ್‌ನ ಕಾರ್ಯವೈಖರಿಯ ಬಗ್ಗೆ ದೇಶದಾದ್ಯಂತ ಭಾರಿ ಚರ್ಚೆಗೆ ಈ ಮಾಧ್ಯಮಗೋಷ್ಠಿ ಕಾರಣವಾಗಿತ್ತು. 

‘ಪಕ್ಷಪಾತವಿಲ್ಲದ ನ್ಯಾಯಮೂರ್ತಿಗಳು ಮತ್ತು ಸದಾ ಸದ್ದು ಮಾಡುವ ಪತ್ರಕರ್ತರು ಪ್ರಜಾಪ್ರಭುತ್ವದ ಮೊದಲ ಹಂತದ ರಕ್ಷಕರು’ ಎಂದು ಹೇಳುವ ಮೂಲಕ ಅವರು ಮತ್ತೊಮ್ಮೆ ಗಮನ ಸೆಳೆದಿದ್ದರು. 

ಅಸ್ಸಾಂನ ರಾಷ್ಟ್ರೀಯ ಪೌರ ನೋಂದಣಿ (ಎನ್‌ಆರ್‌ಸಿ), ಸಂಸದರು ಮತ್ತು ಶಾಸಕರ ವಿರುದ್ಧದ ಪ್ರಕರಣಗಳ ವಿಚಾರಣೆಗೆ ಪ್ರತ್ಯೇಕ ನ್ಯಾಯಾಲಯ ಸ್ಥಾಪನೆ, ರಾಜೀವ್‌ ಗಾಂಧಿ ಹಂತಕರ ಶಿಕ್ಷೆ ಇಳಿಕೆ, ಲೋಕಪಾಲ ನೇಮಕದಂತಹ ಮಹತ್ವದ ವಿಚಾರಗಳಲ್ಲಿ ಅವರು ತೀರ್ಪು ನೀಡಿದ್ದಾರೆ. 

ಗೊಗೊಯ್‌ ಅವರನ್ನು ಶಿಸ್ತಿನ ಸಿಪಾಯಿ ಎಂದು ಸಹೋದ್ಯೋಗಿಗಳು ಮತ್ತು ಸುಪ್ರೀಂ ಕೋರ್ಟ್‌ನ ವಕೀಲರು ಬಣ್ಣಿಸುತ್ತಾರೆ. ನಿಷ್ಪಕ್ಷಪಾತಿ, ನ್ಯಾಯನಿಷ್ಠುರ ಮತ್ತು ನೇರ ಮಾತಿನ ಸಭ್ಯ ವ್ಯಕ್ತಿ ಎಂದೂ ಅವರು ಹೇಳುತ್ತಾರೆ. ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಬೇಕಾಬಿಟ್ಟಿಯಾಗಿ ಸಲ್ಲಿಸುವುದನ್ನು ಕಂಡರೆ ಗೊಗೊಯ್‌ ಅವರಿಗೆ ಭಾರಿ ಸಿಡುಕು. ಸಿಸೇರಿಯನ್‌ ಹೆರಿಗೆ ಮಾಡಿಸುವುದಕ್ಕೆ ಮಾರ್ಗದರ್ಶಿಸೂತ್ರ ರೂಪಿಸಬೇಕು ಎಂದು ಕೋರಿ ಇತ್ತೀಚೆಗೆ ಪಿಐಎಲ್‌ ಸಲ್ಲಿಸಿದ್ದವರಿಗೆ ಗೊಗೊಯ್‌ ನೇತೃತ್ವದ ಪೀಠವು ₹25 ಸಾವಿರ ದಂಡ ವಿಧಿಸಿತ್ತು.

ಜಾಗೃತಿ ಆಯುಕ್ತರಾಗಿ ಶರದ್‌ ಕುಮಾರ್‌ ನೇಮಕ ಪ್ರಶ್ನಿಸಿದ್ದ ಪಿಐಎಲ್‌ ಸೇರಿ ಎರಡು ಪಿಐಎಲ್‌ಗಳನ್ನು ಈ ವಾರದಲ್ಲೇ ಅವರ ಪೀಠವು ವಜಾ ಮಾಡಿತ್ತು. ‘ನ್ಯಾಯಾಲಯಕ್ಕೆ ಬರಲು ಸಾಧ್ಯವಿಲ್ಲದವರ ಅನುಕೂಲಕ್ಕಾಗಿ ಪಿಐಎಲ್‌ ಬಳಕೆಯಾಗಬೇಕು. ಪ್ರತಿ ವಿಚಾರದಲ್ಲಿಯೂ ಪಿಐಎಲ್‌ ಸಲ್ಲಿಕೆ ಒಂದು ಚಟವಾಗಬಾರದು’ ಎಂದು ಅವರು ಹೇಳಿದ್ದರು.

**

ಸವಾಲುಗಳು

ವಿವಿಧ ಪೀಠಗಳಿಗೆ ‍ಪ್ರಕರಣಗಳ ಹಂಚಿಕೆಯನ್ನು ಮುಖ್ಯ ನ್ಯಾಯಮೂರ್ತಿಯವರು ತಮ್ಮಿಷ್ಟದಂತೆ ಮಾಡಬಾರದು. ಅದಕ್ಕಾಗಿ ಒಂದು ವ್ಯವಸ್ಥೆ ಇರಬೇಕು ಎಂಬುದು ಮಾಧ್ಯಮಗೋಷ್ಠಿ ನಡೆಸಿದ್ದ ನ್ಯಾಯಮೂರ್ತಿಗಳ ಮುಖ್ಯ ಬೇಡಿಕೆಯಾಗಿತ್ತು. ಕೆಲವೇ ದಿನಗಳಲ್ಲಿ ಮುಖ್ಯ ನ್ಯಾಯಮೂರ್ತಿ ಹುದ್ದೆಗೆ ಗೊಗೊಯ್‌ ಅವರೇ ಬರಲಿದ್ದಾರೆ. ಪ್ರಕರಣ ಹಂಚಿಕೆಗೆ ಸಮರ್ಪಕ ವ್ಯವಸ್ಥೆಯೊಂದನ್ನು ಅವರು ಮಾಡಬಹುದು ಎಂಬ ನಿರೀಕ್ಷೆ ಇದೆ. 

ವಿಲೇವಾರಿಗೆ ಬಾಕಿ ಇರುವ ಪ್ರಕರಣಗಳ ಹೊರೆ ಭಾರತದ ನ್ಯಾಯಾಂಗ ವ್ಯವಸ್ಥೆ ಎದುರಿಸುತ್ತಿರುವ ದೊಡ್ಡ ಸವಾಲು. ವಿವಿಧ ನ್ಯಾಯಾಲಯಗಳಲ್ಲಿ ಬಾಕಿ ಇರುವ ಪ್ರಕರಣಗಳ ಸಂಖ್ಯೆ 3.3 ಕೋಟಿಗೂ ಹೆಚ್ಚು. ಇವುಗಳಲ್ಲಿ ಹಲವು ಪ್ರಕರಣಗಳು ಹತ್ತು ವರ್ಷಕ್ಕೂ ಹಳೆಯವು. ಹೆಚ್ಚು ನ್ಯಾಯಾಲಯಗಳ ಸ್ಥಾಪನೆ ಮತ್ತು ನ್ಯಾಯಾಧೀಶರು ಹಾಗೂ ನ್ಯಾಯಮೂರ್ತಿಗಳ ನೇಮಕ ಈಗಿನ ಅಗತ್ಯ.

**

ಜನನ: ನವೆಂಬರ್‌ 18, 1954

1978 ವಕೀಲರಾಗಿ ನೋಂದಣಿ

ಫೆಬ್ರುವರಿ 28, 2001: ಗುಜರಾತ್‌ ಹೈಕೋರ್ಟ್‌ನ ಕಾಯಂ ನ್ಯಾಯಮೂರ್ತಿಯಾಗಿ ನೇಮಕ

ಸೆಪ್ಟೆಂಬರ್‌ 9, 2010: ಪಂಜಾಬ್‌–ಹರಿಯಾಣ ಹೈಕೋರ್ಟ್‌ಗೆ ವರ್ಗ

ಫೆಬ್ರುವರಿ 12, 2011: ಪಂಜಾಬ್‌–ಹರಿಯಾಣ ಹೈಕೋರ್ಟ್‌ ಮುಖ್ಯ ನ್ಯಾಯಾಮೂರ್ತಿಯಾಗಿ ಬಡ್ತಿ

ಏಪ್ರಿಲ್‌ 23, 2012: ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿಯಾಗಿ ಬಡ್ತಿ

ನವೆಂಬರ್‌ 17, 2019: ನಿವೃತ್ತಿ

ಬರಹ ಇಷ್ಟವಾಯಿತೆ?

 • 18

  Happy
 • 0

  Amused
 • 1

  Sad
 • 0

  Frustrated
 • 1

  Angry

Comments:

0 comments

Write the first review for this !